ವಿರೋಧಗಳ ನಡುವೆಯೂ ಪುತ್ರ ವ್ಯಾಮೋಹ ಬಿಡಲೊಲ್ಲದ ಸಿಎಂ ಬಿಎಸ್‌ವೈ

ಬಿ ವೈ ವಿಜಯೇಂದ್ರ ಕರ್ನಾಟಕ ಸರ್ಕಾರದಲ್ಲಿ ಅನಧಿಕೃತ ಹಸ್ತಕ್ಷೇಪ ನಡೆಸುತ್ತಿರುವುದು ಬಹಿರಂಗ ರಹಸ್ಯ. ದಿನಗಳ ಹಿಂದೆ ಸರ್ಕಾರಿ ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ವಿಜಯೇಂದ್ರ ಸರ್ಕಾರದಲ್ಲಿ ಯಾವುದೇ ಹಸ್ತಕ್ಷೇಪ ನಡೆಸುತ್ತಿಲ್ಲವೆಂದು ಯಡಿಯೂರಪ ...
ವಿರೋಧಗಳ ನಡುವೆಯೂ ಪುತ್ರ ವ್ಯಾಮೋಹ ಬಿಡಲೊಲ್ಲದ ಸಿಎಂ ಬಿಎಸ್‌ವೈ

ಕರ್ನಾಟಕ ಬಿಜೆಪಿ ಆಂತರ್ಯ ಗೊಂದಲದ ಗೂಡಾಗಿದ್ದು, ತಮ್ಮದೇ ಪಕ್ಷದ ಸರ್ಕಾರ ಕೇಂದ್ರದಲ್ಲಿರುವಾಗಲೂ ಅಗತ್ಯ ಇರುವಷ್ಟು ನೆರೆಪರಿಹಾರ ತರಲು ಸಾಧ್ಯವಾಗಿಲ್ಲ. ರಾಜ್ಯದ 25 ಮಂದಿ ಸಂಸದರು ಬಿಜೆಪಿಯವರೇ ಆಗಿದ್ದರೂ ರಾಜ್ಯಕ್ಕೆ ನ್ಯಾಯವಾಗಿ ದಕ್ಕಬೇಕಿದ್ದ ಜಿಎಸ್‌ಟಿ ಪಾಲನ್ನು ತರಿಸುವಲ್ಲಿ ವಿಫಲಗೊಂಡಿವೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದ್ದ ಬಿಜೆಪಿ ತನ್ನ ಆಂತರಿಕ ಜಗಳದಲ್ಲೇ ಮಗ್ನವಾಗಿದೆ.

ಸಚಿವ ಸಂಪುಟ ವಿಸ್ತರಣೆಯಲ್ಲಿ ತಮಗೆ ಅಧಿಕಾರ ಸಿಗುವ ನಿರೀಕ್ಷೆಯಲ್ಲಿ ಉಮೇಶ್‌ ಕತ್ತಿ, ಸಿಪಿ ಯೋಗೇಶ್ವರ್‌, ರೇಣುಕಾಚಾರ್ಯ ಮೊದಲಾದವರು ಇದ್ದರೆ, ಯಡಿಯೂರಪ್ಪ ಪುತ್ರ ವಿಜಯೇಂದ್ರ ಕರ್ನಾಟಕ ಸರ್ಕಾರದಲ್ಲಿ ಪ್ರಭಾವ ಹೊಂದುತ್ತಿರುವುದನ್ನು ಸಹಿಸದ ಬೇರೆ ನಾಯಕರು ಸಾಕಷ್ಟಿದ್ದಾರೆ. ಬಿ ವೈ ವಿಜಯೇಂದ್ರ ಕರ್ನಾಟಕ ಬಿಜೆಪಿಯ ಉಪಾಧ್ಯಕ್ಷನಾಗುವ ಮೊದಲೇ ರಾಜ್ಯ ನಾಯಕರು ಬಿಎಸ್‌ವೈ ಪುತ್ರ ಸರ್ಕಾರದೊಳಗೆ ಪ್ರಭಾವ ಸಾಧಿಸುತ್ತಿರುವುದನ್ನು ಅಸಮಾಧಾನದಿಂದ ಗಮನಿಸುತ್ತಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಸಮಾಧಾನದಿಂದ ಗಮನಿಸುತ್ತಿದ್ದರು ಮಾತ್ರವಲ್ಲ ಈ ಕುರಿತಾಗಿ ಬಿಜೆಪಿ ಹೈಕಮಾಂಡ್‌ ಹಾಗೂ ಬಿಜೆಪಿ ಮಾತೃಸಂಸ್ಥೆ ಆರ್‌ಎಸ್‌ಎಸ್‌ ಪಡಸಾಲೆಗೂ ವಿಜಯೇಂದ್ರ ವಿರುದ್ಧ ದೂರು ಹೋಗಿತ್ತು. ಕಳೆದ ಆಗಸ್ಟ್‌ ಕೊನೆಯ ವಾರದಲ್ಲಿ ಬಿಜೆಪಿ ಶಾಸಕರೇ ಹೈಕಮಾಂಡಿಗೆ ವಿಜಯೇಂದ್ರ ವಿರುದ್ಧ ಪತ್ರ ಬರೆದಿದ್ದಾರೆಂದು ಕಾಂಗ್ರೆಸ್‌ ಅಖಾಡಕ್ಕೆ ಇಳಿದಿತ್ತು, ಮಾತ್ರವಲ್ಲ ಬಿಜೆಪಿ ಶಾಸಕರು ಬರೆದಿದ್ದೆನ್ನಲಾದ ಪತ್ರವನ್ನೂ ಬಹಿರಂಗಪಡಿಸಿತ್ತು. ಪತ್ರದಲ್ಲಿ ವಿಜಯೇಂದ್ರ ಹಗರಣಗಳ ಸಂಬಂಧಿಸಿದಂತೆ ಹಾಗೂ ಅವರ ಬೇನಾಮಿಗಳ ಕುರಿತಂತೆ ಉಲ್ಲೇಖಿಸಲಾಗಿತ್ತು. ಇದನ್ನು ವಿಜಯೇಂದ್ರ ನಿರಾಕರಿಸಿದ್ದರೂ, ಅವರ ವಿರುದ್ಧ ದೂರುಗಳು ಹೋಗಿದ್ದು ನಿಜವೆಂಬಂತೆ, ಸರಸಂಘಚಾಲಕ್‌ ಮೋಹನ್‌ ಭಾಗವತರೂ ಸರ್ಕಾರದ ಕಾರ್ಯ ಚಟುವಟಿಕೆಯಿಂದ ಕುಟುಂಬಸ್ಥರನ್ನೂ ದೂರ ಇಡುವಂತೆ ಬಿಎಸ್‌ವೈಗೆ ಈ ಹಿಂದೆಯೇ ಸೂಚಿಸಿದ್ದರು.

ಅದಲ್ಲದೆ, ಕಳೆದ ಫೆಬ್ರವರಿಯಲ್ಲಿ ಬಿಜೆಪಿ ಹಿರಿಯ ನಾಯಕ ಸಚಿವ ಸೋಮಣ್ಣ ಹಾಗೂ ವಿಜಯೇಂದ್ರ ನಡುವೆ ಜಟಾಪಟಿ ನಡೆದಿತ್ತು. ಜೊತೆಗೆ ಪಕ್ಷದ ಹಿರಿಯ ಶಾಸಕರು ತಮ್ಮ ಕ್ಷೇತ್ರದ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಬಂದರೆ ಯಡಿಯೂರಪ್ಪ ಎಲ್ಲರಿಗೂ ವಿಜಯೇಂದ್ರ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ. ಇದು ಸಾಮಾನ್ಯವಾಗಿ ಎಲ್ಲಾ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಸದ್ದಿಲ್ಲದೆ ಸಿಎಂ ವಿರುದ್ಧ ಒಂದು ಗುಂಪು ಧೃವೀಕರಣಗೊಳ್ಳುತ್ತಿದ್ದು, ಮೊದಲೇ ಅಸಮಾಧಾನದಿಂದ ಕುದಿಯುತ್ತಿರುವ ಉಮೇಶ್‌ ಕತ್ತಿ ಇದರ ನಾಯಕ ಎನ್ನುವ ಮಾತುಗಳು ಕೇಳಿಬಂದಿತ್ತು. ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಕೂಡಾ ವಿಜಯೇಂದ್ರ ವಿರುದ್ಧ ಅಸಮಾಧಾನದ ಹೇಳಿಕೆ ನೀಡಿರುವ ಸುದ್ದಿ ಈ ಹಿಂದೆ ಕೇಳಿಬಂದಿತ್ತು.

ಸರ್ಕಾರಿ ವೈದ್ಯಾಧಿಕಾರಿಗಳೊಂದಿಗೆ ವಿಜಯೇಂದ್ರ
ಸರ್ಕಾರಿ ವೈದ್ಯಾಧಿಕಾರಿಗಳೊಂದಿಗೆ ವಿಜಯೇಂದ್ರ

ಒಟ್ಟಿನಲ್ಲಿ ಕರ್ನಾಟಕ ಸರ್ಕಾರದಲ್ಲಿ ಯಾವುದೇ ಸಾಂವಿಧಾನಿಕ ಹುದ್ದಯಿಲ್ಲದ, ಕೇವಲ ಬಿಜೆಪಿ ಉಪಾಧ್ಯಕ್ಷನಾಗಿರುವುದು ಬಿಟ್ಟರೆ ಮುಖ್ಯಮಂತ್ರಿ ಪುತ್ರ ವಿಜಯೇಂದ್ರರ ಬಳಿಯಿರುವುದು ʼಸೂಪರ್‌ ಸಿಎಂʼ ಎಂಬ ಅನೌಪಚಾರಿಕ, ಆಕ್ಷೇಪಾರ್ಹ ಹುದ್ದೆ. ಅದು ವಿಪಕ್ಷ ಹಾಗೂ ಸ್ವಪಕ್ಷೀಯ ನಾಯಕರು ಸರ್ಕಾರದಲ್ಲಿ ಹಸ್ತಕ್ಷೇಪ ನಡೆಸುವುದಕ್ಕೆ ನೀಡಿರುವ ಪಟ್ಟ. ಹೀಗಿರುವ ವಿಜಯೇಂದ್ರರ ಆಡಳಿತದಲ್ಲಿ ಹಸ್ತಕ್ಷೇಪ ಬಹಿರಂಗ ರಹಸ್ಯ. ಅದಕ್ಕೆ ಪೂರಕವೆಂಬಂತೆ ಸರ್ಕಾರಿ ವೈದ್ಯಾಧಿಕಾರಿಗಳ ಸಭೆಯನ್ನು ವಿಜಯೇಂದ್ರ ನಡೆಸಿದ್ದರು. ಇದು ಬಿಜೆಪಿ ಮಾತ್ರವಲ್ಲದೆ ವಿಪಕ್ಷ ಕಾಂಗ್ರೆಸ್‌ ಕೆಂಗಣ್ಣಿಗೂ ಗುರಿಯಾಗಿತ್ತು. ಕನಿಷ್ಟ ಗ್ರಾಮ ಪಂಚಾಯಿತಿ ಸದಸ್ಯನೂ ಅಲ್ಲದ ವಿಜಯೇಂದ್ರ ಸರ್ಕಾರಿ ವೈದ್ಯಾಧಿಕಾರಿಗಳ ಸಭೆ ಏಕೆ ನಡೆಸಬೇಕೆಂದು ಕಾಂಗ್ರೆಸ್‌ ಟೀಕಿಸಿದ್ದರು. ವಿಪಕ್ಷ ನಾಯಕ ಸಿದ್ಧರಾಮಯ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ಸಾಂವಿಧಾನಿಕ ಮುಖ್ಯಮಂತ್ರಿ ಯಡಿಯೂರಪ್ಪ, ವಾಸ್ತಾವಿಕ ಮುಖ್ಯಮಂತ್ರಿ ವಿಜಯೇಂದ್ರ” ಎಂದು ಆಡಳಿತದಲ್ಲಿ ಬಿಎಸ್‌ವೈ ಪುತ್ರ ವ್ಯಾಮೋಹವನ್ನು ಟೀಕಿಸಿದ್ದರು.

ಸದ್ಯ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ತಮ್ಮ ಪುತ್ರನ ಹೆಸರನ್ನು ಅನಗತ್ಯ ಎಳೆದು ತಂದು ಗೊಂದಲ ಸೃಷ್ಟಿಸಲಾಗುತ್ತಿದೆ. ಇದು ವ್ಯವಸ್ಥಿತ ಪಿತೂರಿ ಎಂದಿದ್ದಾರೆ. ಆದರೆ ಸರ್ಕಾರ ವೈದ್ಯಾಧಿಕಾರಿಗಳ ಜೊತೆಗೆ ಯಾವುದೇ ಸಾಂವಿಧಾನಿಕ ಹುದ್ದಯಿಲ್ಲದ ವ್ಯಕ್ತಿ ಯಾಕೆ ಸಭೆ ನಡೆಸಬೇಕೆಂಬುದಕ್ಕೆ ಸಮರ್ಪಕ ಉತ್ತರ ನೀಡಿಲ್ಲ.

ರಾಜ್ಯ ನಾಯಕ ತಮ್ಮ ಪುತ್ರನನ್ನು ಅನಗತ್ಯ ಎಳೆದು ತರಲಾಗುತ್ತಿದೆ ಎಂದು ಹೇಳಿದಾಗ್ಯೂ, ಹಾಸನದ ಏಕೈಕ ಬಿಜೆಪಿ ಶಾಸಕ ಪ್ರೀತಂ ಜೆ ಗೌಡ, ಮುಂದಿನ ದಿನಗಳಲ್ಲಿ ವಿಜಯೇಂದ್ರ ಮುಖ್ಯಮಂತ್ರಿ ಆಗುವುದು ದಿಟ ಎಂದಿದ್ದಾರೆ. ವಿಜಯೇಂದ್ರರಿಗೆ ಮುಖ್ಯಮಂತ್ರಿ ಆಗುವ ಎಲ್ಲಾ ಯೋಗ್ಯತೆ ಇದೆ. ಪಕ್ಷದ ಕಾರ್ಯಕರ್ತನಾಗಿ ವಿಜಯೇಂದ್ರ ಅವರು ಮಾಡುತ್ತಿರುವ ಕೆಲಸ ಪ್ರತಿಪಕ್ಷಗಳಿಗೆ ದಿಗಿಲು ಹುಟ್ಟಿಸಿದೆ. ಹಾಗಾಗಿ ʼಸೂಪರ್‌ ಸಿಎಂʼ ಪಟ್ಟ ನೀಡಿದ್ದಾರೆ. ವಿಪಕ್ಷಗಳಿಗೆ ಅಭಿನಂದನೆಗಳು ಎಂದಿದ್ದಾರೆ.

ಹೇಳಿಕೇಳಿ ಪ್ರೀತಂ ಗೌಡ, ಒಕ್ಕಲಿಗ ಸಮುದಾಯದವರು ಮಾತ್ರವಲ್ಲ ಜೆಡಿಎಸ್‌ ಪ್ರಾಬಲ್ಯವಿರುವ ಹಾಸನದಿಂದ ಗೆದ್ದು ಬಂದ ಏಕೈಕ ಬಿಜೆಪಿ ಶಾಸಕ. ಒಂದು ಕಡೆ ಬಿಜೆಪಿ ಒಕ್ಕಲಿಗ ಮತವನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈ ಸೂಚನೆ ಪ್ರೀತಂ ಗೌಡರಿಗೆ ಸಿಕ್ಕಿಯೇ ವಿಜಯೇಂದ್ರರನ್ನು ಓಲೈಕೆ ಮಾಡಿ ಆ ಮೂಲಕ ಬಿಎಸ್‌ವೈಗೆ ಹತ್ತಿರವಾಗಬಹುದೆಂಬ ಆಲೋಚನೆಯಲ್ಲಿದ್ದಾರೆಂದು ಸರಳವಾಗಿ ವಿಶ್ಲೇಷಿಸಬಹುದು. ಜೊತೆಗೆ ಹಾಸನಕ್ಕೆ ತಮ್ಮ ಪಕ್ಷದ ವತಿಯಿಂದ ಮಂತ್ರಿಸ್ಥಾನ ನೀಡಿದರೆ ಒಕ್ಕಲಿಗರ ಓಲೈಕೆ ಮಾಡಬಹುದೆಂದು ಬಿಜೆಪಿ ನಾಯಕರನ್ನು ಒಪ್ಪಿಸಿ ಮಂತ್ರಿಸ್ಥಾನಕ್ಕೆ ಗಾಳ ಹಾಕಬಹುದೆಂಬ ಆಲೋಚನೆಯೂ ಪ್ರೀತಂ ಗೌಡರಲ್ಲಿರಬಹುದು. ಅದೇನೆ ಇದ್ದರೂ, ಬಿ ವೈ ವಿಜಯೇಂದ್ರರ ಪ್ರಭಾವವನ್ನು ಪ್ರೀತಂ ಗೌಡ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಹಾಗೂ ಅವರನ್ನು ಕೊಂಡಾಡಿದ್ದಾರೆ.

ಒಟ್ಟಾರೆ, ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪ ತನ್ನ ಸರ್ಕಾರದಲ್ಲಿ ತನ್ನ ಪುತ್ರನ ಹಸ್ತಕ್ಷೇಪವಿಲ್ಲವೆಂದು ತಿಪ್ಪೆ ಸಾರಿಸುತ್ತಿದ್ದಾರೆ. ಆದರೆ ತಮ್ಮದೇ ಪಕ್ಷದ ಶಾಸಕರು ವಿಜಯೇಂದ್ರರನ್ನು ಮುಂದಿನ ಮುಖ್ಯಮಂತ್ರಿಯೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಹೋರಾಟದ ದೆಸೆಯಲ್ಲಿ ರಾಜಕಾರಣಕ್ಕೆ ಬಂದ ಯಡಿಯೂರಪ್ಪ ಮಾಜಿ ಪ್ರಧಾನಿ ದೇವೇಗೌಡರಂತೆ, ತನ್ನ ಪುತ್ರ ವ್ಯಾಮೋಹಕ್ಕೆ ಸಿಲುಕಿ ಬಿಜೆಪಿ ಹುಸಿಯಾಗಿ ವಿರೋಧಿಸಿಕೊಳ್ಳುವ ʼಕುಟುಂಬ ರಾಜಕಾರಣʼಕ್ಕೆ ಹಸಿಯಾಗಿ ತಿಲಾಂಜಲಿಯಿಟ್ಟರೆ ಆಶ್ಚರ್ಯವೇನಿಲ್ಲ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com