ಚಪ್ಪಾಳೆ ತಟ್ಟಿ, ದೀಪ ಹಚ್ಚುವುದರಿಂದ ಕರೋನಾ ಹೋಗುತ್ತದೆಂದು ಯಾರೂ ಅಂದಿಲ್ಲ- ಡಾ. ಸುಧಾಕರ್
ರಾಜ್ಯ

ಚಪ್ಪಾಳೆ ತಟ್ಟಿ, ದೀಪ ಹಚ್ಚುವುದರಿಂದ ಕರೋನಾ ಹೋಗುತ್ತದೆಂದು ಯಾರೂ ಅಂದಿಲ್ಲ- ಡಾ. ಸುಧಾಕರ್

ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್‌ ಚಪ್ಪಾಳೆ ತಟ್ಟುವುದರಿಂದ, ದೀಪ ಹಚ್ಚುವುದರಿಂದ ಕರೋನಾ ಹೋಗುತ್ತದೆ ಎಂದು ಯಾರೂ ಹೇಳಿಲ್ಲಎಂದಿದ್ದಾರೆ.

ಪ್ರತಿಧ್ವನಿ ವರದಿ

ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್‌ ಅವರ ನಡುವೆ ಟ್ವಿಟ್-ವಾದಗಳು ನಡೆಯುತ್ತಿವೆ.

ಸುಧಾಕರ್‌ ಖರ್ಗೆಯವರನ್ನು ಉಲ್ಲೇಖಿಸಿ ಮಾಡಿದ್ದ ಟ್ವೀಟ್‌ ಒಂದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, "ನೀವು ತಟ್ಟೆ ಬಡಿಯಲು ಕೇಳಿದ್ದಿರಿ, ನಾವು ಮಾಡಿದೆವು ನೀವು ದೀಪ ಬೆಳಗಿಸಿ ಎಂದಿರಿ, ನಾವು ಬೆಳಗಿಸಿದೆವು ನೀವು ಮನೆಯಲ್ಲಿಯೇ ಇರಿ ಎಂದಿರಿ, ನಾವು ಇದ್ದೆವು ನೀವು ಹೊರಬನ್ನಿ ಎಂದಿರಿ, ನಾವು ಬಂದೆವು ನೀವು ಹೇಳಿದ ಎಲ್ಲವನ್ನು ನಾವು ಮಾಡಿದೆವು. 21 ದಿನಗಳಲ್ಲಿ ಈ ಯುದ್ಧ ಮುಗಿಯಬೇಕಿತ್ತು" ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಟ್ವೀಟ್‌ ಮಾಡಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದಕ್ಕೆ ಉತ್ತರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್‌ ಚಪ್ಪಾಳೆ ತಟ್ಟುವುದರಿಂದ, ದೀಪ ಹಚ್ಚುವುದರಿಂದ ಕರೋನಾ ಹೋಗುತ್ತದೆ ಎಂದು ಯಾರೂ ಹೇಳಿಲ್ಲಎಂದಿದ್ದಾರೆ.

"ಎನ್ ಡಿಎ-1 ಸರ್ಕಾರದ ಅವಧಿಯಲ್ಲಿ ಆರಂಭವಾದ ಬೀದರ್‌- ಕಲಬುರಗಿ ರೈಲ್ವೆ ಮಾರ್ಗವನ್ನು ಪೂರ್ಣಗೊಳಿಸಲು 16 ವರ್ಷಗಳ ನಂತರ ಎನ್ ಡಿಎ-2 ಸರ್ಕಾರ ಬರಬೇಕಾಯ್ತು. ಇನ್ನು 21 ದಿನಗಳಲ್ಲಿ ಕರೋನಾ ಯುದ್ಧ ಮುಗಿಯಬೇಕು ಎಂಬುದು ಅಜ್ಞಾನದಿಂದ ಕೂಡಿದ ಬಾಲಿಶ ಹೇಳಿಕೆ" ಎಂದು ಹೇಳಿದ್ದಾರೆ.

ಚಪ್ಪಾಳೆ ತಟ್ಟುವುದರಿಂದ, ದೀಪ ಹಚ್ಚುವುದರಿಂದ ಕರೋನಾ ಹೋಗುತ್ತದೆ ಎಂದು ಯಾರೂ ಹೇಳಿಲ್ಲ. ಅದೊಂದು ಸಾಮೂಹಿಕ ಪ್ರಜ್ಞೆ ಬೆಳೆಸುವ, ಅರಿವು ಮೂಡಿಸುವ ಮನೋವೈಜ್ಞಾನಿಕ ಪ್ರಕ್ರಿಯೆ ಆಗಿತ್ತು. ಏಡ್ಸ್, ಪೋಲಿಯೋದಂತಹ ರೋಗಗಳ ಬಗ್ಗೆ ಅರಿವು ಮೂಡಿಸಲು ವರ್ಷಗಳೇ ಬೇಕಾಯ್ತು, ಆದರೆ ಲಾಕ್‌ಡೌನ್ ಮೂಲಕ ಕೆಲವೇ ದಿನಗಳಲ್ಲಿ ಅರಿವು ಮೂಡಿಸಲಾಯಿತು ಎಂದು ಲಾಕ್‌ಡನ್‌ ನಿರ್ಧಾರವನ್ನು ಸುಧಾಕರ್‌ ಸಮರ್ಥಿಸಿಕೊಂಡಿದ್ದಾರೆ.

ಅದಕ್ಕೂ ಮೊದಲು, ಪ್ರಿಯಾಂಕ್‌ ಖರ್ಗೆಯವರು ʼಸೋಂಕಿತ ಸರ್ಕಾರʼ ಎಂಬ ಮಾಸ್ಕ್‌ ಧರಿಸಿದ ಫೊಟೊವನ್ನು ಹಾಕಿದ್ದ ಸುಧಾಕರ್‌ “ಕರೋನಾ ನಿಯಂತ್ರಣಕ್ಕೆ ಇಂದು ಇಡೀ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಹಸ್ರಾರು ಕರೋನಾ ಯೋಧರು ತಮ್ಮ ಜೀವ ಪಣಕ್ಕಿಟ್ಟು, ಅವಿರತ ಶ್ರಮದಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವು ಶಾಸಕರು 'ಸೋಂಕಿತ ಸರ್ಕಾರ' ಎಂದು ಕರೆಯುವ ಮೂಲಕ ತಮ್ಮ 'ಸೋಂಕಿತ ಮನಸ್ಥಿತಿ' ಪ್ರದರ್ಶಿಸಿರುವುದು ದುರದೃಷ್ಟಕರ” ಎಂದು ಟ್ವೀಟ್‌ ಮಾಡಿದ್ದರು.

Click here to follow us on Facebook , Twitter, YouTube, Telegram

Pratidhvani
www.pratidhvani.com