ಸ್ಯಾಂಡಲ್‌ವುಡ್‌ ಡ್ರಗ್‌ ಪ್ರಕರಣ: ವಿಚಾರಣೆಯ ಬಳಿಕ ರಾಗಿಣಿ ಬಂಧನ
ರಾಜ್ಯ

ಸ್ಯಾಂಡಲ್‌ವುಡ್‌ ಡ್ರಗ್‌ ಪ್ರಕರಣ: ವಿಚಾರಣೆಯ ಬಳಿಕ ರಾಗಿಣಿ ಬಂಧನ

ಕೇವಲ 38 ಸಾವಿರ ಮಾತ್ರ ವೇತನ ಪಡೆಯುತ್ತಿದ್ದ ರವಿಶಂಕರ್‌, ನಟಿ ರಾಗಿಣಿಗಾಗಿ ಪ್ರತಿದಿನ ಸುಮಾರು 1 ಲಕ್ಷ ರೂಪಾಯಿ ಹಣವನ್ನು ವ್ಯಯಿಸುತ್ತಿದ್ದನು ಎನ್ನುವುದನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದರು

ಕೃಷ್ಣಮಣಿ

ಸ್ಯಾಂಡಲ್ ವುಡ್ ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದಕ್ಕೂ ಮೊದಲು ಬೆಳಗ್ಗೆ ವಶಕ್ಕೆ ಪಡೆದು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆತಂದು ವಿಚಾರಣೆ ಮಾಡುತ್ತಿದ್ದರು. ವಿಚಾರಣೆ ವೇಳೆ ಸೂಕ್ತ ಉತ್ತರ ನೀಡದ ಹಾಗೂ ಏನನ್ನೇ ಕೇಳಿದರು ನನಗೆ ಗೊತ್ತಿಲ್ಲ ಎನ್ನುವ ಮಾತನ್ನಷ್ಟೇ ಹೇಳುತ್ತಿರುವ ಕಾರಣಕ್ಕೆ ನಟಿ ರಾಗಿಣಿಯನ್ನು ಬಂಧಿಸಿದ್ದಾರೆ. ಇಂದು ಬೆಳಗ್ಗೆ 6.30ಕ್ಕೆ ಯಲಹಂಕ ನ್ಯಾಯಾಂಗ ಬಡಾವಣೆಯಲ್ಲಿ ಇರುವ ಅನನ್ಯ ಅಪಾರ್ಟ್ ಮೆಂಟ್ ನ ಫ್ಲಾಟ್ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದು ಮನೆಯಲ್ಲೀ ಡ್ರಗ್ಸ್‌ಗಾಗಿ ತಡಕಾಡಿದ್ದರು. ಬಳಿಕ ಸುಮಾರು 10.30ರ ಸಮಯದಲ್ಲಿ ನಟಿ ರಾಗಿಣಿಯನ್ನು ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕರೆತರಲಾಗಿತ್ತು. ಆದರೆ ವಿಚಾರಣೆಗೆ ನೋಟಿಸ್‌ ನೀಡಿದ್ದರೂ ಮನೆಯನ್ನು ಸರ್ಚ್‌ ಮಾಡಿ ಕರೆತಂದಿದ್ದು ಯಾಕೆ ಎನ್ನುವ ಕುತೂಹಲ ಉಳಿದುಕೊಂಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬೆಂಗಳೂರಿನ ಆರ್‌ಟಿಒ ಕಚೇರಿಯಲ್ಲಿ ದ್ವಿತೀಯ ದರ್ಜೆ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ರವಿಶಂಕರ್‌, ಈಗಾಗಲೇ ಬಂಧನವಾಗಿದ್ದು, ಸಿಸಿಬಿ ಪೊಲೀಸರ ಬಳಿ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದನು. ಕೇವಲ 38 ಸಾವಿರ ಮಾತ್ರ ವೇತನ ಪಡೆಯುತ್ತಿದ್ದ ರವಿಶಂಕರ್‌, ನಟಿ ರಾಗಿಣಿಗಾಗಿ ಪ್ರತಿದಿನ ಸುಮಾರು 1 ಲಕ್ಷ ರೂಪಾಯಿ ಹಣವನ್ನು ವ್ಯಯಿಸುತ್ತಿದ್ದನು ಎನ್ನುವುದನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದರು. ಆದರೆ ಅಷ್ಟೊಂದು ಹಣವನ್ನು ಎಲ್ಲಿಂದ ತರುತ್ತಿದ್ದನು ಎನ್ನುವ ಅನುಮಾನ ಮೂಡಿದ ಬಳಿಕ ಸಿಕ್ಕ ಉತ್ತರ ಡ್ರಗ್ಸ್‌ ವ್ಯವಹಾರ. ಆರ್‌ಟಿಒ ಕಚೇರಿ ಡ್ಯೂಟಿ ಬಳಿಕ ಡ್ರಗ್‌ ಪೆಡ್ಲರ್‌ ಆಗಿ ಕೆಲಸ ಮಾಡುತ್ತಿದ್ದ ಎನ್ನುವುದು ಗೊತ್ತಾಗಿದೆ. ಜೊತೆಗೆ ಮತ್ತೊಂದು ಸ್ಫೋಟಕ ಮಾಹಿತಿಯನ್ನೂ ಬಿಚ್ಚಿಟ್ಟಿದ್ದನು.

"ನಾನು ಹಾಗೂ ರಾಗಿಣಿ ಕೇವಲ ಸ್ನೇಹಿತರಾಗಿ ಇರಲಿಲ್ಲ" ಎಂದಿದ್ದನು. ಇನ್ನೂ ನಟಿ ರಾಗಿಣಿಗೆ ಗುರುವಾರ ಹಾಜರಾಗುವಂತೆ ಬುಧವಾರವೇ ನೋಟಿಸ್‌ ನೀಡಲಾಗಿತ್ತು. ಆದರೆ, ನೋಟಿಸ್‌ ಸ್ವೀಕರಿಸಿದ್ದ ನಟಿ ರಾಗಿಣಿ ಗುರುವಾರ ಬೆಳಗ್ಗೆ 10 ಗಂಟೆಗೆ ಹಾಜರಾಗಿರಲಿಲ್ಲ. ಅವರ ಪರವಾಗಿ ವಕೀಲರನ್ನು ಸಿಸಿಬಿ ಕಚೇರಿಗೆ ಕಳುಹಿಸಿ ಕೊಟ್ಟಿದ್ದರು. ಇದಾದ ಬಳಿಕ ಮತ್ತೆ ಗುರುವಾರ ಸಂಜೆ ನೋಟಿಸ್‌ ನೀಡಿದ್ದು, ಶುಕ್ರವಾರ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಬರಲೇ ಬೇಕು ಎಂದು ಸೂಚಿಸಲಾಗಿತ್ತು. ಆದರೆ, ನಟಿ ರಾಗಿಣಿ ವಿಚಾರಣೆಗೆ ಹಾಜರಾಗುವ ಮೊದಲು ಎಲ್ಲಾ ಸಾಕ್ಷಿಗಳನ್ನು ಇಲ್ಲವಾಗಿಸಲು ನಿರ್ಧಾರ ಮಾಡಿದ್ದರು. ಇದೇ ಕಾರಣಕ್ಕಾಗಿ ಪೊಲೀಸರು ಕೋರ್ಟ್‌ ವಾರೆಂಟ್‌ ಪಡೆದು ರೇಡ್‌ ಮಾಡಿದ್ದರು. ಬಳಿಕ ವಿಚಾರಣೆ ನಡೆಸಿ ಮತ್ತಷ್ಟು ವಿಚಾರಣೆ ಮಾಡುವ ಅಗತ್ಯ ಇರುವ ಕಾರಣಕ್ಕೆ ಅರೆಸ್ಟ್‌ ಮಾಡಲಾಗಿದೆ.

ಡ್ರಗ್ ಫೆಡ್ಲರ್ ಗಳ ಜೊತೆಗೆ ನಡೆಸಿದ ಸಂಭಾಷಣೆ ಪೊಲೀಸರ ಕೈಗೆ ಸಿಗುವುದು ಬೇಡ ಎನ್ನುವ ಉದ್ದೇಶದಿಂದ ನಟಿ ರಾಗಿಣಿ ತನ್ನ ಮೊಬೈಲ್ ನಲ್ಲಿದ್ದ ವಾಟ್ಸ್‌ಆಪ್‌ ಡಿಲೀಟ್‌ ಮಾಡಿದ್ದರು. ಬಳಿಕ ಬೇರೊಂದು ಮೊಬೈಲ್‌ನಲ್ಲಿ ಬೇರೆ ಸಿಮ್‌ ಬಳಸಿ ವಾಟ್ಸ್‌ಆಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದರು. ಈ ಮಾಹಿತಿ ಪೊಲೀಸರಿಗೆ ತಿಳಿಯುತ್ತಿದ್ದ ಹಾಗೆ ಪೊಲೀಸರು ಸರ್ಚ್‌ ವಾರೆಂಟ್‌ ಪಡೆದು ನಟಿ ರಾಗಿಣಿ ಮನೆಯನ್ನು ಸರ್ಚ್‌ ಮಾಡಿದ ಬಳಿಕ ಅಲ್ಲಿಂದಲೇ ವಶಕ್ಕೆ ಪಡೆಯುವ ನಿರ್ಧಾರ ಮಾಡಿದ್ದರು ಎನ್ನಲಾಗಿದೆ. ಅದೇ ಯೋಜನೆಯಂತೆ ನಟಿ ರಾಗಿಣಿಗೆ ತಪ್ಪಿಸಿಕೊಳ್ಳಲು ಯಾವ ಸಾಧ್ಯತೆಗಳೂ ಸಿಗಬಾರದು ಎನ್ನುವ ಏಕೈಕ ಕಾರಣಕ್ಕಾಗಿ ಇಂದಿರಾನಗರದಲ್ಲಿರುವ ಮನೆ ಹಾಗೂ ಯಲಹಂಕದಲ್ಲಿರುವ ಫ್ಲಾಟ್‌ಗೆ ಏಕಕಾಲದಲ್ಲಿ ದಾಳಿ ಮಾಡಿದ್ದರು. ಯೋಜನೆಯಂತೆ ಎಲ್ಲವೂ ನಡೆಯಿತು, ಆದರೆ ಸಾಕ್ಷಿ ನಾಶ ಮಾಡಲು ಮುಂದಾಗಿದ್ದ ಕಾರಣದಿಂದ ಬಂಧನಕ್ಕೆ ಒಳಗಾಗುವಂತಾಗಿದೆ.

ನಟಿ ರಾಗಿಣಿ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಇಂದು ನಟಿ ರಾಗಿಣಿಯನ್ನು ಅರೆಸ್ಟ್‌ ಮಾಡುವ ಮಾಹಿತಿ ನಟಿ ರಾಗಿಣಿ ದ್ವಿವೇದಿ ಅವರ ವಕೀಲರಿಗೆ ಸಿಕ್ಕಿತ್ತು. ಅದೇ ಕಾರಣಕ್ಕಾಗಿ ನಟಿ ರಾಗಿಣಿ ದ್ವಿವೇದಿ ಪರವಾಗಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಿನ 34 ನೇ ಸಿಸಿಹೆಚ್ ಕೋರ್ಟ್ ಗೆ ರಾಗಿಣಿ ಪರ ವಕೀಲರು ಅರ್ಜಿ ಸಲ್ಲಿಸಿದ್ದರು, ಆದರೆ ಕೋರ್ಟ್‌ ಸೆಪ್ಟೆಂಬರ್‌ 7 ಕ್ಕೆ ಅರ್ಜಿಯನ್ನು ಮುಂದೂಡಿಕೆ ಮಾಡಿತ್ತು. ಇದೀಗ ನಟಿ ರಾಗಿಣಿ ಬಂಧನ ಆಗಿರುವ ಕಾರಣ ನಿರೀಕ್ಷಣಾ ಜಾಮೀನು ಅರ್ಜಿ ಮಾನ್ಯತೆ ಕಳೆದುಕೊಂಡಿದ್ದು, ಸಾಮಾನ್ಯ ಜಾಮೀನು ಪಡೆಯಲು ವಕೀಲರು ಅರ್ಜಿ ಸಲ್ಲಿಸಬೇಕಿದೆ. ಆದರೆ ಶನಿವಾರ ಭಾನುವಾರ ಮಧ್ಯೆ ಬಂದಿದ್ದು, ಕೋರ್ಟ್‌ ಕಲಾಪ ನಡೆಯುವುದಿಲ್ಲ. ಇದೀಗ ಪೊಲೀಸರು ಕೋರ್ಟ್‌ ಎದುರು ಹಾಜರು ಮಾಡಲಿದ್ದಾರೆ.

ಸಿಸಿಬಿ ತನಿಖೆ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಹಾಗೂ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದು, ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುವ ವ್ಯಕ್ತಿ ಪಾರ್ಟಿಗಳಲ್ಲಿನ ಕಾಣಿಸುತ್ತಾರೆ. ಅವರು ಚಲನಚಿತ್ರ ನಟಿಯೊಂದಿಗೆ ಒಡನಾಟವಿತ್ತು. ಈ ಹಿಂದೆ ಈ ಬಗ್ಗೆ ತನಿಖೆಯೂ ಆಗಿತ್ತು. ಜಯನಗರ ಆರ್ ಟಿ ಓ ಕಚೇರಿಯಲ್ಲಿ ಕ್ಲರ್ಕ್‌ ಆಗಿ ಕೆಲಸ ಮಾಡುತ್ತಿದ್ದರು. ಅವರನ್ನು ಪ್ರಶ್ನೆ ಮಾಡಿ, ಫೋನ್ ಚೆಕ್‌ ಮಾಡಿದಾಗ ಸಾಕಷ್ಟು ಮಾಹಿತಿಗಳು ಸಿಕ್ಕಿವೆ. ಸುದೀರ್ಘ ವಿಚಾರಣೆ ಮಾಡಿದ ಬಳಿಕ ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದರು ಹಾಗೂ ಡ್ರಗ್ಸ್ ಕೊಡುತ್ತಿರುವ ಬಗ್ಗೆ ಸವಿಸ್ತಾರವಾಗಿ ಹೇಳಿದ್ದಾರೆ. ಎರಡನೇ ಹಂತದ ವಿಚಾರಣೆಯೂ ನಡೆಯುತ್ತಿದೆ ಎಂದಿದ್ದಾರೆ.

ಡ್ರಗ್ಸ್‌ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದವರು ಯಾರು..? ಎಲ್ಲಿ..? ಹೇಗೆ ನಡೆಯುತ್ತಿತ್ತು..? ರಾಹುಲ್ ರಿಯಲ್ ಎಸ್ಟೇಟ್ ಆರ್ಕಿಟೆಕ್ಟ್ ಎಂದು ಹೇಳಿಕೊಂಡಿದ್ದಾರೆ. ಬೇರೆ ದೇಶಗಳಿಗೂ ಭೇಟಿ ಮಾಡಿದ್ದರು. ಅವರನ್ನು ಡ್ರಗ್ಸ್‌ ದಂಧೆ ವಿಚಾರದಲ್ಲಿ ಬಂಧಿಸಲಾಗಿದೆ. ಹೊಸ ಎಫ್ ಐ ಆರ್ ದಾಖಲು ಮಾಡಿ ಡ್ರಗ್ಸ್ ವಿಚಾರಣೆ ಮಾಡುತ್ತಿದ್ದೇವೆ. ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡ್ರಗ್ಸ್ ಪ್ರಕರಣ ವಿಚಾರದಲ್ಲಿ ನಾವು ಯಾವುದನ್ನೂ ಮುಚ್ಚಿಡುತ್ತಿಲ್ಲ. ಎಲ್ಲದರ ಬಗ್ಗೆಯೂ ಮುಂದೆ ಗೊತ್ತಾಗುತ್ತದೆ ಎಂದು ಕಮಲ್‌ ಪಂಥ್‌ ಹೇಳಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com