ಡ್ರಗ್ಸ್ ಪ್ರಕರಣದಲ್ಲಿ ಅಪರಾಧ ಸಾಬೀತಾದರೆ ಸಿಗುವ ಶಿಕ್ಷೆಯೇನು?
ರಾಜ್ಯ

ಡ್ರಗ್ಸ್ ಪ್ರಕರಣದಲ್ಲಿ ಅಪರಾಧ ಸಾಬೀತಾದರೆ ಸಿಗುವ ಶಿಕ್ಷೆಯೇನು?

ಮಾದಕ ವಸ್ತು ಜಾಲದಲ್ಲಿ ಭಾಗಿಯಾಗಿರುವುದು ಸಾಬೀತಾದರೆ ಭಾರತದ ದಂಡ ಸಂಹಿತೆ ಪ್ರಕಾರ ಅಪರಾಧಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಸೇವನೆ, ಮಾರಾಟ, ಬೆಳೆಯುವಿಕೆ ಎಲ್ಲದಕ್ಕೂ ಶಿಕ್ಷೆಯ ಪ್ರಮಾಣ ಬೇರೆ ಬೇರೆ ರೀತಿಯಲ್ಲಿರುತ್ತದೆ.

ಕೃಷ್ಣಮಣಿ

ಡ್ರಗ್ಸ್​ ಮಾರಾಟಗಾರ ಎಂದು ಸಾಬೀತು ಆದರೆ ಭಾರತೀಯ ಕಾನೂನು ಅನ್ವಯ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ. NDPS (Narcotic Drugs and Psychotropic Substances Act, 1985) ಆ್ಯಕ್ಟ್​ ಪ್ರಕಾರ ಪ್ರಕರಣ ದಾಖಲು ಮಾಡಿದರೆ, ಅಪರಾಧಿಗೆ ಯಾವುದೇ ವಿನಾಯಿತಿ ಇರುವುದಿಲ್ಲ. ಶೀಘ್ರದಲ್ಲೇ ಕೋರ್ಟ್‌ ನಲ್ಲಿ ಬೇಲ್​ ಕೂಡ ಸಿಗುವುದಿಲ್ಲ. ಡ್ರಗ್ಸ್‌ ಮಾರಾಟ ಮಾಡುವುದು ಸಮಾಜವನ್ನು ಕಲುಷಿತ ಮಾಡಿದಕ್ಕೆ ಸಮನಾಗಿದ್ದು, ಮಾದಕ ಸಸ್ಯ ಬೆಳೆಯುವುದು, ಸಂಗ್ರಹ, ಮಾರಾಟ ಹಾಗೂ ಉತ್ಪಾದನೆಯೂ ಸಹ ಅಪರಾಧವಾಗಿದೆ. ಒಂದು ವೇಳೆ ಬಂಧಿತ ಆರೋಪಿ ಮಾರಾಟ ಮಾಡುವ ಪ್ರಮಾಣದಲ್ಲಿ ಮಾದಕ ವಸ್ತು ಸಂಗ್ರಹ ಮಾಡಿಲ್ಲದೆ, ಕೇವಲ ಬಳಕೆಗೆ ಮಾತ್ರ ಮಿತಿಯಲ್ಲಿ ಸಂಗ್ರಹ ಮಾಡಿದ್ದರೆ, ನಾವು ಡ್ರಗ್‌ ಸೇವನೆ ಮಾಡುತ್ತೇವೆ ಎಂದು ಒಪ್ಪಿಕೊಂಡರೆ ಶಿಕ್ಷೆಯ ಪ್ರಮಾಣ ಕಡಿಮೆಯಾಗಬಹುದು ಎನ್ನುತ್ತಾರೆ ಕಾನೂನು ತಜ್ಞರು.

ಗರಿಷ್ಠ ಶಿಕ್ಷೆ ಮತ್ತು ದಂಡ ಎಷ್ಟು ಇರುತ್ತದೆ..?

ಡ್ರಗ್ಸ್‌ ಸಂಬಂಧಿಸಿದ ಕೇಸ್‌ ನ ತನಿಖಾ ಅಧಿಕಾರಿ ತುಂಬಾ ಕಟ್ಟುನಿಟ್ಟಾಗಿದ್ದು, ಕಠಿಣ ಸೆಕ್ಷನ್‌ ಗಳನ್ನು ಹಾಕಿ ಚಾರ್ಜ್‌ ಶೀಟ್‌ ಹಾಕಿದರೆ ಆರೋಪಿಗಳಿಗೆ ಕಾನೂನಿನ ಕುಣಿಕೆ ಬಿಗಿಯಾಗಲಿದೆ. ಕೇಸ್​ನಿಂದ ಬಚಾವ್‌ ಆಗುವುದು ಕಠಿಣ ದಾರಿಯಾಗಲಿದೆ. ಭಾರತದಲ್ಲಿ NDPS ಕಾಯ್ದೆ ತುಂಬಾ ಕಠಿಣವಾಗಿದ್ದು, ನಟಿ ರಾಗಿಣಿ ಸೇರಿದಂತೆ ಎಲ್ಲಾ ಆರೋಪಗಳನ್ನು ಸೆಕ್ಷನ್ 21(B), (C) 22(C)ಅಡಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಅದರಲ್ಲಿ 2 ಸೆಕ್ಷನ್‌ ಅಡಿ ನಟಿ ರಾಗಿಣಿ ದ್ವಿವೇದಿ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಒಂದು ವೇಳೆ ಡ್ರಗ್ಸ್​ ಕೇಸ್​ ಸಾಬೀತು ಆದರೆ ನಟಿ ರಾಗಿಣಿ ಹಾಗೂ ಫ್ರೆಂಡ್ಸ್‌ ಬಳಗಕ್ಕೆ 20 ವರ್ಷ ಜೈಲು ಶಿಕ್ಷೆ ಆಗಲಿದೆ. ಗರಿಷ್ಠ 2 ಲಕ್ಷ ರೂಪಾಯಿ ತನಕವೂ ದಂಡ ಹಾಕಲು ಕಾನೂನಿನಲ್ಲಿ ಅವಕಾಶವಿದೆ.

ಮಾದಕ ವ್ಯಸನ ಒಂದು ಕಾಯಿಲೆ: WHO

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಮಾದಕ ವಸ್ತು ವ್ಯಸನಕ್ಕೆ ದಾಸ್ಯರಾಗಿರುವ ಜನರು ಕಾಯಿಲೆಯಿಂದ ಬಳಲುತ್ತಿರುತ್ತಾರೆ ಎನ್ನಲಾಗಿದೆ. ಕಾಯಿಲೆಯಿಂದ ಬಳಲುವ ಜನರಿಗೆ ಶಿಕ್ಷೆ ಕೊಡಲು ಸಾಧ್ಯವಿಲ್ಲ. ಆ ಕಾರಣಕ್ಕಾಗಿ ಡ್ರಗ್ಸ್​ ವ್ಯಾಪಾರ ಮಾಡಿ ಹಣ ಸಂಪಾದನೆ ಮಾಡುವ ಉದ್ದೇಶ ಹೊಂದಿಲ್ಲ ಎನ್ನುವುದಾದರೆ ಕಾನೂನು ಪ್ರಕಾರ ಕೆಲವೊಂದು ವಿನಾಯ್ತಿಗಳು ಸಿಗುವ ಸಾಧ್ಯತೆ ಇದೆ. ಕಡಿಮೆ ಪ್ರಮಾಣದಲ್ಲಿ ಜೈಲು ಶಿಕ್ಷೆ ವಿಧಿಸಬಹುದು. ವ್ಯಸನದಿಂದ ಹೊರತರಲು ಕ್ರಮ ಕೈಗೊಳ್ಳಲು ಸೂಚನೆ ಕೊಡಬಹುದು. ಆಪ್ತ ಸಮಾಲೋಚನೆಗೆ ಒಳಪಡಿಸಿ ಎಂದು ಸೂಚನೆ ಕೊಡಬಹುದು. ಮತ್ತೆ ಮಾದಕ ವ್ಯಸನಕ್ಕೆ ಒಳಗಾಗದಂತೆ ಎಚ್ಚರಿಕೆ ಕೊಡಬಹುದು ಎನ್ನುತ್ತಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

Click here to follow us on Facebook , Twitter, YouTube, Telegram

Pratidhvani
www.pratidhvani.com