ನೆರೆ ಪರಿಹಾರ; ಈ ಬಾರಿಯಾದರೂ ರಾಜ್ಯಕ್ಕೆ ನ್ಯಾಯ ಸಿಗುವುದೇ..?
admin
ರಾಜ್ಯ

ನೆರೆ ಪರಿಹಾರ; ಈ ಬಾರಿಯಾದರೂ ರಾಜ್ಯಕ್ಕೆ ನ್ಯಾಯ ಸಿಗುವುದೇ..?

ನೆರೆ ಪರಿಹಾರ, ಜಿಎಸ್‌ಟಿ ಸೇರಿದಂತೆ ಕರ್ನಾಟಕದ ಪಾಲಿಗೆ ಬರಬೇಕಿದ್ದ ದೊಡ್ಡ ಮೊತ್ತವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತಿಲ್ಲ.

ಕೃಷ್ಣಮಣಿ

ಕರ್ನಾಟಕ ರಾಜ್ಯ ಪ್ರತಿವರ್ಷವೂ ಮಳೆಗಾಲದಲ್ಲಿ ಅತಿವೃಷ್ಠಿಯಿಂದ ಬಳಲಿ ಬೆಂಡಾಗುತ್ತದೆ. ಆದರೆ ಪ್ರತಿ ಬಾರಿ ಕರ್ನಾಟಕದ ಮೂಗಿಗೆ ತುಪ್ಪ ಸವರುವ ಕೇಂದ್ರ ಸರ್ಕಾರ ಅಷ್ಟೊಂದು ಪ್ರಮಾಣದಲ್ಲಿ ನಷ್ಟವಾಗಿದ್ದರೂ ಇಷ್ಟೇ ಇಷ್ಟು ಕೊಟ್ಟು ಸಮಾಧಾನ ಮಾಡುವ ಪ್ರಯತ್ನ ಮಾಡುತ್ತದೆ. ಕಳೆದ ವರ್ಷವೂ ರಾಜ್ಯದಲ್ಲಿ 40 ಸಾವಿರ ಕೋಟಿ ರೂಪಾಯಿ ಅಂದಾಜು ವೆಚ್ಚ ಎಂದು ರಾಜ್ಯ ಸರ್ಕಾರ ಹೇಳಿತ್ತು. ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟಿದ್ದು ಮೂರು ಸಾವಿರ ಕೋಟಿ ಮಾತ್ರ. ಪ್ರತಿವರ್ಷವೂ ಕೇಂದ್ರದಿಂದ ಅನ್ಯಾಯವಾಗುತ್ತಲೇ ಇದೆ. ಈ ವರ್ಷವಾದರೂ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಬಳಿ ಧೈರ್ಯದಿಂದ ಪ್ರವಾಹ ಪರಿಹಾರ ಕೇಳಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದರು. ಇದೀಗ ಕೇಂದ್ರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿದ್ದು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಜೊತೆಗೆ ಮಹತ್ವದ ಸಭೆ ನಡೆಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳು ರಾಜ್ಯದ ಮಂತ್ರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದ್ದರು. ಆ ವೇಳೆ ನಾಲ್ಕು ಸಾವಿರ ಕೋಟಿ ಮೌಲ್ಯದ ಅಂದಾಜು ನಷ್ಟವೆಂದು ಹೇಳಿದ್ದರು. ಆದರೆ ಕೇಂದ್ರ ಸರ್ಕಾರ 395.5 ಕೋಟಿ ಹಣವನ್ನು ಬಿಡುಗಡೆ ಮಾಡಿತ್ತು. ಅದನ್ನು ತಾತ್ಕಾಲಿಕ ಪರಿಹಾರವಾಗಿದ್ದು, ಕೇಂದ್ರ ಅಧ್ಯಯನ ತಂಡ ಆಗಮಿಸಿ ವರದಿ ಕೊಟ್ಟ ಬಳಿಕ ಮತ್ತಷ್ಟು ಹೆಚ್ಚುವರಿ ಹಣ ಬಿಡುಗಡೆ ಆಗಲಿದೆ ಎಂದಿದ್ದರು. ಆ ಸಮಯ ಈಗ ಬಂದಾಗಿದೆ. ಕೇಂದ್ರದಿಂದ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿ ಆಗಿದೆ. ಈಗ ರಾಜ್ಯ ಸರ್ಕಾರ ಕೇಂದ್ರದ ಅಧ್ಯಯನ ತಂಡಕ್ಕೆ ಕೊಡುವ ಮಾಹಿತಿ ಆಧಾರದಲ್ಲೇ ರಾಜ್ಯಕ್ಕೆ ಕೇಂದ್ರದಿಂದ ಪರಿಹಾರದ ಹಣ ಬಿಡುಗಡೆ ಆಗಲಿದೆ. ಇದೇ ಕಾರಣಕ್ಕೆ ಸಿಎಂ ಬಿ.ಎಸ್‌. ಯಡಿಯೂರಪ್ಪ ಮಹತ್ವದ ಸಭೆ ನಡೆಸಿದ್ದಾರೆ.

ಸೋಮವಾರ ಬೆಂಗಳೂರಿಗೆ ಬಂದಿಳಿದಿರುವ ಕೇಂದ್ರ ಅಧ್ಯಯನ ತಂಡ, ಕುಮಾರಕೃಪಾ ಅತಿಥಿ ಗೃಹಕ್ಕೆ ಆಗಮಿಸಿದ್ದು, ಸಂಜೆ 5 ಗಂಟೆಗೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಪ್ರವಾಹ ಪೀಡಿತ ಜಿಲ್ಲೆಗಳ ಉಸ್ತುವಾರಿ ಸಚಿವರುಗಳಾದ ಮಾಧುಸ್ವಾಮಿ, ಗೋಪಾಲಯ್ಯ ಹಾಗೂ ಡಿಸಿಎಂ ಗೋವಿಂದ ಕಾರಜೋಳ ಕೂಡ ಭಾಗಿಯಾಗಿದ್ದರು. ಕೇಂದ್ರ ತಂಡದ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಕೆ ವಿ ಪ್ರತಾಪ್, ಹಣಕಾಸು ಇಲಾಖೆಯ ಹಿರಿಯ ಅಧಿಕಾರಿ ಭರ್ತೆಂಡ್ ಕುಮಾರ್ ಸಿಂಗ್, ಕೇಂದ್ರ ಕೃಷಿ ಮತ್ತು ರೈತರ ಸಹಕಾರ ಸಚಿವಾಲಯದ ಅಧಿಕಾರಿ ಡಾ. ಮನೋಹರನ್, ಕೇಂದ್ರ ಜಲ ಶಕ್ತಿ ಸಚಿವಾಲಯದ ಕಾರ್ಯಕಾರಿ ಅಭಿಯಂತರರಾದ ಗುರು ಪ್ರಸಾದ್, ಕೇಂದ್ರ ರಸ್ತೆ ಮತ್ತು ಹೆದ್ದಾರಿ ಪ್ರಾದೇಶಿಕ ಕಚೇರಿ ಅಧಿಕಾರಿ ಸದಾನಂದ ಬಾಬು, ಕೇಂದ್ರ ಗ್ರಾಮೀಣಾಭಿವೃದ್ದಿ ಅಧೀನ ಕಾರ್ಯದರ್ಶಿ ವಿ ಪಿ ರಾಜವೇದಿ ಜೊತೆಗೆ ರಾಜ್ಯದಲ್ಲಾಗಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಪ್ರವಾಹದಿಂದ ರಾಜ್ಯಕ್ಕೆ 8,071 ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ಸಿಎಂ ಬಿ.ಎಸ್‌. ಯಡಿಯೂರಪ್ಪ ತಂಡ ಕೇಂದ್ರ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದೆ. ಸಭೆಯಲ್ಲಿ 8,071 ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ಸಿಎಂ ವಿವರಣೆ ನೀಡಿದ್ದಾರೆ. 2018 ಮತ್ತು 2019 ರಲ್ಲಿ ಭಾರಿ ಪ್ರವಾಹ ಮತ್ತು ಭೂ ಕುಸಿತ ಉಂಟಾಗಿತ್ತು. ಇದರಿಂದ 22 ಜಿಲ್ಲೆಗಳು ಸಂಕಷ್ಟಕ್ಕೆ ಸಿಲುಕಿದ್ದವು. ಈ ಬಾರಿಯ ಪ್ರವಾಹದಲ್ಲಿ ಸುಮಾರು 4.03 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಹಾನಿಯಾಗಿವೆ. ರಸ್ತೆ, ಸೇತುವೆ, ವಿದ್ಯುತ್ ಪರಿವರ್ತಕಗಳು, ಶಾಲೆ, ಅಂಗನವಾಡಿ ಮತ್ತು ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳ ಪರಿಸ್ಥಿತಿ ಹಾಗೂ ನಷ್ಟದ ವಿವರ ಪಡೆದು ತೆರಳಿದ ಕೇಂದ್ರ ಅಧ್ಯಯನ ತಂಡ ಮಂಗಳವಾರ ಹಾಗೂ ಬುಧವಾರ ಸ್ಥಳ ಪರಿಶೀಲನೆ ನಡೆಸಲಿವೆ.

ಕೇಂದ್ರ ಅಧ್ಯಯನ ತಂಡದ ಜೊತೆ ನಡೆದ ಚರ್ಚೆ ವೇಳೆ ಕಂದಾಯ ಸಚಿವ ಆರ್ ಅಶೋಕ್, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಕೃಷಿ ಸಚಿವ ಬಿಸಿ ಪಾಟೀಲ್ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ರಾಜ್ಯದಲ್ಲಿ ಪ್ರವಾಹದಿಂದ ಆಗಿರುವ‌ ನಷ್ಟದ ಬಗ್ಗೆ ವಿವರಣೆ ಪಡೆಯಲಾಗಿದೆ. ರಾಜ್ಯದಲ್ಲಿ ಎಲ್ಲೆಲ್ಲಿ ಹೆಚ್ಚಾಗಿ ಮಳೆ ಆಗಿದೆ, ಮಳೆಯಿಂದ ಎಷ್ಟು ಹಾನಿಯಾಗಿದೆ, ಬೆಳಗಾವಿಯಲ್ಲಿ ಹಾಗೂ ಇತರೆ ಭಾಗಗಳಲ್ಲಿ ಎಷ್ಟು ಹಾನಿಯಾಗಿದೆ ಎಂಬ ಮಾಹಿತಿ ಕೊಡಲಾಗಿದೆ. ಸದ್ಯ ಕಂದಾಯ ಇಲಾಖೆ ಪ್ರಕಾರ ಪ್ರವಾಹದಿಂದ ನಷ್ಟ ಆಗಿರೋದು ಎಂಟು ಸಾವಿರ ಕೋಟಿ ಎನ್ನಲಾಗಿದ್ದು, ಸಿಎಂ ಬಿ.ಎಸ್‌. ಯಡಿಯೂರಪ್ಪ ಕೇಂದ್ರಕ್ಕೆ ಹೇಳಿರೋದು ಕೇವಲ 4 ರಿಂದ 5 ಸಾವಿರ ಕೋಟಿ ಎನ್ನಲಾಗಿದೆ.

ಬೆಳಗಾವಿ, ಬಾಗಲಕೋಟೆ, ಕೊಡಗು ಸೇರಿದಂತೆ ಮಲೆನಾಡು ಭಾಗಗಳಲ್ಲಿ ಹೆಚ್ಚು ಹಾನಿಯಾಗಿದೆ. ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಹಾಗೂ ಬೆಳೆ ನಾಶದ ಬಗ್ಗೆಯೂ ವಿವರಣೆ ಕೊಡಲಾಗಿದೆ. ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಟ್ಟಿರುವುದು ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿನ ಸ್ಥಳೀಯ ಅಧಿಕಾರಿಗಳು ಮನವರಿಕೆ ಮಾಡಿಸಲು ಯತ್ನ ನಡೆಸಬೇಕು. ಇಲ್ಲದಿದ್ದರೆ ಕೇಂದ್ರ ಅಧ್ಯಯನ ತಂಡವೇ ಮತ್ತೊಂದು ವರದಿ ಸಿದ್ಧ ಮಾಡಿಕೊಂಡು ಹೋಗಲಿದ್ದು, ಕಡಿಮೆ ಹಣವನ್ನು ಕೇಂದ್ರ ನೀಡಲಿದೆ. ಆ ಬಳಿಕ ಇಲ್ಲಿನ ಜನರಿಗೆ ಸೂರು ಸಿಗುವುದಿಲ್ಲ, ಮುಂದಿನ ವರ್ಷ ಮತ್ತೆ ಪ್ರವಾಹದಲ್ಲಿ ಸಿಲುಕುವುದೂ ತಪ್ಪುವುದಿಲ್ಲ. ಕೇಂದ್ರ ಅಧ್ಯಯನ ತಂಡಕ್ಕೆ ರಾಜ್ಯ ಸರ್ಕಾರ ಹೆಚ್ಚೆಚ್ಚು ಹಾನಿಯ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಹೆಚ್ಚಿನ ಪರಿಹಾರಕ್ಕೆ ಬೇಡಿಕೆ ಸಲ್ಲಿಸಬೇಕಿದೆ. ಈಗಲಾದ್ರು ಕೇಂದ್ರ ಸರ್ಕಾರವನ್ನು ಧೈರ್ಯವಾಗಿ ಪ್ರಶ್ನಿಸುವ ಮೂಲಕ ನಾನೂ ರೈತ ನಾಯಕ ಎನ್ನುವುದನ್ನು ಬಿ.ಎಸ್‌. ಯಡಿಯೂರಪ್ಪ ಸಾಬೀತು ಮಾಡಬೇಕಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com