ನರೇಂದ್ರ ಮೋದಿಯವರ ಕಣ್ಣು ತೆರೆಸಿ -ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಸಲಹೆ

ಗೆಲುವಿನ ಕಿರೀಟಗಳನ್ನೆಲ್ಲ ಮುಡಿಗೇರಿಸುವ ನರೇಂದ್ರ ಮೋದಿ, ವೈಫಲ್ಯಗಳ ಹೊಣೆಯನ್ನು ರಾಜ್ಯಗಳ ಹೆಗಲ ಕಡೆ ಜಾರಿಸುವ ಚಾಳಿ ಇದೆ. ಪ್ರಧಾನಿಯವರಿಗೆ ಜವಾಬ್ದಾರಿ ನೆನಪಿಸಿ ರಾಜ್ಯಕ್ಕೆ ನ್ಯಾಯ ಕೊಡಿಸಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ
ನರೇಂದ್ರ ಮೋದಿಯವರ ಕಣ್ಣು ತೆರೆಸಿ -ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಸಲಹೆ

ಕರ್ನಾಟಕ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ, ಪ್ರಧಾನಿ ಮೋದಿಯವನ್ನು ಭೇಟಿ ಮಾಡಿದ್ದಾರೆ. ಎರಡು ದಿವಸದ ದೆಹಲಿ ಪ್ರವಾಸದಲ್ಲಿರುವ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ, ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲು ಮೊದಲಾದವುಗಳ ಕುರಿತು ದೆಹಲಿಯ ಪಕ್ಷ ವರಿಷ್ಟರೊಂದಿಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್‌ ಮುಖಾಂತರ ಕೆಲವು ಬೇಡಿಕೆ ಸಲಹೆಗಳನ್ನು ಯಡಿಯೂರಪ್ಪರಿಗೆ ನೀಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಕುರಿತಂತೆ ಸರಣಿ ಟ್ವೀಟ್‌ ಮಾಡಿದ ಸಿದ್ದರಾಮಯ್ಯ,”ಮುಖ್ಯಮಂತ್ರಿ ಯಡಿಯೂರಪ್ಪನವರೇ, ಕಾಡಿಬೇಡಿ ಕೊನೆಗೂ ಪ್ರಧಾನಿಯ ಭೇಟಿಗೆ ಅವಕಾಶ ಪಡೆದಿದ್ದೀರಿ. ಈ ಅವಕಾಶವನ್ನು ನಿಮ್ಮ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿಗೆ ಬಳಸಿಕೊಳ್ಳದೆ ರಾಜ್ಯದ ಹಿತರಕ್ಷಣೆಗಾಗಿ ನಾಲ್ಕು ಮಾತುಗಳನ್ನು ಕಡಕ್ ಆಗಿ ಕೇಳಲು ಬಳಸಿಕೊಳ್ಳಿ. ರಾಜ್ಯದ ಜನ ನಿಮ್ಮ ಬೆನ್ನ ಹಿಂದಿದ್ದಾರೆ. ಕಳೆದ ವರ್ಷದ ಅತಿವೃಷ್ಟಿಗೆ ರೂ.35000 ಕೋಟಿ ಪರಿಹಾರ ಕೇಳಿದ್ದೀರಿ,‌ ಪ್ರಧಾನಿ ನೀಡಿದ್ದು ರೂ.1,869 ಕೋಟಿ‌. ಈ ಬಾರಿ ರೂ.8000 ಕೋಟಿ ನಷ್ಟವಾಗಿದೆ ಎಂದು ಹೇಳುತ್ತಿದ್ದೀರಿ. ಕಳೆದ ವರ್ಷದ ಬಾಕಿ ಜೊತೆ ಈ ವರ್ಷದ ಪರಿಹಾರವನ್ನು ಉದಾರವಾಗಿ ಕೊಡುವಂತೆ ಕೇಳಿಕೊಳ್ಳಿ” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಯಡಿಯೂರಪ್ಪರ ಕಾಲೆಳೆದಿದ್ದಾರೆ.

15ನೇ ಹಣಕಾಸು ಆಯೋಗದಿಂದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚು ನಷ್ಟವಾಗಿರುವುದು ಕರ್ನಾಟಕ ರಾಜ್ಯಕ್ಕೆ. ಈ ಅನ್ಯಾಯಕ್ಕೆ ಕಾರಣವಾಗಿರುವ ಮಾನದಂಡಗಳನ್ನು ಪರಿಷ್ಕರಿಸಿ ತೆರಿಗೆ ಹಂಚಿಕೆ ಮತ್ತು ಎಸ್ ಡಿ ಆರ್ ಎಫ್ ನಲ್ಲಿ ರಾಜ್ಯಕ್ಕೆ ನ್ಯಾಯಬದ್ದ ಪಾಲು ಸಿಗುವಂತೆ ಮಾಡಿ. ಕರೋನಾ ಸೋಂಕಿನಲ್ಲಿ ವಿಶ್ವದಲ್ಲಿ ಭಾರತ, ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಗೆಲುವಿನ ಕಿರೀಟಗಳನ್ನೆಲ್ಲ ಮುಡಿಗೇರಿಸುವ ನರೇಂದ್ರ ಮೋದಿ, ವೈಫಲ್ಯಗಳ ಹೊಣೆಯನ್ನು ರಾಜ್ಯಗಳ ಹೆಗಲ ಕಡೆ ಜಾರಿಸುವ ಚಾಳಿ ಇದೆ. ಪ್ರಧಾನಿಯವರಿಗೆ ಜವಾಬ್ದಾರಿ ನೆನಪಿಸಿ ರಾಜ್ಯಕ್ಕೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದ್ದಾರೆ.

ಕರೋನಾ ನಿಯಂತ್ರಣದ ಸಾಮಗ್ರಿ ಖರೀದಿಯನ್ನು ಕೇಂದ್ರೀಕೃತಗೊಳಿಸಿರುವ ಪ್ರಧಾನಿ, ಕರ್ನಾಟಕದ ಬೇಡಿಕೆಯ ಶೇಕಡಾ ಹತ್ತರಷ್ಟೂ ಪೂರೈಸಿಲ್ಲ. ವೆಂಟಿಲೇಟರ್ ಮತ್ತು ಆಮ್ಲಜನಕ ಪೂರೈಕೆಯ ಸಾಧನಗಳ ಕೊರತೆಯಿಂದ ಜನ ಸಾಯುತ್ತಿರುವುದನ್ನು ಗಮನಕ್ಕೆ ತಂದು ನರೇಂದ್ರ ಮೋದಿಯವರ ಕಣ್ಣು ತೆರೆಸಿ. ಪ್ರಧಾನಿ ಘೋಷಿಸಿದ್ದ ರೂ.20 ಲಕ್ಷ ಕೋಟಿ ಪ್ಯಾಕೇಜ್ ರಾಜ್ಯದ ಜನರನ್ನು ಇನ್ನೂ ತಲುಪಿಲ್ಲ. ಕರೋನಾ ಸೋಂಕಿಗಿಂತ ಹಸಿವು ಮತ್ತು ನಿರುದ್ಯೋಗದಿಂದ ಹೆಚ್ಚು ಜನ ಸಾವು-ನೋವಿಗೀಡಾಗುವ ಮೊದಲು, ಪ್ಯಾಕೇಜ್ ನಲ್ಲಿ ರಾಜ್ಯಕ್ಕೆ ನ್ಯಾಯಬದ್ಧ ಪಾಲು ನೀಡಲು ಒತ್ತಾಯಿಸಿ.

ನ್ಯಾಯಬದ್ಧವಾಗಿ ರಾಜ್ಯಕ್ಕೆ ನೀಡಬೇಕಾಗಿರುವ ಜಿಎಸ್‌ಟಿ ಪರಿಹಾರ ರೂ.25,508 ಕೋಟಿ ನೀಡದೆ ದ್ರೋಹ ಬಗೆದಿರುವ ಪ್ರಧಾನಿ, ಸಾಲ ಎತ್ತಲು ಮುಖ್ಯಮಂತ್ರಿ ಕೈಗೆ ಭಿಕ್ಷಾಪಾತ್ರೆ ನೀಡಿದೆ. ಯಡಿಯೂರಪ್ಪರವರೇ, ನಿಮ್ಮ ನಾಯಕರ ಎದೆಯಳತೆಯ ಮುಂದೆ ಮಣಿಯದೆ ಧೈರ್ಯದಿಂದ ಈ ಅನ್ಯಾಯ ಸರಿಪಡಿಸಲು ಹೇಳಿ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com