ಪ್ರಧಾನಿ ಭೇಟಿ: ನೆರೆ ಪರಿಹಾರದ ಮೊತ್ತ ಹೆಚ್ಚಿಸುವಂತೆ ಯಡಿಯೂರಪ್ಪ ಒತ್ತಾಯ

ಪ್ರವಾಹ ಸೇರಿದಂತೆ ಇನ್ನಿತರ ನೈಸರ್ಗಿಕ ದುರಂತದ ಸಂತ್ರಸ್ತರಿಗೆ ಈಗ ಎನ್‌ಡಿಆರ್‌ಎಫ್‌ ಅಡಿಯಲ್ಲಿ ನೀಡುತ್ತಿರುವ ಪರಿಹಾರ ಸಾಲದು, ಮಾರ್ಗಸೂಚಿಯನ್ನು ಬದಲಿಸಿ ಇನ್ನಷ್ಟು ಪರಿಹಾರ ನೀಡಬೇಕು
ಪ್ರಧಾನಿ ಭೇಟಿ: ನೆರೆ ಪರಿಹಾರದ ಮೊತ್ತ ಹೆಚ್ಚಿಸುವಂತೆ ಯಡಿಯೂರಪ್ಪ ಒತ್ತಾಯ

ರಾಜ್ಯ ಬೇಡಿಕೆಯಿಟ್ಟಿರುವಷ್ಟು ನೆರೆಪರಿಹಾರವನ್ನು ಕೇಂದ್ರ ಸರ್ಕಾರ ಇದುವರೆಗೂ ಬಿಡುಗಡೆ ಮಾಡಿಲ್ಲ. ಹಾಗಾಗಿ ಪ್ರವಾಹ ಸೇರಿದಂತೆ ಇನ್ನಿತರ ನೈಸರ್ಗಿಕ ದುರಂತದ ಸಂತ್ರಸ್ತರಿಗೆ ಈಗ ಎನ್‌ಡಿಆರ್‌ಎಫ್‌ ಅಡಿಯಲ್ಲಿ ನೀಡುತ್ತಿರುವ ಪರಿಹಾರ ಸಾಲದು, ಮಾರ್ಗಸೂಚಿಯನ್ನು ಬದಲಿಸಿ ಇನ್ನಷ್ಟು ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ನವದೆಹಲಿಯ ಪಾರ್ಲಿಮೆಂಟ್‌ ಭವನದಲ್ಲಿ ಶುಕ್ರವಾರ ಬೆಳಿಗ್ಗೆ ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಯಡಿಯೂರಪ್ಪ, ‘ಈಗಾಗಲೇ ನಿಗದಿಪಡಿಸಿರುವ ಪರಿಹಾರದ ಮೊತ್ತ ಸಾಲದು. ಅದನ್ನು ಪರಿಷ್ಕರಿಸಬೇಕು ಹಾಗೂ ಪರಿಹಾರ ಮೊತ್ತ ಹೆಚ್ಚಿಸಬೇಕು. ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಪರಿಹಾರ ಕೈಗೊಳ್ಳಲು ಸಾಧ್ಯವಾದಷ್ಟು ಬೇಗನೆ ಹೆಚ್ಚು ಹಣಕಾಸಿನ ನೆರವು ನೀಡಬೇಕು’ ಎಂದು ಕೇಳಿದ್ದಾರೆ.

ಕೃಷ್ಣಾ ಮೇಲ್ದಂಡೆ ಮೂರನೇ ಹಂತ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಬೇಕು ಎಂದು ಆಗ್ರಹಿಸಿರುವ ಯಡಿಯೂರಪ್ಪ, ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳಾದ ಮೇಕೆದಾಟು ಮತ್ತು ಕಳಸಾ ಬಂಡೂರಿ ಯೋಜನೆಗೆಳಿಗೆ ಅನುಮತಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಲ್ಲದೆ, ನವೆಂಬರ್‌ನಲ್ಲಿ ನಡೆಯಲಿರುವ ‘ಬೆಂಗಳೂರು ಟೆಕ್‌ ಸಮಿಟ್‌’ ಅನ್ನು ಆನ್‌ಲೈನ್‌ ಮುಖಾಂತರ ಉದ್ಘಾಟಿಸುವಂತೆ ಪ್ರಧಾನಿಗೆ ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ.

ಕೃಷ್ಣಾ ಮೇಲ್ದಂಡೆ ಮೂರನೇ ಹಂತ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಲು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಲ್ಲಿ ಕೂಡಾ ಮನವಿ ಮಾಡಿದ್ದಾರೆ. ಹಾಗೂ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರನ್ನು ಬಳಸಿಕೊಳ್ಳಲು ಮೇಕೆದಾಟು ಮತ್ತು ಕಳಸಾ ಬಂಡೂರಿ ನಾಲಾ ಯೋಜನೆಗಳಿಗೆ ಕಾರ್ಯಗತಗೊಳಿಸಲು ಅನುಮತಿ ನೀಡಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲನ್ನೇ ಕೊಡದಿರುವ ಕೇಂದ್ರ ಸರ್ಕಾರ ರಾಜ್ಯ ಇಟ್ಟಿರುವ ಬೇಡಿಕೆಯಷ್ಟು ನೆರೆ ಪರಿಹಾರವನ್ನು ನೀಡುವುದು ಸಂದೇಹ. ಆದರೂ ಬಿ ಎಸ್‌ ಯಡಿಯೂರಪ್ಪ ವಿಪಕ್ಷಗಳ ವಾಗ್ದಾಳಿಯಿಂದ ಕೊಂಚ ಮಟ್ಟಿಗೆ ತಪ್ಪಿಸಿಕೊಳ್ಳಲು ಪ್ರಧಾನಿಯವರನ್ನು ಭೇಟಿಯಾಗಿ ಇನ್ನಷ್ಟು ಪರಿಹಾರ ನೀಡುವಂತೆ ಕೋರಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com