ಶಿಕ್ಷಕರ ದಿನದ ವಿಶೇಷ: ಪೊಲೀಸರಾಗಿದ್ದು ಶಿಕ್ಷಕರಾಗಿ ಸೈ ಅನ್ನಿಸಿಕೊಂಡ PSI ಶಾಂತಪ್ಪ

ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಆಗಿರುವಂತಹ ಶಾಂತಪ್ಪ ಜಡೆಮ್ಮನವರ್‌ ಅವರು. ವೃತ್ತಿಯಲ್ಲಿ ಪೊಲೀಸರಾದರೂ, ಪ್ರವೃತ್ತಿಯಲ್ಲಿ ಶಿಕ್ಷಕರಾಗಿ ವಲಸೆ ಕಾರ್ಮಿಕರ ಮಕ್ಕಳಿಗೆ ಅಕ್ಷರ ಜ್ಞಾನ ನೀಡುತ್ತಿದ್ದಾರೆ.
ಶಿಕ್ಷಕರ ದಿನದ ವಿಶೇಷ: ಪೊಲೀಸರಾಗಿದ್ದು ಶಿಕ್ಷಕರಾಗಿ ಸೈ ಅನ್ನಿಸಿಕೊಂಡ PSI ಶಾಂತಪ್ಪ

ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ದ ವಲಸೆ ಕಾರ್ಮಿಕರ ಮಕ್ಕಳಿಗೆ, ಕರೋನಾ ದೆಸೆಯಿಂದಾಗಿ ಶಿಕ್ಷಣ ಮರೀಚಿಕೆಯ ವಿಷಯವಾಗಿತ್ತು. ಮುರುಕಲು ಜೋಪಡಿಗಳ ಒಳಗೆ ಆಕಾಶ ಮುಟ್ಟುವಂತಹ ಕನಸುಗಳನ್ನು ಹೊತ್ತುಕೊಂಡ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ನಗರದ ಪೊಲೀಸ್‌ ಅಧಿಕಾರಿಯೊಬ್ಬರು ಮಾದರಿಯಾಗಿದ್ದಾರೆ.

ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಆಗಿರುವಂತಹ ಶಾಂತಪ್ಪ ಜಡೆಮ್ಮನವರ್‌ ಅವರು. ವೃತ್ತಿಯಲ್ಲಿ ಪೊಲೀಸರಾದರೂ, ಪ್ರವೃತ್ತಿಯಲ್ಲಿ ಶಿಕ್ಷಕರಾಗಿ ವಲಸೆ ಕಾರ್ಮಿಕರ ಮಕ್ಕಳಿಗೆ ಅಕ್ಷರ ಜ್ಞಾನ ನೀಡುತ್ತಿದ್ದಾರೆ. ನಾಗರಬಾವಿ ಸಮೀಪದ ವಿನಾಯಕ ಲೇಔಟ್‌ನ 9ನೇ ಬ್ಲಾಕ್‌ನಲ್ಲಿ ವಾಸಿಸುತ್ತಿರುವ ವಲಸೆ ಕಾರ್ಮಿಕರ ಮಕ್ಕಳಿಗೆ ಇವರು ತಮ್ಮ ಪೊಲೀಸ್‌ ಕರ್ತವ್ಯ ಸಮಯ ಹೊರತುಪಡಿಸಿ, ಉಳಿದ ಸಮಯದಲ್ಲಿ ಪಾಠ ಮಾಡುತ್ತಿದ್ದಾರೆ.

ವಿನಾಯಕ ಲೇಔಟ್‌ನಲ್ಲಿ ವಾಸವಿರುವ ವಲಸೆ ಕಾರ್ಮಿಕರ ಸುಮಾರು 25 ಮಕ್ಕಳಿಗೆ ಪ್ರತಿ ದಿನ ಏಳು ಗಂಟೆಗೆ ಸರಿಯಾಗಿ ತರಗತಿಗಳು ಆರಂಭವಾಗುತ್ತವೆ. ನಿರ್ದಿಷ್ಟವಾದ ಪಠ್ಯಕ್ರಮವಿಲ್ಲದಿದ್ದರೂ, ಸಮಗ್ರವಾಗಿ ಪಾಠವನ್ನು ಹೇಳಿಕೊಡುವ ಶಾಂತಪ್ಪ ಅವರು, ಇದನ್ನು ಸೇವೆ ಎಂದು ಪರಿಗಣಿಸುತ್ತಿಲ್ಲ. ಬದಲಾಗಿ, ಮನುಷ್ಯರಾಗಿ ಹುಟ್ಟಿದವರು ಇನ್ನೊಬ್ಬರಿಗೆ ಸಹಾಯ ಮಾಡಿಲ್ಲವಾದರೆ, ಅವರು ಮನುಷ್ಯರೇ ಅಲ್ಲ ಎಂದು ಹೇಳುತ್ತಾರೆ. ತಾವು ಕೂಡಾ ಜೋಪಡಿಯ ಬದುಕನ್ನು ಅನುಭವಿಸಿದ್ದು, ಇನ್ನು ಮುಂದಿನ ಪೀಳಿಗೆಯ ಮಕ್ಕಳಾದರೂ, ಸಮಾಜದಲ್ಲಿ ಉನ್ನತ ಹುದ್ದೆಗೇರಬೇಕು ಎಂಬ ಮಹತ್ವಾಕಾಂಕ್ಷೆಯೇ ಇವರನ್ನು ಶಿಕ್ಷಕರಾಗಿ ಸೇವೆ ಸಲ್ಲಿಸಲು ಪ್ರೇರೇಪಿಸಿರುವುದು.

ಶಾಂತಪ್ಪ ಅವರ ಈ ಪ್ರಯತ್ನಕ್ಕೆ ಬೆಂಗಳೂರಿನ ನಾನಾ ಸಂಘಸಂಸ್ಥೆಗಳು ಶ್ಲಾಘಿಸಿವೆ. ಶಿಕ್ಷಣ ಸಚಿವರಿಂದ ಹಿಡಿದು ಪೊಲೀಸ್‌ ಇಲಾಖೆಯ ಅಧಿಕಾರಿಗಳ ವರೆಗೆ ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ದಿನವಿಡೀ, ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಶಾಂತಪ್ಪ ಅವರು, ಎಷ್ಟೇ ಸುಸ್ತಾಗಿದ್ದರೂ, ಕಳೆದ ಇಪ್ಪತ್ತು ದಿನಗಳಿಂದ ತಮ್ಮ ಪಾಠವನ್ನು ಹೇಳುವ ಪರಿಪಾಠ ತಪ್ಪಿಸಿಕೊಂಡಿಲ್ಲ. ಇಲಾಖೆಯ ಅಧಿಕಾರಿಗಳು ಹಾಗೂ ಇತರರ ಸಹಕಾರದಿಂದ ಇದೆಲ್ಲಾ ಸಾಧ್ಯವಾಗುತ್ತಿದೆ ಎಂದು ಅವರು ಹೇಳುತ್ತಾರೆ.

ಇನ್ನು, ಮಕ್ಕಳಿಗೆ ವೇದ ಗಣಿತ, ಭೂಗೋಳ ಶಾಸ್ತ್ರದೊಂದಿಗೆ ನೀತಿ ಭೋದನೆಯನ್ನೂ ಮಾಡುವ ಇವರು, ಮಕ್ಕಳ ಅಚ್ಚುಮೆಚ್ಚಿನ ಮೇಷ್ಟ್ರು. ಶಾಲೆಯ ಮೇಷ್ಟ್ರುಗಳಿಗಿಂತ ಇವರ ಪಾಠವೇ ಚೆನ್ನಾಗಿ ಅರ್ಥ ಆಗುತ್ತದೆ ಎಂಬುವುದು ಮಕ್ಕಳ ಅಭಿಪ್ರಾಯ. ಮಕ್ಕಳಿಗೆ ಸ್ವಾತಂತ್ರ್ಯ ವೀರರ ಹೆಸರಿನೊಂದಿಗೆ ಮರು ನಾಮಕರಣ ಮಾಡಿರುವ ಶಾಂತಪ್ಪ ಅವರು ಮಕ್ಕಳಲ್ಲಿ ದೇಶಪ್ರೇಮವನ್ನು ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ, ಕಾರ್ಪೊರೇಟ್‌ ತೆಕ್ಕೆಯ ಒಳಗೆ ಜಾರುತ್ತಿರುವ ಶಿಕ್ಷಣ ಸಂಸ್ಥೆಗಳ ನಡುವೆ ನಿಜವಾದ ಶಿಕ್ಷಣ ಮೌಲ್ಯದ ಅರಿವು ಮೂಡಿಸುವ ಇಂತಹ ವ್ಯಕ್ತಿಗಳ ಅಗತ್ಯ ಸಮಾಜಕ್ಕಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಬಡ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿರುವ ಶಾಂತಪ್ಪ ಅವರನ್ನು ಶಿಕ್ಷಕರ ದಿನದಂದು ಅಭಿನಂದಿಸಲೇ ಬೇಕಿದೆ. ಅವರೊಂದಿಗೆ ಸಮಾಜದ ಏಳಿಗೆಗಾಗಿ ದುಡಿಯುತ್ತಿರುವ ಎಲ್ಲಾ ಶಿಕ್ಷಕರಿಗೂ, ಶಿಕ್ಷಕರ ದಿನದ ಶುಭಾಶಯಗಳು.

ಶಿಕ್ಷಕರ ದಿನದ ವಿಶೇಷ: ಪೊಲೀಸರಾಗಿದ್ದು ಶಿಕ್ಷಕರಾಗಿ ಸೈ ಅನ್ನಿಸಿಕೊಂಡ PSI ಶಾಂತಪ್ಪ
ಭಾರತೀಯ ಬೆಳ್ಳಿತೆರೆಮೇಲೆ ಮೂಡಿರುವ ವಿಶೇಷ ಶಿಕ್ಷಕ ಪಾತ್ರಗಳು
ಶಿಕ್ಷಕರ ದಿನದ ವಿಶೇಷ: ಪೊಲೀಸರಾಗಿದ್ದು ಶಿಕ್ಷಕರಾಗಿ ಸೈ ಅನ್ನಿಸಿಕೊಂಡ PSI ಶಾಂತಪ್ಪ
ಭಾರತದ ನಿರ್ಮಾಣದಲ್ಲಿ ಶಿಕ್ಷಕರು -ಸ್ಥಿತಿಗತಿ

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com