BBMP ವಾರ್ಡ್‌ ಮೀಸಲಾತಿ, ಮರುವಿಂಗಡಣೆ: ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಕಾರ್ಪೊರೇಟ್‌ಗಳು
ರಾಜ್ಯ

BBMP ವಾರ್ಡ್‌ ಮೀಸಲಾತಿ, ಮರುವಿಂಗಡಣೆ: ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಕಾರ್ಪೊರೇಟ್‌ಗಳು

ಗೌತಮ್‌ ಕುಮಾರ್‌ ಸ್ವಹಿತಾಸಕ್ತಿಗಾಗಿ ತಮ್ಮ ವಾರ್ಡ್‌ ಅನ್ನು ಬೇಕಾಬಿಟ್ಟಿಯಾಗಿ ರಚಿಸುವಂತೆ ಮಾಡಿ ಅಧಿಕಾರದ ದುರುಪಯೋಗ ಪಡೆದುಕೊಂಡಿದ್ದಾರೆ ಎಂಬ ಆರೋಪ ಮಾಡಿದ್ದ ವಿರೋಧ ಪಕ್ಷಗಳು ಕಾಂಗ್ರೆಸ್‌ ಪ್ರಾಬಲ್ಯವಿರುವ ವಾರ್ಡ್‌ಗಳನ್ನು ಒಡೆದು ಕಾಂಗ್ರೆಸ್‌ ಪ್ರಾಬಲ್ಯವಿರದ ವಾರ್ಡ್‌ಗಳೊಂದಿಗೆ ಸೇರಿಸಿದಕ್ಕಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು

ಪ್ರತಿಧ್ವನಿ ವರದಿ

ತೀವ್ರ ಕುತೂಹಲ ಕೆರಳಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ನಿಮಿತ್ತ ವಾರ್ಡ್‌ವಾರು ಮೀಸಲಾತಿ ಪಟ್ಟಿಯ ಕರಡನ್ನು ನಗರಾಭಿವೃದ್ಧಿ ಇಲಾಖೆ ಬಿಡುಗಡೆ ಮಾಡಿದೆ.

ಈ ಹೊತ್ತಿನಲ್ಲಿ ಬಿಬಿಎಂಪಿ ಚುನಾವಣೆಗೆ ಸೀಟು ಪಡೆಯಲು ಘಟಾನುಘಟಿ ನಾಯಕರು ಈಗಾಗಲೇ ತಮ್ಮ ಲಾಬಿ ಆರಂಭಿಸಿದ್ದು, ಮೀಸಲಾತಿಯಿಂದ ಹಲವರು ತಮ್ಮ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಹಿಂದೆ ಕ್ಷೇತ್ರ ಮರುವಿಂಗಡನೆ ಮಾಡಿದ್ದ ಸಂದರ್ಭದಲ್ಲಿ, ಬಿಜೆಪಿಯವರು ತಮ್ಮ ಸ್ವಹಿತಾಸಕ್ತಿಗಾಗಿ ಕಾಂಗ್ರೆಸ್‌ ಪ್ರಾಬಲ್ಯವಿರುವ ಕ್ಷೇತ್ರಗಳನ್ನು ವಿಲೀನಗೊಳಿಸಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನಗರಾಭಿವೃಧ್ಧಿ ಇಲಾಖೆ ಬಿಡುಗಡೆಗೊಳಿಸಿರುವ ಹೊಸ ಮೀಸಲಾತಿ ಹಾಗೂ ಕ್ಷೇತ್ರ ಮರುವಿಂಗಡನೆ ಪ್ರಕಾರ ನಾಲ್ಕು ಮಾಜಿ ಮೇಯರ್‌ಗಳಿಗೆ ಇನ್ನು ಮುಂದೆ ತಮ್ಮ ವಾರ್ಡಿನಲ್ಲಿ ಚುನಾವಣೆಗೆ ನಿಲ್ಲಲು ಸಾಧ್ಯವಿಲ್ಲ. ಈ ನಾಲ್ವರೂ ಕೂಡಾ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟದ ಆಡಳಿತಾವಧಿಯಲ್ಲಿ ಮೇಯರ್‌ಗಳಾಗಿದ್ದವರು. ಹಾಗೂ ಕಾಂಗ್ರೆಸ್‌ ಪಕ್ಷದ ಪ್ರಮುಖ ಪಾಲಿಕೆ ಸದಸ್ಯರಿಗೆ ಕೂಡಾ ಈ ಹಿಂದೆ ಪ್ರತಿನಿಧಿಸಿದ್ದ ವಾರ್ಡ್‌ನಲ್ಲಿ ಮತ್ತೆ ಸ್ಪರ್ಧೆಗೆ ಸಾಧ್ಯವಿಲ್ಲದಂತಾಗಿದೆ.

ಕಾಂಗ್ರೆಸ್ ಪಕ್ಷದ ಮಾಜಿ ಮೇಯರ್ ಪದ್ಮಾವತಿಯವರ ಪ್ರಕಾಶ್‌ ನಗರ ವಾರ್ಡ್ ಮತ್ತು ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರ ಜಯನಗರ ವಾರ್ಡನ್ನು ನೆರೆಯ ವಾರ್ಡ್ ಗಳೊಂದಿಗೆ ವಿಲೀನ ಮಾಡಲಾಗಿದ್ದು, ಜಿ.ಪದ್ಮಾವತಿ ಅವರು ಪ್ರತಿನಿಧಿಸಿದ್ದ ಪ್ರಕಾಶನಗರ ಹಾಗೂ ಗಂಗಾಂಬಿಕೆ ಪ್ರತಿನಿಧಿಸಿದ್ದ ಜಯನಗರ (153) ವಾರ್ಡ್‌ಗಳು ಮರುವಿಂಗಡಣೆಯಾದ ಬಳಿಕ ಅಸ್ತಿತ್ವದಲ್ಲೇ ಇಲ್ಲ.

ಹಾಗೂ ಬಿ.ಎನ್‌.ಮಂಜುನಾಥ ರೆಡ್ಡಿ ಪ್ರತಿನಿಧಿಸಿದ್ದ ಮಡಿವಾಳ ವಾರ್ಡ್‌ನಲ್ಲಿ ಹಾಗೂ ಮಾಜಿ ಮೇಯರ್ ಆರ್‌.ಸಂಪತ್‌ ಕುಮಾರ್‌ ಪ್ರತಿನಿಧಿಸಿದ್ದ ದೇವರ ಜೀವನಹಳ್ಳಿ ವಾರ್ಡ್‌ಗಳೆರಡರಲ್ಲೂ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಪಡಿಸಲಾಗಿದೆ, ಪಾಲಿಕೆ ವಿರೋಧ ಪಕ್ಷದ ನಾಯಕರಾಗಿದ್ದ ಅಬ್ದುಲ್ ವಾಜಿದ್‌ ಪ್ರತಿನಿಧಿಸುವ ಮನೋರಾಯನಪಾಳ್ಯ ವಾರ್ಡ್‌ನ ಹೆಸರು ಚಾಮುಂಡಿನಗರ ಎಂದು ಬದಲಾಯಿಸಿದ್ದು ಮಾತ್ರವಲ್ಲ ಈ ವಾರ್ಡ್‌ನ್ನು ಸಾಮಾನ್ಯ ಮಹಿಳೆಗೆ ಮೀಸಲಿರಿಸಲಾಗಿದೆ. ಪಾಲಿಕೆ ಆಡಳಿತ ಪಕ್ಷದ ನಾಯಕರಾಗಿದ್ದ ಆರ್.ಎಸ್‌.ಸತ್ಯನಾರಾಯಣ ಪ್ರತಿನಿಧಿಸಿದ್ದ ದತ್ತಾತ್ರೇಯ ದೇವಸ್ಥಾನ ವಾರ್ಡ್‌ನ ಮೀಸಲಾತಿಯನ್ನು ಕೂಡಾ ಸಾಮಾನ್ಯ ಮಹಿಳೆ ಎಂದು ಬದಲಾಯಿಸಲಾಗಿದೆ. ಆಡಳಿತ ಪಕ್ಷದ ನಾಯಕರಾಗಿದ್ದ ಎಂ.ಶಿವರಾಜು ಪ್ರತಿನಿಧಿಸಿದ್ದ ಶಂಕರಮಠ ವಾರ್ಡ್‌ನ ಮೀಸಲಾತಿಯನ್ನು ಹಿಂದುಳಿದ ವರ್ಗ ಎನಿಂದ ಹಿಂದುಳಿದ ವರ್ಗ ʼ;ಬಿʼ ಗೆ ಬದಲಾಯಿಸಲಾಗಿದೆ.

ಆದರೆ ನಿಕಟಪೂರ್ವ ಮೇಯರ್‌ ಎಂ.ಗೌತಮ್‌ ಕುಮಾರ್‌ ಪ್ರತಿನಿಧಿಸಿದ್ದ ಜೋಗುಪಾಳ್ಯ ವಾರ್ಡ್‌ನಲ್ಲಿ ಯಾವುದೇ ಮೀಸಲಾತಿ ಬದಲಾವಣೆ ಮಾಡಿಲ್ಲ. ಹಾಗಾಗಿ ಆ ವಾರ್ಡ್‌ ಮೊದಲಿನಂತೆಯೇ ಇರಲಿದೆ ಮಾತ್ರವಲ್ಲ, ವಾರ್ಡ್‌ ಮೀಸಲಾತಿಯಲ್ಲಿ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಬಿಜೆಪಿಯೇತರ ಶಕ್ತಿಗಳ ಪ್ರಭಾವ ಇರುವ ವಾರ್ಡುಗಳನ್ನು ಒಡೆದು ಪ್ರಾಬಲ್ಯ ಕಡಿಮೆ ಮಾಡಿದ್ದಾರೆಂಬ ಆರೋಪಕ್ಕೆ ಇನ್ನಷ್ಟು ಪುರಾವೆ ಸಿಕ್ಕಿದಂತಾಗಿದೆ.

ವಾರ್ಡ್‌ ವಿಂಗಡನೆಯ ವಿಚಾರದಲ್ಲಿ ಮೇಯರ್‌ ಗೌತಮ್‌ ತಮ್ಮ ಅಧಿಕಾರ ದುರುಪಯೋಗ ಮಾಡಿರುವ ಕುರಿತು ದೂರುಗಳು ಕೇಳಿ ಬಂದಿತ್ತು. ಗೌತಮ್‌ ಕುಮಾರ್‌ ಸ್ವಹಿತಾಸಕ್ತಿಗಾಗಿ ತಮ್ಮ ವಾರ್ಡ್‌ ಅನ್ನು ಬೇಕಾಬಿಟ್ಟಿಯಾಗಿ ರಚಿಸುವಂತೆ ಮಾಡಿ ಅಧಿಕಾರದ ದುರುಪಯೋಗ ಪಡೆದುಕೊಂಡಿದ್ದಾರೆ ಎಂಬ ಆರೋಪ ಮಾಡಿದ್ದ ವಿರೋಧ ಪಕ್ಷಗಳು ಕಾಂಗ್ರೆಸ್‌ ಪ್ರಾಬಲ್ಯವಿರುವ ವಾರ್ಡ್‌ಗಳನ್ನು ಒಡೆದು ಕಾಂಗ್ರೆಸ್‌ ಪ್ರಾಬಲ್ಯವಿರದ ವಾರ್ಡ್‌ಗಳೊಂದಿಗೆ ಸೇರಿಸಿದಕ್ಕಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಹಾಗೂ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ವಾರ್ಡ್‌ಗಳನ್ನು ಉದ್ದೇಶಪೂರ್ವಕವಾಗಿ ಒಡೆಯಲಾಗಿದೆ ಎಂಬ ಆಪಾದನೆ ಗೌತಮ್‌ ಮೇಲಿತ್ತು.

966 (1).pdf
Preview

Click here to follow us on Facebook , Twitter, YouTube, Telegram

Pratidhvani
www.pratidhvani.com