ಹಳೇ ಮೈಸೂರು ಭಾಗದ ಹಿಡಿತಕ್ಕೆ BY ವಿಜಯೇಂದ್ರ ತಯಾರಿ..!
ರಾಜ್ಯ

ಹಳೇ ಮೈಸೂರು ಭಾಗದ ಹಿಡಿತಕ್ಕೆ BY ವಿಜಯೇಂದ್ರ ತಯಾರಿ..!

ಹಳೇ ಮೈಸೂರು ಭಾಗದಲ್ಲಿ ಭಾರತೀಯ ಜನತಾ ಪಾರ್ಟಿಗೆ ಯಾವುದೇ ಗಟ್ಟಿ ನೆಲೆಯಿಲ್ಲ. ಆ ಭಾಗದಲ್ಲೂ ಕಮಲ ಅರಳಿಸಲು ಬಿಜೆಪಿ ಉಪಾಧ್ಯಕ್ಷರೂ ಆಗಿರುವ ಬಿ ಎಸ್‌ ವೈ ಪುತ್ರ ವಿಜಯೇಂದ್ರ ತಯಾರಿ ನಡೆಸುತ್ತಿದ್ದಾರೆ.

ಕೃಷ್ಣಮಣಿ

ಹಳೇ ಮೈಸೂರು ಭಾಗದಲ್ಲಿ ಭಾರತೀಯ ಜನತಾ ಪಾರ್ಟಿಗೆ ಯಾವುದೇ ಗಟ್ಟಿ ನೆಲೆಯಿಲ್ಲ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಇದನ್ನೇ ಬಂಡವಾಳ ಮಾಡಿಕೊಂಡು ಭಾರತೀಯ ಜನತಾ ಪಾರ್ಟಿಯ ಚುಕ್ಕಾಣಿ ಹಿಡಿದುಕೊಳ್ಳುವ ಯತ್ನ ಆರಂಭಿಸಿದ್ದಾರೆ. ಮೈಸೂರಿನ ವರುಣ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಬಿ.ವೈ ವಿಜಯೇಂದ್ರ, ಈಗಾಗಲೇ ಒಮ್ಮೆ ಸ್ಪರ್ಧೆಗೆ ಅಣಿಯಾಗಿದ್ದರು. ಆದರೆ ಬಿಜೆಪಿ ಹೈಕಮಾಂಡ್‌ ಮಾತ್ರ ನೋ ಎಂದಿತ್ತು. ಅನಿವಾರ್ಯ ಕಾರಣಗಳಿಂದ ಗೆಲ್ಲುವ ಅವಕಾಶವೊಂದನ್ನು ಕೈಚೆಲ್ಲಿದರು. ಅದು ಸಿದ್ದರಾಮಯ್ಯ ಅವರ ಪುತ್ರ ಡಾ ಯತೀಂದ್ರ ಅವರ ಗೆಲುವಿನ ರಹದಾರಿಯಾಗಿತ್ತು.

ಇದೀಗ ಮತ್ತೆ ಹಿಡಿತ ಸಾಧಿಸಲು ಬಿ.ವೈ ವಿಜಯೇಂದ್ರ ಮುಂದಾಗಿದ್ದಾರೆ. ಅದರ ಮೊದಲ ಹೆಜ್ಜೆ ಕೆ.ಆರ್‌. ಪೇಟೆ ಜೆಡಿಎಸ್‌ ಶಾಸಕನಾಗಿದ್ದ ನಾರಾಯಣ ಗೌಡರನ್ನು ಬಿಜೆಪಿಗೆ ಕರೆತಂದು ಗೆಲ್ಲಿಸಲು ಕಠಿಣ ಬೆವರು ಹರಿಸಿದ್ದರು. ಮಂಡ್ಯ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಪ್ರಚಾರದ ಅಬ್ಬರ ಸೃಷ್ಟಿಸಿದ್ದರು. ಅದೂ ಅಲ್ಲದೇ ನಾನು ಇದೇ ಕೆ.ಆರ್‌. ಪೇಟೆಯ ಪುತ್ರ ಎನ್ನುವ ಮೂಲಕ ನಾರಾಯಣ ಗೌಡರನ್ನು ಗೆಲ್ಲಿಸಿಕೊಂಡರು. ಕೊಟ್ಟ ಮಾತಿನಂತೆ ಸಚಿವರನ್ನಾಗಿ ಮಾಡಿ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನೂ ಮಾಡಿದರು. ಇದೀಗ ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿರುವ ಬಿ.ವೈ ವಿಜಯೇಂದ್ರ, ಹಳೇ ಮೈಸೂರು ಭಾಗದ ಉಸ್ತುವಾರಿಯಾಗಲು ಹವಣಿಸುತ್ತಿದ್ದಾರೆ. ಇದಕ್ಕೆ ಬೇಕಾದ ಎಲ್ಲಾ ಪೂರ್ವ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಛತ್ರಲಿಂಗನದೊಡ್ಡಿಗೆ ಭೇಟಿ ನೀಡಿದ್ದ ಬಿ.ವೈ ವಿಜಯೇಂದ್ರ, ಮಾಧ್ಯಮದವರ ಜೊತೆ ಮಾತನಾಡಿ, ಇನ್ನೂ 3 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಇರ್ತಾರೆ. ಇಡಿ ರಾಜ್ಯದ ಅಭಿವೃದ್ಧಿ ಮಾಡುವ ಆಸೆ ಮುಖ್ಯಮಂತ್ರಿಗಳಿಗೆ ಇದೆ. ನಮ್ಮ ಪಕ್ಷದ ಶಾಸಕರು ಇರಲಿ, ಇಲ್ಲದೇ ಇರಲಿ, ಮಂಡ್ಯ ಜಿಲ್ಲೆ ಅಭಿವೃದ್ಧಿ ಜೊತೆಗೆ ಮುಖ್ಯಮಂತ್ರಿ ಬಿ.ಎಸ್‌, ಯಡಿಯೂರಪ್ಪ ಅವರಿಗೆ ಜನ್ಮಕೊಟ್ಟ ಕೆ.ಆರ್.ಪೇಟೆ ತಾಲೂಕು ಅಭಿವೃದ್ಧಿ ಮಾಡಲು ಪಣತೊಟ್ಟಿದ್ದಾರೆ ಎಂದರು. ಜೊತೆಗೆ ಕೆ.ಆರ್.ಪೇಟೆಗೆ 269 ಕೋಟಿ ನೀರಾವರಿ ಯೋಜನೆ ಘೋಷಣೆ ಮಾಡಿದ್ದಾರೆ. ಮಂಡ್ಯ ನಗರಕ್ಕೂ ಅಭಿವೃದ್ಧಿಗೆ ಹತ್ತಾರೂ ಕೋಟಿ ಬಿಡುಗಡೆ ಮಾಡಿದ್ದಾರೆ. ರಾಜ್ಯದ ಅಭಿವೃದ್ಧಿ ಜೊತೆಗೆ ಮಂಡ್ಯ ಅಭಿವೃದ್ಧಿ ಮಾಡುತ್ತಾರೆ ಎಂದರು.

ಮಂಡ್ಯ ಸಕ್ಕರೆ ಫ್ಯಾಕ್ಟರಿ, ಪಾಂಡವಪುರ ಸಕ್ಕರೆ ಫ್ಯಾಕ್ಟರಿಗೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ 200 ಕೋಟಿ ರೂಪಾಯಿ ಅನುದಾನ ಕೊಟ್ಟರು. ಎರಡೂ ಕಾರ್ಖಾನೆ ಪುನಶ್ಚೇತನದ ಆಸೆಯಿಂದ ಮಾಡಿದ್ದರು. ಯಾವ ಮುಖ್ಯಮಂತ್ರಿ ಮಾಡಿರಲಿಲ್ಲ ಎಂದು ತಮ್ಮ ತಂದೆಯನ್ನು ಕೊಂಡಾಡಿದರು. ಕಳೆದ ತಿಂಗಳು ವರುಣ ಕ್ಷೇತ್ರದಲ್ಲಿ ಮಹತ್ವದ ಸಭೆ ಮಾಡಿದ್ದರು. ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಮುಖ್ಯಮಂತ್ರಿ ಪುತ್ರ ಬಿ.ವೈ ವಿಜಯೇಂದ್ರ ಓಡಾಟ ಜೋರಾಗಿದ್ದು, ಜಾತಿ ಓಲೈಕೆ ರಾಜಕಾರಣ ಬದಿಗಿಟ್ಟು, ನಾನು ಈ ಭಾಗದ ಮನೆ ಮಗ ಎನ್ನುವ ಮೂಲಕ ಜನರ ವಿಶ್ವಾಸ ಮೂಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಕೆ ಆರ್‌ ಪೇಟೆ ಅಭಿವೃದ್ಧಿಯನ್ನು ಮಾತ್ರ ಗಮನದಲ್ಲಿಟ್ಟರೆ ಸಾಲುವುದಿಲ್ಲ..

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 7 ತಾಲೂಕುಗಳಿದೆ. ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ, ಮಳವಳ್ಳಿ ತಾಲೂಕುಗಳು ಕಾವೇರಿ ನದಿ ಪಾತ್ರದಲ್ಲಿ ಬರಲಿದ್ದು, ಕೆ.ಆರ್‌.ಎಸ್‌ ಅಣೆಕಟ್ಟೆಯ ನೀರಿನಿಂದ ನೀರಾವರಿ ಜಮೀನು ಹೊಂದಿದ್ದಾರೆ. ಇನ್ನುಳಿದ ಕೆ.ಆರ್‌ ಪೇಟೆ ತಾಲೂಕಿನ ಬಹುತೇಕ ಭಾಗಗಳಿಗೆ ಹೇಮಾವತಿ ಜಲಾಶಯದಿಂದ ನೀರು ಹರಿಯಲಿದ್ದು, ಬರದ ಛಾಯೆ ಏನಿಲ್ಲ. ಆದರೆ ಇನ್ನುಳಿದ ಮಂಡ್ಯ ಜಿಲ್ಲೆಯ ಶಾಪಗ್ರಸ್ತ ತಾಲೂಕು ನಾಗಮಂಗಲಕ್ಕೆ ಯಾವುದೇ ನೀರಾವರಿ ಯೋಜನೆಗಳನ್ನು ಇಲ್ಲೀವರೆಗೂ ಜಾರಿ ಮಾಡಿಲ್ಲ. ಹಿಂದಿನ ಸರ್ಕಾರದಲ್ಲಿ ಕುಮಾರಸ್ವಾಮಿ ಕೆರೆ ತುಂಬಿಸುವ ಯೋಜನೆಗೆ ಒಪ್ಪಿಗೆ ನೀಡಿದ್ದರು. ಆದರೆ ಇಲ್ಲೀವರೆಗೂ ಆ ಕೆಲಸಗಳು ಮುಂದುವರಿಯುವ ಲಕ್ಷಣ ಸಿಕ್ಕಿಲ್ಲ. ಆದರೆ ಒಂದು ಪಕ್ಷದ ನೇತೃತ್ವ ವಹಿಸಲು ಮುಂದಾಗಿರುವ ಬಿ.ವೈ ವಿಜಯೇಂದ್ರ ಈ ಬಗ್ಗೆ ಗಮನ ಹರಿಸುವ ಮೂಲಕ ಜನನಾಯಕ ಆದರೆ ನಾಯಕತ್ವ ಸುಲಭವಾಗಿ ದಕ್ಕಲಿದೆ ಎನ್ನಬಹುದು.

ಈಗಾಗಲೇ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಇರುವ ತಾಲೂಕುಗಳಿಗೆ ಅಷ್ಟು ಕೋಟಿ ಇಷ್ಟು ಕೋಟಿ ಹಣ ಬಿಡುಗಡೆ ಮಾಡಿದ್ದೇವೆ ಎಂದರೆ ಜನರು ನಂಬುವ ಸಾಧ್ಯತೆ ತೀರಾ ಕಡಿಮೆ. ಹಣ ಲೂಟಿ ಮಾಡಲು ಸುಖಾಸುಮ್ಮನೆ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದುಕೊಳ್ಳುತ್ತಾರೆ ಅಷ್ಟೆ. ನೀರಾವರಿಯನ್ನೇ ಕಾಣದ ನಾಗಮಂಗಲವನ್ನು ಪಕ್ಷಾತೀತವಾಗಿ ಅಭಿವೃದ್ಧಿ ಮಾಡಿದರೆ ನಿಸ್ವಾರ್ಥ ಸೇವೆ ಎಂದು ಜನ ಭಾವಿಸುವ ಕಾರಣ ನಾಯಕನ ಪಟ್ಟ ದಕ್ಕಿಸಿಕೊಳ್ಳಬಹುದಾಗಿದೆ. ಈ ಮೂಲಕ ಹಳೇ ಮೈಸೂರು ಭಾಗದಲ್ಲಿ ಭಾರತೀಯ ಜನತಾ ಪಾರ್ಟಿಗೆ ಅಡಿಪಾಯ ಹಾಕಿದಂತೆಯೂ ಆಗಲಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com