ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾದ ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ

ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾದ ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ

ಡ್ರಗ್ಸ್ ಪ್ರಕರಣವು ರಾಜಕೀಯ ಪಕ್ಷಗಳ ನಡುವಿನ ಕೆಸರೆರಚಾಟಕ್ಕೆ ವೇದಿಕೆಯಾಗಿ ಪರಿಣಮಿಸಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ನಡುವೆ ವಾಕ್ಸಮರ ತಾರಕಕ್ಕೇರಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಒತ್ತಾಯ ಮಾಡಿದೆ.

ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ ತೀವ್ರವಾಗಿ ರಾಜಕೀಯ ಸ್ವರೂಪ ಪಡೆಯುತ್ತಿದೆ. ಈ ಪ್ರಕರಣವು ರಾಜಕೀಯ ಪಕ್ಷಗಳ ನಡುವಿನ ಕೆಸರೆರಚಾಟಕ್ಕೆ ವೇದಿಕೆಯಾಗಿ ಪರಿಣಮಿಸಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ನಡುವೆ ವಾಕ್ಸಮರ ತಾರಕಕ್ಕೇರಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಒತ್ತಾಯ ಮಾಡಿದೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಟಿ ನಡೆಸಿ, ಡ್ರಗ್ ಮಾಫಿಯಾ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇವೆ. ಪ್ರತಿಯೊಬ್ಬ ಶಾಸಕರು ಅಧಿವೇಶನದಲ್ಲಿ ಭಾಗವಹಿಸಲು ತಿಳಿಸಿದ್ದು, ಒಟ್ಟು 1,200 ಪ್ರಶ್ನೆಗಳನ್ನು ಕೇಳಲು ಸಿದ್ದಪಡಿಸಿದ್ದೇವೆ ಎಂದಿದ್ದಾರೆ. ಇದೇ 16 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಲಿದ್ದು ಪೂರ್ಣ ತಯಾರಿ ಮಾಡಿಕೊಳ್ಳುತ್ತೇವೆ. ಡ್ರಗ್ಸ್ ನಮ್ಮ ಕಾಲದಲ್ಲೂ ಇತ್ತು, ಅವರ ಕಾಲದಲ್ಲೂ ಇತ್ತು, ಎಲ್ಲರ ಕಾಲದಲ್ಲೂ ಡ್ರಗ್ಸ್ ಇತ್ತು. ನಾವೂ ಕೂಡ ಅದನ್ನು ಮಟ್ಟ ಹಾಕಲು ಯತ್ನಿಸಿದ್ದೆವು. ಈಗ ಅವರ ಕಾಲದಲ್ಲಿ ಇದು ಬಯಲಿಗೆ ಬಂದಿದೆ. ತಪ್ಪಿತಸ್ಥರು ಯಾರೇ ಇದ್ದರೂ ಶಿಕ್ಷೆ ಆಗಬೇಕು. ನಟಿ ರಾಗಿಣಿಗೂ ಬಿಜೆಪಿಗೂ ಸಂಬಂಧ ಇಲ್ಲ ಅಂತಾರೆ. ಆದರೆ ಆಕೆ ಬಿಜೆಪಿ ಪರ ಪ್ರಚಾರ ಮಾಡಿರೋದಕ್ಕೆ ಸಾಕ್ಷಿ ಇದೆ. ಫೋಟೋಗಳು, ವೀಡಿಯೋಗಳು ಇವೆ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಾಜ್ಯದಲ್ಲಿ ಡ್ರಗ್ಸ್ ಹಾವಳಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಗಿ ಕ್ರಮ ಕೈಗೊಂಡು ನಿಯಂತ್ರಣ ಮಾಡಲು ಗೃಹ ಇಲಾಖೆಯ ಅಧಿಕಾರಿಗಳ ಜೊತೆ ಸಿಎಂ ಬಿ.ಎಸ್‌. ಯಡಿಯೂರಪ್ಪ ಮಹತ್ವದ ಸಭೆ ನಡೆಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿಜಿಪಿ ಪ್ರವೀಣ್ ಸೂದ್ , ಬೆಂಗಳೂರು ಕಮಿಷನರ್ ಕಮಲ್ ಪಂಥ್ ಸೇರಿದಂತೆ ಗೃಹ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆಯಲ್ಲಿ ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಬಿಗಿ ಕ್ರಮಗಳು ಹಾಗೂ ಹಲವಾರು ಪ್ರಭಾವಿಗಳ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಅವರ ಮೇಲೆ ತೀವ್ರತರವಾದ ತನಿಖೆ ಕೈಗೊಳ್ಳುವ ಬಗ್ಗೆಯೂ ಚರ್ಚೆ ಆಯಿತು. ಡ್ರಗ್ಸ್ ನಿಯಂತ್ರಣಕ್ಕೆ ವಿರೋಧ ಪಕ್ಷಗಳಿಂದಲೂ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ ಡ್ರಗ್ಸ್ ನಿಯಂತ್ರಿಸಲು ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ಕೋಲಾರದಲ್ಲಿ ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಮಾತನಾಡಿ, ಡ್ರಗ್ಸ್ ಜಾಲವನ್ನು ಬೇರು ಸಮೇತ ಕಿತ್ತು ಹಾಕಬೇಕು. ಆದರೆ ಮಂತ್ರಿಗಳು ರಾಜಕೀಯ ಗೊಂದಲ ಮಾಡುತ್ತಿದ್ದಾರೆ. ತನಿಖೆ ನಡೆಯುವ ವೇಳೆಯಲ್ಲಿ ಮಂತ್ರಿಗಳೇ ಹಲವು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಉದ್ದೇಶ ಪೂರಕವಾಗಿ ತನಿಖಾಧಿಕಾರಿಗಳ ಮೇಲೆ ಮಂತ್ರಿಗಳು ಪ್ರಭಾವ ಬೀರುತ್ತಿದ್ದಾರೆ ಎಂದು ನೇರವಾಗಿಯೇ ಟೀಕಿಸಿದ್ದಾರೆ. ಆದರೆ ಬಾಗಲಕೋಟೆಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಮಾತನಾಡಿ, ಡ್ರಗ್ಸ್ ಕೇಸ್ ನಲ್ಲಿ ಸಚಿವರೊಬ್ಬರು ಸಿಸಿಬಿ ಅಧಿಕಾರಿಗಳಿಗೆ ಒತ್ತಡ ಹಾಕುತ್ತಿದ್ದಾರೆ, ಆರೋಪಿಗಳ ರಕ್ಷಣೆ ಮಾಡುತ್ತಿದ್ದಾರೆ ಎಂದಿರುವ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ. ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ನಮ್ಮ ಸರ್ಕಾರ ಹಿಂದೇಟು ಹಾಕುವುದಿಲ್ಲ. ಈಗಾಗಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಎಲ್ಲಾ ಕ್ರಮ ಕೈಗೊಂಡಿದ್ದಾರೆ ಎಂದಿದ್ದಾರೆ.

ದೊಡ್ಡ ದೊಡ್ಡ ಶ್ರೀಮಂತರ ಮಕ್ಕಳು ವ್ಯಾಸಂಗ ಮಾಡುವ ಶಾಲಾ ಕಾಲೇಜು ಬಳಿಯ ಐಸ್ ಕ್ರೀಂ ಪಾರ್ಲರ್‌ ಗಳಲ್ಲಿ ಡ್ರಗ್ಸ್ ಸವರಿ ಕೊಡುವ ಬಗ್ಗೆ ದೊಡ್ಡ ಗುಮಾನಿ ಇದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಸಚಿವ ಸುರೇಶ್‌ ಕುಮಾರ್, ಡ್ರಗ್ಸ್ ಬಲೆಗೆ ಕೆಡವಲು ದಂಧೆಕೋರರು, ತಿನ್ನುವ ಐಸ್ ಕ್ರೀಂ ಅಥವಾ ಹಣ್ಣುಗಳಿಗೆ ಡ್ರಗ್ಸ್ ಸವರಿ ಕೊಡುವ ಅನುಮಾನಗಳಿವೆ. ಯುವ ಜನತೆಯನ್ನು ಹಾಳು ಮಾಡುವ ಇಂತಹವರನ್ನು ಹಿಡಿದು ಜೈಲಿಗೆ ಕಳುಹಿಸುತ್ತೇವೆ ಎಂದರು. ಎರಡು ವರ್ಷಗಳ ಹಿಂದೆಯೆ ಬಿಜೆಪಿ ಡ್ರಗ್ಸ್ ವಿರುದ್ದ ಧ್ವನಿ ಎತ್ತಿತ್ತು. ಆಗಿನ ಡೆಪ್ಯೂಟಿ ಸ್ಪೀಕರ್ ಯೋಗೀಶ್ ಭಟ್ ಈ ಬಗ್ಗೆ ತನಿಖೆಯನ್ನು ಸಹ ಮಾಡಿಸಿದ್ದೆವು ಎಂದ ಸಚಿವರು ಡ್ರಗ್ಸ್ ವಿಚಾರವಾಗಿ ರಾಜ್ಯ ಸರ್ಜಾರ ಕಠಿಣ ನಿರ್ಧಾರ ಕೈಗೊಂಡಿದೆ ಈ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೆ ಇಲ್ಲ. ಸಮಾಜ ಹಾಗು ಯವಜನಾಂಗವನ್ನು ದುರ್ಬಳಗೊಳಿಸುವ ಪ್ರಯತ್ನಗಳಿಗೆ ಒಂದು ತಾರ್ಕಿಕ ಅಂತ್ಯ ಕಾಣಿಸಬೇಕು, ಇದನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದಿದ್ದಾರೆ.

ಡ್ರಗ್ಸ್‌ ವಿರುದ್ಧ ಸರ್ಕಾರ ಕಠಿಣ ನಿಲುವು ಕೈಗೊಳ್ಳಲಿದೆ ಎನ್ನುತ್ತಲೇ ಸರ್ಕಾರ ಪ್ರಕರಣವನ್ನು ಹಳ್ಳಕ್ಕೆ ಕೆಡವಲು ಯತ್ನಿಸುತ್ತಿದೆಯಾ ಎನ್ನುವ ಅನುಮಾನಗಳು ದಟ್ಟವಾಗಿವೆ. ಕಾರಣ ಏನಂದರೆ ಇಲ್ಲೀವರೆಗೂ ಡ್ರಗ್ಸ್‌ ವಿಚಾರದಲ್ಲಿ ಆರೋಪ ಮಾಡಿದವರು ಬಿಜೆಪಿ ನಾಯಕರುಗಳು. ಆರೋಪಕ್ಕೆ ತುತ್ತಾದವರೂ ಕೂಡ ಬಿಜೆಪಿ ಬೆಂಬಲಿಗರೇ ಆಗಿದ್ದಾರೆ. ಹಾಗಾಗಿ ತನಿಖೆ ಹಳ್ಳದ ಹಾದಿ ಹಿಡಿದಿದ್ಯಾ ಎನ್ನುವ ಅನುಮಾನ ದಟ್ಟವಾಗಿ ಕಾಟತೊಡಗಿದೆ. ಇಲ್ಲದಿದ್ದರೆ, ನಟ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಕೊಟ್ಟಿರುವ 15 ಜನ ಚಿತ್ರೋದ್ಯಮದ ಜನರನ್ನು ಕರೆದು ವಿಚಾರಣೆ ಮಾಡಬೇಕಿತ್ತು. ಕೇವಲ ನಟಿ ರಾಗಿಣಿಯನ್ನು ಬಂಧನಕ್ಕೆ ಒಳಪಡಿಸಿ ಉಳಿದವರನ್ನು ವಿಚಾರಣೆ ಮಾಡಲು ಸಿಸಿಬಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದು ಯಾಕೆ..? ಎನ್ನುವ ಅನುಮಾನ ದಟ್ಟವಾಗುತ್ತಿದೆ. ಒಂದು ವೇಳೆ ಡ್ರಗ್ಸ್‌ ಕೇಸ್‌ ನಲ್ಲಿ ಯಾರನ್ನೂ ರಕ್ಷಣೆ ಮಾಡುವ ಉದ್ದೇಶವಿಲ್ಲದಿದ್ದರೆ, ಇಂದ್ರಜಿತ್‌ ಕೊಟ್ಟ ಲಿಸ್ಟ್‌ ನಲ್ಲಿದ್ದ ಹೆಸರುಗಳಿಗೆ ಶೀಘ್ರದಲ್ಲೇ ನೋಟಿಸ್‌ ಕೊಟ್ಟು ವಿಚಾರಣೆ ಮಾಡಬೇಕಿದೆ. ಇಲ್ಲದಿದ್ದರೆ ರಕ್ಷಣಾತ್ಮಕ ಆಟವಾಡುತ್ತ ಕೆಲವರ ರಕ್ಷಣೆಗೆ ತಂತ್ರಗಾರಿಕೆ ಮಾಡಿದ್ದಾರೆ ಎನ್ನುವುದು ಸತ್ಯವಾಗಲಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com