ಲಾಕ್‌ಡೌನ್‌ ನಂತರ ಪರಿಸರ ಮಾಲಿನ್ಯಕ್ಕೂ ಕಾರಣವಾಯಿತು ಕರೋನಾ ಸೋಂಕು
ರಾಜ್ಯ

ಲಾಕ್‌ಡೌನ್‌ ನಂತರ ಪರಿಸರ ಮಾಲಿನ್ಯಕ್ಕೂ ಕಾರಣವಾಯಿತು ಕರೋನಾ ಸೋಂಕು

ಸೋಂಕು ಹರಡುವ ಭೀತಿಯಿಂದ ಜನರು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಪ್ರಯೋಜನ ಪಡೆಯಲು ಹಿಂದೇಟು ಹಾಕುತ್ತಿದ್ದು, ಇದರಿಂದಾಗಿ ನಗರದಲ್ಲಿ ವಾಹನ ದಟ್ಟಣೆ ಹಾಗೂ ಮಾಲಿನ್ಯದ ಪ್ರಮಾಣ ಮೊದಲಿಗಿಂತಲೂ ಹೆಚ್ಚಾಗುತ್ತಿದೆ.

ಕೃಷ್ಣಮಣಿ

ಕರೋನಾ ಆರಂಭವಾದ ವೇಳೆ ಲಾಕ್‌ಡೌನ್‌ ಘೋಷಣೆ ಆಗಿತ್ತು. ಆಗ ರಸ್ತೆಗಳೆಲ್ಲಾ ಖಾಲಿ ಖಾಲಿ ಹೊಡೆಯುತ್ತಿದ್ದವು. ಶಬ್ಧ ಮಾಲಿನ್ಯ, ವಾಯು ಮಾಲಿನ್ಯ ಸಂಪೂರ್ಣವಾಗಿ ನಿಂತು ಹೋಗಿತ್ತು. ಆಗೊಂದು ಹೀಗೊಂದು ವಾಹನ ಸಂಚಾರ ಆದರೂ ಪರಿಸರದ ಮೇಲೆ ಅದರ ಪರಿಣಾಮ ಮಾತ್ರ ಶೂನ್ಯ ಎನ್ನುವಂತಾಗಿತ್ತು. ಮಲ್ಲೇಶ್ವರಂ ರಸ್ತೆಗೆ ನವಿಲು ಬಂದು ನಲಿಯುವ ಮಟ್ಟಿಗೆ ಬೆಂಗಳುರು ನಗರ ಸ್ಥಬ್ದವಾಗಿತ್ತು. ಲಾಕ್‌ಡೌನ್‌ ಘೋಷಣೆ ಆದ ಬೆನ್ನಲ್ಲೇ ಜನರಿಗೆ ಬೆಂಗಳೂರು ವಿಚಿತ್ರ ಲೋಕದಂತೆ ಭಾವಿಸಿದ್ದೂ ಉಂಟು. ಕನಸಿನಲ್ಲಿಯೂ ಊಹೆ ಮಾಡಲು ಸಾಧ್ಯವಾಗದಷ್ಟು ಜನ ಸಂಚಾರ ಕಡಿಮೆ ಆಗಿತ್ತು.

ಲಾಕ್‌ಡೌನ್‌ ಆಗಿದ್ದರಿಂದ ಜನರು ವಲೆಸೆ ಬಂದಿದ್ದ ಲಕ್ಷಾಂತರ ಜನರು ಸಾಕಷ್ಟು ಕಾರಣಗಳಿಂದಾಗಿ ಹುಟ್ಟೂರು ಸೇರಿದ್ದಾರೆ. ಇದೀಗ ಕೇಂದ್ರ ಸರ್ಕಾರ ಎಲ್ಲಾ ವ್ಯವಹಾರವನ್ನೂ ಮುಕ್ತವಾಗಿ ಎಲ್ಲಾ ವಲಯಗಳಲ್ಲೂ ಮಾಡಬಹುದು ಎಂದು ಸೂಚಿಸಿದೆ. ಮಾರ್ಕೆಟ್‌, ಬಸ್‌ ಸಂಚಾರ, ಆಟೋ, ಟ್ಯಾಕ್ಸಿ ಸೇರಿದಂತೆ ಎಲ್ಲವೂ ಸಂಚಾರಕ್ಕೆ ಮುಕ್ತವಾಗಿವೆ. ಆದರೆ, ಜನರು ಬಸ್‌ ಹತ್ತುವ ಮನಸ್ಸು ಮಾಡ್ತಿಲ್ಲ ಅಷ್ಟೆ. ಸೋಮವಾರ (07/09/2020) ದಿಂದ ಮೆಟ್ರೋ ಸಂಚಾರ ಕೂಡ ಆರಂಭವಾಗಿದ್ದು, ಮೈಸೂರು ರಸ್ತೆಯಿಂದ ಬೈಯ್ಯಪ್ಪನಹಳ್ಳಿ ನಡುವೆ ನೇರಳೆ ಲೈನ್‌ನಲ್ಲಿ ಸಂಚಾರ ಶುರು ಮಾಡಿದೆ. ಸ್ವತಃ ರೈಲೂ ಪ್ರಯಾಣಿಕರನ್ನು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಿನಲ್ಲಿ ರಸ್ತೆ ಸಂಚಾರ ಯಥಾಸ್ಥಿತಿಯಲ್ಲಿ ನಡೆಯುತ್ತಿದೆ. ಲಾಕ್‌ಡೌನ್ ‌ಆಗುವ ಮೊದಲು ಯಾವ ರೀತಿಯಲ್ಲಿ ಜನ ಸಿಗ್ನಲ್‌ನಲ್ಲಿ ನಿಂತು ಕಾಯುವ ಅನಿವಾರ್ಯತೆ ಎದುರಾಗಿತ್ತೋ ಅದೇ ರೀತಿ ಈಗಲೂ ಸಿಗ್ನಲ್‌ಗಳಲ್ಲಿ ಜನರು ನಿಂತು ಕಾಯುತ್ತಿದ್ದಾರೆ. ವಾಯು ಮಾಲಿನ್ಯವೂ ಅದೇ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಜನರಲ್ಲಿ ಇರುವ ಕರೋನಾ ಭಯ. ಕರೋನಾ ಭಯದಲ್ಲಿ ಜನರು ಹೊರಗೆ ಬರಲು ಸಾಧ್ಯವಾಗ್ತಿಲ್ಲ. ಜೊತೆಗೆ ಹೊರಗೆ ಎಲ್ಲಂದರಲ್ಲಿ ಹೋದಾಗ ಕರೋನಾ ಸೋಂಕು ಹರಡುವ ಭೀತಿಯಲ್ಲಿ ಜನರಿದ್ದಾರೆ. ಹಾಗಾಗಿ ಜನರು ಸಾರ್ವಜನಿಕ ವಾಹನ ಬಳಕೆ ಮಾಡುವುದನ್ನು ಕೈ ಬಿಟ್ಟಿದ್ದಾರೆ. ಆದರೆ ಸ್ವಂತ ವಾಹನಗಳಲ್ಲಿ ಎಂದಿನಂತೆ ರಸ್ತೆಯಲ್ಲಿ ಓಡಾಡುತ್ತಿದ್ದಾರೆ.

ಬಸ್‌ಗಳಲ್ಲಿ ಜನರಿಲ್ಲ, ಜಿಲ್ಲಾ ಕೇಂದ್ರಗಳಿಗೆ ತೆರಳುವ ಬಸ್‌ ಸಂಖ್ಯೆ ಕೂಡ ಕಡಿಮೆಯಾಗಿದೆ. ಸೋಮವಾರದಿಂದ ಶುರುವಾಗಿರುವ ಮೆಟ್ರೋ ರೈಲುಗಳಲ್ಲಿಯೂ ಜನರಿಲ್ಲ. ಅಂದರೆ, ಜನರಿಗೆ ಕರೋನಾ ಭಯ ಕಾಡುತ್ತಿದೆ. ಅದೇ ಕಾರಣಕ್ಕೆ ಜನರು ಬಸ್‌ಹತ್ತುವುದಕ್ಕೆ ಮುಂದಾಗುತ್ತಿಲ್ಲ. ಎಲ್ಲಿಗಾದರೂ ಹೋಗಬೇಕು ಎಂದರೆ ತಮ್ಮ ಸ್ವಂತ ವಾಹನಗಳನ್ನು ಬಳಕೆ ಮಾಡುತ್ತಿದ್ದಾರೆ. ಒಂದು ವೇಳೆ ಸ್ವಂತ ವಾಹನ ಇಲ್ಲದ ಜನರು ಮಾತ್ರ ಬಸ್‌ಗಳಿಗೆ ಅವಲಂಬಿತರಾಗಿದ್ದಾರೆ. ಒಂದು ವೇಳೆ ಸ್ವಂತ ವಾಹನ ಇಲ್ಲದಿದ್ದರೂ ಆದಾಯ ಚೆನ್ನಾಗಿದ್ದವರು, ಆಟೋ, ಟ್ಯಾಕ್ಸಿ ಬಳಸುತ್ತಿದ್ದಾರೆ. ಆದರೆ, ಕಳೆದ 2 ತಿಂಗಳ ಅವಧಿಯಲ್ಲಿ ವಾಹನ ಮಾರಾಟದಲ್ಲಿ ಏರಿಕೆಯಾಗಿದೆ ಎನ್ನುವ ಮಾಹಿತಿಗಳು ಸಿಕ್ಕಿದ್ದು, ಕರೋನಾಗೆ ಹೆದರುತ್ತಿರುವ ಜನರು ಅನಿವಾರ್ಯ ಕಾರಣಗಳಿಂದ ಕೆಲಸಕ್ಕೆ ಹೋಗಲೇ ಬೇಕಿದ್ದು, ಸ್ವಂತ ವಾಹನವನ್ನೇ ಖರೀದಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ಕರೋನಾ ಬಂದ ಬಳಿಕ ದೇಶದಲ್ಲಿ ಶೇಕಡ 60 ರಷ್ಟು ಅಸಂಘಟಿತ ವಲಯದ ಜನರು ಕೆಲಸ ಕಳೆದುಕೊಂಡಿದ್ದಾರೆ. ಅದರಲ್ಲಿ 41 ಲಕ್ಷ ಜನ ಕಟ್ಟಡ ಕಾರ್ಮಿಕರೇ ಆಗಿದ್ದಾರೆ. ಏಪ್ರಿಲ್‌ನಲ್ಲಿ ನಡೆಸಿರುವ ಸಮೀಕ್ಷೆ ಪ್ರಕಾರ ಭಾರತದಲ್ಲಿ 12.2 ಕೋಟಿ ಜನರು ಕೆಲವನ್ನು ಕಳೆದುಕೊಂಡಿದ್ದಾರೆ. ತಮ್ಮ ಹುಟ್ಟೂರುಗಳಲ್ಲಿ ಜಮೀನು ಇದ್ದವರು ಮತ್ತೆ ಕೃಷಿಯತ್ತ ತೊಡಗಿಸಿಕೊಂಡಿದ್ದರೆ, ಭೂಮಿ ಇಲ್ಲದ ಭೂರಹಿತ ಕಾರ್ಮಿಕರು ಪರ್ಯಾಯ ಉದ್ಯೋಗ ಹುಡುಕುವ ವೇಳೆ ಕಾಣಿಸಿದ್ದು ಟ್ಯಾಕ್ಸಿ ಓಡಿಸುವುದು.

ಇಲ್ಲೀವರೆಗೂ ದುಡಿದು ಕೂಡಿಟ್ಟ ಹಣದಿಂದ ಕಾರು ಖರೀದಿ ಮಾಡಿ ಮಗನಿಗೆ ಉದ್ಯೋಗ ಮಾಡಿಕೊಡುತ್ತಿದ್ದಾರೆ ಪೋಷಕರು. ಇನ್ನು ಕೆಲಸದಲ್ಲೇ ಇದ್ದವರು ಕರೋನಾ ಸೋಂಕಿನಲ್ಲಿ ಸಾರ್ವಜನಿಕ ಸಾರಿಗೆ ಸಂಪರ್ಕದಲ್ಲಿ ಓಡಾಡಲು ಭಯಗೊಂಡು ಸ್ವಂತ ವಾಹನ ಖರೀದಿ ಮಾಡುತ್ತಿದ್ದಾರೆ. 2017ರ ಸರ್ವೇ ಪ್ರಕಾರ ಬೆಂಗಳೂರಿನಲ್ಲಿ ಸುಮಾರು 75 ಲಕ್ಷ ವಾಹನಗಳಿದ್ದು, ಅದರಲ್ಲಿ 48.69 ಲಕ್ಷ ದ್ವಿಚಕ್ರ ವಾಹನಗಳು ಹಾಗೂ ಉಳಿದ 13.58 ಲಕ್ಷ ಕಾರುಗಳು ಸಂಚರಿಸುತ್ತಿವೆ. 2022ರ ವೇಳೆಗೆ 1.08 ಕೋಟಿ ವಾಹನಗಳು ಆಗಲಿವೆ ಎನ್ನಲಾಗಿತ್ತು. ಆದರೆ ಇದೀಗ 2020ರಲ್ಲಿಯೇ ವಾಹನಗಳ ಸಂಖ್ಯೆ ಗಣನೀಯವಾಗಿ ಏರಿಕೆ ಆಗಿದೆ. ಈವರೆಗೆ ಜನರ ಮೇಲೆ ದಾಳಿ ಮಾಡಿದ್ದ ಸೋಂಕು ಈಗ ಪ್ರಕೃತಿಯ ಮೇಲೂ ದಾಳಿ ಮಾಡುತ್ತಿದೆ. ವಾಹನಗಳ ಹೆಚ್ಚಳದಿಂದ ವಾಯು ಮಾಲೀನ್ಯ ಹಾಗೂ ಶಬ್ಧ ಮಾಲಿನ್ಯ ಪ್ರಮಾಣ ಹೆಚ್ಚಲಿದೆ ಎನ್ನುತ್ತಾರೆ ತಜ್ಞರು.

Click here to follow us on Facebook , Twitter, YouTube, Telegram

Pratidhvani
www.pratidhvani.com