ಪಾರ್ಕ್‌‌ ನೈತಿಕ ಪೊಲಿಸ್‌ಗಿರಿ‌: ದೂರು ದಾಖಲಿಸಿದ ಸಂಯುಕ್ತಾ, ಭೇಷರತ್ ಕ್ಷಮೆಯಾಚಿಸಿದ ಕವಿತಾ
ರಾಜ್ಯ

ಪಾರ್ಕ್‌‌ ನೈತಿಕ ಪೊಲಿಸ್‌ಗಿರಿ‌: ದೂರು ದಾಖಲಿಸಿದ ಸಂಯುಕ್ತಾ, ಭೇಷರತ್ ಕ್ಷಮೆಯಾಚಿಸಿದ ಕವಿತಾ

ಸ್ಪೋರ್ಟ್ಸ್‌ ವಸ್ತ್ರದಲ್ಲಿ ವ್ಯಾಯಾಮ ಮಾಡುತ್ತಿದ್ದ ಸ್ಯಾಂಡಲ್‌ವುಡ್‌ ನಟಿ ಸಂಯುಕ್ತಾ ಹೆಗ್ಡೆ ಮೇಲೆ ಜನರ ಗುಂಪು ನೈತಿಕ ಪೊಲಿಸ್‌ ಗಿರಿ ನಡೆಸಿದೆ. ನಟಿ ಹಾಗೂ ಆಕೆಯ ಗೆಳತಿಯರನ್ನು ಅಕ್ರಮವಾಗಿ ಪಾರ್ಕ್‌ನಲ್ಲಿ ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಕಾಂಗ್ರೆಸ್‌ ವಕ್ತಾರೆ ಕವಿತಾ ರೆಡ್ಡಿಯೂ ನೈತಿಕ ಪೊಲೀಸ್‌ ಗಿರಿಯವರೊಂದಿಗೆ ಸೇರಿ, ನಟಿ ಹಾಗೂ ಗೆಳತಿಯರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ಕೃಷ್ಣಮಣಿ

ʻಕಿರಿಕ್‌ʼ ಪಾರ್ಟಿ ಚಿತ್ರದ ಸೆಕೆಂಡ್‌ ಹಾಫ್‌ ನ ನಾಯಕಿ ನಟಿ ಸಂಯುಕ್ತ ಹೆಗ್ಡೆ ಇಡೀ ಚಿತ್ರದಲ್ಲಿ ಕಿರಿಕ್‌ ಮಾಡಿಕೊಂಡೇ ಜನರಿಗೆ ಸಾಕಷ್ಟು ಹತ್ತಿರ ಆಗುತ್ತಾರೆ. ಆದರೆ ನಿಜ ಜೀವನದಲ್ಲೂ ಕಿರಿಕ್‌ ಪಾರ್ಟಿ ನಟಿ ಸಮಸ್ಯೆ ಮಾಡಿಕೊಂಡಿದ್ದಾರೆ. ಆ ನಟಿ ಮಾಡಿದ್ದು ಸರಿ ಎನ್ನುವ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಬೆಂಬಲವೂ ವ್ಯಕ್ತವಾಗಿದೆ. ಈ ಬಗ್ಗೆ ಈಗಾಗಲೇ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಫ್‌ ಐ ಆರ್‌ ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ನಡೆಸಿ, ತಪ್ಪು ಯಾರದ್ದು, ತಪ್ಪು ಮಾಡಲು ಕಾರಣ ಏನು..? ಎನ್ನುವ ಬಗ್ಗೆ ಚಾರ್ಜ್‌ ಶೀಟ್‌ ಸಿದ್ಧ ಮಾಡಲಿದ್ದಾರೆ. ಪ್ರತಿಯೊಂದು ನಡೆಯನ್ನು ಸಾಮಾಜಿಕ ಜಾಲ ತಾಣಗಳಾದ ಫೇಸ್‌ ಬುಕ್‌, ಟ್ವಿಟರ್‌, ಇನ್‌ ಸ್ಟಾ ಗ್ರಾಂನಲ್ಲಿ ನಟಿ ಸಂಯುಕ್ತ ಹೆಗ್ಡೆ ಹಂಚಿಕೊಳ್ಳುತ್ತಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸರಳ ಘಟನೆ.. ದೊಡ್ಡ ವಿವಾದ..

ಬೆಂಗಳೂರಿನ ಆಗರ ಉದ್ಯಾನವನದಲ್ಲಿ ಶುಕ್ರವಾರ (04/09/2020) ನಡೆದಿರುವ ಘಟನೆ ನಡೆದಿದ್ದು, ನಟಿ ಸಂಯುಕ್ತ ಹೆಗಡೆ ಸ್ಪೋರ್ಟ್ಸ್‌ ಬ್ರಾ ಹಾಕಿಕೊಂಡು ಹುಲಾ ಹೂಪ್ ವ್ಯಾಯಾಮ ಮಾಡುತ್ತಿದ್ದರು. ಇದು ಅಲ್ಲಿ ಮುಂಜಾನೆ ವಾಕಿಂಗ್‌ ಮಾಡುತ್ತಿದ್ದ ಜನರ ಕಣ್ಣು ಕೆಂಪಾಗಿಸಿದೆ. ಸಂಯುಕ್ತ ಹೆಗ್ಡೆ ಹಾಕಿಕೊಂಡಿದ್ದ ವಸ್ತ್ರದ ಬಗ್ಗೆ ಮಹಿಳೆಯರು ಸೇರಿದಂತೆ ಸ್ಥಳದಲ್ಲಿ ಬಹುತೇಕ ಜನರು ಆಕ್ಷೇಪ ಹೊರ ಹಾಕಿದ್ದಾರೆ. ಆ ಬಳಿಕ ಅಸಭ್ಯ ಧಿರಿಸು ಧರಿಸಿ ಇಲ್ಲಿರುವ ವಾತಾವರಣವನ್ನು ಹಾಳು ಮಾಡಬೇಡ ಎಂದು ತಗಾದೆ ತೆಗೆದು ನಟಿ ಹಾಗೂ ಆಕೆಯ ಸ್ನೇಹಿತೆಯನ್ನು ವಿಡಿಯೋ ರೆಕಾರ್ಡ್‌ ಮಾಡಲು ಮುಂದಾಗಿದ್ದಾರೆ. ಇದನ್ನು ವಿರೋಧಿಸಿದ ನಟಿ ಸಂಯುಕ್ತ ಹೆಗ್ಡೆ, ಇನ್‌ಸ್ಟಾಗ್ರಾಂ ಮೂಲಕ ಲೈವ್‌ ವಿಡಿಯೋ ಕಾಸ್ಟ್‌ ಮಾಡಿದ್ದಾರೆ. ಈ ಪ್ರಕರಣ ಪಾರ್ಕ್‌ ನಲ್ಲೇ ಮುಗಿದು ಹೋಗಬಹುದಾಗಿದ್ದರೂ ಸೋಷಿಯಲ್‌ ಮಿಡಿಯಾ ಬೆಂಬಲದಿಂದ ಭಾರೀ ವಿವಾದ ಮೈಮೇಲೆ ಎಳೆದುಕೊಂಡಂತಾಗಿದೆ.

ಕವಿತಾ ರೆಡ್ಡಿ ಮಾಡಿದ ತಪ್ಪು

ವಾಕಿಂಗ್‌ ಗೆ ಬಂದ್ದಿದ್ದ ಜನರು ನಟಿ ಸಂಯುಕ್ತ ಹೆಗಡೆ ಧಿರಿಸು ಕಂಡು ಮುಜುಗರಕ್ಕೆ ಒಳಗಾಗಿದ್ದಾರೆ. ಇದನ್ನು ವಿರೋಧಿಸಿದ್ದಾರೆ ಕೂಡ. ಪೊಲೀಸರಿಗೆ ಕರೆ ಮಾಡಿ ನಟಿ ಸಂಯುಕ್ತ ಹೆಗಡೆ ಉದ್ಯಾನವನದ ವಾತಾವರಣ ಕೆಡಿಸುತ್ತಿದ್ದಾರೆ ಎಂದು ದೂರಿದ್ದಾರೆ. ಗೇಟ್‌ ಬಂದ್‌ ಮಾಡಿ ಪೊಲೀಸ್‌ ಸಿಬ್ಬಂದಿ ಬರುವ ತನಕ ಕೂಡಿ ಹಾಕಿದ್ದಾರೆ. ಆದರೆ ಅಷ್ಟಕ್ಕೆ ಸುಮ್ಮನಿದ್ದಿದ್ದರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಸ್ಥಳದಲ್ಲಿ ಮಾತಿಗೆ ಮಾತು ಬೆಳೆದಿದ್ದರಿಂದ ಗಲಾಟೆಯಾಗಿದೆ. ಆ ಬಳಿಕ ಕೈ ಕೂಡ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ನಟಿ ಸಂಯುಕ್ತ ಹೆಗ್ಡೆ ಬರೆದುಕೊಂಡಿದ್ದಾರೆ. ನೈತಿಕ ಪೊಲೀಸ್‌ ಗಿರಿ ನಿಲ್ಲಬೇಕು. ದಿಸ್‌ ಈಸ್‌ ರಾಂಗ್‌ #thisisWRONG ಎಂದು ಹ್ಯಾಷ್ ಟ್ಯಾಗ್‌ ಹಾಕಿ ಟ್ವೀಟ್‌ ಮಾಡಿ ಟ್ರೆಂಟ್‌ ಮಾಡುತ್ತಿದ್ದಾರೆ.

ನಟಿ ಸಂಯುಕ್ತ ಹೆಗ್ಡೆ ಬೆಂಬಲಕ್ಕೆ ನಿಂತ ಚಿತ್ರೋದ್ಯಮ..!

ಚಿತ್ರರಂಗದ ನಟ, ನಟಿಯರು ಎಂದರೆ ಜನರಿಗೆ ಸಾಕಷ್ಟು ಕುತೂಹಲ. ಅವರು ಮಾಡುವುದನ್ನು ಅಚ್ಚರಿಯ ಅಕ್ಷಿಗಳಿಂದ ವೀಕ್ಷಣೆ ಮಾಡುತ್ತಾರೆ. ಅದೇ ರೀತಿ ನಟಿ ಸಂಯುಕ್ತ ಹೆಗ್ಡೆ ಸ್ಪೋರ್ಟ್ಸ್‌ ಬ್ರಾ ಹಾಕಿಕೊಂಡು ವ್ಯಾಯಾಮ ಮಾಡುತ್ತಿದ್ದುದ್ದನ್ನು ಒಂದಿಷ್ಟು ಮಂದಿ ನೋಡಿಕೊಂಡು ನಿಂತಿದ್ದರು. ಇದನ್ನು ಕಂಡು ಸಹಿಸಿಕೊಳ್ಳಲಾಗದ ಸಂಪ್ರದಾಯಸ್ಥರು ವಿರೋಧಿಸಿದ್ದಾರೆ. ಆದರೆ ನಟಿ ಸಂಯುಕ್ತ ಹೆಗ್ಡೆ ಬೆಂಬಲಕ್ಕೆ ಚಿತ್ರದ್ಯೋಮದ ಕಲಾವಿದರು ಬಂದಿದ್ದಾರೆ. ನಿರ್ದೇಶಕ ಸುನಿಲ್‌ @SimpleSuni ಟ್ವೀಟ್‌ ಮಾಡಿದ್ದು, ನಟಿ ಸಂಯುಕ್ತ ಹೆಗಡೆಯವರ ತರಲೆ, ಕೀಟಲೆ ಕೆಲವೊಮ್ಮೆ ಅತಿ ಎನಿಸಬಹುದು. ಆದರೆ ಈ ವಿಷಯದಲ್ಲಿ ನ್ಯಾಯ ಸಿಗಬೇಕಾಗಿರುವುದು ಸಂಯುಕ್ತ ಅವರಿಗೆ ಎಂದಿದ್ದಾರೆ.

ಇದು ಅತ್ಯಾಚಾರಕ್ಕಿಂತಲೂ ಅಸಹ್ಯವಾಗಿದೆ. ಈ ಮಹಿಳೆಯನ್ನು ಜೈಲಿಗೆ ಹಾಕಬೇಕು ಎಂದಿದ್ದಾರೆ ನಟಿ ಪಾರುಲ್‌ ಯಾದವ್‌. ಇನ್ನೋರ್ವ ಯುವ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಟ್ವೀಟ್‌ ಮಾಡಿದ್ದು, ಇಂದು ಸಂಯುಕ್ತ ಹೆಗೆಡೆ ನಾಳೆ ನಮ್ಮ ಅಕ್ಕ ಪಕ್ಕದವರಿಗೆ, ನಮ್ಮ ಮನೆಯವರಿಗೆ ಇಂತದ್ದು ನಡೆಯಬಹುದು ಈ ಮಹಿಳೆಗೆ ಶಿಕ್ಷೆ ಆಗಬೇಕು!! ಬೆಂಗಳೂರಿನ ಪೊಲೀಸರಿಗೆ ಇದೊಂದು ಎಚ್ಚರಿಕೆ ಗಂಟೆ ಅಂದಿದ್ದಾರೆ. ನಟಿ ಮೇಘನಾ ಗಾಂವ್ಕರ್‌ ಕೂಡ ಇದೊಂದು ಅಸಹ್ಯ ನಾಚಿಕೆ ತರಿಸುವ ಘಟನೆ. ಕಿರುಕುಳ, ಬೆದರಿಕೆ ಹಾಕುವುದು ಸರಿಯಲ್ಲ. ಸ್ಪೋರ್ಸ್ಟ್‌ ಧಿರಿಸುಗಳನ್ನು ಮಹಿಳೆಯರಿಗಾಗಿಯೇ ಅವರ ದೇಹಕ್ಕೆ ಅನುಗುಣವಾಗಿ ಮಾಡಿದ್ದಾರೆ. ಅದನ್ನು ಟೀಕಿಸುವುದು ಸರಿಯಲ್ಲ ಎನ್ನುವ ಮೂಲಕ ನಟಿ ಸಂಯುಕ್ತ ಹೆಗ್ಡೆ ಪರವಾಗಿ ಬ್ಯಾಟ್‌ ಬೀಸಿದ್ದಾರೆ.

ಭೇಷರತ್‌ ಕ್ಷಮೆಯಾಚಿಸಿದ ಕವಿತಾ ರೆಡ್ಡಿ

ಘಟನೆ ನಡೆದ ಬಳಿಕ ಕವಿತಾರೆಡ್ಡಿಯ ರೌಡಿತನ ನೋಡಿ ಜನರು ಕವಿತಾ ರೆಡ್ಡಿಯ ಮೇಲೆ ಆಕ್ರೋಶಗೊಂಡಿದ್ದಾರೆ. ನೈತಿಕ ಪೊಲೀಸ್‌ಗಿರಿ ಮಾಡುವವರೊಂದಿಗೆ ಸೇರಿ ತಾನೂ ನೈತಿಕ ಪೊಲೀಸ್‌ ಗಿರಿ ತೋರಿಸಿದ್ದು ಅಕ್ಷಮ್ಯ ಎಂದಿದ್ದಾರೆ. ಇದಾದ ಬೆನ್ನಿಗೆ ಸಾಮಾಜಿಕ ಜಾಲತಾಣದ ಮೂಲಕ ಕವಿತಾ ರೆಡ್ಡಿ, ಸಂಯುಕ್ತಾ ಹೆಗ್ಡೆ ಹಾಗೂ ಆಕೆಯ ಗೆಳತಿಯರಲ್ಲಿ ಭೇಷರತ್‌ ಕ್ಷಮೆ ಯಾಚಿಸಿದ್ದಾರೆ.

ನಾನು ಯಾವತ್ತೂ ನೈತಿಕ ಪೊಲೀಸ್‌ ಗಿರಿಯನ್ನು ವಿರೋಧಿಸಿದ್ದೇನೆ, ಘಟನಾ ಸ್ಥಳದಲ್ಲಿ ನಡೆದ ವಾಗ್ವಾದವು ನನ್ನನ್ನು ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುವಂತೆ ಮಾಡಿತು, ಅದು ತಪ್ಪಾಗಿದೆ. ಜವಾಬ್ದಾರಿಯುತ ನಾಗರಿಕಳಾಗಿ ಹಾಗು ಪ್ರಗತಿಪರ ಮಹಿಳೆಯಾಗಿ ಪ್ರಾಮಾಣಿಕವಾಗಿ ಸಂಯುಕ್ತ ಹೆಗ್ಡೆ ಹಾಗೂ ಆಕೆಯ ಗೆಳತಿಯರಲ್ಲಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com