ಎಸ್‌ಪಿಬಿ ಜೊತೆಗಿನ ನೆನಪುಗಳನ್ನು ಹಂಚಿಕೊಂಡ ಚಲನಚಿತ್ರ ತಾರೆಯರು
ಮೇರು ಗಾಯಕ ಎಸ್‌ಪಿಬಿ ಇಹಲೋಕ ತ್ಯಜಿಸಿದ್ದರೂ ತಮ್ಮ ಮಧುರ ಹಾಡುಗಳ ಮೂಲಕ ನಮ್ಮೊಂದಿಗೆ ಸದಾ ಇರುತ್ತಾರೆ. ಕನ್ನಡ ಚಿತ್ರರಂಗದ ಹಿರಿಕಿರಿಯರು ಎಸ್‌ಪಿಬಿಯನ್ನು ಆತ್ಮೀಯವಾಗಿ ಸ್ಮರಿಸಿಕೊಂಡಿದ್ದಾರೆ.
ಎಸ್‌ಪಿಬಿ ಜೊತೆಗಿನ ನೆನಪುಗಳನ್ನು ಹಂಚಿಕೊಂಡ ಚಲನಚಿತ್ರ ತಾರೆಯರು

ನನ್ನ ನಿರ್ದೇಶನದ ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದ ‘ಉಮಂಡು ಘಮಂಡು’ ಹಾಡಿಗೆ ಎಸ್‌ಪಿಬಿಗೆ ರಾಷ್ಟ್ರಪ್ರಶಸ್ತಿ ಗೌರವ ಸಿಕ್ಕಿತು. ಈ ಮೂಲಕ ನಮಗೂ ಹೆಮ್ಮೆ ತಂದರು ಎಸ್‌ಪಿಬಿ. ಈ ಹಾಡಿನ ರೆಕಾರ್ಡಿಂಗ್ ಸಮಯದಲ್ಲೂ ಹಲವು ಅಚ್ಚರಿಯ ಸಂಗತಿಗಳು ನಡೆದವು. ಒಂದು ಹಂತದಲ್ಲಿ ಎಸ್‌ಪಿಬಿಯವರು ‘ಉಮಂಡು ಘಮಂಡು’ಗೀತೆಯನ್ನು ತಮ್ಮಿಂದ ಹಾಡಲು ಸಾಧ್ಯವೇ ಇಲ್ಲ ಎಂದು ಕೈಚೆಲ್ಲಿದ್ದರು. ಪಟ್ಟು ಬಿಡದ ಹಂಸಲೇಖ ಮತ್ತೆ ಮತ್ತೆ ಹಾಡಿಸಿದರು. ಆರು ಗಂಟೆಗಳ ಕಾಲದ ಸತತ ಪ್ರಯತ್ನದ ನಂತರ ಕೊನೆಗೆ ಹಾಡು ಓಕೆ ಆಯ್ತು. ಸಂಕೇತ್ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಆಗಿದ್ದು. ಎಸ್‌ಪಿಬಿ ಎಲ್ಲರನ್ನೂ ಹೊರಗೆ ಕಳುಹಿಸಿ ತಾವೊಬ್ಬರೇ ತಪ್ಪಸ್ಸಿನಂತೆ ಹಾಡು ಪ್ರಾಕ್ಟೀಸ್ ಮಾಡಿ ಓಕೆ ಮಾಡಿದರು. ಮುಂದೆ ನನ್ನ ನಿರ್ದೇಶನದ ‘ದಾನಮ್ಮ ದೇವಿ’ ಚಿತ್ರದ ಬದುಕಿನ ಒಳನೋಟಗಳನ್ನು ನೀಡು ಎರಡು ಸುಂದರ ಹಾಡುಗಳನ್ನು ಹಾಡಿದರು.

- ಚಿಂದೋಡಿ ಬಂಗಾರೇಶ್, ಚಿತ್ರನಿರ್ದೇಶಕ

ಚಿಂದೋಡಿ ಬಂಗಾರೇಶ್ ಜೊತೆಗೆ ಎಸ್‌ಪಿಬಿ
ಚಿಂದೋಡಿ ಬಂಗಾರೇಶ್ ಜೊತೆಗೆ ಎಸ್‌ಪಿಬಿ

ಸಂಭಾವನೆ ತೆಗೆದುಕೊಳ್ಳಲಿಲ್ಲ

1982ರಲ್ಲಿ ನಾವು ಗೆಳೆಯರೆಲ್ಲರೂ ಸೇರಿ ‘ಮರಗದ ವೈಣೈ’ ತಮಿಳು ಸಿನಿಮಾ ನಿರ್ಮಿಸಿದ್ದೆವು. ಗೆಳೆಯರಾದ ಸೌಂಡ್ ಇಂಜಿನಿಯರ್ ರಾಜಮಾಣಿಕ್ಯಂ ಕೂಡ ಚಿತ್ರದ ನಿರ್ಮಾಪಕರಲ್ಲೊಬ್ಬರು. ಇವರು ಎಸ್‌ಪಿಬಿಗೆ ತುಂಬಾ ಆತ್ಮೀಯರು. ತಮ್ಮ ಸ್ನೇಹಿತ ಸಿನಿಮಾ ನಿರ್ಮಿಸುತ್ತಿದ್ದಾನೆ ಎಂದು ಅವರು ಸಂಭಾವನೆ ತೆಗೆದುಕೊಳ್ಳದೆ ಮೂರು ಹಾಡುಗಳನ್ನು ಹಾಡಿದರು. ಮದರಾಸಿನಲ್ಲಿದ್ದಾಗ ನಾನು, ರಾಜಮಾಣಿಕ್ಯಂ ಇಬ್ಬರೂ ಬಿಡುವಿದ್ದಾಗಲೆಲ್ಲಾ ಸಾಂಗ್ ರೆಕಾರ್ಡಿಂಗ್ ಸ್ಟುಡಿಯೋಗೆ ಹೋಗುತ್ತಿದ್ದೆವು. ಅಲ್ಲಿ ಎಸ್‌ಪಿಬಿ ಅವರೊಂದಿಗೆ ಹರಟುತ್ತಿದ್ದೆವು. ಇಲ್ಲಿ ಕನ್ನಡದಲ್ಲಿ ನಾನು ಛಾಯಾಗ್ರಹಣ ಮಾಡಿದ ‘ಬಾಡದ ಹೂ’ ಸಿನಿಮಾಗೆ ಎಸ್‌ಪಿಬಿ ಹಾಡಿದ ಹಾಡುಗಳು ತುಂಬಾ ಜನಪ್ರಿಯವಾದವು. ಸ್ನೇಹಜೀವಿಯೊಬ್ಬರನ್ನು ಕಳೆದುಕೊಂಡೆವು.

- ಬಿ.ಎಸ್.ಬಸವರಾಜ್, ಸಿನಿಮಾ ಛಾಯಾಗ್ರಾಹಕ

ಬೆಂಗಳೂರಿನ ಚಿತ್ರಕಲಾ ಪರಿಷತ್ನಲ್ಲಿ ‘ಮಹಾ ಎಡಬಿಡಂಗಿ’ ಸಿನಿಮಾದ ಮುಹೂರ್ತದ ಸಂದರ್ಭ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಟಿಸಿದ್ದರು. ಎಸ್ಪಿಬಿ ಅವರೊಂದಿಗೆ ರಾಜಕೀಯ ನಾಯಕ ಸಿದ್ದರಾಮಯ್ಯ ಮತ್ತು ವರನಟ ರಾಜಕುಮಾರ್ ಇದ್ದಾರೆ.
ಬೆಂಗಳೂರಿನ ಚಿತ್ರಕಲಾ ಪರಿಷತ್ನಲ್ಲಿ ‘ಮಹಾ ಎಡಬಿಡಂಗಿ’ ಸಿನಿಮಾದ ಮುಹೂರ್ತದ ಸಂದರ್ಭ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಟಿಸಿದ್ದರು. ಎಸ್ಪಿಬಿ ಅವರೊಂದಿಗೆ ರಾಜಕೀಯ ನಾಯಕ ಸಿದ್ದರಾಮಯ್ಯ ಮತ್ತು ವರನಟ ರಾಜಕುಮಾರ್ ಇದ್ದಾರೆ.

ನನ್ನ ಚೊಚ್ಚಲ ‘ಆನಂದ್’ ಸಿನಿಮಾದ ‘ಟುವ್ವಿ ಟುವ್ವಿ’ ಹಾಡಿದ ಎಸ್‌ಪಿಬಿ ನನಗೆ ‘ಚೆನ್ನಾಗಿ ಡ್ಯಾನ್ಸ್ ಮಾಡ್ಬೇಕು’ ಎಂದಿದ್ದರು. ಆ ಹಾಡಿನ ಅವರ ವಾಯ್ಸ್ನಲ್ಲೇ ಒಂಥರಾ ಜೋಶ್ ಇತ್ತು. ಅಲ್ಲಿಂದ ಮುಂದೆ ನನ್ನ ಬಹಳಷ್ಟು ಸಿನಿಮಾಗಳಲ್ಲಿ ಅವರ ಹಾಡುಗಳನ್ನು ಪಡೆದಿದ್ದೇನೆ. ಇದು ನನ್ನ ಸೌಭಾಗ್ಯ. ಅವರ ಹಾಡುಗಳಿದ್ದರೆ ನಮಗೆ ನಟನೆ ಸುಲಭವಾಗುತ್ತದೆ. ಇತ್ತೀಚಿನ ನನ್ನ ‘ಕವಚ’ ಸಿನಿಮಾದಲ್ಲಿನ ಅವರ ಹಾಡು ಜನಪ್ರಿಯವಾಗಿತ್ತು. ನಮ್ಮ ಕುಟುಂಬಕ್ಕೆ ತುಂಬಾ ಆತ್ಮೀಯರಾಗಿದ್ದ ಅವರನ್ನು ಕಳೆದುಕೊಂಡಿರುವುದು ನಮಗೆಲ್ಲಾ ನೋವಾಗಿದೆ.

- ಶಿವರಾಜಕುಮಾರ್, ನಟ

ಎಸ್‌ಪಿಬಿ ಜೊತೆಗಿನ ನೆನಪುಗಳನ್ನು ಹಂಚಿಕೊಂಡ ಚಲನಚಿತ್ರ ತಾರೆಯರು
ಜೀವನ ಗಾಯನ ಮುಗಿಸಿದ ಗಾನ ಮಾಂತ್ರಿಕ
vt

ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ಶಂಕರ್‌ನಾಗ್ ‘ಎಸ್‌ಪಿʼ ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು. ನನ್ನ ‘ಗೀತಾ’ ಸಿನಿಮಾದಲ್ಲಿನ ಹಾಡುಗಳಿಗೆ ಜೀವ ತುಂಬಿದವರು ಎಸ್‌ಪಿಬಿ. ಸಾಧಾರಣ ಗೀತಸಾಹಿತ್ಯಕ್ಕೂ ಎಸ್‌ಪಿ ಗಾಯನ ಜೀವ ತುಂಬುತ್ತದೆ. ಅವರ ವಾಯ್ಸ್ ಚಿರಕಾಲ ನಮ್ಮ ನೆನಪಿನಲ್ಲಿ ಉಳಿಯುವಂಥದ್ದು. ಅವರೊಬ್ಬ ಅತ್ಯುತ್ತಮ ವ್ಯಕ್ತಿಯಾಗಿ ನನಗೆ ನೆನಪಾಗುತ್ತಾರೆ. ಈಗ ನಮ್ಮ ಗೀತಾ ಸಿನಿಮಾದ ಹಾಡುಗಳನ್ನು ಕೇಳುತ್ತಿದ್ದರೆ ಎಸ್‌ಪಿಬಿ ಹಾಗೆಯೇ ಕಣ್ಮುಂದೆ ಸುಳಿದುಹೋಗುತ್ತಾರೆ. ಎಂತಹ ಅದ್ಭುತ ವ್ಯಕ್ತಿಯನ್ನು ಕಳೆದುಕೊಂಡೆವು!

- ಅಕ್ಷತಾ ರಾವ್, ನಟಿ

ಎಸ್‌ಪಿಬಿ - ಅಂಕಿಅಂಶಗಳು

  • ಅವರು ಹಾಡಿನ ಒಟ್ಟು ಕನ್ನಡ ಚಿತ್ರಗೀತೆಗಳು 4180. ‘ನಕ್ಕರೆ ಅದೇ ಸ್ವರ್ಗ’ (1967) ಚಿತ್ರದ ‘ಕನಸಿದೋ ನನಸಿದೋ’ ಮೊದಲ ಹಾಡು.

  • ವಿಷ್ಣುವರ್ಧನ್ ಮತ್ತು ಎಸ್‌ಪಿಬಿ ಕನ್ನಡದ ಹಿಟ್ ಜೋಡಿ. ವಿಷ್ಣುಗೆ ಅವರು 812 ಹಾಡುಗಳನ್ನು ಹಾಡಿದ್ದಾರೆ. ‘ನಾಗರ ಹಾವು’ ಚಿತ್ರದ ‘ಹಾವಿನ ದ್ವೇಷ’ ಮೊದಲ ಹಾಡು. ‘ಆಪ್ತರಕ್ಷಕ’ ಚಿತ್ರದ ‘ಗರಗರನೆ’ ವಿಷ್ಣುಗೆ ಎಸ್‌ಪಿಬಿ ಹಾಡಿದ ಕೊನೆಯ ಹಾಡು.

  • 1981ರ ಫೆಬ್ರವರಿ 8ನೇ ತಾರೀಖಿನಂದು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಹನ್ನೆರೆಡು ಗಂಟೆಗಳಲ್ಲಿ ಅವರು 21 ಕನ್ನಡ ಹಾಡುಗಳನ್ನು ಹಾಡುತ್ತಾರೆ! ಇದೊಂದು ಅಪರೂಪದ ದಾಖಲೆ.

  • ವಿವಿಧ ಭಾಷೆಗಳ 68 ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

  • 82 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕ್ಯಾಮರಾ ಎದುರಿಸಿದ ಮೊದಲ ಸಿನಿಮಾ ‘ಪೆಲ್ಲಂಟೆ ನೂರೆಲ್ಲಾ ಪೆಂತ’ (ತೆಲುಗು). ‘ಬಾಳೊಂದು ಚದುರಂಗ’ ಅವರ ನಟನೆಯ ಮೊದಲ ಕನ್ನಡ ಸಿನಿಮಾ. ಒಟ್ಟು ಹದಿನಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  • ಅತ್ಯುತ್ತಮ ಗಾಯನಕ್ಕೆ ಆರು ಬಾರಿ ರಾಷ್ಟ್ರಪ್ರಶಸ್ತಿಯ ಗೌರವ ಸಂದಿದೆ. ಶಂಕರಾಭರಣಂ (ತೆಲುಗು), ಏಕ್ ದೂಜೆ ಕೆ ಲಿಯೇ (ಹಿಂದಿ), ಸಾಗರ ಸಂಗಮಂ (ತೆಲುಗು), ರುದ್ರವೀಣ (ತೆಲುಗು), ಗಾನಯೋಗಿ ಪಂಚಾಕ್ಷರ ಗವಾಯಿ (ಕನ್ನಡ), ಮಿನ್ಸಾರ ಕನವು (ತಮಿಳು)

  • ಗಾಯನಕ್ಕೆ ಅತಿ ಹೆಚ್ಚು 27 ಬಾರಿ ಆಂಧ್ರಪ್ರದೇಶದ ಪ್ರತಿಷ್ಠಿತ ನಂದಿ ಅವಾರ್ಡ್ ಪಡೆದಿದ್ದಾರೆ.

  • ಗಾಯನಕ್ಕಾಗಿ ಕನ್ನಡದಲ್ಲಿ ಮೂರು ಬಾರಿ (ಓ ಮಲ್ಲಿಗೆ, ಸೃಷ್ಟಿ ಮತ್ತು ಸವಿಸವಿ ನೆನಪು) ರಾಜ್ಯಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

  • ವರನಟ ರಾಜಕುಮಾರ್ ಅವರಿಗೆ ‘ಗಂಡು ಎಂದರೆ ಗಂಡು’ ಸೇರಿದಂತೆ ಕೆಲವು ಹಾಡುಗಳನ್ನು ಹಾಡಿದ್ದಾರೆ. ‘ಮುದ್ದಿನ ಮಾವ’ ಚಿತ್ರದಲ್ಲಿ ಎಸ್‌ಪಿಬಿಗಾಗಿ ರಾಜಕುಮಾರ್ ಅವರು ‘ದೀಪಾವಳಿ’ ಹಾಡು ಹಾಡಿದ್ದಾರೆ.

ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದಲ್ಲಿ ಲೋಕೇಶ್‌ ಹಾಗೂ ಗಿರೀಶ್‌ ಕಾರ್ನಾಡ್‌
ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದಲ್ಲಿ ಲೋಕೇಶ್‌ ಹಾಗೂ ಗಿರೀಶ್‌ ಕಾರ್ನಾಡ್‌

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com