ವೈಫಲ್ಯ ಮುಚ್ಚಿಹಾಕಲು ಡ್ರಗ್ಸ್ ಪ್ರಕರಣದ ಮೊರೆ ಹೋಗಿದೆಯೇ ರಾಜ್ಯ ಸರ್ಕಾರ?
Gopi Nadh
ರಾಜ್ಯ

ವೈಫಲ್ಯ ಮುಚ್ಚಿಹಾಕಲು ಡ್ರಗ್ಸ್ ಪ್ರಕರಣದ ಮೊರೆ ಹೋಗಿದೆಯೇ ರಾಜ್ಯ ಸರ್ಕಾರ?

ಡ್ರಗ್ಸ್ ವ್ಯವಹಾರದ ತನಿಖೆಯ ಹಾದಿಯನ್ನು ನೋಡಿದರೆ, ಅಪರಾಧಿಗಳನ್ನು ಶಿಕ್ಷಿಸುವ ಬದಲಿಗೆ, ಕರೋನಾ ಹಾವಳಿ ಮತ್ತು ಅತಿವೃಷ್ಟಿ ಪರಿಹಾರದಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕುವ ಹಾಗೂ ಜನಮನವನ್ನು ಬೇರೆ ಕಡೆಗೆ ಸೆಳೆಯುವ ದುರುದ್ದೇಶ ಮುಖ್ಯವಾಗಿರುವಂತೆ ಕಾಣುತ್ತಿದೆ

ಕೃಷ್ಣಮಣಿ

ಡ್ರಗ್ಸ್ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸಮರ ಸಾರಿದ್ದೇವೆ ಎಂದು ಹೇಳುತ್ತಾ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಗಾಂಜಾ ಗಿಡ ಬೆಳೆದವರು, ಗಾಂಜಾ ಆಮದು ಮಾಡಿಕೊಂಡ ಮಾರಾಟಗಾರರು ಎನ್ನುತ್ತಾ ಬಂಧನ ಸುದ್ದಿ ಬರುತ್ತಲೇ ಇದೆ. ಆದರೆ ಇಷ್ಟೆಲ್ಲಾ ಕ್ವಿಂಟಾಲ್ ಗಾಂಜಾ, ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಸೀಜ್ ಮಾಡುತ್ತಿದ್ದಾರೆ ಎಂದಾದರೆ, ಇದಕ್ಕೂ ಮುಂಚೆ ಪೊಲೀಸರು ಕೆಲಸ ಮಾಡಿಲ್ಲವೋ..? ಅಥವಾ ಪೊಲೀಸರಿಗೆ ಎಲ್ಲಾ ವಿಚಾರ ಗೊತ್ತಿದ್ದರೂ ಕಂಡು ಕಾಣದವರಂತೆ ಕಾಲಹರಣ ಮಾಡುತ್ತಿದ್ದರೋ ಎನ್ನುವ ಅನುಮಾನ ಮೂಡುತ್ತಿದೆ. ಜಿಲ್ಲೆಗಳಲ್ಲಿ ಎಕರೆಗಟ್ಟಲೆ ಗಾಂಜಾ ಬೆಳೆ ಕಟಾವಿಗೆ ಬಂದು ನಿಂತಿದೆ. ಕಲಬುರಗಿಯಲ್ಲಿ 1350 ಕೆಜಿ ಗಾಂಜಾ ಒಡಿಶಾದಿಂದ ಬಂದಿದ್ದನ್ನು ಪೊಲೀಸರು ಈಗ ಪತ್ತೆ ಹಚ್ಚಿದ್ದಾರೆ. ಆದರೆ ಇದೆಲ್ಲಾ ಈಗ ನಡೆಸುತ್ತಿರುವ ಹೊಸ ದಂಧೆಯಲ್ಲ. ಮೊದಲೂ ಇತ್ತು, ಇನ್ನೂ ಮುಂದಕ್ಕೂ ಇರಬಹುದು. ಆದರೆ ಈಗ ಇಷ್ಟೊಂದು ದೊಡ್ಡ ಸುದ್ದಿಯಾಗಲು ಕಾರಣವೇನು ಎನ್ನುವುದು ಪ್ರಶ್ನೆಯಾಗಿದೆ. ಆದರೆ ಆ ಪ್ರಶ್ನೆಗೆ ಉತ್ತರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕೊಟ್ಟಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಡ್ರಗ್ಸ್ ಕೇಸ್ ಮೂಲಕ ದಿಕ್ಕು ತಪ್ಪಿಸುತ್ತಿದ್ದಾರೆ- ಸಿದ್ದರಾಮಯ್ಯ ಆರೋಪ

ದಿನನಿತ್ಯ ಮಾಧ್ಯಮಗಳಲ್ಲಿ ಡ್ರಗ್ಸ್ ದಂಧೆ, ಚಲನಚಿತ್ರ ನಟಿಯರ ಬಂಧನದ ಬಗ್ಗೆಯೇ ಸುದ್ದಿಯಾಗುತ್ತಿದೆ. ಆದರೆ ಡ್ರಗ್ಸ್ ವ್ಯವಹಾರದ ತನಿಖೆಯ ಹಾದಿಯನ್ನು ನೋಡಿದರೆ, ಅಪರಾಧಿಗಳನ್ನು ಶಿಕ್ಷಿಸುವ ಬದಲಿಗೆ, ಕರೋನಾ ಹಾವಳಿ ಮತ್ತು ಅತಿವೃಷ್ಟಿ ಪರಿಹಾರದಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕುವ ಹಾಗೂ ಜನಮನವನ್ನು ಬೇರೆ ಕಡೆಗೆ ಸೆಳೆಯುವ ದುರುದ್ದೇಶ ಮುಖ್ಯವಾಗಿರುವಂತೆ ಕಾಣುತ್ತಿದೆ ಎಂದು ಟೀಕಿಸಿದ್ದಾರೆ. ಬಿಜೆಪಿ ಸರ್ಕಾರ ಪ್ರಮುಖವಾಗಿ ಡ್ರಗ್ಸ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ತಮ್ಮ ಪಕ್ಷದವರನ್ನು ರಕ್ಷಿಸುವ ಮತ್ತು ಈ ಹಗರಣವನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರ ಚಾರಿತ್ರ್ಯಹರಣ ಮಾಡುವ ಪ್ರಯತ್ನವನ್ನು ಮಾಡುತ್ತಿದೆ. ಇದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಸಿದ್ದರಾಮಯ್ಯ ಟ್ವಿಟರ್ ನಲ್ಲಿ ಕೆಂಡಕಾರಿದ್ದಾರೆ. ಮಾದಕ ವಸ್ತುಗಳ ಹಾವಳಿಯ ನಿರ್ಮೂಲನೆಯ ಪ್ರಾಮಾಣಿಕ ಉದ್ದೇಶ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇರುವುದಾದರೆ, ಬೀದಿಯಲ್ಲಿ ನಿಂತು ವಿರೋಧ ಪಕ್ಷದ ನಾಯಕರ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿ ತನಿಖೆಯ ಹಾದಿ ತಪ್ಪಿಸುತ್ತಿರುವ ಸಂಪುಟ ಸಚಿವರು ಮತ್ತು ಪಕ್ಷದ ನಾಯಕರ ಬಾಯಿ ಮುಚ್ಚಿಸಲಿ ಎಂದು ಸವಾಲು ಹಾಕಿದ್ದಾರೆ. ಹಾಗೆಯೇ ಪೊಲೀಸರಿಗೆ ತನಿಖೆ ನಡೆಸಲು ಮುಕ್ತ ಅವಕಾಶ ನೀಡಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.

ಸಿದ್ದರಾಮಯ್ಯ ಆರೋಪದಲ್ಲಿ ನಿಜ ಇರಬಹುದೇ..?

ಮಾಜಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರಿಗೂ ಕೆಲವೊಂದು ಆತ್ಮೀಯ ಮೂಲಗಳಿಂದ ಮಾಹಿತಿ ಬರುತ್ತದೆ. ಆದರೆ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿರುವ ವೇಗವನ್ನು ನೋಡಿದರೆ ಈ ರೀತಿಯ ಅನುಮಾನ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ನಟಿ ರಾಗಿಣಿ ಬಂಧನ ಮಾಡಿ ವಾರ ಕಳೆದರೂ ಸರಿಯಾಗಿ ವಿಚಾರಣೆ ನಡೆಸಿದ್ದಾರೆ ಎನ್ನುವ ಒಂದೇ ಒಂದು ದಿನವೂ ಇಲ್ಲ. ಮೊದಲು ಅರೆಸ್ಟ್ ಮಾಡಿದ ದಿನ ಇಡೀ ದಿನ ವಿಚಾರಣೆ ಮಾಡಿದ ಸಿಸಿಬಿ ಅಧಿಕಾರಿಗಳು ಆ ಬಳಿಕ ದಿನಕ್ಕೆ ಅರ್ಧ ಗಂಟೆ ತನಿಖಾಧಿಕಾರಿ ಅಂಜುಮಾಲ ಅವರು ರಾಜ್ಯ ಮಹಿಳಾ ಕೇಂದ್ರಕ್ಕೆ ಬರುತ್ತಾರೆ, ಮಾಧ್ಯಮಗಳಿಗೂ ಯಾವುದೇ ಮಾಹಿತಿ ನೀಡದೆ ಹೋಗುತ್ತಾರೆ. ಆದರೆ ಸಿಸಿಬಿ ಕಸ್ಟಡಿಗೆ ಮೂರನೇ ಬಾರಿ ತೆಗೆದುಕೊಂಡಿದ್ದಾರೆ. ವಿಚಾರಣೆ ಮುಕ್ತಾಯವಾಗಿದ್ದರೆ ಅವರನ್ನು ನ್ಯಾಯಾಂಗ ಕಸ್ಟಡಿಗೆ ವಹಿಸಲು ಅಡ್ಡಿಯೇನು..? ನಟಿಯರು ಜೈಲಿನ ಸೆಲ್ ನಲ್ಲಿ ಕಾಲಕಳೆಯುವುದನ್ನು ತಡೆಯುವ ಉದ್ದೇಶ ಅಡಗಿದೆಯಾ ಎನ್ನುವ ಅನುಮಾನವೂ ಕಾಡುತ್ತಿದೆ.

ಸಚಿವರ ಯದ್ವಾತದ್ವಾ ಡ್ರಗ್ಸ್ ಮಾತು..!

ಸ್ವತಃ ವಿರೋಧ ಪಕ್ಷಗಳೇ ಡ್ರಗ್ಸ್ ವ್ಯವಹಾರವನ್ನು ಬುಡಸಮೇತ ಕಿತ್ತು ಹಾಕಲಿ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವುದೇ ಪಕ್ಷದ ನಾಯಕರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದರೂ ನೋಟಿಸ್ ಕೊಟ್ಟು ವಿಚಾರಣೆ ಮಾಡುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಸಚಿವರು, ಶಾಸಕರು, ಸಂಸದರುಗಳು ಡ್ರಗ್ಸ್ ವ್ಯವಹಾರ ಮಾಡ್ತಿರೋದೇ ಕಾಂಗ್ರೆಸ್, ಜೆಡಿಎಸ್ ನಾಯಕರು ಎನ್ನುವಂತೆ ಹಾದಿ ಬೀದಿಯನ್ನು ಮಾತನಾಡುತ್ತಾ ತನಿಖಾಧಿಕಾರಿಗಳಿಗೆ ಸಂದೇಶ ರವಾನೆ ಮಾಡುವಂತೆ ಮಾತನಾಡುತ್ತಿದ್ದಾರೆ. ತನಿಖಾಧಿಕಾರಿಗಳ ಮೇಲೆ ಒತ್ತಡ ಇದೆ ಎಂದು ಸರ್ಕಾರದ ಭಾಗವಾಗಿರುವ ಓರ್ವ ಸಚಿವರು ಹೇಳುವುದರಲ್ಲಿ ಅರ್ಥವಿದೆಯೇ..? ಹಾಗೊಂದು ವೇಳೆ ಒತ್ತಡ ಹಾಕುತ್ತಿದ್ದರೆ ಅದೂ ಕೂಡ ಅಪರಾಧ ಎಂದು ಪರಿಗಣಿಸಿ ಅವರಿಗೂ ಶಿಕ್ಷೆ ನೀಡುವಂತೆ ಮಾಡಬೇಕಾದ್ದದ್ದು ಧರ್ಮವಲ್ಲವೇ..? ಆದರೆ ಮಾಧ್ಯಮಗಳ ಎದುರು ಹೇಳುವ ಇಚ್ಛೆಯ ಹಿಂದಿನ ಮರ್ಮವೇನು..? ಎನ್ನುವ ಪ್ರಶ್ನೆಗೆ ಸಿದ್ದರಾಮಯ್ಯ ಹೇಳಿದ ಮಾತು ಸತ್ಯವೆನಿಸುತ್ತದೆ.

ದಿನವೊಂದಕ್ಕೆ ರಾಜ್ಯದಲ್ಲಿ 10 ಸಾವಿರ ಆಸುಪಾಸಿನಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರ ಕೋವಿಡ್ ಸಂತ್ರಸ್ಥರನ್ನು ಟ್ರ್ಯಾಕಿಂಗ್ ಮಾಡುವ ಪದ್ಧತಿಯನ್ನೇ ಬಿಟ್ಟು ಕೈಚೆಲ್ಲಿದೆ. ಸತ್ತವರು ಎಷ್ಟೋ ಜನ ಸರ್ಕಾರ ಸಂಖ್ಯೆಯಿಂದ ಹೊರಗೆ ಉಳಿಯುತ್ತಿದ್ದಾರೆ. ಇನ್ನೂ ರೈತರು ತಾವು ಬೆಳೆದ ಬೆಲೆಯನ್ನು ಉಳಿಸಿಕೊಳ್ಳುವ ಯೂರಿಯಾ ಸಿಗದಂತಾಗಿದೆ. ಪ್ರತಿದಿನ ಯೂರಿಯಾಕ್ಕಾಗಿ ರೈತರು ಸಾಲುಗಟ್ಟಿ ನಿಲ್ಲುವಂತಾಗಿದೆ. ಸರತಿ ಸಾಲಿನಲ್ಲಿ ನಿಂತರೂ ಅಂಗಡಿ ಮಾಲೀಕರು ಬೇರೆ ಗೊಬ್ಬರ ಖರೀದಿ ಮಾಡಿದರೆ ಮಾತ್ರ ಯೂರಿಯಾ ಕೊಡುತ್ತಾ ಅಕ್ರಮ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಪ್ರವಾಹದಲ್ಲಿ ಸಿಲುಕಿದ ಜನರ ಕಷ್ಟ ಕೇಳಲು ಸರ್ಕಾರದ ಬಳಿ ಹಣವಿಲ್ಲದೆ ಪರದಾಡುತ್ತಿದೆ. ಕೇಂದ್ರ ಸರ್ಕಾರ ಜಿಎಸ್ ಟಿ ಪಾಲನ್ನು ನೀಡದೆ ಪಲಾಯನ ಮಾಡಿದೆ. ಇದೆಲ್ಲವೂ ಮಾಧ್ಯಮಗಳಲ್ಲಿ ರಾರಾಜಿಸಬೇಕಾದ ವಿಚಾರಗಳೇ ಆಗಿದ್ದವು. ಆದರೆ ಡ್ರಗ್ಸ್ ಕೇಸ್ ಆ ಎಲ್ಲಾ ಸುದ್ದಿಗಳನ್ನು ಸ್ವಾಹ ಮಾಡಿಕೊಂಡಿದೆ. ಇದೆಲ್ಲವನ್ನೂ ನೋಡಿದರೆ ಸರ್ಕಾರವೇ ಜನರನ್ನು ನಿಜವಾದ ವಿಚಾರಗಳಿಂದ ದೂರ ಇಡುವ ಉದ್ದೇಶದಿಂದಲೇ ಕಾಲಹರಣ ಮಾಡುತ್ತಿದೆಯೇ ಎನ್ನುವ ಅನುಮಾನವನ್ನು ಕಾಡದಿರಲು ಸಾಧ್ಯವೇ ಇಲ್ಲ.

ಒಟ್ಟಿನಲ್ಲಿ ಕೋವಿಡ್‌, ನಿರುದ್ಯೋಗ, ಜಿಡಿಪಿ ಕುಸಿತ ಮೊದಲಾದವುಗಳಿಂದ ಕೇಂದ್ರ ಸರ್ಕಾರವನ್ನು ರಕ್ಷಿಸಿಕೊಳ್ಳಲು ರಿಹಾ ಹಾಗೂ ಕಂಗನಾರ ಸುದ್ದಿಯನ್ನೇ ಹೈಲೈಟ್‌ ಮಾಡಿದಂತೆ, ರಾಜ್ಯ ಸರ್ಕಾರದ ವೈಫಲ್ಯ ಹಗರಣಗಳನ್ನು ಮುಚ್ಚಿಹಾಕಲು ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣವನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪವನ್ನು ಅಲ್ಲಗೆಳೆಯುವಂತಿಲ್ಲ.

Click here to follow us on Facebook , Twitter, YouTube, Telegram

Pratidhvani
www.pratidhvani.com