ʼಐಎಎಸ್ ಅಧಿಕಾರಿಗಳ ದುರಾಡಳಿತದಿಂದ ನೊಂದʼ ವೈದ್ಯಾಧಿಕಾರಿಗೆ ಸಿಹಿಸುದ್ದಿ ನೀಡಿದ ರಾಮುಲು
ರಾಜ್ಯ

ʼಐಎಎಸ್ ಅಧಿಕಾರಿಗಳ ದುರಾಡಳಿತದಿಂದ ನೊಂದʼ ವೈದ್ಯಾಧಿಕಾರಿಗೆ ಸಿಹಿಸುದ್ದಿ ನೀಡಿದ ರಾಮುಲು

15 ತಿಂಗಳುಗಳ ಬಳಿಕ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಸಾಕಷ್ಟು ಖುಶಿ ತರಿಸಿದೆ ಎಂದು ಪ್ರತಿಧ್ವನಿಯೊಂದಿಗೆ ಸಂತಸ ಹಂಚಿಕೊಂಡ ಡಾ. ರವೀಂದ್ರನಾಥ್‌

ಲಾಯ್ಡ್‌ ಡಾಯಸ್

ʼಐಎಎಸ್‌ ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವʼ ಎಂದು ಆಟೋ ರಿಕ್ಷಾದ ಮೇಲೆ ಬರೆದುಕೊಂಡು ಸುದ್ದಿಯಲ್ಲಿದ್ದ ದಾವಣಗೆರೆಯ ಡಾ. ಎಂ ಹೆಚ್‌ ರವೀಂದ್ರನಾಥ್‌ ಅವರಿಗೆ ಆರೋಗ್ಯ ಮಂತ್ರಿ ಶ್ರೀರಾಮುಲು ಸಿಹಿ ಸುದ್ದಿ ನೀಡಿದ್ದಾರೆ. ಸರ್ಕಾರಿ ನೌಕರಿಯಲ್ಲಿದ್ದ ರವೀಂದ್ರನಾಥ್‌ ಅವರು ತಮ್ಮ ಕೆಲಸವನ್ನು ಓರ್ವ ಐಎಎಸ್‌ ಅಧಿಕಾರಿಯ ದುರಾಡಳಿತದಿಂದಾಗಿ ಕಳೆದುಕೊಂಡಿದ್ದರು. ಹಾಗಾಗಿ, ಜೀವನೋಪಾಯಕ್ಕಾಗಿ ದಾವಣಗೆರೆಯಲ್ಲಿ ರಿಕ್ಷಾ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು.

ಬಳ್ಳಾರಿಯಲ್ಲಿ 24 ವರ್ಷಗಳ ಕಾಲ ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರವೀಂದ್ರನಾಥ್‌ ಅವರು ಹೇಳುವ ಪ್ರಕಾರ, ಐಎಎಸ್‌ ಅಧಿಕಾರಿಯ ಲಾಬಿಯ ಕಾರಣದಿಂದಾಗಿ ಅವರು ತಮ್ಮ ಕೆಲಸ ಮತ್ತು ಸಂಬಳ ಎರಡನ್ನೂ ಕಳೆದುಕೊಂಡಿದ್ದಾರೆ. ಆಗಿನ ಇಲಾಖೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದ ಕೆ ವಿ ರಾಜೆಂದ್ರ ಅವರು ತಮ್ಮ ಸಹಪಾಠಿ ಓರ್ವರನ್ನು ಕೆಲಸಕ್ಕಾಗಿ ಶಿಫಾರಸ್ಸು ಮಾಡಿದ್ದರು. ಆದರೆ, ಆ ರೀತಿ ನೇಮಕ ಮಾಡುವುದು ನೇಮಕಾತಿ ಪ್ರಕ್ರಿಯೆಗೆ ವಿರುದ್ದವಾದದ್ದು ಎಂಬ ಕಾರಣಕ್ಕೆ ರವೀಂದ್ರನಾಥ್‌ ಅವರು ಸಿಇಒ ಆದೇಶವನ್ನು ತಿರಸ್ಕರಿಸಿದ್ದರು, ಎಂದು ನ್ಯೂಸ್‌ ಕರ್ನಾಟಕ ವರದಿ ಮಾಡಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಆ ಕಾರಣಕ್ಕಾಗಿ ನನ್ನನ್ನು ಗುರಿಯಾಗಿಸಲಾಯಿತು. ಜೂನ್‌ 6, 2019ರಂದು ನನ್ನನ್ನು ಕೆಲಸದಿಂದ ವಜಾಗೊಳಿಸಲಾಯಿತು. ಆ ಸಮಯದಲ್ಲಿ ನಾನು ಬಳ್ಳಾರಿಯಲ್ಲಿ ಲಸಿಕೆ ಅಧಿಕಾರಿಯಾಗಿದ್ದೆ. ಟೆಂಡರ್‌ ಮೌಲ್ಯಮಾಪನ ಮಾಡುವ ವಿಚಾರದಲ್ಲಿ ನನ್ನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಆದರೆ, ಜಿಲ್ಲಾ ಪಂಚಾಯತ್‌ ಕಚೇರಿಯ ಓರ್ವ ಗುಮಾಸ್ತ ಮಾಡಿದ ತಪ್ಪಿಗಾಗಿ, ನನ್ನ ತಲೆದಂಡವಾಗಿದೆ,” ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕೆಲಸದಿಂದ ವಜಾಗೊಂಡ ನಾಲ್ಕು ದಿನಗಳ ನಂತರ ಎಲ್ಲಾ ದಾಖಲೆಗಳನ್ನು ಬೆಳಗಾವಿಯ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣಕ್ಕೆ ನೀಡಿದ್ದೆ. ಅಲ್ಲಿ ತೀರ್ಪು ನನ್ನ ಪರವಾಗಿ ಬಂತು. ನಂತರ ನನ್ನನ್ನು ಕಲಬುರ್ಗಿಯ ಸೇಡಂನ ತಾಲೂಕು ಆಸ್ಪತ್ರೆಯಲ್ಲಿ ನೇಮಕ ಮಾಡಲಾಯಿತು. ಡಿಸೆಂಬರ್‌ನಲ್ಲಿ ಮತ್ತೆ KAT ಮೊರೆ ಹೋದೆ. ಜನವರಿ 2020ರಲ್ಲಿ ಮತ್ತೆ ತೀರ್ಪು ನನ್ನ ಪರವಾಗಿ ಬಂತು. ಆದರೆ, ಮೇಲಧಿಕಾರಿಗಳು ಇನ್ನೂ ಜಿಲ್ಲಾ ಮಟ್ಟದ ಹುದ್ದೆಯನ್ನು ನನಗೆ ನೀಡದೇ ಸತಾಯಿಸುತ್ತಿದ್ದಾರೆ, ಎಂದು ಅವರು ಹೇಳಿದ್ದರು.

ಈ ವಿಚಾರವು ಮಾಧ್ಯಮಗಳಲ್ಲಿ ಪ್ರಚಾರ ಪಡೆಯುತ್ತಿದ್ದಂತೇ ಎಚ್ಚೆತ್ತುಕೊಂಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ ಶ್ರೀರಾಮುಲು, ರವೀದ್ರ ಅವರನ್ನು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ನಿಯೋಜಿಸಿದ್ದಾರೆ. ಟ್ವೀಟ್‌ ಮೂಲಕ ಈ ವಿಚಾರವನ್ನು ಬಹಿರಂಗಪಡಿಸಿರುವ ರಾಮುಲು ಅವರು, ಹಗಲಿರುಳು ಶ್ರಮಿಸುವ ಎಲ್ಲಾ ವೈದ್ಯರ ಹಿತಾಸಕ್ತಿ ಕಾಪಾಡಲು ನಮ್ಮ ಸರ್ಕಾರ ಬದ್ಧ ಎಂದು ಹೇಳಿದ್ದಾರೆ.

“ಜಿಲ್ಲಾ ಆರ್ ಸಿಹೆಚ್ ಅಧಿಕಾರಿ ಡಾ. ಎಂ ಎಚ್ ರವೀಂದ್ರನಾಥ್ ಅವರು ದಾವಣಗೆರೆಯಲ್ಲಿ ಬದುಕು ನಿರ್ವಹಣೆಗಾಗಿ ಆಟೋ ಓಡಿಸುತ್ತಿದ್ದಾರೆ ಎಂಬ ಮಾಧ್ಯಮ ವರದಿಗಳು ಗಮನಕ್ಕೆ ಬಂದಕೂಡಲೇ ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ವರದಿ ಕೇಳಿದ್ದೆ.ಅಂತೆಯೇ ವರದಿ ಪರಿಶೀಲನೆ ಬಳಿಕ ರವೀಂದ್ರನಾಥ್ ಅವರನ್ನು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ನಿಯೋಜಿಸಲಾಗಿದೆ,” ಎಂದು ರಾಮುಲು ಟ್ವೀಟ್‌ ಮಾಡಿದ್ದಾರೆ.

ವರ್ಗಾವಣೆ ಆದೇಶ ಬಂದ ನಂತರ ʼಪ್ರತಿಧ್ವನಿʼಯೊಂದಿಗೆ ಮಾತನಾಡಿದ ಡಾ. ರವೀಂದ್ರನಾಥ್‌ ಅವರು 15 ತಿಂಗಳಿನಿಂದ ಕೆಲಸವಿಲ್ಲದೇ ಇದ್ದದ್ದು ಸಾಕಷ್ಟು ಬೇಸರ ತರಿಸಿತ್ತು. ಯಾವಗಲೂ ಕೆಲಸ ಮಾಡುತ್ತಲೇ ಇರಬೇಕು ಎಂಬ ಹಂಬಲ ನನ್ನದು. ಈಗ ಕೋವಿಡ್‌ ಸಂದರ್ಭದಲ್ಲಿ ಜನರ ಸೇವೆ ಮಾಡಲು ದೊರಕಿರುವುದು ಖುಶಿ ತಂದಿದೆ. ನಾಳೆಯಿಂದ (ಶುಕ್ರವಾರ) ಕೆಲಸಕ್ಕೆ ಹಾಜರಾಗಲಿದ್ದೇನೆ, ಎಂದು ಹೇಳಿದ್ದಾರೆ.

ಇನ್ನು ಈ ಹಿಂದೆ ಕಿರುಕುಳ ನೀಡಿದ್ದ ಐಎಎಸ್‌ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳುವ ಕುರಿತು ಸರ್ಕಾರ ಯಾವುದೇ ಭರವಸೆ ನೀಡಿಲ್ಲ. ಅವರ ವಿರುದ್ದ ಲೋಕಾಯುಕ್ತದಲ್ಲಿಯೂ ದೂರು ಸಲ್ಲಿಸಿದ್ದೇನೆ, ಎಂದು ತಿಳಿಸಿದರು.

ಒಟ್ಟಿನಲ್ಲಿ, ಜೀವನೋಪಾಯಕ್ಕೆ ಆಟೋ ರಿಕ್ಷಾ ಓಡಿಸುತ್ತಿದ್ದ ಡಾ. ರವೀಂದ್ರನಾಥ್‌ ಅವರ ಜೀವನಕ್ಕೆ ಸರ್ಕಾರವೇ ದಾರಿ ತೋರಿಸಿದಂತಾಗಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com