ಸಿಎಂ ಪುತ್ರ ವಿಜಯೇಂದ್ರ ಬಳಿಕ ಅಳಿಯ, ಮೊಮ್ಮಗನ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು!

ಜೆಡಿಎಸ್ ಸರ್ಕಾರ ಇದ್ದಾಗ ಅದನ್ನು 'ಅಪ್ಪ-ಮಕ್ಕಳ ಸರ್ಕಾರ' ಎಂದು ಅಣಕಿಸಲಾಗುತ್ತಿತ್ತು. ಇತ್ತೀಚೆಗೆ ರಾಜ್ಯ ಬಿಜೆಪಿ ಸರ್ಕಾರದ ಬಗ್ಗೆಯೂ ಅಪ್ಪ-ಮಕ್ಕಳ ಸರ್ಕಾರ ಎಂಬ ಆರೋಪ ಕೇಳಿ ಬರುತ್ತಿದ್ದವು. ಈಗ 'ಅಪ್ಪ-ಮಗ-ಅಳಿಯ-ಮೊಮ್ಮಗ'ನ ಸರ್ಕಾರವಾಗಿ ಬದಲಾಗ ...
ಸಿಎಂ ಪುತ್ರ ವಿಜಯೇಂದ್ರ ಬಳಿಕ ಅಳಿಯ, ಮೊಮ್ಮಗನ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು!

ಹಿಂದೆ ಜೆಡಿಎಸ್ ಸರ್ಕಾರ ಇದ್ದಾಗ ಅದನ್ನು 'ಅಪ್ಪ-ಮಕ್ಕಳ ಸರ್ಕಾರ' ಎಂದು ಅಣಕಿಸಲಾಗುತ್ತಿತ್ತು. ಇತ್ತೀಚೆಗೆ ರಾಜ್ಯ ಬಿಜೆಪಿ ಸರ್ಕಾರದ ಬಗ್ಗೆಯೂ ಅಪ್ಪ-ಮಕ್ಕಳ ಸರ್ಕಾರ ಎಂಬ ಆರೋಪ ಕೇಳಿ ಬರುತ್ತಿದ್ದವು. ಈಗ 'ಅಪ್ಪ-ಮಗ-ಅಳಿಯ-ಮೊಮ್ಮಗ'ನ ಸರ್ಕಾರವಾಗಿ ಬದಲಾಗಿದೆ. ಅಪ್ಪ-ಯಡಿಯೂರಪ್ಪ, ಮಗ- ಬಿ.ವೈ. ವಿಜಯೇಂದ್ರ,‌ ಅಳಿಯ- ವಿರೂಪಾಕ್ಷ ಮರಡಿ, ಮೊಮ್ಮಗ- ಶಶಿಧರ ಮರಡಿ ಸೇರಿ ಭ್ರಷ್ಟಾಚಾರ ನಡೆಸಿದ್ದಾರೆಂಬ ‌ಗುರುತರ ಆರೋಪ ಈಗ ಕೇಳಿಬಂದಿದೆ.

ಹಿಂದೆ ಯಡಿಯೂರಪ್ಪ 2008ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಚೆಕ್ ಮೂಲಕ‌ ಭ್ರಷ್ಟಾಚಾರ ನಡೆಸಿದ್ದರು. ಆ ಕಾರಣಕ್ಕೆ ಅಧಿಕಾರ ಕಳೆದುಕೊಂಡರು ಜೊತೆಗೆ ಜೈಲಿಗೆ ಹೋಗಿ ಬಂದಿದ್ದರು. ಆದರೀಗ ಮೊಮ್ಮಗ ಶಶಿಧರ ಮರಡಿ ಬ್ಯಾಂಕ್ ಖಾತೆಗೆ ಆರ್ ಟಿಜಿಎಸ್ (RTGS) ಮುಖಾಂತರ ಹಣ ಹಾಕಿಸಿಕೊಂಡಿರುವ ಪ್ರಕರಣ ಕೇಳಿಬರುತ್ತಿದೆ. ಇತ್ತಿಚೆಗೆ ರಾಜ್ಯದ ಒಂದು 'ಪವರ್' ಫುಲ್ ವಾಹಿನಿ ಇದರ ಬಗ್ಗೆ ವರದಿ ಮಾಡಿತ್ತು. ಆ ಬಳಿಕ ಆ ವಾಹಿನಿಯ ಮೇಲೆ ದೂರು ದಾಖಲಿಸಿ ದನಿ ಅಡಗಿಸುವ ಕೆಲಸವಾಗಿತ್ತು. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಆದರೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿರಲಿಲ್ಲ. ಕಾಂಗ್ರೆಸ್ ಮತ್ತೆ‌ ಈ ವಿಷಯಕ್ಕೆ ಕಾವು‌ ಕೊಡುತ್ತಿರುವ ಲಕ್ಷಣಗಳು ಕಂಡುಬರುತ್ತಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅದಕ್ಕೆ ಉದಾಹರಣೆ ಇವತ್ತಿನ ಕಾಂಗ್ರೆಸ್ ಸುದ್ದಿಗೋಷ್ಟಿ. ಇಂದು ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ನೂತನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಜೊತೆ ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ ಜೋರು ದನಿಯಲ್ಲಿ 'ಯಡಿಯೂರಪ್ಪ ಮತ್ತವರ ಕುಟುಂಬದವರ ಭ್ರಷ್ಟಾಚಾರದ' ಬಗ್ಗೆ ದನಿ ಎತ್ತಿದ್ದಾರೆ. ರಾಜ್ಯದಲ್ಲಿ ದುರಾಡಳಿತ ಮತ್ತು ಭ್ರಷ್ಟಾಚಾರ ಎರಡೂ ಒಟ್ಟಿಗೆ ಸಾಗುತ್ತಿವೆ ಎಂದ ಸಿದ್ದರಾಮಯ್ಯ 'ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ' ಎಂದು ವಾಗ್ದಾಳಿ ನಡೆಸಿದರು. 'ಒಂದು ಬಿ.ಎಸ್. ಯಡಿಯೂರಪ್ಪ ನಾಮಕಾವಸ್ತೆ ಮುಖ್ಯಮಂತ್ರಿ. ಇನ್ನೊಬ್ಬರು ಅವರ ಪುತ್ರ ಬಿ.ವೈ. ವಿಜಯೇಂದ್ರ ಸೂಪರ್ ಸಿಎಂ' ಎಂಬುದನ್ನು ಬಿಡಿಸಿ ಹೇಳುವ ಅಗತ್ಯ ಈಗ ಉಳಿದಿಲ್ಲ. ಯಡಿಯೂರಪ್ಪ-ವಿಜಯೇಂದ್ರ ಜೊತೆಗೆ ವಿರೂಪಾಕ್ಷ ಮರಡಿ (ಅಳಿಯ) ಹಾಗೂ ಶಶಿಧರ ಮರಡಿ (ಮೊಮ್ಮಗ) ಕೂಡ‌ ರಾಜ್ಯ ಬಿಜೆಪಿ‌ ಸರ್ಕಾರದ ಭ್ರಷ್ಟಾಚಾರದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಒತ್ತಿ ಹೇಳಿದರು.‌ ಅದಕ್ಕೊಂದು ನಿದರ್ಶನವನ್ನು ಮುಂದಿಟ್ಟರು.

ಇತ್ತೀಚೆಗೆ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (BDA) 576 ಕೋಟಿ ರೂಪಾಯಿಗೆ ಹೌಸಗ್ ಪ್ರಾಜೆಕ್ಟ್ ಟೆಂಡರ್ ಕರೆಯುತ್ತದೆ. ಈ ಟೆಂಡರ್ ನಲ್ಲಿ ಇಬ್ಬರು ಬಿಲ್ಡರ್ ಗಳು ಪಾಲ್ಗೊಂಡಿರುತ್ತಾರೆ. ಅಂತಿಮವಾಗಿ ರಾಮಲಿಂಗಂ ಕನ್ ಸ್ಟ್ರಕ್ಷನ್ ಕಂಪನಿಗೆ ಟೆಂಡರ್ ಸಿಗುತ್ತದೆ. ಆ ಬಳಿಕ ವಿಜಯೇಂದ್ರ ರಾಮಲಿಂಗಂ ಕಂಪನಿ ಮಾಲೀಕರಿಗೆ ಕರೆ ಮಾಡಿ ಟೆಂಡರ್ ಕ್ಲೋಸ್ ಮಾಡುವ ಬೆದರಿಕೆ ಹಾಕುತ್ತಾರೆ.‌ ಹಾಗಾಗಬಾರದು ಎನ್ನುವುದಿದ್ದರೆ ತಮ್ಮ ಆಪ್ತ ಹೊಟೇಲ್ ಮಾಲಿಕನಿಗೆ ಹಣ ನೀಡುವಂತೆ ಸೂಚನೆ ನೀಡುತ್ತಾರೆ. ಇದೇ ವೇಳೆ ವಿಜಯೇಂದ್ರನಿಗೆ ಹಣ ಕೊಡುವುದಾಗಿ ಹೇಳಿ ಬಿಡಿಎ ಆಯುಕ್ತ ಪ್ರಕಾಶ್ ಕಂಟ್ರಾಕ್ಟರ್ ಬಳಿ 12 ಕೋಟಿ ಹಣವನ್ನು ಪಡೆದಿರುತ್ತಾರೆ. ಇದನ್ನು ಕಂಟ್ರಾಕ್ಟರ್ ವಿಜಯೇಂದ್ರನಿಗೆ ತಿಳಿಸುತ್ತಾರೆ. ಆದರೆ ವಿಜಯೇಂದ್ರ 'ಹಣ ಬಂದಿಲ್ಲವಲ್ಲ' ಎನ್ನುತ್ತಾರೆ. ಆಗ ತಮ್ಮ ಹೆಸರನ್ನು ಬಳಸಿಕೊಂಡು ಕಂಟ್ರಾಕ್ಟರ್ ಬಳಿ ಹಣ ವಸೂಲಿ ಮಾಡಿದ ಪ್ರಕಾಶ್ ವಿರುದ್ಧ ವಿಜಯೇಂದ್ರ ದೂರು ದಾಖಲಿಸುವುದಿಲ್ಲ. ಏಕೆಂದರೆ ಪ್ರಕಾಶ್ ಬಿಡಿಎ ಆಯುಕ್ತ ಹುದ್ದೆಗೆ ಬರಲು ವಿಜಯೇಂದ್ರನಿಗೆ 15 ಕೋಟಿ ರೂಪಾಯಿ ಕೊಟ್ಟಿರುತ್ತಾರೆ. ಇಷ್ಟೇ ಅಲ್ಲ, ಕೆಲ ದಿನಗಳಲ್ಲೇ ಆ ಕಂಟ್ರಾಕ್ಟರ್ ಯಡಿಯೂರಪ್ಪನವರ ಮೊಮ್ಮಗ ಶಶಿಧರ್ ಮರಡಿಯ ಅಕೌಂಟಿಗೆ 7.40 ಕೋಟಿ ರೂಪಾಯಿಗಳನ್ನು ಆರ್ ಟಿಜಿಎಸ್ (RTGS) ಮೂಲಕ ವರ್ಗ ಮಾಡುತ್ತಾರೆ. ಬೆಂಗಳೂರಿನ ಶೇಷಾದ್ರಿಪುರಂನ HDFC ಬ್ಯಾಂಕ್ ಶಾಖೆಯಲ್ಲಿರುವ ಶಶಿಧರ ಮರಡಿ ಅಕೌಂಟಿಗೆ ಹಣ ಸಂದಾಯವಾಗುತ್ತದೆ ಎಂದು ಯಡಿಯೂರಪ್ಪ ಮತ್ತವರ ಕುಟುಂಬದವರು ನಡೆಸಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಕರ್ಮಕಾಂಡವನ್ನು ಬಿಚ್ಚಿಟ್ಟರು.

ಹೀಗೆ ಭ್ರಷ್ಟಾಚಾರದ ಮೂಲಕ ಗಳಿಸುವ ಬ್ಲಾಕ್ ಮನಿಯನ್ನು ವೈಟ್ ಆಗಿ ಪರಿವರ್ತಿಸಲು ಯಡಿಯೂರಪ್ಪ ಮತ್ತವರ ಕುಟುಂಬದವರು ಹಣವನ್ನು ಕೊಲ್ಕತ್ತಾಗೆ ಕಳಿಸುತ್ತಾರೆ.‌ ಕೊಲ್ಕತ್ತಾದ ಏಳು ಖಾಸಗಿ ಸಂಸ್ಥೆಗಳಲ್ಲಿ ಯಡಿಯೂರಪ್ಪ ಕುಟುಂಬದವರ ಹೂಡಿಕೆ ಇದೆ. ಬೆಲ್ ಗ್ರೇವಿಯಾ ಎಂಬುದು ಯಡಿಯೂರಪ್ಪ ಕುಟುಂಬದ ಕಂಪನಿ.‌ ಇದಲ್ಲದೆ ವಿಎಸ್ ಎಸ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಕೂಡ ಇದೆ. ವಿಎಸ್ ಎಸ್ ಎಂದರೆ ವಿಜಯೇಂದ್ರ, ಶಶಿಧರ ಮತ್ತು ಸಂಜಯ್ ಎಂದು ಅರ್ಥ.‌ ಇದು ಕೂಡ ಕೊಲ್ಕತ್ತಾದಲ್ಲಿರುವ ಕಂಪನಿ ಎಂದು ವಿವರಿಸಿದರು.

ಈ ಕಂಪನಿಗಳಲ್ಲಿ ಆಗಿರುವ ಹೂಡಿಕೆ ಹವಾಲಾ ಮೂಲಕ ವರ್ಗವಾಗಿರುವ ಹಣದ್ದು. ಇದರ ಬಗ್ಗೆ ಕರೆಪ್ಶನ್ ಆ್ಯಕ್ಟ್ ಅಡಿ ತನಿಖೆಯಾಗಬೇಕು. ಮನಿ ಲ್ಯಾಂಡ್ರಿಂಗ್ ಆ್ಯಕ್ಟ್ ಕೂಡ ಉಲ್ಲಂಘನೆಯಾಗಿದೆ. ಇಷ್ಟೆಲ್ಲಾ ನಡೆದಿದ್ದರೂ ಬಿಜೆಪಿ ಹೈಕಮಾಂಡ್ ಏಕೆ ಸುಮ್ಮನಿದೆ? ಜಾರಿ ನಿರ್ದೇಶನಾಲಯ ಏನು ಮಾಡುತ್ತಿದೆ? ಇಷ್ಟೆಲ್ಲಾ ಇದ್ದರೂ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿ ಹೇಗೆ ಮುಂದುವರಿಯುತ್ತಾರೆ? ಅವರೀಗ ದಾಖಲೆಗಳನ್ನೇ ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ. ಕೂಡಲೇ ಅವರ ರಾಜೀನಾಮೆ ಪಡೆಯಬೇಕು. ಈ ಭ್ರಷ್ಟಾಚಾರದ ಬಗ್ಗೆ ಮೊದಲು ತನಿಖೆಯಾಗಬೇಕು.‌ ಆರೋಪಿಗಳನ್ನು ಮೊದಲು ಅರೆಸ್ಟ್ ಮಾಡಬೇಕು. ಒಂದು ಕ್ಷಣವೂ ಯಡಿಯೂರಪ್ಪ ಅಧಿಕಾರದಲ್ಲಿ ಇರಬಾರದು ಎಂದು ಸಿದ್ದರಾಮಯ್ಯ ಗುಡುಗಿದರು.

ಬಿ ವೈ ವಿಜಯೇಂದ್ರ
ಬಿ ವೈ ವಿಜಯೇಂದ್ರ

ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ ಎಂಬ ಮಾತು ಈಗ ನಡೆಯುತ್ತಿರುವ ಭ್ರಷ್ಟಾಚಾರದ ಮೂಲಕ ಸಾಬೀತಾಗಿದೆ ಎಂದ ಸಿದ್ದರಾಮಯ್ಯ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ 3 ತಿಂಗಳಾಯಿತು. ಈ ಅವಧಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಕರೊನಾ ಸಂದರ್ಭದಲ್ಲೂ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ನಡೆಸುತ್ತಿದೆ. ಮೆಡಿಕಲ್ ಕಿಟ್ ಹಗರಣದ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದೆವು. ಆದರೆ ಅವರು ರೇಟ್ ನಲ್ಲಿ ವೆರಿಯೇಶನ್ ಇದೆ ಅಂತ ನೆಪ ಹೇಳುತ್ತಿದ್ದಾರೆ. ದರದಲ್ಲಿ ಅಷ್ಟೊಂದು ಪ್ರಮಾಣದ ವ್ಯತ್ಯಾಸ ಇರೋಕೆ ಸಾಧ್ಯವೇ? ಎಂದು ವಾಗ್ದಾಳಿ ನಡೆಸಿದರು.

ನಿವೃತ್ತ ಡಿಜಿಯಾಗಿದ್ದ ಶಂಕರ್ ಬಿದರಿ ಕೂಡ ಇದನ್ನೇ ಹೇಳಿದ್ದಾರೆ. ಸಿಎಂ, ಮಕ್ಕಳು, ಮೊಮ್ಮಕ್ಕಳ ಭ್ರಷ್ಟಾಚಾರದ ಬಗ್ಗೆ ತಿಳಿಸಿದ್ದಾರೆ. ನಾನೂ ತಿನ್ನಲ್ಲ, ತಿನ್ನೋಕೂ ಬಿಡಲ್ಲ ಎಂದು ಹೇಳಿದ್ದ, ನಮ್ಮ ಸರ್ಕಾರವನ್ನು‌10% ಸರ್ಕಾರ ಎಂದಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈಗ ಯಡಿಯೂರಪ್ಪ ಹಾಗೂ ಮತ್ತವರ ಕುಟುಂಬದವರ ಭಾರೀ ಭ್ರಷ್ಟಾಚಾರದ ಬಗ್ಗೆ ಏನು ಹೇಳುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆಮಾಡಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com