ʼಉದ್ಯೋಗ ನೀಡಿ, ಆತ್ಮಹತ್ಯೆ ನಿಲ್ಲಿಸಿʼ ಯೂತ್‌ ಕಾಂಗ್ರೆಸ್‌ ಅಭಿಯಾನ
ರಾಜ್ಯ

ʼಉದ್ಯೋಗ ನೀಡಿ, ಆತ್ಮಹತ್ಯೆ ನಿಲ್ಲಿಸಿʼ ಯೂತ್‌ ಕಾಂಗ್ರೆಸ್‌ ಅಭಿಯಾನ

ವರ್ಷಕ್ಕೆ 2 ಕೋಟಿಯಂತೆ, 6 ವರ್ಷಗಳಲ್ಲಿ ಒಟ್ಟು 12 ಕೋಟಿ ಜನರಿಗೆ ಉದ್ಯೋಗ ಸಿಗಬೇಕಿತ್ತು. ಮೋದಿ ಸರ್ಕಾರ ಕೆಲಸ ಕೊಡುವ ಬದಲು ಇರುವ ಕೆಲಸವನ್ನು ಕಿತ್ತುಕೊಳ್ಳುತ್ತಿದೆ. ಕೆಲಸ ಇಲ್ಲದೆ ಸಾಕಷ್ಟು ಯುವ‌ಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ

ಪ್ರತಿಧ್ವನಿ ವರದಿ

ಯೂತ್‌ ಕಾಂಗ್ರೆಸ್‌ ವತಿಯಿಂದ ದೇಶದಾದ್ಯಂತ ಉದ್ಯೋಗ ನೀಡಿ ಅಭಿಯಾನ ನಡೆಸಲು ಉದ್ದೇಶಿಸಿದ್ದು, ಕರ್ನಾಟಕದಿಂದ ಇದಕ್ಕೆ ಚಾಲನೆ ನೀಡುತ್ತಿದ್ದೇವೆ’ ಎಂದು ರಾಷ್ಟ್ರೀಯ ಯೂತ್‌ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಹೇಳಿದ್ದಾರೆ. ಉದ್ಯೋಗ ನೀಡಿ ಆತ್ಮಹತ್ಯೆ ನಿಲ್ಲಿಸಿ‌ ಅಭಿಯಾನದ ಅಂಗವಾಗಿ ಕಾಂಗ್ರೆಸ್‌ ಭವನದಿಂದ ಮೌರ್ಯ ಸರ್ಕಲ್‌ ವರೆಗೆ ಶ್ರೀನಿವಾಸ್ ನೇತೃತ್ವದಲ್ಲಿ ಜಾಥಾ ಹೋದ ಯೂತ್‌ ಕಾಂಗ್ರೆಸಿಗರು, ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಥಾಗೂ ಮುನ್ನ ‘ಉದ್ಯೋಗ ನೀಡಿ ಆತ್ಮಹತ್ಯೆ ನಿಲ್ಲಿಸಿ’ ಅಭಿಯಾನದ ಭಿತ್ತಿಪತ್ರವನ್ನು ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಬಿಡುಗಡೆ ಮಾಡಿ ಮಾತನಾಡಿದ ಶ್ರೀನಿವಾಸ್‌, ‘ದೇಶದಲ್ಲಿ ಶೇ 65ರಷ್ಟು ಯುವ‌‌ಕರು ಉದ್ಯೋಗ ಇಲ್ಲದೆ ಬೀದಿಗಳಲ್ಲಿ ಅಡ್ಡಾಡುತ್ತಿದ್ದಾರೆ‌. ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ. ಮೋದಿ ಸರ್ಕಾರ ಆಡಳಿತಕ್ಕೆ ಬಂದು ಆರು ವರ್ಷ ಆಯಿತು. ವರ್ಷಕ್ಕೆ 2 ಕೋಟಿಯಂತೆ, 6 ವರ್ಷಗಳಲ್ಲಿ ಒಟ್ಟು 12 ಕೋಟಿ ಜನರಿಗೆ ಉದ್ಯೋಗ ಸಿಗಬೇಕಿತ್ತು. ಮೋದಿ ಸರ್ಕಾರ ಕೆಲಸ ಕೊಡುವ ಬದಲು ಇರುವ ಕೆಲಸವನ್ನು ಕಿತ್ತುಕೊಳ್ಳುತ್ತಿದೆ. ಕೆಲಸ ಇಲ್ಲದೆ ಸಾಕಷ್ಟು ಯುವ‌ಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಹೇಳಿದ್ದಾರೆ

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

‘ಉದ್ಯೋಗ ಕೊಡಿ ಎಂದು ಕೇಳಿದರೆ, ಪಕೋಡ ಮಾಡಿ ಮಾರಿ ಎನ್ನುತ್ತಾರೆ. ಕರ್ನಾಟಕದಲ್ಲಿ ಯುವ‌‌ಕರಿಗೆ ಉದ್ಯೋಗ ಸಿಗುತ್ತಿಲ್ಲ. ಈ ಬಗ್ಗೆ ರಾಹುಲ್ ಗಾಂಧಿ ಸಾಕಷ್ಟು ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಯಾವುದೇ ಮುನ್ನಚ್ಚರಿಕೆ ತೆಗೆದುಕೊಳ್ಳದೇ ಇರುವುದರಿಂದ ಯುವ‌‌ಸಮೂಹ ಬೀದಿಗೆ ಬಿದ್ದಿದೆ. ಮೋದಿ ಇತ್ತೀಚೆಗೆ ತಮ್ಮ ಮನೆಯಲ್ಲಿ ನವಿಲುಗಳಿಗೆ ಕಾಳು ತಿನ್ನಿಸಿದರು. ಅದು ಸಂತೋಷದ ವಿಷಯ. ಅದೇ ರೀತಿ ನಮ್ಮ ಯುವ‌ಕರು ಸಹ ಕೆಲಸ ಇಲ್ಲದೆ ಓಡಾಡುತ್ತಿರುವುದು ಕಾಣಿಸುತ್ತಿಲ್ಲವೇ. ಅವರಿಗೆ ತಿನ್ನಿಸಬೇಕಾದವರು ಯಾರು ಎಂದು ಶ್ರೀನಿವಾಸ್ ಕಿಡಿಕಾರಿದರು.

ಕೇಂದ್ರ ಸರ್ಕಾರ ಕೇವಲ ಟೆಲಿವಿಷನ್ ಸರ್ಕಾರ. ಜಿಡಿಪಿ ಕುಸಿತ ಕಾಣಲು ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮೋದಿ ಕಾರಣ, ‘ಮುಂದಿನ ದಿನಗಳಲ್ಲಿ ಎಲ್ಲ ಸಂಸದರು ಮತ್ತು ಸಚಿವರ ಮನೆ ಎದುರು ಉದ್ಯೋಗ ಕೊಡಿ ಎಂದು ಸತ್ಯಾಗ್ರಹ ನಡೆಸುತ್ತೇವೆ ಎಂದು ಹೇಳಿದರು.

‘ಡ್ರಗ್ಸ್ ದಂಧೆಯ ವಿರುದ್ಧವೂ ಯೂತ್‌ ಕಾಂಗ್ರೆಸ್ ಕಾರ್ಯಕರ್ತರು ಹೋರಾಟ ನಡೆಸಲಿದ್ದಾರೆ. ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಲ್ಲೂ ಡ್ರಗ್ಸ್ ಹಾವಳಿ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಿತ್ತು. ಈಗ ಕರ್ನಾಟಕದಲ್ಲೂ ಕೇಳಿಬರುತ್ತಿದೆ. ಇದರ ವಿರುದ್ಧ ಯೂತ್‌ ಕಾಂಗ್ರೆಸ್ ಹೋರಾಟ ನಡೆಸಲಿದೆ. ಡ್ರಗ್ಸ್ ದಂಧೆಯಲ್ಲಿ ಯಾರೆಲ್ಲಾ ಪಾಲ್ಗೊಂಡಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಇದೇ ಸಂಧರ್ಭದಲ್ಲಿ ಹೇಳಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com