ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ: ಪ್ರತಿಕ್ರಿಯೆ ನೀಡಿದ ಝಮೀರ್ ಖಾನ್
ರಾಜ್ಯ

ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ: ಪ್ರತಿಕ್ರಿಯೆ ನೀಡಿದ ಝಮೀರ್ ಖಾನ್

ನಾನು ಸಂಜನಾ ಅವರ ಜೊತೆ ಶ್ರೀಲಂಕಾಕ್ಕೆ ಹೋಗಿದ್ದಲ್ಲಿ ವಿಮಾನ ಪ್ರಯಾಣದ ಟಿಕೆಟ್ ಗಳಿರಬೇಕಲ್ಲಾ? ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರೆ ಅಲ್ಲಿಯೂ ದಾಖಲೆಗಳಿಬೇಕಲ್ಲಾ? ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ನನ್ನ ಓಡಾಟದ ಚಿತ್ರಗಳೂ ಇರಬೇಕಲ್ವಾ?

ಪ್ರತಿಧ್ವನಿ ವರದಿ

ರಾಜ್ಯದಲ್ಲಿ ಬಹು ಚರ್ಚಿತ ವಿಷಯವಾಗಿರುವ ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದಲ್ಲಿ ಚಾಮರಾಜಪೇಟೆ ಶಾಸಕ ಝಮೀರ್‌ ಅಹಮದ್‌ ಖಾನ್‌ ಅವರ ಹೆಸರು ಕೇಳಿಬರುತ್ತಿದೆ. ಶ್ರೀಲಂಕಾದ ಕ್ಯಾಸಿನೋಗೆ ನಟಿ ಸಂಜನಾ ಗಲ್ರಾನಿ ಜೊತೆ ತೆರಳಿದ್ದಾಗಿ ಆರೋಪಗಳು ಕೇಳಿಬಂದಿದ್ದವು. ಅದಾಗ್ಯೂ ಇದುವರೆಗೆ ಝಮೀರ್‌ ವಿರುದ್ಧದ ಆರೋಪಗಳಿಗೆ ಯಾವ ಸಾಕ್ಷ್ಯವೂ ದೊರೆತಿರಲಿಲ್ಲ.

ಇನ್ನು ಆರೋಪಗಳ ಕುರಿತಂತೆ ಪ್ರತಿಕ್ರಿಯಿಸಿರುವ ಝಮೀರ್‌ ಅಹಮದ್‌, ನಾನು ರಾಜಕೀಯದಲ್ಲಿರುವ ವ್ಯಕ್ತಿ, ಸುಳ್ಳು ಆರೋಪಗಳು, ಚಾರಿತ್ರ್ಯ ಹರಣದ ಪ್ರಯತ್ನಗಳು ನನಗೆ ಹೊಸತೇನಲ್ಲ. ಅವೆಲ್ಲವನ್ನು ಜನಾಶೀರ್ವಾದದ ಬಲದಿಂದ ಎದುರಿಸುತ್ತಾ ಬಂದಿದ್ದೇನೆ. ನಾನು ಏನೆನ್ನುವುದು ನಾನು ನಂಬಿರುವ ಜನ ಮತ್ತು ನನ್ನ ಆತ್ಮಸಾಕ್ಷಿಗೆ ಗೊತ್ತಿದೆ. ಪೊಲೀಸರು ನಡೆಸುವ ತನಿಖೆಯಲ್ಲಿ ಸಂಬರಗಿ ಮಾಡಿರುವ ಆರೋಪಗಳು ಸಾಬೀತಾದರೆ ನನ್ನ ಸಂಪೂರ್ಣ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ಬರೆದುಕೊಡಲು ಸಿದ್ಧನಿದ್ದೇನೆ. ನನ್ನ ಮೇಲಿನ ಆರೋಪಗಳು ಸುಳ್ಳು ಎಂದು ಕಂಡುಬಂದರೆ ಆರೋಪಿಗಳನ್ನು ಈ ನೆಲದ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಲಿ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ ಸರ್ಕಾರ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ನಾನೇನೋ ಪ್ರಭಾವ ಬೀರುತ್ತಿದ್ದೆ ಎಂದು ಹೇಳಬಹುದಿತ್ತು. ಈಗ ನಟಿ ಸಂಜನಾ ಪೊಲೀಸರ ವಶದಲ್ಲಿದ್ದಾರೆ. ಆದ್ದರಿಂದ ಪೊಲೀಸರು ಆಕೆಯನ್ನು ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಳ್ಳಲಿ. ಅದೇ ರೀತಿ ಶ್ರೀಲಂಕಾ ಪ್ರವಾಸದ ಬಗ್ಗೆಯೂ ತನಿಖೆ ನಡೆಸಲಿ. ಜೂನ್ 08, 2019 ರಂದು ನಾನು ಸಂಜನಾ ಅವರ ಜೊತೆ ಶ್ರೀಲಂಕಾಕ್ಕೆ ಹೋಗಿದ್ದೆ ಎಂದು ಆರೋಪಿಸಲಾಗಿದೆ. ಹಾಗಿದ್ದಲ್ಲಿ ವಿಮಾನ ಪ್ರಯಾಣದ ಟಿಕೆಟ್ ಗಳಿರಬೇಕಲ್ಲಾ? ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರೆ ಅಲ್ಲಿಯೂ ದಾಖಲೆಗಳಿಬೇಕಲ್ಲಾ? ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ನನ್ನ ಓಡಾಟದ ಚಿತ್ರಗಳೂ ಇರಬೇಕಲ್ವಾ? ಈ ಬಗ್ಗೆಯೂ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದಾರೆ.

ಪ್ರಶಾಂತ್ ಸಂಬರಗಿ ಎಂಬಾತನ ಸುಳ್ಳು ಆರೋಪಗಳ ಬಗ್ಗೆ ಬೆಂಗಳೂರಿನ 24ನೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದೇನೆ. ದೂರಿನಂತೆ ಐಪಿಸಿ ಸೆಕ್ಷನ್ 120(B), 504, 463, 465, 506 ಸೆಕ್ಷನ್ ಗಳ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆಗೆ ಚಾಮರಾಜಪೇಟೆ ಠಾಣೆಯ ಪೊಲೀಸರಿಗೆ ನ್ಯಾಯಾಲಯ ಆದೇಶ ನೀಡಿದೆ. ಡ್ರಗ್ಸ್ ನಂಟಿಗೆ ಸಂಬಂಧಿಸಿದಂತೆ ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದುದ್ದು. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಬೊಮ್ಮಾಯಿ ಅವರಲ್ಲಿ ಒತ್ತಾಯಿಸುತ್ತೇನೆ ಎಂದು ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ.

“ನನ್ನ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವ ಪ್ರಶಾಂತ್ ಸಂಬರಗಿ ನನ್ನ ಗೌರವಕ್ಕೆ ಚ್ಯುತಿ ತರುತ್ತಿದ್ದಾರೆ, ಸುಖಾಸುಮ್ಮನೇ ಹೇಳಿಕೆ ನೀಡಿ ಅಪಪ್ರಚಾರ ಮಾಡುತ್ತಿರುವ ಹಾಗೂ ಸಂಬಂಧವಿಲ್ಲದ ವಿಷಯದಲ್ಲಿ ನನ್ನ ಹೆಸರು ಎಳೆದು ತರುತ್ತಿರುವ ಸಂಬರಗಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’’ ಎಂದು ಆರೋಪಿಸಿ ಚಾಮರಾಜಪೇಟೆ ಶಾಸಕ ಝಮೀರ್ ಅಹಮ್ಮದ್ ಖಾನ್ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ, ‘ಶಾಸಕ ಝಮೀರ್ ಅವರು ಬುಧವಾರ ದೂರು ನೀಡಿದ್ದಾರೆ. ಅದನ್ನು ಆಧರಿಸಿ ಪ್ರಶಾಂತ್ ಸಂಬರಗಿ ವಿರುದ್ಧ ಎನ್‌ಸಿಆರ್‌ (ಗಂಭೀರವಲ್ಲದ ಪ್ರಕರಣ) ದಾಖಲಿಸಲಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದರು.

ಮೇಲ್ನೋಟಕ್ಕೆ ಪ್ರಶಾಂತ್‌ ಸಂಬರಗಿ ಝಮೀರ್‌ ಖಾನ್‌ ಮೇಲೆ ಮಾಡಿರುವ ಆರೋಪಗಳು ನಿರಾಧಾರವೆಂದು ತೋರುತ್ತವೆ. ಯಾಕೆಂದರೆ, ಶ್ರೀಲಂಕಾ ಕ್ಯಾಸಿನೋದ ವಿಡಿಯೋವೊಂದನ್ನು ಪ್ರಶಾಂತ್ ಸಂಬರಗಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ವಿವೇಕ್ ಓಬೆರಾಯ್, ಸಂಜನಾ, ಫೈಜುಲ್ಲಾ ಮತ್ತು ಇತರಿಬ್ಬರು ಕಾಣಿಸುತ್ತಾರೆ. ಆದರೆ, ಅದರಲ್ಲಿ ಝಮೀರ್ ಅಹ್ಮದ್ ಕಾಣಿಸಿಕೊಂಡಿಲ್ಲ. ಅಲ್ಲದೆ ಇದುವರೆಗೂ ಶ್ರೀಲಂಕಾಗೆ ಸಂಜನಾ ಹಾಗೂ ಝಮೀರ್‌ ಒಟ್ಟಿಗೆ ತೆರಳಿರುವ ಪುರಾವೆಗಳು ಲಭ್ಯವಾಗಿಲ್ಲ.

Click here to follow us on Facebook , Twitter, YouTube, Telegram

Pratidhvani
www.pratidhvani.com