ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಯಲಹಂಕ ಮೇಲ್ಸೇತುವೆಗೆ ಕೊನೆಗೂ ಸರ್ಕಾರ ಸಾವರ್ಕರ್ ಹೆಸರನ್ನೇ ಅಂತಿಮ ಗೊಳಿಸಿದೆ. ಮೇ 28 ರಂದು ಉದ್ಘಾಟನೆಗೊಳ್ಳಬೇಕಿದ್ದ ಮೇಲ್ಸೇತುವೆ ಕಾರಣಾಂತರಗಳಿಂದ ಮುಂದೂಡಿ ಸೆಪ್ಟಂಬರ್ 1ಕ್ಕೆ ಉದ್ಘಾಟನೆಯಾಗುವುದೆಂದು ನಿಗದಿಯಾಗಿತ್ತು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನದ ಹಿನ್ನೆಲೆಯಲ್ಲಿ ಎರಡನೇ ಬಾರಿ ಸೇತುವೆ ಉದ್ಘಾಟನೆ ಮುಂದೂಡಲ್ಪಟ್ಟು ಅಂತಿಮವಾಗಿ ಸೆಪ್ಟೆಂಬರ್ 8ರ ಮಧ್ಯಾಹ್ನ 12 ಗಂಟೆಗೆ ಉದ್ಘಾಟನೆಯಾಗಲಿದೆ.
ಕರ್ನಾಟಕದಲ್ಲಿ ಕನ್ನಡಿಗ ಸ್ವಾತಂತ್ರ್ಯ ಹೋರಾಟಗಾರನ ಹೆಸರು ಮೇಲ್ಸೇತುವೆ ಇಡುವಂತೆ ಆಗ್ರಹಿಸಿ ಪ್ರತಿಪಕ್ಷಗಳು, ಕನ್ನಡ ಪರ ಸಂಘಟನೆಗಳು ಆಗ್ರಹಿಸಿದ್ದವು. ಸಂಗೊಳ್ಳಿ ರಾಯಣ್ಣನ ಹೆಸರು ಇಡುವಂತೆ ಸಲಹೆಗಳೂ ಕೇಳಿಬಂದಿದ್ದವು. ಆದರೆ ರಾಷ್ಟ್ರೀಯ ಬಿಜೆಪಿ ಪಕ್ಷ ಕನ್ನಡ ವಿರೋಧಿ ಧೋರಣೆ ತೋರುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ಹೊರತಾಗಿಯೂ ಬಿಜೆಪಿ ಸರ್ಕಾರ ಕನ್ನಡಿಗನಲ್ಲದ ಸಾವರ್ಕರ್ ಹೆಸರು ಇಟ್ಟಿದೆ.
ಕನ್ನಡ ಪರ ಸಂಘಟನೆ, ರಾಜಕೀಯ ಪಕ್ಷಗಳಿಂದ ಪ್ರತಿಭಟನೆ: ಬಂಧನ
ಯಲಹಂಕ ಮೇಲ್ಸೇತುವೆ ವಿಚಾರ ಕುರಿತಾಗಿ ಪ್ರತಿಕ್ರಿಯಿಸಿರುವ ಕೆಆರ್ಎಸ್ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ, "ಯಲಹಂಕದ ಮೇಲ್ಸೇತುವೆಗೆ ಹೆಸರಿಡುವ ವಿಚಾರದಲ್ಲಿ ಕರ್ನಾಟಕದ ಜನತೆಯಿಂದ ಗಂಭೀರವಾದ, ಸಕಾರಣವಾದ ವಿರೋಧ ಇದ್ದರೂ ಯಡಿಯೂರಪ್ಪ ಸರ್ಕಾರ ಆ ಜನಾಭಿಪ್ರಾಯವನ್ನು ಕಡೆಗಣಿಸಿ ಮುಂದುವರೆಯುತ್ತಿರುವುದು ಅಕ್ಷಮ್ಯ. ಕನ್ನಡಿಗರ ಭಾವನೆಗಳಿಗೆ ಬೆಲೆ ನೀಡದ ಸರ್ಕಾರದ ನಡೆಯನ್ನು ಕೆಆರ್ಎಸ್ ಪಕ್ಷ ಖಂಡಿಸುತ್ತದೆ. ಹೇರಿಕೆ ಸಲ್ಲದು. ಒಪ್ಪಿತ ಹೆಸರು ಇಡಿ.ʼ ಎಂದು ಆಗ್ರಹಿಸಿದ್ದಾರೆ.
ಇನ್ನು ಮೇಲ್ಸೇತುವೆ ಉದ್ಘಾಟನೆಗೂ ಮುನ್ನ ಕನ್ನಡ ಪರ ಸಂಘಟನೆಯ ಹೋರಾಟಗಾರರನ್ನು ಬಂಧಿಸಿರುವ ಸರ್ಕಾರದ ನಡೆಯ ವಿರುದ್ಧ ಕನ್ನಡ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸದ್ದಾರೆ.
ಯಲಹಂಕ ಮೇಲ್ಸೆತುವೆ ವಿಚಾರವಾಗಿ ಇಂದು ಬೆಳಿಗ್ಗೆ ಕರ್ನಾಟಕ ರಣಧೀರ ಪಡೆ ರಾಜ್ಯಾಧ್ಯಕ್ಷರಾದ ಭೈರಪ್ಪ ಹರೀಶ್ ಕುಮಾರ್ ಅವರನ್ನು ಅಮೃತಹಳ್ಳಿ ಪೋಲಿಸ್ ಠಾಣೆಯವರು ಬಂಧಿಸಿದ್ದಾರೆ. ಒಬ್ಬ ಹೋರಾಟಗಾರನನ್ನು ಬಂಧಿಸಿ ಯಲಹಂಕ ಮೇಲ್ಸೇತುವೆ ಉದ್ಘಾಟನಾ ಮಾಡೋ ಪರಿಸ್ಥಿತಿ ನಮ್ಮ ರಾಜ್ಯ ಸರ್ಕಾರಕ್ಕೆ ಬಂದಿದೆ ಎಂದು ಮಂಜು ಗಣಪತಿ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ತನ್ನನ್ನು ಬಂಧಿಸಿರುವುದಾಗಿ ಸ್ವತಃ ಭೈರಪ್ಪ ಹರೀಶ್ ಕುಮಾರ್ ಫೇಸ್ಬುಕ್ ಮೂಲಕ ಹೇಳಿಕೊಂಡಿದ್ದಾರೆ.
ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನು ಅಂತಿಮಗೊಳಿಸಿ,ರಾಜ್ಯ ಸರ್ಕಾರ ಉದ್ಘಾಟನೆಗೆ ಮುಂದಾಗಿದೆ. ನಮ್ಮದೇ ಬೆಳಗಾವಿಯಲ್ಲಿ ರಾಯಣ್ಣನ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಹರಸಾಹಸ ಪಟ್ಟಿದ್ದೇವೆ ಹೀಗಿರುವಾಗ, ಕರ್ನಾಟಕಕ್ಕೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಯ ಹೆಸರನ್ನು ಸಾರ್ವಜನಿಕ ಮೇಲ್ಸೇತುವೆಗೆ ಇಡುವುದನ್ನು ಜೆಡಿಎಸ್ ಪಕ್ಷ ವಿರೋಧಿಸುತ್ತದೆ ಎಂದು ಜೆಡಿಎಸ್ ಹೇಳಿಕೊಂಡಿದೆ.
ಬೆಂಗಳೂರು ಯುವ ಜನತಾದಳದ ಅಧ್ಯಕ್ಷ ಪ್ರವೀಣ್ ಕುಮಾರ್ ಅವರನ್ನು ಪ್ರತಿಭಟನೆಯ ಭಯದಿಂದ ಸರ್ಕಾರ ಬಂಧಿಸಿದ್ದು, ಯಲಹಂಕ ಮೇಲ್ಸೇತುವೆಗೆ ಮಹಾರಾಷ್ಟ್ರದ ಸಾವರ್ಕರ್ ಹೆಸರಿಡುವುದನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸಲು ಅವಕಾಶ ನೀಡದ ಸರ್ವಾಧಿಕಾರಿ ಧೋರಣೆಯಿಂದ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ. ಇದು ಜನವಿರೋಧಿ ಸರ್ಕಾರದ ಭಂಡ ನಡೆ ಎಂದೂ ಜೆಡಿಎಸ್ ಹೇಳಿದೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ನಾಡವಿರೋಧಿ ನೀತಿಯನ್ನು ಅನುಸರಿಸುತ್ತಿದೆ, ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನು ನಾಮಕರಣ ಮಾಡುತ್ತಿರುವುದೂ ಕೂಡ ಬಿಜೆಪಿ ಸರ್ಕಾರದ ನಾಡವಿರೋಧಿ ಧೋರಣೆಯ ಮುಂದುವರಿದ ಭಾಗ ಎಂದು JDS ಬೆಂಗಳೂರು ನಗರ ಅಧ್ಯಕ್ಷ ಆರ್ ಪ್ರಕಾಶ್ ಹೇಳಿದ್ದಾರೆ.
ಜನಾಂದೋಲನ ಆಗುವವರೆಗೆ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯ ವಿಷಯದಲ್ಲಿ ಆಸಕ್ತಿ ತೋರದ ರಾಜ್ಯ ಬಿಜೆಪಿ ಸರ್ಕಾರ, ಗಾಂಧಿ ಹತ್ಯಾ ಆರೋಪಿಯಾದ ಸಾವರ್ಕರ್ ಹೆಸರನ್ನು ಯಲಹಂಕ ಮೇಲು ಸೇತುವೆಗೆ ನಾಮಕರಣ ಮಾಡಲು ಹೊರಟಿರುವುದು ನಿಜಕ್ಕೂ ನಾಚಿಕೆಗೇಡಿನ ಮತ್ತು ದೇಶದ್ರೋಹಿ ಕೆಲಸ ಎಂದು ಕಾಂಗ್ರೆಸ್ ಆರೋಪಿಸಿದೆ.