ವಿಧಾನಮಂಡಲ ಅಧಿವೇಶನವನ್ನು ವಿಸ್ತರಿಸುವಂತೆ ಸಿದ್ದರಾಮಯ್ಯ ಆಗ್ರಹ
ರಾಜ್ಯ

ವಿಧಾನಮಂಡಲ ಅಧಿವೇಶನವನ್ನು ವಿಸ್ತರಿಸುವಂತೆ ಸಿದ್ದರಾಮಯ್ಯ ಆಗ್ರಹ

ಕರ್ನಾಟಕ ರಾಜ್ಯ ವಿಧಾನಮಂಡಲದ ಸರ್ಕಾರಿ ಕಾರ್ಯಕಲಾಪಗಳ ನಿರ್ವಹಣೆ ಅಧಿನಿಯಮ 2005ರ ಸೆಕ್ಷನ್ 3ರಂತೆ ವರ್ಷದಲ್ಲಿ ಕಡ್ಡಾಯವಾಗಿ ಕನಿಷ್ಠ 60 ದಿನಗಳ ಕಾಲ ಅಧಿವೇಶನ ನಡೆಸಬೇಕೆಂದಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಈ ನಿಯಮವನ್ನು ಗಾಳಿಗೆ ತೂರಿ ಅಧಿವೇಶನದ ಅವಧಿಯನ್ನು ಮೊಟಕುಗೊಳಿಸಿರುವುದು ಸಂಸದೀಯ ವ್ಯವಸ್ಥೆಗೆ ಮಾಡುತ್ತಿರುವ ಅಪಚಾರ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಪ್ರತಿಧ್ವನಿ ವರದಿ

ವಿಧಾನಮಂಡಲದ ಅಧಿವೇಶನವನ್ನು ಮೂರು ವಾರಗಳ ಕಾಲ ಅಂದರೆ ಅ.15ರ ವರೆಗೆ ವಿಸ್ತರಿಸಬೇಕೆಂದು ವಿಧಾನಸಭಾ ಅಧ್ಯಕ್ಷರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಈ ಅಧಿವೇಶನದಲ್ಲಿ 35ಕ್ಕಿಂತ ಹೆಚ್ಚು ಮಸೂದೆ ಮಂಡನೆಯಾಗಲಿದೆ, ಇದರ ಜೊತೆಗೆ ಕರೋನಾ, ಅತಿವೃಷ್ಟಿ, ಹದಗೆಟ್ಟಿರುವ ಆರ್ಥಿಕ ಸ್ಥಿತಿ, ಡ್ರಗ್ಸ್ ಹಗರಣ ಹೀಗೆ ವಿಸ್ತೃತ ಚರ್ಚೆಗೆ ಸಾಕಷ್ಟು ವಿಷಯಗಳಿವೆ. ಕರ್ನಾಟಕ ರಾಜ್ಯ ವಿಧಾನಮಂಡಲದ ಸರ್ಕಾರಿ ಕಾರ್ಯಕಲಾಪಗಳ ನಿರ್ವಹಣೆ ಅಧಿನಿಯಮ 2005ರ ಸೆಕ್ಷನ್ 3ರಂತೆ ವರ್ಷದಲ್ಲಿ ಕಡ್ಡಾಯವಾಗಿ ಕನಿಷ್ಠ 60 ದಿನಗಳ ಕಾಲ ಅಧಿವೇಶನ ನಡೆಸಬೇಕೆಂದಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಈ ನಿಯಮವನ್ನು ಗಾಳಿಗೆ ತೂರಿ ಅಧಿವೇಶನದ ಅವಧಿಯನ್ನು ಮೊಟಕುಗೊಳಿಸಿರುವುದು ಸಂಸದೀಯ ವ್ಯವಸ್ಥೆಗೆ ಮಾಡುತ್ತಿರುವ ಅಪಚಾರ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸೆಪ್ಟೆಂಬರ್ 21 ರಿಂದ 30 ರವರೆಗೆ 15ನೇ ವಿಧಾನಸಭೆಯ 7ನೇ ಅಧಿವೇಶನದ ಕಾರ್ಯಕಲಾಪಗಳನ್ನು ನಡೆಸಲು ಪ್ರಕಟಣೆ ಹೊರಡಿಸಲಾಗಿದೆ. ಈ ಪ್ರಕಟಣೆಯಂತೆ 21, 22, 23, 24, 25, 28, 29 ಮತ್ತು 30 ರವರೆಗೆ ಅಧಿವೇಶನವನ್ನು ನಡೆಸಲು ಉದ್ದೇಶಿಸಲಾಗಿದೆ. ಸದರಿ ಅಧಿವೇಶನದಲ್ಲಿ ಸುಮಾರು 20 ಕ್ಕಿಂತ ಹೆಚ್ಚು ಸುಗ್ರೀವಾಜ್ಞೆಗಳನ್ನು ಒಳಗೊಂಡಂತೆ 35 ಕ್ಕಿಂತ ಹೆಚ್ಚು ಮಸೂದೆಗಳನ್ನು ಮಂಡಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಕರ್ನಾಟಕ ರಾಜ್ಯದ ಜನರು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪದೇ ಪದೇ ಪ್ರವಾಹಗಳು ಬಂದೆರಗುತ್ತಿದೆ. ಕಳೆದ ಮಾರ್ಚ್‌ನಿಂದ ಕೋವಿಡ್-19 ಸಾಂಕ್ರಾಮಿಕವು ಮಾರಣಾಂತಿಕವಾಗಿ ವ್ಯಾಪಿಸಿಕೊಂಡು ರಾಜ್ಯದ ಜನರ ಬದುಕನ್ನು ಹೈರಾಣಾಗಿಸಿದೆ ಮತ್ತು ಸುಮಾರು 6,500 ಕ್ಕಿಂತ ಹೆಚ್ಚು ಜನ ಈ ಸೋಂಕಿನಿಂದಾಗಿ ಮೃತಪಡುವಂತೆ ಮಾಡಿದೆ. ಪದೇ ಪದೇ ಕಾನೂನು ಸುವ್ಯವಸ್ಥೆಯ ಸಮಸ್ಯೆಗಳು ಉಂಟಾಗುತ್ತಿವೆ, ಜೊತೆಯಲ್ಲಿ ಡ್ರಗ್ಸ್‌ನಂತಹ ಅಪಾಯಕಾರಿ ಚಟುವಟಿಕೆಗಳು ರಾಜ್ಯವನ್ನು ಆವರಿಸಿಕೊಂಡಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇಂತಹ ಸನ್ನಿವೇಶದಲ್ಲಿ ಅಧಿವೇಶನವನ್ನು ನಡೆಸಲಾಗುತ್ತಿದೆ. ಆದರೆ ಅಧಿವೇಶನದ ಸಮಯ ಮಾತ್ರ ಯಾವುದಕ್ಕೂ ಸಾಕಾಗುವುದಿಲ್ಲ. ಜನರ ಮೇಲೆ ಕಾಳಜಿ ಇಲ್ಲದೆ ನೆಪ ಮಾತ್ರಕ್ಕೆ ಅಧಿವೇಶನ ನಡೆಸಲು ಉದ್ದೇಶಿಸುವಂತೆ ಕಾಣಿಸುತ್ತಿದೆ. ಹಲವು ಜನ ವಿರೋಧಿಯಾದ ಸುಗ್ರೀವಾಜ್ಞೆಗಳನ್ನು ಚರ್ಚೆಯನ್ನೇ ನಡೆಸದೆ ಅಂಗೀಕಾರ ಪಡೆಯಲು ಯತ್ನಿಸುತ್ತಿರುವುದು ಅತ್ಯಂತ ಜನ ದ್ರೋಹಿಯಾದ, ಬೇಜವಾಬ್ದಾರಿಯುತವಾದ ಮತ್ತು ದುಷ್ಟತನದ ಪರಮಾವಧಿಯಂತೆ ಕಾಣುತ್ತಿದೆ. ಸರ್ಕಾರ ಈ ವಿಚಾರದಲ್ಲಿ ಅತ್ಯಂತ ಅಸಂವಿಧಾನಿಕವಾಗಿ ನಡೆದುಕೊಳ್ಳುತ್ತಿದೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಬರೆದಿದ್ದಾರೆ.

'ಕರ್ನಾಟಕ ರಾಜ್ಯ ವಿಧಾನಮಂಡಲದ ಸರ್ಕಾರಿ ಕಾರ್ಯಕಲಾಪಗಳ ನಿರ್ವಹಣೆ ಅಧಿನಿಯಮ 2005ರ ಸೆಕ್ಷನ್ 3 ರಂತೆ ಕಡ್ಡಾಯವಾಗಿ 60 ದಿನಗಳಿಗೆ ಕಡಿಮೆ ಇಲ್ಲದಂತೆ ಪ್ರತಿ ವರ್ಷ ಅಧಿವೇಶನಗಳನ್ನು ನಡೆಸಬೇಕು ಎಂದಿದೆ. ಸೆಕ್ಷನ್ 4 ರ ಪ್ರಕಾರ ವರ್ಷದಲ್ಲಿ ಒಟ್ಟು 4 ಅಧಿವೇಶನವನ್ನು ನಡೆಸಬೇಕು. ಜನವರಿಯಲ್ಲಿ 15, ಮಾರ್ಚ್ ತಿಂಗಳಲ್ಲಿ 20, ಜುಲೈ ತಿಂಗಳಲ್ಲಿ 15 ಮತ್ತು ನವೆಂಬರ್ ತಿಂಗಳಿನಲ್ಲಿ ಕನಿಷ್ಠ 10 ದಿನಗಳಷ್ಟು ಸೇರಿ ಒಟ್ಟು ಕನಿಷ್ಠ 60 ದಿನಗಳಷ್ಟು ಅಧಿವೇಶನವನ್ನು ನಡೆಸಬೇಕಾಗುತ್ತದೆ. ಆದರೆ ಬಿ.ಜೆ.ಪಿ ಆಡಳಿತದ ಸರ್ಕಾರವು ಸಂಸದೀಯ ವ್ಯವಸ್ಥೆಯನ್ನು ನಿರಂತರವಾಗಿ ಹಾಳುಗೆಡವುತ್ತಿದೆ. ಅಧಿವೇಶನಗಳನ್ನು ಕರೆದು ಚರ್ಚೆ ನಡೆಸುವುದನ್ನು ನಾಮಕಾವಸ್ಥೆ ಕೆಲಸವೆಂದು ಭಾವಿಸಿ ವರ್ತಿಸುತ್ತಿದೆ.

ಕೇವಲ 8 ದಿನಗಳಲ್ಲಿ ಇಷ್ಟೊಂದು ಮಹತ್ವದ ವಿಚಾರಗಳನ್ನು ಚರ್ಚಿಸಲು ಸಾಧ್ಯವಿಲ್ಲ. ಹಾಗಾಗಿ ಈ ಅಧಿವೇಶನವನ್ನು ಕನಿಷ್ಠ 3 ವಾರಗಳ ಕಾಲ ಅಂದರೆ ಅಕ್ಟೋಬರ್ 15 ರವರೆಗೆ ವಿಸ್ತರಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಪತ್ರದಲ್ಲಿ ಹೇಳಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com