ಮಾದಕದ್ರವ್ಯ ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳು ಷಾಮೀಲಾದ ಆರೋಪಗಳಿವೆ- ಸಿದ್ದರಾಮಯ್ಯ
ರಾಜ್ಯ

ಮಾದಕದ್ರವ್ಯ ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳು ಷಾಮೀಲಾದ ಆರೋಪಗಳಿವೆ- ಸಿದ್ದರಾಮಯ್ಯ

ಮಾದಕ ವಸ್ತುಗಳ ದಂಧೆಯಲ್ಲಿ ಪೊಲೀಸ್ ಅಧಿಕಾರಿ/ಸಿಬ್ಬಂದಿ ಕೂಡಾ ಷಾಮೀಲಾಗಿರುವ ಆರೋಪಗಳಿವೆ. ಅವರ ಮೇಲೆ ಯಾವ ಕ್ರಮಕೈಗೊಳ್ಳಲಾಗಿದೆ? ಅವರಲ್ಲಿ ಎಷ್ಟು ಜನರನ್ನು ಬಂಧಿಸಲಾಗಿದೆ?

ಪ್ರತಿಧ್ವನಿ ವರದಿ

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಮುಖ್ಯ ಸುದ್ದಿಯಾಗಿರುವ ಮಾದಕ ದ್ರವ್ಯ ದಂಧೆಯ ಕುರಿತಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದಾರೆ. ಈ ಕುರಿತಂತೆ ಸರಣಿ ಟ್ವೀಟ್‌ ಮಾಡಿದ ಸಿದ್ದರಾಮಯ್ಯ, ಮಾದಕ‌ವಸ್ತು ಸೇವನೆ/ಮಾರಾಟದ ಆರೋಪಿಗಳ ವಿರುದ್ಧ ಮುಖ್ಯಮಂತ್ರಿ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು. ಬಂಧಿತರಲ್ಲಿ ಕೆಲವರಿಗೆ ಬಿಜೆಪಿ ಜೊತೆ ಸಂಬಂಧ ಇದೆಯೆಂದು ಹೇಳಲಾಗುತ್ತಿದ್ದು, ಕೆಲವು ಸಚಿವರು ಆರೋಪಿಗಳ ರಕ್ಷಣೆಗೆ ಪ್ರಯತ್ನಿಸುತ್ತಿರುವ ಆರೋಪ ಕೇಳಿಬರುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ಕಳೆದ 10 ವರ್ಷಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಮಾದಕವಸ್ತು ಸೇವನೆ/ಮಾರಾಟದ ಎಷ್ಟು ಆರೋಪಿಗಳಿಗೆ ಶಿಕ್ಷೆಯಾಗಿದೆ? ಅವರ ಹೆಸರುಗಳೇನು? ಶಿಕ್ಷೆಯ ಪ್ರಮಾಣ ಎಷ್ಟು? ಮಾದಕ ವಸ್ತುಗಳು ಎಲ್ಲಿಂದ ಸರಬರಾಜು ಆಗುತ್ತಿವೆ? - ಈ ಎಲ್ಲಾ ವಿವರ ಕೇಳಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ.

ಮಾದಕ ವಸ್ತುಗಳ ದಂಧೆಯಲ್ಲಿ ಪೊಲೀಸ್ ಅಧಿಕಾರಿ/ಸಿಬ್ಬಂದಿ ಕೂಡಾ ಷಾಮೀಲಾಗಿರುವ ಆರೋಪಗಳಿವೆ. ಅವರ ಮೇಲೆ ಯಾವ ಕ್ರಮಕೈಗೊಳ್ಳಲಾಗಿದೆ? ಅವರಲ್ಲಿ ಎಷ್ಟು ಜನರನ್ನು ಬಂಧಿಸಲಾಗಿದೆ? ಎಷ್ಟು ಜನರು ಶಿಕ್ಷೆಗೊಳಗಾಗಿದ್ದಾರೆ? ಎನ್ ಡಿಪಿಎಸ್ ಕಾಯ್ದೆಯ ಪ್ರಕಾರ ಮಾದಕವಸ್ತುಗಳ ಸೇವನೆ/ಮಾರಾಟ ನಿಯಂತ್ರಣಕ್ಕಾಗಿ ಜಿಲ್ಲೆ, ತಾಲೂಕು ಮತ್ತು ರಾಜ್ಯ ಮಟ್ಟದಲ್ಲಿ ಸಮಿತಿಗಳನ್ನು ರಚಿಸಬೇಕಾಗುತ್ತದೆ. ಇಂತಹ ಎಷ್ಟು ಸಮಿತಿಗಳನ್ನು ರಚಿಸಲಾಗಿದೆ? ಈ ಸಮಿತಿಗಳ ಸಭೆಗಳು ಎಷ್ಟು ನಡೆದಿವೆ ಮತ್ತು ಏನು ಕ್ರಮಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಮಾದಕ ವಸ್ತುಗಳ ದುಶ್ಚಟಕ್ಕೆ ಸಿಕ್ಕಿರುವ ಮಕ್ಕಳ ತಂದೆ-ತಾಯಿಗಳಿಂದ ರಹಸ್ಯವಾಗಿ ಮಾಹಿತಿ ಪಡೆಯುವ ವ್ಯವಸ್ಥೆ ಇದೆಯೇ? ಇಂತಹ ಎಷ್ಟು ದೂರುಗಳನ್ನು ಸ್ವೀಕರಿಸಲಾಗಿದೆ? ಕೈಗೊಂಡ ಕ್ರಮಗಳೇನು? ರಾಜ್ಯದಲ್ಲಿ ಮಾದಕ ವಸ್ತು ವ್ಯಸನಕ್ಕೆ ಬಲಿಯಾದವರಲ್ಲಿ ಎಷ್ಟು ಜನರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ? ಎಷ್ಟು ಜನ ವ್ಯಸನದಿಂದ ಮುಕ್ತರಾಗಿದ್ದಾರೆ? ಎಷ್ಟು ಜನ ವ್ಯಸನಿಗಳಾಗಿದ್ದಾರೆ ಮತ್ತು ಎಷ್ಟು ಜನ ಸಾವಿಗೀಡಾಗಿದ್ದಾರೆ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com