GST ಪಾಲು ಕೇಳಿ, ಧೈರ್ಯವಿಲ್ಲದಿದ್ದರೆ ನಮ್ಮನ್ನು ಕರೆಯಿರಿ; BSY ಗೆ ಸಿದ್ದರಾಮಯ್ಯ ಸವಾಲು
ಜಿಎಸ್ ಟಿ ಪರಿಹಾರಕ್ಕಾಗಿ 2017-18 ಮತ್ತು 2018-19ರಲ್ಲಿ ಕ್ರಮವಾಗಿ ರೂ.56,146 ಕೋಟಿ ಮತ್ತು 54,275 ಕೋಟಿ ಸೆಸ್ ಹಣ ವರ್ಗಾವಣೆಯಾಗಿದೆ. ಉಳಿಕೆ ಸೆಸ್ ಮೊತ್ತವನ್ನು ದುರುಪಯೋಗ ಮಾಡಿಕೊಂಡಿರುವ ನರೇಂದ್ರ ಮೋದಿ ಸರ್ಕಾರದ ಈ ಅಕ್ರಮದ ವಿರುದ್ಧ ರಾಜ ...
GST ಪಾಲು ಕೇಳಿ, ಧೈರ್ಯವಿಲ್ಲದಿದ್ದರೆ ನಮ್ಮನ್ನು ಕರೆಯಿರಿ; BSY ಗೆ ಸಿದ್ದರಾಮಯ್ಯ ಸವಾಲು

ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ನೀಡಬೇಕಿರುವ ರಾಜ್ಯ ತೆರಿಗೆ ಪಾಲು ನೀಡದೆ ಸಾಲ ಪಡೆದುಕೊಳ್ಳಲು ಸೂಚಿಸಿದ್ದು ರಾಜ್ಯದ ಜನತೆಯಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ವಿಪಕ್ಷಗಳು ಈ ಅಂಶವನ್ನೇ ಎದುರಿಟ್ಟು ಬಿಎಸ್‌ವೈ ಸರ್ಕಾರವನ್ನು ಪೇಚಿಗೆ ಸಿಲುಕಿಸಲು ಪ್ರಯತ್ನಿಸುತ್ತಿವೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಕುರಿತಂತೆ ಸರಣಿ ಟ್ವೀಟ್‌ ಮಾಡಿದ್ದು, ನಮ್ಮ ಜನರ ತೆರಿಗೆ ಹಣದ ಪಾಲನ್ನು ಧೈರ್ಯದಿಂದ ಪ್ರಧಾನಿ ನರೇಂದ್ರ ಮೋದಿ ಬಳಿ ಕೇಳಿ. ನಿಮಗೆ ಧೈರ್ಯವಿಲ್ಲದೆ ಇದ್ದರೆ ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಎಂದು ಮುಖ್ಯಮಂತ್ರಿ ಬಿಎಸ್‌ವೈಗೆ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ತನ್ನ ಟ್ವೀಟ್‌ನಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ʼರಾಜ್ಯಗಳಿಗೆ ಜಿಎಸ್ ಟಿ ಪರಿಹಾರ ನೀಡಲು ಸಂಗ್ರಹ ಮಾಡಿದ್ದ ಸೆಸ್ ಹಣವನ್ನು ನರೇಂದ್ರ ಮೋದಿ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸಿದೆ ಎಂದು ಸಿಎಜಿ ನೀಡಿರುವ ವರದಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಬಗೆದಿರುವ ಜಿಎಸ್ ಟಿ ದ್ರೋಹಕ್ಕೆ ಪುರಾವೆಯಾಗಿದೆ. ಜಿಎಸ್‌ಟಿ ಪರಿಹಾರ ನೀಡಲು ಸಂಗ್ರಹಿಸಲಾಗುವ ಸೆಸ್ ಮೊತ್ತವನ್ನು ಪ್ರತ್ಯೇಕ ಖಾತೆಯಲ್ಲಿ ಠೇವಣಿ ಮಾಡಬೇಕಾಗುತ್ತದೆ. ನಿರ್ದಿಷ್ಠ ವರ್ಷ ವ್ಯಯವಾಗದೆ ಉಳಿದಿರುವ ಹಣವನ್ನು ಮುಂದಿನ ವರ್ಷಕ್ಕೆ ವರ್ಗಾಯಿಸುವ ಅವಕಾಶ ಕೂಡಾ ಇದೆ. ಆದರೆ ನರೇಂದ್ರ ಮೋದಿ ಸರ್ಕಾರ ಅನ್ಯ ಉದ್ದೇಶಕ್ಕೆ ದುರುಪಯೋಗ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.

GST ಪಾಲು ಕೇಳಿ, ಧೈರ್ಯವಿಲ್ಲದಿದ್ದರೆ ನಮ್ಮನ್ನು ಕರೆಯಿರಿ; BSY ಗೆ ಸಿದ್ದರಾಮಯ್ಯ ಸವಾಲು
ಜಿಎಸ್‌ಟಿ ಅನ್ಯಾಯ; ಪ್ರಶ್ನೆ ಮಾಡುವ ತಾಕತ್ತು 25 ಬಿಜೆಪಿ ಸಂಸದರ ಪೈಕಿ ಒಬ್ಬರಿಗೂ ಇಲ್ಲವೇ?

ನಿರ್ದಿಷ್ಠ ಉದ್ದೇಶಕ್ಕೆ ಸಂಗ್ರಹಿಸಲಾಗುವ ಸೆಸ್ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುವುದು ಕಾನೂನು ಉಲ್ಲಂಘನೆಯಾಗಿದೆ. ಆದರೆ ನರೇಂದ್ರ ಮೋದಿ ಸರ್ಕಾರ ಜಿಎಸ್ ಟಿ ಪರಿಹಾರ ನಿಧಿಯ ಹಣವನ್ನು Consolidated fundಗೆ ವರ್ಗಾಯಿಸಿ ಜಿಎಸ್‌ಟಿ ಕಾಯ್ದೆಯ ಉಲ್ಲಂಘನೆ ಮಾಡಿದೆ ಎಂದ ಸಿದ್ದರಾಮಯ್ಯ, ಕರ್ನಾಟಕಕ್ಕೆ 2021ರ ಅಂತ್ಯಕ್ಕೆ ನೀಡಬೇಕಾಗಿರುವ ಜಿಎಸ್‌ಟಿ ಪರಿಹಾರ ರೂ.30,000 ಕೋಟಿ. ಇದನ್ನು ನಿರಾಕರಿಸಿ, ಆರ್‌ಬಿಐನಿಂದ ಸಾಲ ಎತ್ತಲು ಹೇಳಿರುವ ನರೇಂದ್ರ ಮೋದಿ ಸರ್ಕಾರ, ಜಿಎಸ್‌ಟಿ ಪರಿಹಾರಕ್ಕಾಗಿಯೇ ಸಂಗ್ರಹಿಸಿರುವ ಸೆಸ್ ದುಡ್ಡನ್ನು ತನ್ನ ಖಾಲಿ ಖಜಾನೆಯನ್ನು ತುಂಬಲು ದುರುಪಯೋಗ ಮಾಡಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಎಸ್ ಟಿ ಪರಿಹಾರಕ್ಕಾಗಿ 2017-18 ಮತ್ತು 2018-19ರಲ್ಲಿ ಕ್ರಮವಾಗಿ ರೂ.56,146 ಕೋಟಿ ಮತ್ತು 54,275 ಕೋಟಿ ಸೆಸ್ ಹಣ ವರ್ಗಾವಣೆಯಾಗಿದೆ. ಉಳಿಕೆ ಸೆಸ್ ಮೊತ್ತವನ್ನು ದುರುಪಯೋಗ ಮಾಡಿಕೊಂಡಿರುವ ನರೇಂದ್ರ ಮೋದಿ ಸರ್ಕಾರದ ಈ ಅಕ್ರಮದ ವಿರುದ್ಧ ರಾಜ್ಯ ಸರ್ಕಾರ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ ಸಿದ್ದರಾಮಯ್ಯ ಅಧಿಕಾರಕ್ಕಿಂತ ರಾಜ್ಯದ ಹಿತ ರಕ್ಷಣೆ ಮುಖ್ಯ. ನಿಮಗೆ ರಾಜ್ಯದ ಜನತೆ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ನಮ್ಮ ಜನರ ತೆರಿಗೆ ಹಣದ ಪಾಲನ್ನು ಧೈರ್ಯದಿಂದ ಪ್ರಧಾನಿ ನರೇಂದ್ರ ಮೋದಿ ಬಳಿ ಕೇಳಿ. ನಿಮಗೆ ಧೈರ್ಯವಿಲ್ಲದೆ ಇದ್ದರೆ ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸವಾಲು ಹಾಕಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com