ಮೋದಿ- ಯಡಿಯೂರಪ್ಪ ಭೇಟಿ; ಉಭಯ ಕುಶಲೋಪಹರಿಗೆ ಸೀಮಿತವೋ? ಅಭಿವೃದ್ಧಿ ವಿಷಯವೂ ಚರ್ಚೆಯಾಗಲಿದೆಯೋ?
ಸಚಿವ ಸಂಪುಟ ವಿಸ್ತರಣೆ, ಜಿಎಸ್‌ಟಿ, ನೆರೆ ಪರಿಹಾರದ ಹಿನ್ನಲೆಯಲ್ಲಿ ಯಡಿಯೂರಪ್ಪ ದೆಹಲಿ ಪ್ರವಾಸ ಮಹತ್ವ ಪಡೆದುಕೊಂಡಿದೆ. ಆದರೆ ದೆಹಲಿಯಲ್ಲಿ ನಡೆಯಲಿರುವ ಮೋದಿ ಭೇಟಿ ಕೇವಲ ಉಭಯ ಕುಶಲೋಪಹರಿಗೆ ಸೀಮಿತವಾಗಲಿದೆಯೋ ಎನ್ನುವ ಅನುಮಾನ ವ್ಯಕ್ತವಾಗಿದೆ.
ಮೋದಿ- ಯಡಿಯೂರಪ್ಪ ಭೇಟಿ; ಉಭಯ ಕುಶಲೋಪಹರಿಗೆ ಸೀಮಿತವೋ? ಅಭಿವೃದ್ಧಿ ವಿಷಯವೂ ಚರ್ಚೆಯಾಗಲಿದೆಯೋ?

ಸಚಿವಾಕಾಂಕ್ಷಿಗಳ ಒತ್ತಡ ಹೆಚ್ಚಾಗುತ್ತಿದ್ದಂತೆ ಸಂಪುಟ ಸಮಸ್ಯೆಗೆ ಪರಿಹಾರ ಹುಡುಕಿಕೊಂಡು ದೆಹಲಿ ನಾಯಕರ ಮೊರೆ ಹೋಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ಅವರನ್ನು ಭೇಟಿಯಾಗಿದ್ದಾರೆ.

ಆದರೆ ನಿನ್ನೆ ದೆಹಲಿಗೆ ಬಂದಿಳಿಯುತ್ತಿದ್ದಂತೆ 'ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಳಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಿದ್ದೇನೆ' ಎಂದಿದ್ದರು. ಯಾವುದೇ ನಿರ್ದಿಷ್ಟ ವಿಷಯ ಅಥವಾ ಯೋಜನೆ ಬಗ್ಗೆ ಚರ್ಚಿಸುತ್ತೇನೆ. ಹಾಣಕಾಸಿನ ನೆರವು ಕೇಳುತ್ತೇನೆ ಎಂದು ಹೇಳಿರಲಿಲ್ಲ. ಆದುದರಿಂದ ಇಂದು ಪಿಎಂ ಮೋದಿ ಮತ್ತು ಸಿಎಂ ಯಡಿಯೂರಪ್ಪ ಅವರ ಭೇಟಿ ಕೇವಲ ಉಭಯ ಕುಶಲೋಪಹರಿಗೆ ಸೀಮಿತವಾಗಲಿದೆಯೋ ಅಥವಾ ಅಭಿವೃದ್ಧಿ ವಿಷಯಗಳೂ ಚರ್ಚೆಯಾಗಲಿವೆಯೋ? ಎಂಬ ಅನುಮಾನ ವ್ಯಕ್ತವಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದಕ್ಕೆ ಪೂರಕವಾಗಿ ನಿನ್ನೆಯಷ್ಟೇ ಮೋದಿಯ ಹುಟ್ಟುಹಬ್ಬ ಇದ್ದ ಕಾರಣ ಯಡಿಯೂರಪ್ಪ, ಮೋದಿಗೆ ಶುಭಾಶಯ ಹೇಳಲೆಂದೇ ದೆಹಲಿಗೆ ಆಗಮಿಸಿದ್ದಾರೆ. ಜೊತೆಗೆ ತಾವು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಒಂದು‌ ವರ್ಷ ಪೂರೈಸುತ್ತಿರುವುದರಿಂದ ಇದಕ್ಕೆ ಸಹಕರಿಸಿದ್ದಕ್ಕಾಗಿ ಧನ್ಯವಾದ ತಿಳಿಸಲಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಇತ್ತೀಚಿಗೆ ಸಮಸ್ಯೆಗಳು‌ ಹೆಚ್ಚಾಗುತ್ತಿವೆ. ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಕೋವಿಡ್ ಸಂದರ್ಭದಲ್ಲೂ ಭಾರೀ ಭ್ರಷ್ಟಾಚಾರ ಮಾಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸ ಬರಿದಾಗಿದೆ. ಸತ್ತಂತಿರುವ ರಾಜ್ಯ ಬಿಜೆಪಿ ಸರ್ಕಾರವನ್ನು ಪ್ರತಿದಿನವೂ ಪ್ರತಿಪಕ್ಷ ಕಾಂಗ್ರೆಸ್ ತರಾಟೆಗೆ ತೆಗೆದುಕೊಳ್ಳುತ್ತಿದೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ 'ಲೆಕ್ಕಕೊಡಿ' ಎಂದು ಒತ್ತಾಯಿಸುತ್ತಿದ್ದಾರೆ‌. ಎಲ್ಲಕ್ಕಿಂತ ಹೆಚ್ಚಾಗಿ ರಾಜ್ಯ ಬಿಜೆಪಿ ನಾಯಕರಿಗೆ ಕೇಂದ್ರ ಸರ್ಕಾರದ ಬಳಿ‌ ಹಣ ಕೇಳುವ ಧೈರ್ಯ ಇಲ್ಲ ಎಂದು ಚಾಟಿ ಬೀಸುತ್ತಿದ್ದಾರೆ. ಮುಂದಿನ ವಾರ ನಡೆಯುವ ವಿಧಾನಸಭಾ ಅಧಿವೇಶನದಲ್ಲೂ ಈ ವಿಷಯಗಳು ಚರ್ಚೆಗೆ ಬರಲಿವೆ. ಈ ಹಿನ್ನಲೆಯಲ್ಲಿ 'ಕೇಂದ್ರ ಸರ್ಕಾರದ ಬಳಿ ಹಣ ಕೇಳಿದ್ದೇವೆ' ಎಂದು ಬಿಂಬಿಸಿಕೊಳ್ಳಲು 'ನೆಪ ಮಾತ್ರಕ್ಕೆ' ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹಾಗೂ ಕೆಲ ಕೇಂದ್ರ ಸಚಿವರನ್ನು ಭೇಟಿಯಾಗಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.

ಇನ್ನೊಂದೆಡೆ ಸ್ವತಃ ಯಡಿಯೂರಪ್ಪ ಅವರೇ 'ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆಗೆ ಒಪ್ಪಿಗೆ ಪಡೆಯಲು ದೆಹಲಿಗೆ ಬಂದಿದ್ದೆನೆ' ಎಂದು ಹೇಳಿದ್ದರು.‌ ಸದ್ಯಕ್ಕೆ ಅವರಿಗೆ ರಾಜ್ಯದ ಸಮಸ್ಯೆಗಿಂತ ತಮ್ಮ‌ ಸಂಪುಟದ ಸಮಸ್ಯೆ ಬಗೆಹರಿಸಿಕೊಳ್ಳುವುದೇ ದೊಡ್ಡ ವಿಷಯವಾಗಿದೆ. ಈ ಹಿನ್ನಲೆಯಲ್ಲಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ ನಡ್ಡಾ ಅವರ ಭೇಟಿ ಮಾಡಿ 'ಗ್ರೀನ್ ಸಿಗ್ನಲ್' ಪಡೆಯಲೆಂದು ದೆಹಲಿಗೆ ಬಂದಿದ್ದಾರೆಯೇ ವಿನಃ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಸಲು ಅಲ್ಲ ಎಂದು ಕೂಡ ಹೇಳಲಾಗುತ್ತಿದೆ.

ಹೇಗೂ ದೆಹಲಿಗೆ ಬಂದಿರುವುದರಿಂದ, ಇದೇ ಸಂದರ್ಭದಲ್ಲಿ ಪ್ರಧಾನ ಮೋದಿಯವರ ಹುಟ್ಟುಹಬ್ಬ ಇರುವುದರಿಂದ ಹಾಗೂ ನಾಯಕತ್ವ ಬದಲಾವಣೆ ವಿಷಯ ಇನ್ನಷ್ಟು ಕಾವು ಪಡೆದುಕೊಂಡು ತಮ್ಮ ಸ್ಥಾನಕ್ಕೆ ಕುತ್ತುಬಂದರೆ 'ತಮ್ಮ ತಲೆ ಕಾಯಿರಿ' ಎಂದು ಕೇಳಿಕೊಳ್ಳಬೇಕಾಗಿರುವುದರಿಂದ ಮೋದಿಯನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.

ಇಷ್ಟರ ನಡುವೆ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿಯಲ್ಲಿ ಎಲ್ಲದರಲ್ಲೂ ನಿರ್ಣಾಯಕ ಪಾತ್ರ ವಹಿಸುತ್ತಿರುವ ಅಮಿತ್ ಶಾ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ನಿನ್ನೆ ರಾತ್ರಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೂ ಇನ್ನೂ ಒಂದೆರಡು ದಿನ ಯಾರನ್ನೂ ಭೇಟಿಯಾಗುವುದಿಲ್ಲ. ಅವರ ಅನುಪಸ್ಥಿತಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಬಗ್ಗೆ ಚರ್ಚೆಯಾಗುವುದು, ಒಪ್ಪಿಗೆ ಸಿಗುವುದು ಅನುಮಾನಸ್ಪದವಾಗಿದೆ‌. ಆದರೂ ಯಡಿಯೂರಪ್ಪ ಸಚಿವಾಕಾಂಕ್ಷಿಗಳಿಗೆ 'ತಾನು ಪ್ರಯತ್ನ ಮಾಡಿದೆ' ಎಂಬ ಸಂದೇಶ ರವಾನಿಸಲು 'ನೆಪಮಾತ್ರಕ್ಕೆ' ಜೆ.ಪಿ. ನಡ್ಡಾ ಭೇಟಿಯಾಗಲಿದ್ದಾರೆ. ಒಟ್ಟಿನಲ್ಲಿ ಯಡಿಯೂರಪ್ಪ ಅವರದು 'ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ' ಪ್ರಯತ್ನ‌ ಎನ್ನಲಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com