ಕೈಮಗ್ಗದ ಹೆಗ್ಗಳಿಕೆ ಹೆಗ್ಗೋಡಿನ ‘ಚರಕ’ ಗತಿ ತಪ್ಪಲು ಅಸಲೀ ಕಾರಣವೇನು?
ರಾಜ್ಯ

ಕೈಮಗ್ಗದ ಹೆಗ್ಗಳಿಕೆ ಹೆಗ್ಗೋಡಿನ ‘ಚರಕ’ ಗತಿ ತಪ್ಪಲು ಅಸಲೀ ಕಾರಣವೇನು?

ಲಾಕ್‌ಡೌನ್ ಸಂಕಷ್ಟವೂ ಸೇರಿದಂತೆ ವಿವಿಧ ಕಾರಣಕ್ಕೆ ಹೆಗ್ಗೋಡಿನ ‘ಚರಕ ಮಹಿಳಾ ಸಹಕಾರ ಸಂಘ’ ದಿವಾಳಿಯಾಗಿದೆ ಎಂದು ರಂಗಕರ್ಮಿ ಪ್ರಸನ್ನ ಘೋಷಿಸಿದ್ದಾರೆ. ಅದನ್ನು ಮತ್ತೆ ಕಟ್ಟಲು ಸತ್ಯಾಗ್ರಹ, ಶ್ರಮದಾನದಂತಹ ಪ್ರಯತ್ನಗಳನ್ನೂ ಅವರು ಆರಂಭಿಸಿದ್ದಾರೆ. ಚರಕದ ಬಿಕ್ಕಟ್ಟಿಗೆ ಬಹಿರಂಗ ಕಾರಣಗಳಂತೆಯೇ ಅದರ ಅಂತರಂಗವೂ ಕಾರಣ ಎಂಬ ಮಾತೂ ಕೇಳಿಬರುತ್ತಿವೆ. ಆ ಹಿನ್ನೆಲೆಯಲ್ಲಿ ವಾಸ್ತವಗಳ ಮೇಲೆ ಬೆಳೆಕು ಚೆಲ್ಲುವ 'ಗ್ರೌಂಡ್ ರಿಪೋರ್ಟ್' ಇಲ್ಲಿದೆ

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಚರಕ ಸಂಸ್ಥೆ ಸುದ್ದಿಯಲ್ಲಿದೆ. ಕಳೆದ ಶತಮಾನದ 90ರ ದಶಕದ ಆರಂಭದಲ್ಲಿ ಮಲೆನಾಡಿನ ಕುಗ್ರಾಮಗಳ ಮಹಿಳೆಯರಿಗೆ ಸ್ವಾಭಿಮಾನದ ದುಡಿಮೆ ಮತ್ತು ಸ್ವಾವಲಂಬನೆ ಅವಕಾಶಗಳನ್ನು ಸೃಷ್ಟಿಸುವ ಮೂಲಕ ದೇಶದ ಗಮನ ಸೆಳೆದ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ, ಈಗ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ದಿವಾಳಿಯಾಗಿರುವುದಾಗಿ ಸ್ವಯಂ ಘೋಷಿಸಿಕೊಂಡಿದೆ.

ಕಳೆದ ವಾರ ಚರಕ ಸಂಸ್ಥೆಯ ರೂವಾರಿ ಹಾಗೂ ರಂಗಕರ್ಮಿ ಪ್ರಸನ್ನ ಅವರೇ ಸಂಸ್ಥೆಯ ದಿವಾಳಿ ಸ್ಥಿತಿಯನ್ನು ಘೋಷಿಸುವ ಮೂಲಕ, ಸಂಸ್ಥೆಯ ಸುಮಾರು ಎರಡೂವರೆ ದಶಕದ ಯಶಸ್ವಿ ಮತ್ತು ಲಾಭದಾಯಕ ಚಟುವಟಿಕೆ ಸದ್ಯಕ್ಕೆ ಸ್ಥಗಿತವಾಗಿದೆ ಎಂದಿದ್ದಾರೆ. ಕೈಮಗ್ಗ ಬಟ್ಟೆ ತಯಾರಿಕೆಯ ಬಹುತೇಕ ಎಲ್ಲಾ ಚಟುವಟಿಕೆಗಳನ್ನೂ ನಿಲ್ಲಿಸಿ, ಮಹಿಳೆಯರಿಗೆ ಕೆಲಸ ನೀಡುವ ಉದ್ದೇಶದಿಂದ ಕೆರೆ ಹೂಳೆತ್ತುವುದು, ಮಣ್ಣಿನ ಕೈಕೆಲಸ ಮುಂತಾದ ಪರ್ಯಾಯ ಚಟುವಟಿಕೆಗಳನ್ನು ಆರಂಭಿಸಿದ್ದೇವೆ ಎನ್ನುವ ಪ್ರಸನ್ನ ಅವರ ಹೇಳಿಕೆ ಸಹಜವಾಗೇ ದೊಡ್ಡ ಸುದ್ದಿಯಾಗಿದೆ. ನೈಸರ್ಗಿಕ ಬಣ್ಣ, ಕೈಮಗ್ಗದ ವಸ್ತ್ರ, ಪಕ್ಕಾ ಗ್ರಾಮೀಣ ಸಾಂಪ್ರದಾಯಿಕ ವಿನ್ಯಾಸದ ಚರಕದ ಯಶಸ್ವಿ ಸಹಕಾರಿ ಮಾದರಿ ಮತ್ತು ಮಹಿಳಾ ಸಬಲೀಕರಣದ ಆಶಯದ ಕಾರಣಕ್ಕೆ ಸಂಸ್ಥೆಯನ್ನು ಬೆಂಬಲಿಸುತ್ತಿದ್ದ, ದೇಸಿ ಜೀವನ ಪದ್ಧತಿಯ ಒಂದು ಮಾದರಿ ಎಂದು ಅಭಿಮಾನದಿಂದ ಕಾಣುತ್ತಿದ್ದ ಹಲವರು ಚರಕದ ಬಿಕ್ಕಟ್ಟಿಗೆ ಮರುಗಿದ್ದಾರೆ, ಸ್ಪಂದಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನಾಡಿನ ಹೆಮ್ಮೆಯ ಸಂಸ್ಥೆಯೊಂದು ಹೀಗೆ ದಿಢೀರನೇ ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ ‘ಪ್ರತಿಧ್ವನಿ’, ಖುದ್ದು ಹೆಗ್ಗೋಡಿಗೆ ಹೋಗಿ, ಚರಕದ ಪ್ರಮುಖರು ಮತ್ತು ಆ ಸಂಸ್ಥೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ದುಡಿದಿರುವ ಹಲವರನ್ನು ಮಾತನಾಡಿಸಿ ನಿಜಕ್ಕೂ ಬಿಕ್ಕಟ್ಟಿನ ಸ್ವರೂಪವೇನು? ಸಂಕಷ್ಟದ ಆಯಾಮಗಳೇನು? ಚರಕದ ಕಾರ್ಯನಿರ್ವಹಣೆ ಮತ್ತು ವ್ಯವಸ್ಥೆ ಹೇಗೆ ನಡೆಯುತ್ತಿದೆ ಎಂಬ ಕುರಿತ ಸಂದರ್ಶನ ಆಧಾರಿತ ‘ಗ್ರೌಂಡ್ ರಿಪೋರ್ಟ್’ ನಿಮ್ಮ ಮುಂದಿಡುತ್ತಿದೆ.

ಚರಕದ ಸದ್ಯದ ಬಿಕ್ಕಟ್ಟಿನ ಕುರಿತು ‘ಪ್ರತಿಧ್ವನಿ’ಯೊಂದಿಗೆ ಮಾತನಾಡಿದ ಅದರ ರೂವಾರಿ ಮತ್ತು ಚರಕದ ಉತ್ಪನ್ನಗಳ ಮಾರುಕಟ್ಟೆ ಮಾಡುವ ದೇಸಿ ಸಂಸ್ಥೆಯ ಟ್ರಸ್ಟಿನ ಸ್ಥಾಪಕರೂ ಆದ ರಂಗಕರ್ಮಿ ಪ್ರಸನ್ನ ಅವರು, “ನೋಟು ರದ್ದತಿ, ಜಿಎಸ್ ಟಿ ಜಾರಿಯಂತಹ ಕ್ರಮಗಳು ಕೈಮಗ್ಗ ಉದ್ಯಮಕ್ಕೆ ಭಾರೀ ಪೆಟ್ಟು ಕೊಟ್ಟಿದ್ದವು. ಆಯಾ ಸಂದರ್ಭದಲ್ಲಿ ಹಲವು ಬಾರಿ ಪ್ರತಿಭಟನೆ, ಧರಣಿ, ಉಪವಾಸ ಸತ್ಯಾಗ್ರಹಗಳ ಮೂಲಕ ಸರ್ಕಾರದ ನೀತಿಗಳ ಲೋಪಗಳಿಂದಾಗಿ ಬಡ ಮಹಿಳೆಯರ ಬದುಕು ಮೂರಾಬಟ್ಟೆಯಾಗುತ್ತಿರುವ ಬಗ್ಗೆ ಗಮನ ಸೆಳೆಯಲಾಗಿತ್ತು. ಆ ಬಳಿಕ ಗಾಯದ ಮೇಲೆ ಬರೆ ಎಳೆದಂತೆ ಆರ್ಥಿಕ ಕುಸಿತದ ಪೆಟ್ಟು ಬಿತ್ತು. ಏಟಿನ ಮೇಲೆ ಏಟು ತಿಂದು ಹೈರಾಣಾದ ಹೊತ್ತಿನಲ್ಲಿ ಕರೋನಾ ಸಂಕಷ್ಟ ಎದುರಾಯಿತು” ಎಂದರು.

“ಒಟ್ಟಾರೆ ಈ ಎಲ್ಲದರ ಪರಿಣಾಮವಾಗಿ ಇಂದು ಸುಮಾರು 87 ಸಾವಿರ ಮೀಟರ್ ಬಟ್ಟೆ ಮತ್ತು ಸುಮಾರು 1.25 ಕೋಟಿ ಮೊತ್ತದ ಸಿದ್ಧ ಉಡುಪು ಸೇರಿ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಸರಕು ದಾಸ್ತಾನು ಬಿದ್ದಿದೆ. ಹೀಗೆ ಒಂದು ಕಡೆ ಗ್ರಾಮೀಣ ಮಹಿಳೆಯರ ಶ್ರಮದ ದುಡಿಮೆ ರಾಶಿ ಬಿದ್ದಿದ್ದರೆ, ಮತ್ತೊಂದು ಕಡೆ ಕಳೆದ 18 ವರ್ಷಗಳಿಂದ ವಿವಿಧ ರಾಜ್ಯ ಸರ್ಕಾರಗಳು ಹತ್ತು ಹಲವು ಯೋಜನೆಯಡಿ ಸಂಸ್ಥೆಗೆ ಮಂಜೂರು ಮಾಡಿರುವ ಸುಮಾರು 2 ಕೋಟಿ ರೂ. ಅನುದಾನದ ಪೈಕಿ ಒಂದೇ ಒಂದು ಪೈಸೆಯೂ ಸಂಸ್ಥೆಗೆ ತಲುಪಿಲ್ಲ. ಇದಕ್ಕೆ ಅಧಿಕಾರಶಾಹಿಯ ಅಡ್ಡಗಾಲು ಕಾರಣ. ಈ ನಡುವೆಯೂ ಸಂಸ್ಥೆಯು ತನ್ನ ಎಲ್ಲಾ 800 ಮಂದಿಗೂ ಲಾಕ್ ಡೌನ್ ಅವಧಿಯಲ್ಲಿ ಕೂಡ ಪೂರ್ಣ ವೇತನ ನೀಡಿದೆ. ಆದರೆ, ಈಗ ಒಂದು ಕಡೆ ಉತ್ಪನ್ನ ಮಾರಾಟವಾಗದೇ ಉಳಿದಿರುವುದು, ಮತ್ತೊಂದು ಕಡೆ ಸರ್ಕಾರದಿಂದ ಬರಬೇಕಾದ ಹಣ ಬರದೇ ಇರುವ ಕಾರಣ ದಿವಾಳಿಯಾಗಿದೆ” ಎಂದು ಪ್ರಸನ್ನ ವಿಸ್ತೃತವಾಗಿ ಬಿಕ್ಕಟ್ಟನ್ನು ವಿವರಿಸಿದರು.

ಚರಕ ಮತ್ತು ದೇಸಿ ಸಂಬಂಧದ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಚರಕದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಮೂಲಕ ಅದಕ್ಕೆ ಬೆಂಬಲವಾಗಿ ನಿಲ್ಲುವ ಉದ್ದೇಶದಿಂದ ದೇಸಿ ಚಾರಿಟಬಲ್ ಟ್ರಸ್ಟ್ ಹುಟ್ಟುಹಾಕಲಾಗಿದೆ. ಯಾವುದೇ ಲಾಭದ ಉದ್ದೇಶವಿಲ್ಲದ ದೇಸಿ ಟ್ರಸ್ಟ್, ಬೆಂಗಳೂರು ಸೇರಿದಂತೆ ವಿವಿಧೆಡೆ ಇರುವ ತನ್ನ ಮಳಿಗೆಗಳ ಮೂಲಕ ಕೈಮಗ್ಗದ ವಸ್ತ್ರಗಳನ್ನು ಮಾರಾಟಮಾಡುತ್ತದೆ. ಚರಕ ಕೈಮಗ್ಗದ ವಸ್ತ್ರಗಳನ್ನು ತಯಾರು ಮಾಡುತ್ತದೆ” ಎಂದರು.

ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು
ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು

‘ಚರಕದ ಈಗಿನ ಸಂಕಷ್ಟಕ್ಕೆ ಅದು ತನ್ನ ಉತ್ಪನ್ನಗಳನ್ನು ಕಾಲಕಾಲಕ್ಕೆ, ಗ್ರಾಹಕರ ಅಭಿರುಚಿಗೆ ತಕ್ಕಂತೆ ಉನ್ನತೀಕರಿಸದೇ ಇರುವುದು, ಗ್ರಾಹಕರ ನಿರೀಕ್ಷೆಗಳಿಗೆ ತಕ್ಕಂತೆ ವಿನ್ಯಾಸ, ಗುಣಮಟ್ಟ ಮತ್ತು ದರದಲ್ಲಿ ವಿವಿಧ ಶ್ರೇಣಿಗಳಲ್ಲಿ ಉತ್ಪನ್ನಗಳನ್ನು ನೀಡದೇ ಇರುವ ಸಾಂಪ್ರದಾಯಿಕ ಪ್ರವೃತ್ತಿಯೂ ಒಂದು ಕಾರಣ. ಫ್ಯಾಬ್ ಇಂಡಿಯಾದಂತಹ ಸಂಸ್ಥೆ ಇದೇ ಕೈಮಗ್ಗ-ಖಾದಿ ವಸ್ತ್ರವನ್ನೇ ಆಧುನಿಕ ಯುವ ಸಮುದಾಯದ ಫ್ಯಾಷನ್ ಆಗಿ ಪರಿವರ್ತಿಸಿದೆ. ಜೊತೆಗೆ ದೊಡ್ಡ ಮಟ್ಟದ ಲಾಭದಲ್ಲಿಯೂ ಇದೆ. ಆದರೆ, ಅದೇ ಉತ್ಪನ್ನ ತಯಾರಿಸುವ ಚರಕ ವ್ಯವಹಾರಿಕವಾಗಿ ಯಶಸ್ಸು ಕಂಡಿಲ್ಲ’ ಎಂಬ ಮಾತೂ ಕೇಳಿಬರುತ್ತಿದೆ. ಆ ಬಗ್ಗೆ ಕೇಳಿದಾಗ, “ನಮಗೆ ನಮ್ಮದೇ ಆದ ಸ್ಟ್ಯಾಂಡರ್ಡ್ ಮಾನದಂಡಗಳಿವೆ. ಅವುಗಳಿಗೆ ತಕ್ಕಂತೆ ಉತ್ಪಾದನೆ ನಡೆಯುತ್ತಿದೆ. ಹಾಗೆ ನೋಡಿದರೆ, ನಾವು ಇಷ್ಟೂ ವರ್ಷಗಳ ಕಾಲ ಫ್ಯಾಬ್ ಇಂಡಿಯಾಕ್ಕೆ ಹೋಲಿಸಿದರೆ, ಅವರಿಗಿಂತ ಗುಣಮಟ್ಟದ ವಸ್ತ್ರಗಳನ್ನು ತಯಾರಿಸುತ್ತಿದ್ದೇವೆ. ಲಾಭದಲ್ಲೇ ಇದ್ದೇವೆ. ದಿನವೊಂದಕ್ಕೆ ಒಂದು ಲಕ್ಷ ರೂ. ವಹಿವಾಟು ಕೂಡ ನಡೆಸಿದ್ದೇವೆ. ಒಟ್ಟಾರೆ ಮಾರಾಟದಲ್ಲಿ ಫ್ಯಾಬ್ ಇಂಡಿಯಾಕ್ಕಿಂತ ಮುಂದಿದ್ದೇವೆ. ಪ್ರತಿವರ್ಷವೂ ನಮ್ಮ ನೌಕರರಿಗೆ ಬೋನಸ್ ನೀಡುತ್ತಿದ್ದೇವೆ. ಇನ್ನು ಫ್ಯಾಷನ್ ವಿಷಯದಲ್ಲಿ ಹೇಳುವುದಾದರೆ; ಫ್ಯಾಷನ್ ಎಂಬುದು ಮೂರು ತಿಂಗಳಿಗೊಮ್ಮೆ ಬದಲಾಗುವ ಸಂಗತಿ. ಗ್ರಾಮೀಣ ಮಹಿಳೆಯರ ಉದ್ಯಮವಾಗಿ ನಾವು ಮೂರು ತಿಂಗಳಿಗೊಮ್ಮೆ ವಿನ್ಯಾಸ ಬದಲಾಯಿಸುವುದು, ಹೊಸ ಫ್ಯಾಷನ್ ಗೆ ತಕ್ಕಂತೆ ಉತ್ಪಾದನೆ ಮಾಡುವುದು ಸಾಧ್ಯವಿಲ್ಲ” ಎಂದು ಚರಕದ ಶಕ್ತಿ ಮತ್ತು ಮಿತಿಗಳನ್ನು ವಿವರಿಸಿದರು.

ಜೊತೆಗೆ, “ಚರಕದ ಈ ಬಿಕ್ಕಟ್ಟು ತಾತ್ಕಾಲಿಕ” ಎಂದ ಅವರು, “ಈಗಾಗಲೇ ಹಲವು ದೊಡ್ಡ ದೊಡ್ಡ ಸಂಸ್ಥೆ, ಕಂಪನಿಗಳು, ವಿವಿಧ ಸಾಮಾಜಿಕ ಕಾಳಜಿಯ ವ್ಯಕ್ತಿಗಳು ಚರಕದ ನೆರವಿಗೆ ಮುಂದೆ ಬಂದಿದ್ದಾರೆ. ಆದರೆ ಯಾರಿಂದಲೂ ಸುಮ್ಮನೇ ದೇಣಿಗೆ ಪಡೆಯಬಾರದು ಎಂಬುದು ನಮ್ಮ ನಿಲುವು. ಹಾಗಾಗಿ ಹಾಗೆ ನೆರವಿನ ಹಸ್ತ ಚಾಚುವರಿಗೆ ನಮ್ಮ ವಸ್ತ್ರಗಳನ್ನು ಖರೀದಿಸಲು, ಅಥವಾ ಮುಂದೆ ಬೇಕಾದಾಗ ಖರೀದಿಸಲು ಕೂಪನ್ ಕೊಳ್ಳಲು ಕೇಳಿಕೊಂಡಿದ್ದೇವೆ. ಜೊತೆಗೆ ಮಠ ಮಾನ್ಯಗಳಿಗೆ ಬೇಕಾದ ಪವಿತ್ರವಸ್ತ್ರ ಸರಬರಾಜು ಮಾಡಲು ಸಿಎಂ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದು, ಸುಮಾರು ಒಂದು ಕೋಟಿ ರೂ. ಸರ್ಕಾರಿ- ಖಾಸಗಿ ಸಹಭಾಗಿತ್ವದ ಯೋಜನೆಗೆ ಅವರು ಹಸಿರು ನಿಶಾನೆ ತೋರಿದ್ದಾರೆ. ಹಾಗಾಗಿ ಆದಷ್ಟು ಶೀಘ್ರವೇ ಈ ಬಿಕ್ಕಟ್ಟಿನಿಂದ ಹೊರಬರುತ್ತೇವೆ. ಈ ನಡುವೆ, ಸದ್ಯಕ್ಕೆ ಕೈಮಗ್ಗ ವಸ್ತ್ರ ಜನಪ್ರಿಯಗೊಳಿಸಲು ಇದೇ ಸಂದರ್ಭವನ್ನು ಬಳಸಿಕೊಂಡು ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರೆ ನೀಡಿದ್ದೇವೆ. ಜಡ್ಡುಗಟ್ಟಿದ ವ್ಯವಸ್ಥೆಗೆ ಚುರುಕುಮುಟ್ಟಿಸಲು, ಜನರಲ್ಲಿ ಸ್ವಾವಲಂಬನೆ ಜಾಗೃತಿ ಮೂಡಿಸುವ ಮೂಲಕ ನೈಜ ಅರ್ಥದಲ್ಲಿ ಆತ್ಮನಿರ್ಭರರನ್ನಾಗಿ ಮಾಡುವುದೇ ಈ ಎರಡನೇ ಸ್ವಾತಂತ್ರ್ಯ ಸಂಗ್ರಾಮದ ಉದ್ದೇಶ” ಎಂದು ತಮ್ಮ ಸದ್ಯದ ಉದ್ದೇಶಗಳನ್ನು ವಿವರಿಸಿದರು.

ಇದಿಷ್ಟು, ಹೆಗ್ಗೋಡಿನ ಬಳಿಯ ಹೊನ್ನೆಸರದ ‘ಶ್ರಮಜೀವಿ ಆಶ್ರಮ’ದಲ್ಲಿ ಕುಳಿತು, ಪ್ರಸನ್ನ ಅವರು ಬಿಚ್ಚಿಟ್ಟ ಸಗಂತಿಗಳು.

ಆದರೆ, ಕಳೆದ ಇಪ್ಪತ್ತೈದು ವರ್ಷಗಳಿಂದ ಕೈಮಗ್ಗ, ನೇಯ್ಗೆ, ನೈಸರ್ಗಿಕ ಬಣ್ಣಗಾರಿಕೆ ಮುಂತಾದ ಹೆಚ್ಚುಗಾರಿಕೆ ಮತ್ತು ವೈಶಿಷ್ಟ್ಯದ ಕಾರಣಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಚರಕ ಸಂಸ್ಥೆಯ ಈಗಿನ ಬಿಕ್ಕಟ್ಟುಗಳಿಗೆ ಸರ್ಕಾರದ ನೀತಿಗಳು, ಆಡಳಿತಶಾಹಿಗಳಂತೆಯೇ ಅದರ ವ್ಯವಸ್ಥೆಯಲ್ಲೇ ಇರುವ ಲೋಪಗಳೂ ಕಾರಣ ಎಂಬುದು ಆ ಸಂಸ್ಥೆಗಾಗಿ ದುಡಿದವರು ಮತ್ತು ಹತ್ತಿರದಿಂದ ಬಲ್ಲವರ ಅಭಿಪ್ರಾಯ.

ಹೆಗ್ಗೋಡು ಎಂಬ ಪುಟ್ಟ ಊರಿಗೆ ಕೆ ವಿ ಸುಬ್ಬಣ್ಣ ಅವರ ಕನಸಿನ ‘ನೀನಾಸಂ’ ಹೇಗೆ ಹೆಸರು ತಂದುಕೊಟ್ಟಿದೆಯೋ, ಹಾಗೆಯೇ ಚರಕ ಕೂಡ ಹೆಗ್ಗಳಿಕೆ ತಂದುಕೊಟ್ಟಿದೆ ಎಂಬುದನ್ನು ಒಪ್ಪುತ್ತಲೇ, ಅಲ್ಲಿನ ಸ್ಥಳೀಯರು ಚರಕ ಮತ್ತು ಅದರ ಸಹಸಂಸ್ಥೆಗಳ ಕಾರ್ಯವಿಧಾನದ ಬಗ್ಗೆ ನಿಷ್ಪಕ್ಷಪಾತ ಅಭಿಪ್ರಾಯಗಳನ್ನೂ ಮಂಡಿಸುತ್ತಾರೆ. ಹಾಗೆ ‘ಪ್ರತಿಧ್ವನಿ’ಯೊಂದಿಗೆ ಮಾತನಾಡಿದವರು ಉಮಾಮಹೇಶ್ವರ ಹೆಗಡೆ. ಇಪ್ಪತ್ತೈದು ವರ್ಷಗಳ ಹಿಂದೆ, ಕವಿಕಾವ್ಯ ಟ್ರಸ್ಟಿನಲ್ಲಿ ತೊಡಗಿಸಿಕೊಂಡಿದ್ದ ಹೆಗಡೆ, ಬಳಿಕ ಕವಿಕಾವ್ಯದ ಮೂಲಕವೇ ಅಸ್ತಿತ್ವಕ್ಕೆ ಬಂದ ಚರಕವನ್ನೂ, ಹಲವು ವರ್ಷಗಳ ಕಾಲ ಸಂಪೂರ್ಣ ನಿರ್ವಹಣೆಯ ಹೊಣೆಹೊತ್ತು ಕಟ್ಟಿಬೆಳೆಸಿದವರು.

ಅವರ ಪ್ರಕಾರ, “ಚರಕದ ಈ ಹೊತ್ತಿನ ಬಿಕ್ಕಟ್ಟಿಗೆ ಬಹುತೇಕ ಅದರ ವ್ಯವಸ್ಥೆಯಲ್ಲಿನ ದೋಷಗಳೇ ಕಾರಣ. ಪ್ರಮುಖವಾಗಿ ಚರಕ ಒಂದು ಮಹಿಳಾ ಸಹಕಾರಿ ಸಂಸ್ಥೆಯಾಗಿ ತನ್ನ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವ ಸ್ವಾತಂತ್ರ್ಯವನ್ನು ‘ದೇಸಿ’ ಎಂಬ ಮತ್ತೊಂದು ಸಂಸ್ಥೆಗೆ ಬಿಟ್ಟುಕೊಟ್ಟಿರುವುದು, ಆ ಮೂಲಕ ವಸ್ತುವಿನ ಉತ್ಪಾದನಾ ವೆಚ್ಚದ ಮೇಲಿನ ಹೆಚ್ಚಿನ ಲಾಭಾಂಶವನ್ನು ಆ ಸಂಸ್ಥೆಗೆ ಬಿಟ್ಟುಕೊಟ್ಟಿರುವುದು, ಮಾರುಕಟ್ಟೆಯ ಬೇಡಿಕೆ ಮತ್ತು ಗ್ರಾಹಕರ ಅಭಿರುಚಿಗೆ ತಕ್ಕಂತೆ ಕಾಲಕಾಲಕ್ಕೆ ವಿನ್ಯಾಸ ಮತ್ತುಗುಣಮಟ್ಟದಲ್ಲಿ ಬದಲಾವಣೆ ಮಾಡಿಕೊಳ್ಳದೆ ಸಾಂಪ್ರದಾಯಿಕ ಉತ್ಪಾದನಾ ವಿಧಾನಕ್ಕೇ ಜೋತುಬಿದ್ದಿರುವುದು, ಸರ್ಕಾರದ ಅನುದಾನ, ತನ್ನ ವಹಿವಾಟು ಮತ್ತು ವ್ಯವಹಾರಗಳಿಗೆ ಸಂಬಂಧಿಸಿದಂತೆ ಪಾರದರ್ಶಕತೆ ಕಾಯ್ದುಕೊಳ್ಳದೇ, ಸಹಕಾರಿ ಕಾಯ್ದೆಯಡಿ ನಿಯಮಾನುಸಾರ ವ್ಯವಸ್ಥೆಯನ್ನು ಕಾಲಾನುಕ್ರಮದಲ್ಲಿ ಬಲಪಡಿಸದೇ ಇರುವುದೇ ಸಂಸ್ಥೆಯ ಇಂದಿನ ಸ್ಥಿತಿಗೆ ಕಾರಣ”.

“ಒಂದು ಗ್ರಾಮೀಣ ಉದ್ಯಮವಾಗಿ ಚರಕ, ನೇಯ್ಗೆ, ಬಣ್ಣಗಾರಿಕೆ, ವಿನ್ಯಾಸ, ಹೊಲಿಗೆ ಸೇರಿದಂತೆ ಒಂದು ವಸ್ತ್ರವನ್ನು ನೂಲಿನ ಹಂತದಿಂದ ಸಿದ್ಧ ಉಡುಪಿನ ಹಂತದವರೆಗೆ ತಯಾರಿಕೆಯ ಪ್ರತಿ ಹಂತದಲ್ಲೂ ದುಡಿಯುತ್ತದೆ. ಆದರೆ, ತಾನು ಹಾಗೆ ಬೆವರು ಸುರಿಸಿ ತಯಾರಿಸಿದ ವಸ್ತಕ್ಕೆ ಎಂಆರ್ ಪಿ ನಿಗದಿ ಮಾಡುವ ಅಧಿಕಾರವಾಗಲೀ, ಆ ವಸ್ತ್ರಕ್ಕೆ ತನ್ನದೇ ಟ್ಯಾಗ್ ಹಾಕಿಕೊಳ್ಳುವ ಅವಕಾಶವಾಗಲೀ ಅದಕ್ಕೆ ಇಲ್ಲ. ಚರಕದಲ್ಲಿ ತಯಾರಾದ ವಸ್ತ್ರವನ್ನು ಪ್ರಸನ್ನ ಅವರದ್ದೇ ಆದ ‘ಕವಿಕಾವ್ಯ’ ಟ್ರಸ್ಟ್ ಖರೀದಿಸುತ್ತದೆ. ಆ ಬಳಿಕ ಅದೇ ವಸ್ತ್ರವನ್ನು ಕವಿಕಾವ್ಯ ತನ್ನ ಲಾಭಾಂಶದೊಂದಿಗೆ, ಮತ್ತೆ ಪ್ರಸನ್ನ ಅವರದ್ದೇ ಸಂಸ್ಥೆಯಾದ ‘ದೇಸಿ ಟ್ರಸ್ಟಿ’ಗೆ ಮಾರಾಟ ಮಾಡುತ್ತದೆ. ಬಳಿಕ, ಆ ವಸ್ತ್ರಕ್ಕೆ ತನ್ನ ‘ದೇಸಿ’ ಟ್ಯಾಗ್ ಹಾಕಿ, ದೇಸಿ ಸಂಸ್ಥೆ ಹೆಚ್ಚಿನ ಲಾಭಾಂಶದೊಂದಿಗೆ ಎಂಆರ್ ಪಿ ನಿಗದಿ ಮಾಡಿ ಮಾರಾಟ ಮಾಡುತ್ತದೆ. ಅಂದರೆ, ಗ್ರಾಮೀಣ ದುರ್ಬಲ ವರ್ಗದ ಮಹಿಳೆಯರ ಬೆವರಿನಲ್ಲಿ ಹೆಚ್ಚು ಲಾಭ ಪಡೆಯುವುದು, ಅವರದೇ ಆಡಳಿತದ ಚರಕ ಅಲ್ಲ; ಬದಲಾಗಿ ಅದರ ಉತ್ಪನ್ನಕ್ಕೆ ಮಧ್ಯವರ್ತಿಗಳಾಗಿರುವ ಕವಿಕಾವ್ಯ ಮತ್ತು ದೇಸಿ ಟ್ರಸ್ಟುಗಳು!. ಈ ಮೂರೂ ಸಂಸ್ಥೆಗಳ ನಡುವಿನ ನಂಟು ಮತ್ತು ಆ ಮೂರೂ ಸಂಸ್ಥೆಗಳನ್ನು ನಿಯಂತ್ರಿಸುವವರು ಯಾರು ಎಂಬುದು ಅರ್ಥವಾದರೆ, ಚರಕದ ಇಂದಿನ ಬಿಕ್ಕಟ್ಟು ಬಹುತೇಕ ಅರ್ಥವಾಗುತ್ತದೆ” ಎನ್ನುತ್ತಾರೆ ಉಮಾ ಮಹೇಶ್ವರ ಹೆಗಡೆ.

ಜೊತೆಗೆ “ಇಪ್ಪತ್ತೈದು ವರ್ಷಗಳಲ್ಲಿ ಚರಕದ ಮಹಿಳೆಯರಿಗೆ ಮಾರುಕಟ್ಟೆ, ವ್ಯವಹಾರ, ಉದ್ಯಮಶೀಲತೆ ಮುಂತಾದ ವಿಷಯದಲ್ಲಿ ತರಬೇತಿ, ಅರಿವು ನೀಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದದ್ದು ವಿರಳ. ಹಾಗಾಗಿ ಇವತ್ತಿಗೂ ಅವರಿಗೆ ವ್ಯವಹಾರಿಕ ವಿಷಯಗಳಲ್ಲಿ ಬೇರೊಬ್ಬರ ನೆರವು ಅನಿವಾರ್ಯವಾಗಿದೆ. ಅಂತಹ ಅವರ ಅಸಹಾಯಕತೆಯ ಕಾರಣದಿಂದಲೇ ಅವರು ದೇಸಿ ಸಂಸ್ಥೆಯನ್ನು ಅವಲಂಬಿಸುವಂತಾಗಿದೆ. ಈಗ ಬಿಕ್ಕಟ್ಟಿನ ಹೊತ್ತಿನಲ್ಲಿ ಹೊರಗಿನವರೊಬ್ಬರು; ಕೈಮಗ್ಗ ಮತ್ತು ಸಹಕಾರಿ ವ್ಯವಸ್ಥೆಯಲ್ಲಿ ಅನುಭವವೇ ಇಲ್ಲದಿದ್ದರೂ ಅದರ ಕಾರ್ಯದರ್ಶಿಯಾಗಿ ಹೊಣೆಗಾರಿಕೆ ವಹಿಸಿಕೊಳ್ಳುವಂತಾಗಿದೆ. ಆ ಹಿನ್ನೆಲೆಯಲ್ಲಿ ನೋಡಿದರೆ, ಚರಕ ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಅವಕಾಶ ನೀಡಿದೆ. ಪ್ರಸನ್ನ ಅವರು ಮಹಿಳಾ ಸ್ವಾವಲಂಬನೆಯ ಪ್ರಯತ್ನ ಮಾಡಿದ್ದಾರೆ ಎಂಬುದು ನಿಜ. ಆದರೆ, ಬಡ ಮಹಿಳೆಯರ ಶ್ರಮದ ಫಲ ಅವರಿಗೇ ಇಡಿಯಾಗಿ ತಲುಪದಂತಹ ವ್ಯವಸ್ಥೆಯೊಂದು ನಿರ್ಮಾಣವಾಗಲು, ಮಹಿಳೆಯರು ಎಲ್ಲಾ ರೀತಿಯಲ್ಲೂ ಸ್ವಾವಲಂಬಿಗಳಾಗುವಂತೆ ಮಾಡದೇ ಇರುವುದೇ ಕಾರಣ ಎಂಬುದನ್ನು ತಳ್ಳಿಹಾಕುವಂತಿಲ್ಲ” ಎಂಬ ಅಂಶದ ಕಡೆಗೂ ಸ್ಥಳೀಯರು ಗಮನ ಸೆಳೆಯುತ್ತಾರೆ.

ಒಂದು ಕಡೆ ‘ಸರ್ಕಾರದ ಮುಂದೆ ಬಿಡಿಗಾಸಿಗೂ ಕೈಚಾಚಿಲ್ಲ’ ಎಂದು ಚರಕದ ರೂವಾರಿ ಪ್ರಸನ್ನ ಅವರು ಹೇಳುತ್ತಾರೆ. ಮತ್ತೊಂದು ಕಡೆ ‘ನಬಾರ್ಡ್, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಪ್ರತಿ ವರ್ಷವೂ ಚರಕ ಮತ್ತು ಅದರ ಅಂಗಸಂಸ್ಥೆಗಳು ಅನುದಾನ ಪಡೆದುಕೊಳ್ಳುತ್ತಿವೆ. ಆದರೆ, ಬಹುತೇಕ ವೇಳೆ ಚರಕದ ವ್ಯವಸ್ಥೆಯಲ್ಲಿನ ಲೋಪಗಳ ಕಾರಣಕ್ಕೆ ಸಕಾಲಕ್ಕೆ ಸರಿಯಾದ ಯುಸಿ(ಬಳಕೆ ಪ್ರಮಾಣಪತ್ರ) ಸಲ್ಲಿಸುವುದು, ಸರಿಯಾದ ಲೆಕ್ಕಪತ್ರ ನಿರ್ವಹಣೆಯಂತಹ ವಿಷಯದಲ್ಲಿ ತಪ್ಪುಗಳಾಗುತ್ತಿವೆ’ ಎಂದು ಸಂಸ್ಥೆಯ ನಿಕಟವರ್ತಿಗಳು ಹೇಳುತ್ತಾರೆ. ಈ ಎರಡರ ನಡುವೆ ವಾಸ್ತವ ಯಾವುದು ಎಂಬುದು ಪ್ರಶ್ನೆ. ಹಾಗೆಯೇ, ಸಂಸ್ಥೆಯಲ್ಲಿ ದುಡಿಯುವ ಮಹಿಳೆಯರ ವೇತನದ ವಿಷಯದಲ್ಲಿಯೂ ಸಾಕಷ್ಟು ಅಪಸ್ವರಗಳು ಕೇಳಿಬರುತ್ತಿವೆ. ಒಂದು ಕಡೆ ಪ್ರಸನ್ನ ಅವರು, “ಸಂಸ್ಥೆ ನಿರಂತರ ಲಾಭದಲ್ಲಿದೆ. ಫ್ಯಾಬ್ ಇಂಡಿಯಾಕ್ಕಿಂತ ಹೆಚ್ಚು ವಹಿವಾಟು ಮಾಡಿದೆ” ಎನ್ನುತ್ತಾರೆ. “ನೌಕರರಿಗೆ ಬೋನಸ್ ಕೂಡ ನೀಡಿದ್ದಾಗಿ” ಹೇಳಿದ್ದಾರೆ. ಆದರೆ, ಅಲ್ಲಿ “ಕೆಲಸ ಮಾಡುವ ಮಹಿಳೆಯರಲ್ಲಿ ಬಹುತೇಕ ಮಂದಿಗೆ ಇವತ್ತಿಗೂ ಮಾಸಿಕ ಆರು ಸಾವಿರಕ್ಕಿಂತ ಹೆಚ್ಚು ಸಂಬಳ ಇಲ್ಲ. ಸಾಕಷ್ಟು ಹೆಣ್ಣುಮಕ್ಕಳಿಗೆ ತಿಂಗಳಿಗೆ ಒಂದೂವರೆ, ಎರಡು ಸಾವಿರ ಸಂಬಳ ನೀಡಲಾಗುತ್ತಿದೆ. ಆ ದೃಷ್ಟಿಯಿಂದ ನೋಡಿದರೆ, ಇದೂ ಒಂದು ತರಹದ ಜೀತವೇ” ಎಂಬುದು ಹೆಸರು ಹೇಳಲಿಚ್ಛಿಸದ ಚರಕ ಸಿಬ್ಬಂದಿಯೊಬ್ಬರ ಅಳಲು.

ಈ ನಡುವೆ, “ಚರಕದ ನಿರ್ವಹಣೆಯ ವಿಷಯದಲ್ಲಿ ಹೊರಜಗತ್ತಿಗೆ ಅದು ಸಂಪೂರ್ಣವಾಗಿ ಮಹಿಳೆಯರೇ ನಿರ್ಹಿಸುತ್ತಿರುವ, ಮಹಿಳೆಯರೇ ಸಂಪೂರ್ಣ ಎಲ್ಲಾ ಜವಾಬ್ದಾರಿಗಳನ್ನು ನಡೆಸುವ ಮಹಿಳಾ ಸಹಕಾರಿ ಸಂಸ್ಥೆಯಾಗಿದ್ದರೂ, ಆಂತರಿಕವಾಗಿ ಅಲ್ಲಿ ಮಹಿಳೆಯರಿಗೆ ಯಾವುದೇ ಸ್ವಂತ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವಿಲ್ಲ, ಅವಕಾಶವೂ ಇಲ್ಲ. ಊಟ-ತಿಂಡಿಯಿಂದ ಹಿಡಿದು, ಯಾರೊಂದಿಗೆ ಮಾತನಾಡಬೇಕು, ಯಾರೊಂದಿಗೆ ಮಾತನಾಡಬಾರದು ಎಂಬುದೂ ಸೇರಿದಂತೆ ಎಲ್ಲವನ್ನೂ ನಿಯಂತ್ರಿಸಲಾಗುತ್ತಿದೆ. ಹಾಗಾಗಿ ಇದು ಯಾವುದೇ ಮಾಲೀಕತ್ವದ ಖಾಸಗೀ ಕಾರ್ಖಾನೆಗಿಂತ ಭಿನ್ನವಾದ ಕೆಲಸದ ವಾತಾವರಣವನ್ನೇನೂ ಹೊಂದಿಲ್ಲ. ಆದರೆ, ಗ್ರಾಮೀಣ ಬಡ ಮಹಿಳೆಯರಿಗೆ ಹೊತ್ತಿನ ಊಟವನ್ನೂ ಕಳೆದುಕೊಳ್ಳುವ ಭಯ; ಎಲ್ಲವನ್ನೂ ನುಂಗಿಕೊಂಡು ಹೋಗುವಂತೆ ಮಾಡಿದೆ” ಎಂದೂ ಅವರು ಅಲ್ಲಿನ ‘ಕರ್ಮಠ ವ್ಯವಸ್ಥೆ’ಯನ್ನು ವಿವರಿಸುತ್ತಾರೆ.

ಈ ನಡುವೆ, ಚರಕ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಹಿನ್ನೆಲೆಯಲ್ಲಿ ಅಲ್ಲಿನ ಕಾರ್ಯವಿಧಾನ, ಆಡಳಿತ, ಉತ್ಪಾದನಾ ವ್ಯವಸ್ಥೆ ಮುಂತಾದ ಸಮಗ್ರ ವಿವರಗಳನ್ನು ಯೋಜನೆಯೊಂದರ ಭಾಗವಾಗಿ ಅಧ್ಯಯನ ಮಾಡಿರುವ ಹಿರಿಯ ಪತ್ರಕರ್ತ ಕೆ ಪಿ ಸುರೇಶ್ ಅವರನ್ನು ‘ಪ್ರತಿಧ್ವನಿ’ ಮಾತನಾಡಿಸಿದಾಗ, “ಚರಕದ ವಿಷಯದಲ್ಲಿ ದೊಡ್ಡ ಸಮಸ್ಯೆ ಇರುವುದೇ ಅದರ ವ್ಯವಸ್ಥೆಯಲ್ಲಿ. ಈಗ ಸರ್ಕಾರದ ಅನುದಾನ ಬಿಡುಗಡೆ, ಸಮಾಜದ ವಿವಿಧ ವಲಯಗಳ ಬೆಂಬಲದ ಮೂಲಕ ಅದರ ಆರ್ಥಿಕ ಬಿಕ್ಕಟ್ಟು ತಾತ್ಕಾಲಿಕವಾಗಿ ಪರಿಹಾರವಾಗಬಹುದು. ಆದರೆ, ತನ್ನ ಉತ್ಪನ್ನಕ್ಕೆ ತಾನೇ ಬೆಲೆ ನಿಗದಿ ಮಾಡುವ ಅಧಿಕಾರವನ್ನೇ ಹೊಂದಿಲ್ಲದ ಚರಕ, ದೀರ್ಘಾವಧಿಯಲ್ಲಿ ಲಾಭದಾಯಕ ವ್ಯವಸ್ಥೆಯಾಗಿ ಉಳಿಯಲಾರದು ಎಂಬುದು ನನ್ನ ಅಧ್ಯಯನದಲ್ಲಿ ಕಂಡುಕೊಂಡಿದ್ದೆ. ಮೂಲಭೂತವಾಗಿ ಅಲ್ಲಿ ತನ್ನ ಉತ್ಪನ್ನ ಖರೀದಿಸುವ ಗ್ರಾಹಕಿ ಯಾರು? ಆಕೆಯ ಅಭಿರುಚಿ ಏನು? ಯಾವ ಬದಲಾವಣೆಯನ್ನು ಅವರು ನಿರೀಕ್ಷಿಸುತ್ತಾರೆ? ಎಂಬಂತಹ ಪ್ರಾಥಮಿಕ ಮಾಹಿತಿ, ಉತ್ಪಾದಕರಿಗೇ ಇಲ್ಲದ ವಿಚಿತ್ರ ವ್ಯವಸ್ಥೆ ಇದೆ. ಗ್ರಾಹಕ ಮತ್ತು ಉತ್ಪಾದಕರ ನಡುವೆ ದೇಸಿ ಎಂಬ ಟ್ರಸ್ಟ್ ಇದೆ. ಆ ಟ್ರಸ್ಟ್ ತನ್ನ ಸೈದ್ಧಾಂತಿಕ ನಿಲುವುಗಳನ್ನು ಚರಕ ಉದ್ದಿಮೆಯ ಮೇಲೆ ಹೇರುತ್ತಿದೆ, ವಿನಃ ಮಾರುಕಟ್ಟೆಯ ವಾಸ್ತವಾಂಶಗಳನ್ನಲ್ಲ. ಹಾಗಾಗಿ ಮೂಲಭೂತವಾಗಿ ಆ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಿಕೊಳ್ಳದೇ ಚರಕದಂತಹ ಒಂದು ಉದ್ದಿಮೆ ಬಹುಕಾಲ ಯಶಸ್ವಿಯಾಗಿ ನಡೆಯಲಾರದು” ಎನ್ನುತ್ತಾರೆ.

ಕೆ. ಪಿ ಸುರೇಶ್‌
ಕೆ. ಪಿ ಸುರೇಶ್‌

ಚರಕ ಮತ್ತು ಪ್ರಸನ್ನ ಅವರ ನಡುವಿನ ಸಂಬಂಧವನ್ನು ಒಂದು ರೂಪಕದ ಮೂಲಕ ವಿವರಿಸುವ ಕೆಪಿ ಅವರು, “ಹಸು ಮತ್ತು ರೈತನ ನಡುವಿನ ಸಂಬಂಧದಲ್ಲಿ; ಹಸು ಹಾಲು ಕೊಡುತ್ತೆ, ಅದನ್ನು ಹಾಲು, ಮಜ್ಜಿಗೆ, ಮೊಸರು, ತುಪ್ಪವಾಗಿ ಬಳಸುವುದು ರೈತ. ಹಸು ಅತಿ ಹೆಚ್ಚು ಹಾಲು ಕೊಟ್ಟರೆ, ಅದಕ್ಕೊಂದು ಪ್ರಶಸ್ತಿ ಎಂದಿದ್ದರೆ ಅದನ್ನು ಕೂಡ ಪಡೆಯುವುದು ರೈತನೇ ವಿನಃ ಹಸುವಲ್ಲ. ಚರಕ ಮತ್ತು ಪ್ರಸನ್ನ ನಡುವಿನ ಸಂಬಂಧ ಕೂಡ ಇದಕ್ಕಿಂತ ಭಿನ್ನವೇನಲ್ಲ. ಹಾಗಾಗಿಯೇ ಮಲೆನಾಡಿನಲ್ಲಿ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಕರಕುಶಲ ವಸ್ತುಗಳು ಮುಂತಾದ ಪ್ರಾದೇಶಿಕ ವೈಶಿಷ್ಟತೆಯ ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸುವ ಅವಕಾಶಗಳಿದ್ದಾಗ್ಯೂ, ಒಂದು ಮಹಿಳಾ ಸಹಕಾರಿ ಉದ್ದಿಮೆಯಾಗಿ ಚರಕ ಅಂತಹ ಸಾಧ್ಯತೆಗಳ ಬಗ್ಗೆ ಪ್ರಯತ್ನವನ್ನೇ ಮಾಡಿಲ್ಲ. ಏಕೆಂದರೆ, ಪ್ರಸನ್ನ ಅವರಿಗೆ ಒಂದು ಮಹಿಳಾ ಸಹಕಾರ ಸಂಸ್ಥೆಯನ್ನು ವೈವಿಧ್ಯಮಯ ಉತ್ಪಾದನಾ ಚಟುವಟಿಕೆಗಳ ಮೂಲಕ ಬೆಳೆಸುವುದಕ್ಕಿಂತ, ತಮ್ಮ ವೈಯಕ್ತಿಕ ರಮ್ಯ ಪರಿಕಲ್ಪನೆಗಳನ್ನು ಅನುಷ್ಠಾನಗೊಳಿಸುವುದೇ ಮುಖ್ಯವಾಗಿದೆ” ಎಂದರು.

“ಒಂದು ವೇಳೆ ಸಂಸ್ಥೆಯನ್ನು ಹಾಗೆ ವಿವಿಧ ಆಯಾಮದಲ್ಲಿ ಬೆಳೆಸಿದ್ದರೆ ಈ ಹೊತ್ತಿಗೆ ಇಂತಹ ಸಂಕಷ್ಟಗಳನ್ನು ಮೀರಿ ಬೆಳೆಯುತ್ತಿತ್ತು. ಈ ಒಂದು ತಲೆಮಾರಿನ ಅವಧಿಯಲ್ಲಿ ಸಂಸ್ಥೆ ಸಂಪೂರ್ಣ ಸ್ವಾವಲಂಬನೆ ಸಾಧಿಸಬಹುದಿತ್ತು. ಹಾಗೇ ಚರಕದ ಹೆಸರಿನಲ್ಲಿ ಬರುವ ವಿವಿಧ ಅನುದಾನಗಳನ್ನು ಕೂಡ ಚರಕದ ಅಗತ್ಯಕ್ಕೆ ತಕ್ಕಂತೆ ಬಳಸುವ ಬದಲಾಗಿ, ಬಹಳಷ್ಟು ಬಾರಿ ಪ್ರಸನ್ನವರ ಆಸ್ತಕ್ತಿಗಳಿಗೆ ಬಳಸಲಾಗಿದೆ. ‘ಶ್ರಮಜೀವಿ ಆಶ್ರಮ’ ಕೂಡ ಅಂತಹ ಒಂದು ಉದಾಹರಣೆ. ಹಾಗಾಗಿ, ಮುಖ್ಯವಾಗಿ ಚರಕದ ಉತ್ಪನ್ನ ವೈವಿಧ್ಯತೆ ಕಾಯ್ದುಕೊಳ್ಳದೇ ಇರುವುದು, ಅದರ ಅಗತ್ಯಗಳಿಗೆ ಸೀಮಿತವಾಗಿ ಅನುದಾನ ಬಳಕೆ ಮಾಡದೇ ಇರುವುದು, ಚರಕದ ಬೇಕು ಬೇಡಗಳಿಗಿಂತ ಪ್ರಸನ್ನ ಅವರ ಬೇಕು ಬೇಡಗಳನ್ನು ಚರಕದ ಮೇಲೆ ಹೇರುತ್ತಿರುವುದು, ಇಂತಹ ಲೋಪಗಳ ಕುರಿತು ಆಂತರಿಕ ಮೌಲ್ಯಮಾಪನ ವ್ಯವಸ್ಥೆ ಇಲ್ಲದೇ ಇರುವುದು ಸಂಸ್ಥೆಯ ಬಿಕ್ಕಟ್ಟಿಗೆ ಮೂಲ ಕಾರಣಗಳು” ಎಂದು ಕೆ ಪಿ ಸುರೇಶ್ ಅವರು ತಮ್ಮ ಅಧ್ಯಯನದ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ವಿಶ್ಲೇಷಿಸಿದರು.

ಚರಕ ಒಂದು ಗ್ರಾಮೀಣ ಮಹಿಳಾ ಸಹಕಾರಿ ಉದ್ದಿಮೆಯಾಗಿ ಎರಡೂವರೆ ದಶಕಗಳಿಂದ ಬೆಳೆದುಬಂದಿರುವುದನ್ನು ಒಪ್ಪುತ್ತಲೇ, ಅದರ ಆಂತರಿಕ ದೋಷಗಳನ್ನೂ ಬೊಟ್ಟುಮಾಡುವ ಹಲವರು, ಕನಿಷ್ಟ ಭವಿಷ್ಯದಲ್ಲಾದರೂ, ಈ ತಾತ್ಕಾಲಿಕ ಬಿಕ್ಕಟ್ಟಿನಿಂದ ಹೊರಬರುವ ಜೊತೆಗೆ ತನ್ನದೇ ಮಿತಿಗಳಿಂದ, ಲೋಪಗಳಿಂದ ಶಾಶ್ವತವಾಗಿಯೂ ಹೊರಬರಬೇಕಿದೆ ಎಂದೂ ಆಶಿಸುತ್ತಾರೆ.

ಅದು ಸ್ವದೇಶಿ ಮಾದರಿಯ, ‘ದೇಸಿ ಚಿಂತನೆ’ಯ ಒಂದು ಪ್ರಯೋಗವಾಗಿ ಮಾತ್ರ ಉಳಿಯದೆ, ಒಂದು ಯಶಸ್ವಿ ಮಾದರಿಯಾಗಿ ಕರೋನಾ ಸಂಕಷ್ಟದ ಹೊತ್ತಲ್ಲಿ ಇನ್ನಷ್ಟು ಪ್ರಸ್ತುತವಾಗಬೇಕಿತ್ತು. ನಗರವಾಸಿ, ‘ಯಂತ್ರ ನಾಗರೀಕತೆ’ಗೆ ಪರ್ಯಾಯ ಆಯ್ಕೆಗಳನ್ನು ಹುಡುಕುತ್ತಿರುವ ಜಗತ್ತಿನೆದುರು ಒಂದು ಅನುಕರಣೀಯ ವ್ಯವಸ್ಥೆಯಾಗಿ ಕಾಣಿಸಿಕೊಳ್ಳಬೇಕಿತ್ತು. ಬದಲಿಗೆ ಅದು ಕುಸಿಯುತ್ತಿದೆ. ಕಂಗೆಟ್ಟಿದೆ. ಹಾಗಾಗಿ, ಕನಿಷ್ಟ ಈ ಬಿಕ್ಕಟ್ಟಿನ ಹೊತ್ತಿನಲ್ಲಿ ಅದರ ರೂವಾರಿಗಳು ಕೇವಲ ಹೊರಜಗತ್ತಿನ ಕಡೆಗೇ ಬೊಟ್ಟು ಮಾಡದೆ, ತಮ್ಮೊಳಗಿನ ಮಿತಿ-ಲೋಪಗಳ ಕಡೆಗೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಅವರೇ ಹೇಳುವಂತೆ ‘ಎರಡನೇ ಸ್ವಾತಂತ್ರ್ಯ ಸಂಗ್ರಾಮ’ದ ಈ ಹೊತ್ತು ಅಂತಹ ಆತ್ಮ ನಿರ್ಭರತೆಗೂ, ಆತ್ಮಾವಲೋಕನಕ್ಕೂ ಅವಕಾಶವಾಗಲಿ ಎಂಬುದು ಚರಕದ ಹಿತೈಷಿಗಳ ಆಶಯ.

Click here to follow us on Facebook , Twitter, YouTube, Telegram

Pratidhvani
www.pratidhvani.com