ರಾಜ್ಯ ಬಿಜೆಪಿಯೊಳಗೆ ಭಿನ್ನಮತದ ಸುಳಿ: ಅನುಮಾನಸ್ಪದ ಭೇಟಿಯಲ್ಲಿ ರಾಜ್ಯ ನಾಯಕರು
ರಾಜ್ಯ

ರಾಜ್ಯ ಬಿಜೆಪಿಯೊಳಗೆ ಭಿನ್ನಮತದ ಸುಳಿ: ಅನುಮಾನಸ್ಪದ ಭೇಟಿಯಲ್ಲಿ ರಾಜ್ಯ ನಾಯಕರು

ಲಕ್ಷ್ಮಣ್‌ ಸವದಿ, ಸಿ.ಟಿ ರವಿ ಹೈಕಮಾಂಡ್‌ ನಾಯಕರನ್ನು ಭೇಟಿಯಾದರೆ, ಜಗದೀಶ್‌ ಶೆಟ್ಟರ್‌ ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಇತ್ತ ಡಿಸಿಎಂ ಅಶ್ವಥ್ತ ನಾರಾಯಣ ಪಂಚಮಸಾಲಿ ಮಠದಲ್ಲಿ ಸ್ವಾಮಿಜಿಯನ್ನು ಭೇಟಿಯಾದರೆ, ಡಿಸಿಎಂ ಗೋವಿಂದ ಕಾರಜೋಳ, ಸಂಸದ ಸಿದ್ದೇಶ್ವರ್, ಶಾಸಕ ಪ್ರೊ. ಲಿಂಗಣ್ಣ ಪ್ರತ್ಯೇಕ ಭೇಟಿ ನಡೆಸಿ ಚರ್ಚೆ ನಡೆಸಿದ್ದಾರೆ.

ಕೃಷ್ಣಮಣಿ

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಮಾತು ಕಳೆದ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಿದೆ. ಮುಖ್ಯಮಂತ್ರಿ ಬಿ. ಎಸ್‌ ಯಡಿಯೂರಪ್ಪರನ್ನು ಬದಲಾವಣೆ ಮಾಡಿ ಬೇರೆ ನಾಯಕರನ್ನು ಆಯ್ಕೆ ಮಾಡಬೇಕು ಎನ್ನುವ ಬೇಡಿಕೆ ಇದೆ. ಕಾರಣ, ಬಿ.ಎಸ್‌ ಯಡಿಯೂರಪ್ಪರಿಗೆ 75 ವರ್ಷ ದಾಟಿದ್ದು ಆಡಳಿತ ನಡೆಸುವ ಕಾರ್ಯಕ್ಷಮತೆ ಇಲ್ಲ ಎಂದು ಹೈಕಮಾಂಡ್‌ಗೆ ದೂರು ಹೋಗುತ್ತಿದೆ. ಇದರ ಜೊತೆಗೆ ಬಿ.ಎಸ್‌. ಯಡಿಯೂರಪ್ಪ ಅವರ ಕಿರಿಯ ಪುತ್ರ ಬಿ.ವೈ ವಿಜಯೇಂದ್ರ ಸರ್ಕಾರದ ಆಡಳಿತದಲ್ಲಿ ಮೂಗು ತೂರಿಸುತ್ತಾರೆ. ಪ್ರಮುಖ ವರ್ಗಾವಣೆಗಳನ್ನು ತಾವೇ ನೋಡಿಕೊಳ್ಳುತ್ತಾರೆ ಎನ್ನುವ ದೂರು ಕೂಡಾ ಸರ್ಕಾರದ ಒಳಗೆ ಇದೆ. ಇದನ್ನು ಸಾಕಷ್ಟು ಬಾರಿ ಪಕ್ಷದ ನಾಯಕರೂ ಕೂಡ ಎಚ್ಚರಿಸಿದ್ದಾರೆ.

ಬೆಳಗಾವಿ ಅಥಣಿ ಕ್ಷೇತ್ರದಲ್ಲಿ ಸೋಲನ್ನಪ್ಪಿದ್ದರೂ ಕರೆದು ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿರುವ ಬಿಜೆಪಿ ಹೈಕಮಾಂಡ್‌, ಬಿಜೆಪಿ ಪಕ್ಷಕ್ಕೆ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಲಿಂಗಾಯತ ಸಮುದಾಯದ ನಾಯಕನನ್ನು ಬೆಳೆಸುವ ಉದ್ದೇಶವಿದೆ ಎನ್ನಲಾಗಿತ್ತು. ಇದೀಗ ಕಳೆದ ಒಂದೂವರೆ ತಿಂಗಳ ಹಿಂದೆ ದೆಹಲಿಗೆ ಹೋಗಿದ್ದ ಲಕ್ಷ್ಮಣ ಸವದಿ ಸಾಕಷ್ಟು ನಾಯಕರನ್ನು ಭೇಟಿ ಮಾಡಿದ್ದರು. ರಾಷ್ಟ್ರೀಯ ಸಂಘಟನಾ ಪ್ರದಾನ ಕಾರ್ಯದರ್ಶಿಯೂ ಆಗಿರುವ ಸಂತೋಷ್‌ರನ್ನು ಭೇಟಿ ಮಾಡಿದ್ದರು. ಅದಾದ ಬಳಿಕ ಸಂಘ ಪರಿವಾರಕ್ಕೆ ಆಪ್ತವಾಗಿರುವ ಮತ್ತೋರ್ವ ನಾಯಕ ಸಚಿವ ಸಿ.ಟಿ ರವಿ ಅವರು ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿದ್ದರು. ಇದೀಗ ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಬೃಹತ್‌ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಬಿಜೆಪಿ ಒಳಗೆ ಏನೋ ಸಂಚಲನ ಶುರುವಾಗುತ್ತಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇತ್ತ ದಾವಣಗೆರೆಯಲ್ಲಿ ಪಂಚಮಸಾಲಿ ಮಠದ ಪೀಠಾಧಿಪತಿ ವಚನಾನಂದ ಶ್ರೀಗಳನ್ನು ಡಿಸಿಎಂ ಅಶ್ವತ್ಥ ನಾರಾಯಣ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಪಂಚಮಸಾಲಿ ಪೀಠಕ್ಕೆ ಭೇಟಿ ನೀಡಿ ವಚನಾನಂದ ಶ್ರೀ ಜೊತೆ ಮಾತುಕತೆ ನಡೆಸಿದ್ದಾರೆ. ಕಳೆದ ಜನವರಿಯಲ್ಲಿ ಪಂಚಮಸಾಲಿ ಸಮುದಾಯದಿಂದ ಆಯ್ಕೆಯಾಗಿರುವ ಮುರುಗೇಶ್‌ ನಿರಾಣಿ ಅವರಿಗೆ ಸಚಿವ ಸ್ಥಾನ ಕೊಡುವಂತೆ ತುಂಬಿದ ಸಭೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಹೇಳಿದ್ದರು. ಇದು ದೊಡ್ಡ ಸುದ್ದಿಯಾಗಿತ್ತು. ಸಿಎಂ ಬಿ.ಎಸ್‌. ಯಡಿಯೂರಪ್ಪ ಸಿಡಿಮಿಡಿಗೊಂಡಿದ್ದರು. ಇದೀಗ ಅದೇ ವಚನಾನಂದ ಸ್ವಾಮೀಜಿ ಅವರನ್ನು ಅವರದೇ ಪಂಚಮಸಾಲಿ‌ಪೀಠದಲ್ಲಿ ಭೇಟಿ ನಡೆದಿದೆ. ಡಿಸಿಎಂ ಗೋವಿಂದ ಕಾರಜೋಳ, ಸಂಸದ ಸಿದ್ದೇಶ್ವರ್, ಶಾಸಕ ಪ್ರೊ. ಲಿಂಗಣ್ಣ ಜೊತೆ ಶನಿವಾರ ಬೆಳಗ್ಗೆ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಒಂದೇ ದಿನ ಎರಡು ಭೇಟಿ: ಕುತೂಹಲಕ್ಕೆ ಕಾರಣವಾದ ಅಶ್ವತ್ಥ ನಾರಾಯಣ ನಡೆ..!

ಬೆಳಗ್ಗೆ ಬಿಜೆಪಿ ಜನಪ್ರತಿನಿಧಿಗಳ ಜೊತೆಗೆ ಭೇಟಿ ಮಾಡಿದ್ದ ಡಿಸಿಎಂ ಅಶ್ವತ್ಥ ನಾರಾಯಣ ಅವರು ಸಂಜೆ ಒಂಟಿಯಾಗಿ ಬಂದು ಶ್ರೀಗಳ ಜೊತೆಗೆ ಬರೋಬ್ಬರಿ ಎರಡೂವರೆ ಗಂಟೆಗಳ ಕಾಲ ರಹಸ್ಯವಾಗಿ ಚರ್ಚೆ ನಡೆಸಿದ್ದಾರೆ. ಆದರೂ ಬೆನ್ನುಬಿದ್ದ ಮಾಧ್ಯಮಗಳಿಗೆ ಕೈ ಮುಗಿದು, 2 ಬಾರಿ ಭೇಟಿಯಾಗಿದ್ದೇನೆ. ಆದರೆ ಯಾವುದೇ ರಾಜಕೀಯ ಮಾತುಕತೆ ನಡೆದಿಲ್ಲ. ಮೊದಲಿನಿಂದಲೂ ವಚನಾನಂದ ಸ್ವಾಮೀಜಿ ಪರಿಚಯ. ಯೋಗ ಗುರುಗಳನ್ನು ಹಲವು ಬಾರಿ ಭೇಟಿ ಮಾಡಿದ್ದೇನೆ. ಇಲ್ಲಿ ಪ್ರವಾಸಕ್ಕೆ ಬಂದಿದ್ದೆ, ಶ್ರೀಗಳ ಜೊತೆ ಔಪಚಾರಿಕ ಭೇಟಿ ಅಷ್ಟೇ, ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದಿದ್ದಾರೆ.

ಒಗಟಿನಂತೆ ಉತ್ತರಿಸಿದ ವಚನಾನಂದ ಶ್ರೀಗಳು..!

ಹನಗವಾಡಿಯ ಪಂಚಮಸಾಲಿ ಮಠದಲ್ಲಿ ವಚನಾನಂದ ಶ್ರೀಗಳು ಮಾತನಾಡಿ, ಎರಡು ಬಾರಿ ನಿನ್ನೆ ಮಠಕ್ಕೆ ಬಂದು ಚರ್ಚೆ ಮಾಡಿದ್ದಾರೆ. ಒಂದು ಗಂಟೆ ಕಾಲ ಡಿಸಿಎಂ ಜೊತೆ ಮಾತನಾಡಿದ್ದು ಸತ್ಯ. ಸಂಜೆ 4 ಗಂಟೆಗೆ ಬಂದು ಆರೂವರೆ ತನಕ ಮಠದಲ್ಲಿದ್ದರು ಎಂದಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವೇಳೆ ಪಂಚಮಸಾಲಿ ಸಮಾಜಕ್ಕೆ ಆದ್ಯತೆ ಕೊಡುವ ಬಗ್ಗೆ ಮಾತಾಡಲು ಇದು ಸೂಕ್ತ ವೇದಿಕೆ ಅಲ್ಲ. ಆ ಬಗ್ಗೆ ಹೆಚ್ಚು ಮಾತನಾಡಲ್ಲ. ಮುಂದಿನ ದಿನಗಳಲ್ಲಿ ಸೂಕ್ತ ವೇದಿಕೆಯಲ್ಲಿ ಈ ಬಗ್ಗೆ ಮಾತನಾಡುತ್ತೇನೆ. ಜಗದೀಶ್ ಶೆಟ್ಟರ್ ದೆಹಲಿ ಪ್ರವಾಸ, ಮಠಕ್ಕೆ ಬಿಜೆಪಿ ಸಚಿವರು, ಶಾಸಕರ ಭೇಟಿ ವಿಚಾರಕ್ಕೆ ಸಂಬಂಧ ಇದೆಯೇ ಎಂದಿದ್ದಕ್ಕೆ ಶ್ರೀಗಳು ನಗುವಿನ ಮೂಲಕವೇ ಉತ್ತರ ಕೊಟ್ಟಿದ್ದು, ಈಗ ಎಲ್ಲವನ್ನೂ ಮಾತನಾಡಲ್ಲ ಎಂದಿದ್ದಾರೆ. ಸ್ವಾಮೀಜಿ ಸ್ಪಷ್ಟನೆಯೇ ತೀವ್ರ ಕುತೂಹಲ ಕೆರಳಿಸಿದೆ.

ಬಿಜೆಪಿ ಒಳಗಿನ ಈ ಎಲ್ಲಾ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಸಂಚಲನ ಸೃಷ್ಟಿಯಾಗಿದೆ ಎನ್ನುವುದು ಬಹುತೇಕ ಖಚಿತ. ಇನ್ನೂ ಸೆಪ್ಟೆಂಬರ್‌ 21 ರಿಂದ ವಿಧಾನಸಭಾ ಅಧಿವೇಶನ ಶುರುವಾಗುತ್ತಿದ್ದು, ಅಷ್ಟೊರೊಳಗೆ ಮಂತ್ರಿಗಳಾಗುತ್ತೇವೆ ಎಂದಿದ್ದವರು ಮಂತ್ರಿ ಆಗುವುದು ಅನುಮಾನ ಎನ್ನಲಾಗಿದೆ. ಒಂದು ವೇಳೆ ಮಂತ್ರಿಗಳನ್ನಾಗಿ ಕೆಲವರನ್ನು ಆಯ್ಕೆ ಮಾಡಿದರೂ ಪಕ್ಷದೊಳಗಿನ ಭಿನ್ನಮತ ಭುಗಿಲೇಳುವ ಸಾಧ್ಯತೆ ಇದೆ. ಭಿನ್ನಮತೀಯರನ್ನು ಸಮಾಧಾನ ಮಾಡುವುದು ಕಷ್ಟ ಎನ್ನುವ ಕಾರಣಕ್ಕೆ ಸಂಪುಟ ವಿಸ್ತರಣೆಯನ್ನೇ ಮುಂದೂಡುವ ಚಿಂತನೆಯೂ ಶುರುವಾಗಿದೆ. ಅದರ ನಡುವೆ ನಾಯಕತ್ವ ಬದಲಾವಣೆ ಎನ್ನುವುದು ಕೂಡಾ ರಾಜ್ಯ ಬಿಜೆಪಿಯ ನಡೆಯಲ್ಲಿ ಕುತೂಹಲ ಮೂಡಿಸಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com