ಶಿರಾ: ಉಪಚುನಾವಣೆ ಘೋಷಣೆಗೂ ಮುನ್ನ ಕಾಂಗ್ರೆಸ್‌ ಒಳಗೆ ಭಿನ್ನಮತದ ಹೊಗೆ..!

ಶಿರಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಸತ್ಯನಾರಾಯಣ ಅಕಾಲಿಕ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಶೀಘ್ರದಲ್ಲೇ ಉಪಚುನಾವಣೆ ಘೋಷಣೆ ಆಗಲಿದೆ.
ಶಿರಾ: ಉಪಚುನಾವಣೆ ಘೋಷಣೆಗೂ ಮುನ್ನ ಕಾಂಗ್ರೆಸ್‌ ಒಳಗೆ ಭಿನ್ನಮತದ ಹೊಗೆ..!

ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಸತ್ಯನಾರಾಯಣ ಅಕಾಲಿಕ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಶೀಘ್ರದಲ್ಲೇ ಉಪಚುನಾವಣೆ ಘೋಷಣೆ ಆಗಲಿದೆ. ಸತ್ಯನಾರಾಯಣ ಅವರು ಜೆಡಿಎಸ್‌ನಿಂದ ಆಯ್ಕೆಯಾಗಿದ್ದರಿಂದ ಸಹಜವಾಗಿಯೇ ಕ್ಷೇತ್ರವನ್ನು ಉಳಿಸಿಕೊಳ್ಳಲು ಜೆಡಿಎಸ್ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಸತ್ಯನಾರಾಯಣ ಅವರ ಹೆಂಡತಿಯನ್ನು ಅಥವಾ ಅವರ ಪುತ್ರನನ್ನು ಕಣಕ್ಕಿಳಿಸುವ ಮೂಲಕ ಸಾವಿನ ಅನುಕಂಪವನ್ನು ಗಿಟ್ಟಿಸಲು ಯೋಜನೆ ರೂಪಿಸುತ್ತಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದರೆ ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಹಿಡಿತ ಸಾಧಿಸಿಕೊಂಡು ಬಂದಿರುವ ಮಾಜಿ ಕಾನೂನು ಸಚಿವ ಟಿ.ಬಿ ಜಯಚಂದ್ರ ಕಳೆದ ಬಾರಿಯ ಸೋಲಿನ ನೋವನ್ನು ಉಪಚುನಾವಣೆ ಗೆಲುವಲ್ಲಿ ಮರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದರ ಅಂಗವಾಗಿಯೇ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಆದರೆ ಕಾಂಗ್ರೆಸ್ ಗೆಲ್ಲುವ ಅವಕಾಶ ಇದ್ದರೂ ಕೈ ಚೆಲ್ಲುವ ಸಾಧ್ಯತೆ ಹೆಚ್ಚಾಗಿದೆ.

ಸ್ವಪಕ್ಷೀಯ ಹೊಡೆತ ಕಂಡುಕೊಂಡ ಡಿಕೆ ಶಿವಕುಮಾರ್..!

ಶಿರಾ ವಿಧಾನಸಭಾ ಚುನಾವಣೆಯಲ್ಲಿ ಒಳ ಏಟು ಬೀಳುವ ಎಲ್ಲಾ ಸಾಧ್ಯತೆಗಳೂ ಕಾಣಿಸುತ್ತಿವೆ. ಇದನ್ನು ಅರಿತ ಕಾಂಗ್ರೆಸ್‌ ರಾಜ್ಯ ಅಧ್ಯಕ್ಷ ಡಿ.ಕೆ ಶಿವಕುಮಾರ್‌, ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಕೆ.ಎನ್‌. ರಾಜಣ್ಣ ಅವರನ್ನು ಸಮಾಧಾನ ಮಾಡುವಂತೆ ಮನವಿ ಮಾಡಿದ್ದಾರೆ. ಕಾಂಗ್ರೆಸ್‌ನಿಂದ ಕಳದ ಬಾರಿ ಪರಜಯ ಪಡೆದಿದ್ದ ಟಿ.ಬಿ ಜಯಚಂದ್ರ ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಡ್ಡಗಾಲು ಹಾಕಿದಂತೆಯೇ ಈ ಬಾರಿಯೂ ಅಡ್ಡಗಾಲು ಹಾಕುವುದರಿಂದ ಪಕ್ಷದ ಅಭ್ಯರ್ಥಿ ಸೋಲುಣ್ಣಬೇಕಾಗುತ್ತೆ ಎನ್ನುವ ಆತಂಕ ಕಾಂಗ್ರೆಸ್‌ ನಾಯಕರನ್ನು ಕಾಡುತ್ತಿದೆ. ಒಂದು ವೇಳೆ ಕಾಂಗ್ರೆಸ್‌ ಅಭ್ಯರ್ಥಿ ಎದುರು ಕೆ.ಎನ್‌ ರಾಜಣ್ಣನೋ ಅಥವಾ ರಾಜಣ್ಣನ ಬೆಂಬಲಿಗರೋ ಬಂಡಾಯವಾಗಿ ಸ್ಪರ್ಧೆ ಮಾಡಿದರೆ ಕಾಂಗ್ರೆಸ್‌ ಮತಗಳು ಹರಿದು ಹಂಚಿ ಹೋಗಲಿವೆ. ಹಾಗಾಗಿ ಸಮಾಧಾನ ಮಾಡುವಂತೆ ಡಿ.ಕೆ ಶಿವಕುಮಾರ್‌ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಕೆ.ಎನ್‌. ರಾಜಣ್ಣ
ಕೆ.ಎನ್‌. ರಾಜಣ್ಣ

ಲೋಕಸಭಾ ಚುನಾವಣೆಯಲ್ಲಿ ಗೌಡರನ್ನು ಸೋಲಿಸಿದ್ದ ರಾಜಣ್ಣ..!

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು, ತುಮಕೂರು ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರ ಇದ್ದ ಕಾರಣ ರಾಜ್ಯದಲ್ಲೂ ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡೇ ಬಿಜೆಪಿಯನ್ನು ಎದುರಿಸುವ ನಿರ್ಧಾರ ಮಾಡಿದ್ದರು. ಅದರೆ ಇದೇ ಕೆ.ಎನ್‌ ರಾಜಣ್ಣ ಮುದ್ದಹನುಮೇಗೌಡರ ಜೊತೆಗೆ ಬಂದು ತಾನೂ ಕೂಡ ನಾಮಪತ್ರ ಸಲ್ಲಿಕೆ ಮಾಡಿದ್ದರು. ಆ ಬಳಿಕ ನಾಮಪತ್ರ ವಾಪಸ್‌ ಪಡೆದರೂ ದೇವೇಗೌಡರ ವಿರುದ್ಧ ಅಪಪ್ರಚಾರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಮೈತ್ರಿ ಸರ್ಕಾರದ ನಾಯಕರೇ ಆಯ್ಕೆ ಮಾಡಿ, ಹೊಂದಾಣಿಕೆ ಮಾಡಿಕೊಂಡು ಚುನಾವಣೆಗೆ ನಿಲ್ಲಿಸಿದ್ದರೂ ದೇವೇಗೌಡರು ರಾಜಕೀಯದ ಅಳಿವಿನಲ್ಲಿ ನಿಂತು ಸೋಲುಂಡು ಪೆಚ್ಚು ಮೋರೆ ಹಾಕಿಕೊಳ್ಳಬೇಕಾಯಿತು. ಇದಕ್ಕೆಲ್ಲಾ ಪ್ರಮುಖ ಕಾರಣ ಕೆ.ಎನ್‌ ರಾಜಣ್ಣ ಎನ್ನುವುದು ರಾಜಕೀಯ ಬಲ್ಲ ಎಲ್ಲರಿಗೂ ಗೊತ್ತಿದೆ.

ಇದೀಗ ಮತ್ತೆ ಶಿರಾ ಕ್ಷೇತ್ರದ ಮೇಲೆ ಕೆ.ಎನ್‌ ರಾಜಣ್ಣ ಕಣ್ಣಿಟ್ಟಿದ್ದಾರೆ. ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಕೆ.ಎನ್‌ ರಾಜಣ್ಣ ಬೆಂಬಲಿಗರು ಪ್ರತಿಯೊಂದು ಕ್ಷೇತ್ರದಲ್ಲೂ ಇದ್ದಾರೆ. ಹಾಗಾಗಿ ಜಿಲ್ಲೆಯ ಯಾವುದೇ ವಿಚಾರದಲ್ಲೂ ಕೆ.ಎನ್‌ ರಾಜಣ್ಣ ಮೂಗು ತೂರಿಸುವಂತಾಗಿದೆ. ಗೆಲ್ಲಿಸುವಷ್ಟು ಕಾರ್ಯಕರ್ತರ ಬೆಂಬಲ ಇಲ್ಲದಿದ್ದರೂ ಸಣ್ಣ ಪ್ರಮಾಣದ ಮತಗಳನ್ನು ಚದುರಿಸಬಲ್ಲರು. ಇದೇ ಕಾರಣಕ್ಕೆ ಸಾಕಷ್ಟು ದೂರ ಮುಂದುವರಿಯುವ ಮೊದಲೇ ಕೆ.ಎನ್‌ ರಾಜಣ್ಣ ಅವರನ್ನು ಕರೆದು ಒಮ್ಮೆ ಮಾತನಾಡಿ ಎಂದು ವಿರೋಧ ಪಕ್ಷದ ನಾಯಕ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆ ಮಾಡಿರುವ ಉಭಯ ನಾಯಕರು, ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಗೆಲ್ಲುಲು ಮಾಡಿಕೊಳ್ಳಬೇಕಾದ ಯೋಜನೆಗಳ ಬಗ್ಗೆ ಚರ್ಚೆಮಾಡಿದ್ದಾರೆ.

ತುಮಕೂರು ತನ್ನ ಹಿಡಿತಕ್ಕೆ ಬರಬೇಕು ಎನ್ನುವುದು ಕೆಎನ್ ರಾಜಣ್ಣ ಹಪಾಹಪಿ, ಆದರೆ ನಾನು ಹಿರಿಯ ನಾಯಕ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದವನು ನನ್ನ ಹಿಡಿತದಲ್ಲೇ ಇರಬೇಕು ಎನ್ನುವುದು ಡಾ ಜಿ.ಪರಮೇಶ್ವರ್‌ ಅವರ ಒತ್ತಾಸೆ. ಆಗಸ್ಟ್‌ 29 ರಂದು ಮಾತನಾಡಿದ್ದ ಡಾ ಜಿ ಪರಮೇಶ್ವರ್‌, ಶಿರಾ ಕ್ಷೇತ್ರದಲ್ಲಿ ಈಗಾಗಲೇ ಸೋಲುಂಡಿರುವ ಟಿ.ಬಿ ಜಯಚಂದ್ರ ಅವರನ್ನೇ ಕಣಕ್ಕಿಳಿಸುವುದು ಬಹುತೇಕ ಖಚಿತ ಎನ್ನುವಂತೆ ಮಾತನಾಡಿದ್ದರು. ಆದರೆ ಕೆ.ಎನ್‌ ರಾಜಣ್ಣ ಕೂಡ ಸ್ಪರ್ಧೆಗೆ ಒಲವು ತೋರಿಸಿದ್ದಾರೆ ಎನ್ನಲಾಗಿದೆ ಎನ್ನುವ ಪ್ರಶ್ನೆಗೆ ಇಟ್‌ ಈಸ್‌ ಟೂ ಅರ್ಲಿ. ಪಕ್ಷ ಆ ಬಗ್ಗೆ ತೀರ್ಮಾನ ಮಾಡುತ್ತದೆ ಎಂದಿದ್ದರು. ಇದಕ್ಕೆ ಪ್ರತ್ಯುತ್ತರ ಕೊಟ್ಟಿದ್ದ ಕೆ.ಎನ್‌ ರಾಜಣ್ಣ, ನನ್ನನ್ನು ಪರಿಗಣಿಸದೆ ಟಿಕೆಟ್‌ ಕೊಡುತ್ತಾರೆಯೇ ಎಂದು ಪ್ರಶ್ನೆ ಹಾಕಿದ್ದರು. ಅದಾದ ಬಳಿಕ ಸಿದ್ದರಾಮಯ್ಯ ಮಧ್ಯ ಪ್ರವೇಶಕ್ಕೆ ಡಿಕೆ ಶಿವಕುಮಾರ್‌ ಮನವಿ ಮಾಡಿಕೊಂಡಿದ್ದಾರೆ. ಉಭಯ ನಾಯಕರನ್ನು ಕೂರಿಸಿ ಒಮ್ಮತದ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ನಿರ್ಧಾರವಾಗಿದೆ. ಅಂತಿಮವಾಗಿ ಶಿರಾ ಶಿಕಾರಿಯಲ್ಲಿ ಕಾಂಗ್ರೆಸ್‌ ಮತ ಬೇಟೆಗೆ ಹೇಗೆ ಬಾಣ ಹೂಡಲಿದೆ ಎನ್ನುವುದನ್ನು ಕಾದು ನೋಡಬೇಕು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com