ಶಿವಮೊಗ್ಗ ಕೆಎಫ್ ಡಿ ಹೈಟೆಕ್ ಲಾಬ್ ಸ್ಥಾಪನೆಗೆ ದಿಢೀರ್ ತಿಲಾಂಜಲಿ!
ರಾಜ್ಯ

ಶಿವಮೊಗ್ಗ ಕೆಎಫ್ ಡಿ ಹೈಟೆಕ್ ಲಾಬ್ ಸ್ಥಾಪನೆಗೆ ದಿಢೀರ್ ತಿಲಾಂಜಲಿ!

ಬೆಂಗಳೂರಿನಲ್ಲಿ ಕೂತು ತೀರ್ಮಾನ ಕೈಗೊಳ್ಳುವ ಅಧಿಕಾರಶಾಹಿಗೆ ಮಲೆನಾಡಿನ ಕಾಡಿನಂಚಿನ ಆಗುಹೋಗುಗಳ ಬಗ್ಗೆಯಾಗಲೀ, ಇಲ್ಲಿನ ಜನರ ಆತಂಕವಾಗಲೀ ಅರ್ಥವಾಗದು. ತಮ್ಮ ಮೂಗಿನ ನೇರಕ್ಕೆ ತೀರ್ಮಾನ ಕೈಗೊಳ್ಳುವ ಅವರಿಗೆ, ಅಂತಿಮವಾಗಿ ಜನಹಿತಕ್ಕಿಂತಲೂ ಇತರೆ ಆಸಕ್ತಿಗಳು, ಅನುಕೂಲಗಳೇ ಮುಖ್ಯವಾಗಿವೆ. ಹಾಗಾಗಿ, ಇದೊಂದು ರೀತಿಯಲ್ಲಿ ‘ದೇವರು ಕೊಟ್ಟರೂ ಪೂಜಾರಿ ಕೊಡಲಾರ’ ಎಂಬ ಸ್ಥಿತಿ!

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಇಡೀ ರಾಜ್ಯದ ಜನತೆ ಜೀವಕಂಟಕ ಕೋವಿಡ್-19 ಭೀತಿಯಲ್ಲಿರುವಾಗ, ಮಲೆನಾಡಿನ ಜನರ ಪಾಲಿನ ಭೀಕರ ಸಾಂಕ್ರಾಮಿಕ ಮಂಗನಕಾಯಿಲೆ ಅಥವಾ ಕ್ಯಾಸನೂರು ಫಾರೆಸ್ಟ್ ಡಿಸೀಸ್(ಕೆಎಫ್ ಡಿ) ಪತ್ತೆ ಮತ್ತು ಸಂಶೋಧನಾ ಉದ್ದೇಶದ ಅಂತಾರಾಷ್ಟ್ರೀಯ ಗುಣಮಟ್ಟದ ಪ್ರಯೋಗಾಲಯ(ಕೆಎಫ್ ಡಿ ಲ್ಯಾಬ್) ಸ್ಥಾಪನೆ ಪ್ರಸ್ತಾಪವನ್ನೇ ಕೈಬಿಡಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ.

ಸುಮಾರು ಆರು ದಶಕಗಳಿಂದ ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಪ್ರಮುಖವಾಗಿ ಪ್ರತಿ ವರ್ಷದ ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಈ ಮಾರಣಾಂತಿಕ ಸಾಂಕ್ರಾಮಿಕ, ಈವರೆಗೆ ಸಾವಿರಕ್ಕೂ ಅಧಿಕ ಮಂದಿಯ ಜೀವ ಬಲಿತೆಗೆದುಕೊಂಡಿದೆ. ಪ್ರತಿ ವರ್ಷ ನೂರಾರುಮಂದಿಗೆ ಸೋಂಕು ಹರಡುವುದು, ಹತ್ತಾರು ಮಂದಿ ಸಾವು ಕಾಣುವುದು ಮಲೆನಾಡಿನ ಕಾಡಂಚಿನ ಊರುಗಳಲ್ಲಿ ಸಾಮಾನ್ಯವಾಗಿದೆ. 2019-20ರಲ್ಲಿ ಸಾಗರ ತಾಲೂಕಿನ ಶರಾವತಿ ಕಣಿವೆಯ ಅರಳಗೋಡು ಪಂಚಾಯ್ತಿ ವ್ಯಾಪ್ತಿಯಲ್ಲಿ ದೀಢೀರ್ ಸೋಂಕು ಉಲ್ಬಣಗೊಂಡು 18ಕ್ಕೂ ಹೆಚ್ಚು ಮಂದಿ ಸಾವು ಕಂಡಿದ್ದರು. ನೂರಾರು ಮಂದಿಗೆ ಸೋಂಕು ಗಂಭೀರ ಸ್ವರೂಪಕ್ಕೆ ತಿರುಗಿತ್ತು. ಅಲ್ಲದೆ, ಜಿಲ್ಲೆಯಲ್ಲಿ ಒಟ್ಟು 23ಕ್ಕೂ ಹೆಚ್ಚು ಮಂದಿ ಆ ಬಾರಿ ರೋಗಕ್ಕೆ ಬಲಿಯಾಗಿದ್ದರು. ಆ ಹಿನ್ನೆಲೆಯಲ್ಲಿ ಮಂಗನ ಕಾಯಿಲೆ 1980ರ ದಶಕದ ಬಳಿಕ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಈ ಬಾರಿ(2020-21) ಕೂರ ಕಳೆದ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಸುಮಾರು 8 ಮಂದಿ ಬಲಿಯಾಗಿದ್ದಾರೆ.

ಪ್ರಮುಖವಾಗಿ, 1983-84ರಲ್ಲಿ ಜಿಲ್ಲೆಯಲ್ಲಿ ಆತಂಕಕಾರಿ ಪ್ರಮಾಣದಲ್ಲಿ, ಸುಮಾರು 69 ಮಂದಿಯನ್ನು ಬಲಿತೆಗೆದುಕೊಂಡಿದ್ದ ಈ ಸೋಂಕು ಆ ಬಳಿಕ ವರ್ಷಕ್ಕೆ ನಾಲ್ಕಾರು ಜೀವ ಬಲಿ ತೆಗೆದುಕೊಳ್ಳುತ್ತಿದ್ದರೂ, ದೊಡ್ಡ ಮಟ್ಟದ ಆತಂಕಕ್ಕೆ ಕಾರಣವಾಗಿರಲಿಲ್ಲ. ಆದರೆ ಕಳೆದ ಬಾರಿ ದಿಢೀರನೇ ಕೇವಲ ಒಂದು ಪಂಚಾಯ್ತಿ ವ್ಯಾಪ್ತಿಯಲ್ಲಿಯೇ ದಿಢೀರ್ ಉಲ್ಬಣಗೊಂಡಿತ್ತು. ರೋಗ ಭೀತಿಯಿಂದ ಊರಿನ ಬಹುತೇಕರು ಶಾಶ್ವತವಾಗಿ ಊರು ತೊರೆದು ವಲಸೆ ಹೋಗುವ ಮಟ್ಟಿಗೆ ಭೀಕರ ಪರಿಸ್ಥಿತಿ ನಿರ್ಮಾಣವಾಗಿತ್ತು.

ದಶಕಗಳ ಕಾಲ ಬಹುತೇಕ ವಿರಳವಾಗಿದ್ದ ಕೆಎಫ್ ಡಿ ವೈರಾಣು ಯಾಕೆ ಒಮ್ಮೆಲೇ ಭೀಕರ ದಾಳಿ ನಡೆಸುತ್ತಿದೆ? ದಶಕಗಳಷ್ಟು ಹಳೆಯ ವ್ಯಾಕ್ಸಿನನ್ನು ನಿಯಮಿತವಾಗಿ ತೆಗೆದುಕೊಂಡವರೂ ಸೋಂಕು ತಗುಲಿ ಮೃತಪಟ್ಟು ಪ್ರಕರಣಗಳೂ ವರದಿಯಾದ ಹಿನ್ನೆಲೆಯಲ್ಲಿ ವೈರಸ್ ಮತ್ತು ವ್ಯಾಕ್ಸಿನ್ ನಡುವೆ ಆಗಿರುವ ಬದಲಾವಣೆ ಏನು? ವೈರಸ್ ತನ್ನ ಶಕ್ತಿ ವೃದ್ಧಿಸಿಕೊಂಡಿದೆಯೇ? ಅಥವಾ ವ್ಯಾಕ್ಸಿನ್ ತನ್ನ ಶಕ್ತಿ ಕಳೆದುಕೊಂಡಿದೆಯೇ? ಜೊತೆಗೆ ಸೋಂಕಿಗೆ ಒಳಗಾದ ವ್ಯಕ್ತಿಯ ರಕ್ತದ ಮಾದರಿ ಪರೀಕ್ಷೆ ಮತ್ತು ಅದೇ ಹೊತ್ತಿಗೆ ಸೋಂಕಿತ ಮಂಗನ ಶವ ಪರೀಕ್ಷೆ, ಮಂಗನಿಂದ ಮಾನವನಿಗೆ ವೈರಸ್ ಹರಡುವ ವೈರಸ್ ವಾಹಕ ಉಣುಗು ಪರೀಕ್ಷೆ ಮುಂತಾದ ನಿರ್ಣಾಯಕ ಕೆಲಸಗಳಿಗೆ ಸಾಗರ ಅಥವಾ ಶಿವಮೊಗ್ಗದಲ್ಲಿ ವ್ಯವಸ್ಥೆಗಳಿಲ್ಲದೆ ಇರುವುದು ಕೂಡ ಚಿಕಿತ್ಸೆಯಲ್ಲಿ ವಿಳಂಬಕ್ಕೆ ಕಾರಣವಾಗಿ ಸಾವು ಹೆಚ್ಚಳಕ್ಕೆ ಕಾರಣವಾಗುತ್ತಿದೆಯೇ? ಎಂಬ ಹಲವು ಪ್ರಶ್ನೆಗಳು ಎದ್ದಿದ್ದವು.

ಆ ಹಿನ್ನೆಲೆಯಲ್ಲಿ ‘ಕೆಎಫ್ ಡಿ ಜನಜಾಗೃತಿ ಒಕ್ಕೂಟ’ ಸೇರಿದಂತೆ ವಿವಿಧ ಸಂಘಟನೆಗಳು ನಿರಂತರ ಹೋರಾಟದ ಮೂಲಕ ಸ್ಥಳೀಯ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಕೂಡಲೇ ಈ ಸಂಗತಿಗಳ ಬಗ್ಗೆ ಗಮನ ಹರಿಸಬೇಕು. ರೋಗ ನಿಯಂತ್ರಣದ ಜೊತೆಗೆ ಚಿಕಿತ್ಸೆ ಮತ್ತು ಸಕಾಲಿಕ ಸೋಂಕು ಪತ್ತೆಗೆ ಬೇಕಾದ ಅತ್ಯಾಧುನಿಕ ಲ್ಯಾಬ್, ವೈದ್ಯಕೀಯ ಸಿಬ್ಬಂದಿ ಒದಗಿಸಬೇಕು ಎಂದು ಆಗ್ರಹಿಸಿದ್ದವು. ಆ ಬಳಿಕ ಶಿವಮೊಗ್ಗ ನಗರದ ಪರಿಮಾಣು ಕ್ರಿಮಿ ಸಂಶೋಧನಾ ಕೇಂದ್ರದಲ್ಲಿ ಕೇವಲ ಮಾನವ ರಕ್ತದ ಮಾದರಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಉಣುಗು ಮತ್ತು ಮಂಗಗಳ ಕಳೇಬರವನ್ನು ಪರೀಕ್ಷೆಗಾಗಿ ಪುಣೆಯ ರಾಷ್ಟ್ರೀಯ ವೈರಾಣು ಸಂಶೋಧನಾಲಯಕ್ಕೆ ಕಳಿಸಲಾಗುತ್ತಿತ್ತು. ಅಲ್ಲಿ ದೇಶದ ಇತರೆ ಎಲ್ಲಾ ವೈರಾಣು ಪರೀಕ್ಷೆಗಳ ಬೇಡಿಕೆ ನಡುವೆ ಸಹಜವಾಗೇ ಈ ಮಾದರಿಗಳ ಪರೀಕ್ಷೆ ನಡೆಸಿ ವರದಿ ನೀಡಲು ತಿಂಗಳುಗಟ್ಟಲೆ ಸಮಯ ಹಿಡಿಯುತ್ತಿತ್ತು. ಹಾಗಾಗಿ ಸತ್ತಿರುವ ಮಂಗನ ದೇಹದಲ್ಲಿ ಸೋಂಕು ಇದೆಯೇ? ಇಲ್ಲವೆ? ಉಣುಗು ಕೆಎಫ್ ಡಿ ವೈರಾಣು ವಾಹಕವೇ ಅಲ್ಲವೆ? ಎಂಬುದನ್ನು ತಿಳಿದುಕೊಂಡು ರೋಗ ತಡೆ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಳಂಬ ಉಂಟಾಗಿ ರೋಗ ಹರಡುವಿಕೆ ಮತ್ತು ಸಾವಿನ ಸಂಖ್ಯೆ ಕೂಡ ಏರುತ್ತಿತ್ತು. ಈ ನಡುವೆ, ಕರೋನಾ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರಿನಿಂದ ಪುಣೆ ಕೇಂದ್ರ ಕೂಡ ಕೆಎಫ್ ಡಿ ಪ್ರಕರಣಗಳ ಮಾದರಿ ಪರೀಕ್ಷೆ ನಿಲ್ಲಿಸಿದೆ! ಹಾಗಾಗಿ 2019ರ ಡಿಸೆಂಬರ್ ಬಳಿಕ ಈವರೆಗೆ ಯಾವುದೇ ಮಂಗ ಮತ್ತು ಉಣ್ಣೆಯ (ಕೆಎಫ್ ಡಿ ಮಾದರಿಯ) ಪರೀಕ್ಷೆ ನಡೆದೇ ಇಲ್ಲ!

ಇಂತಹ ಬಿಕ್ಕಟ್ಟಿನ ದಿನಗಳು ಬರಲಿವೆ ಎಂಬ ಹಿನ್ನೆಲೆಯಲ್ಲಿ ಸ್ಥಳೀಯವಾಗಿಯೇ ಸುಸಜ್ಜಿತವಾದ ಉನ್ನತ ಮಟ್ಟದ ಪ್ರಯೋಗಾಲಯ ಸ್ಥಾಪಿಸಬೇಕು ಮತ್ತು ಆ ಮೂಲಕ ಶೀಘ್ರ ರೋಗ ಪತ್ತೆ ಮತ್ತು ಚಿಕಿತ್ಸೆ ಮೂಲಕ ಜೀವಹಾನಿ ತಡೆಯಬೇಕು, ಜೊತೆಗೆ ಸಂಶೋಧನೆಯ ಮೂಲಕ ರೋಗದ ಕಾರಣ, ಹರಡುವ ವಿಧಾನ ಮತ್ತು ಶಾಶ್ವತವಾಗಿ ರೋಗ ನಿರ್ಮೂಲನೆಯ ಮಾರ್ಗೋಪಾಯಗಳ ಕುರಿತು ಸಂಶೋಧನೆಗೆ ಈಗಲಾದರೂ ಗಂಭೀರ ಪ್ರಯತ್ನಗಳು ನಡೆಯಬೇಕು ಎಂದು ಸಂಘಟನೆಗಳು ಆಗ್ರಹಿಸಿದ್ದರು. ಮಲೆನಾಡಿನ ವಿವಿಧ ಜನಪ್ರತಿನಿಧಿಗಳೂ ಸರ್ಕಾರದ ಮೇಲೆ ಒತ್ತಡ ತಂದಿದ್ದರು. ಕಳೆದ ಮಾರ್ಚ್ ನಲ್ಲಿ ಸಾಗರದ ಶಾಸಕ ಹರತಾಳು ಹಾಲಪ್ಪ ಸ್ವತಃ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಸದನದಲ್ಲಿ ದನಿ ಎತ್ತಿದ್ದರು.

ಈ ನಡುವೆ 2019ರ ಬಜೆಟ್ ನಲ್ಲಿ ಅಂದಿನ ರಾಜ್ಯ ಸರ್ಕಾರ ಐದು ಕೋಟಿ ರೂ. ಅನುದಾನದೊಂದಿಗೆ, ಮಂಗನ ಕಾಯಿಲೆ ಪತ್ತೆ ಮತ್ತು ಸಂಶೋಧನೆಗಾಗಿ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಉನ್ನತ ಮಟ್ಟದ ಪ್ರಯೋಗಾಲಯ ಸ್ಥಾಪಿಸಲಾಗುವುದು ಎಂದು ಘೋಷಿಸಿತ್ತು. ಬಳಿಕ ಬಂದ ಜಿಲ್ಲೆಯವರೇ ಆದ ಬಿ ಎಸ್ ಯಡಿಯೂರಪ್ಪ ಅವರ ಸರ್ಕಾರ ಕೂಡ ಐದು ಕೋಟಿ ರೂ, ಅನುದಾನ ಘೋಷಿಸಿ ಶೀಘ್ರ ಪ್ರಯೋಗಾಲಯ ಸ್ಥಾಪಿಸುವುದಾಗಿ ಹೇಳಿತ್ತು. ಆ ಹಿನ್ನೆಲೆಯಲ್ಲಿ ಒಟ್ಟು 25 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಜೈವಿಕ ಭದ್ರತೆ ಶ್ರೇಣಿ-3 ಪ್ಲಸ್ ಮಟ್ಟದ ರಾಜ್ಯದಲ್ಲೇ ಮೊದಲ ಪ್ರಯೋಗಾಲಯ ಮತ್ತು ಸಂಶೋಧನಾ ಕೇಂದ್ರ ಆರಂಭಕ್ಕೆ ಚಾಲನೆ ನೀಡಲಾಗಿತ್ತು. ಮುಖ್ಯವಾಗಿ ರಕ್ತದ ಮಾದರಿ, ಮೃತ ಮಂಗಗಳ ಕಳೇಬರ ಮತ್ತು ಉಣುಗು ಮಾದರಿಗಳನ್ನು ಮಲೆನಾಡಿನ ಕಾಡಂಚಿನ ಕುಗ್ರಾಮಗಳಿಂದ ಪುಣೆಗೆ ಸಾಗಿಸುವ ಹರಸಾಹಸದ ಕಾರ್ಯ ಮತ್ತು ಅದಕ್ಕಾಗಿ ಆಗುವ ಕಾಲಾಹರಣ ತಪ್ಪಿಸುವ ಉದ್ದೇಶದಿಂದ ಈ ಪ್ರಯೋಗಾಲಯ ಸೋಂಕು ವ್ಯಾಪ್ತಿಯ ಪ್ರದೇಶದಲ್ಲೇ ಆಗುವುದು ಮುಖ್ಯವಾಗಿತ್ತು.

ಪುಣೆಯ ರಾಷ್ಟ್ರೀಯ ವೈರಾಣು ಸಂಶೋಧನಾಲಯ(ಎನ್ಐವಿ) ಹೊರತುಪಡಿಸಿ ದೇಶದ ಅತ್ಯಾಧುನಿಕ ವೈರಾಣು ಪರೀಕ್ಷಾ ಪ್ರಯೋಗಾಲಯ(ಕೆಎಫ್ ಡಿ ಸಂಶೋಧನಾ ಕೇಂದ್ರ) ನಿರ್ಮಾಣದ ವಿಷಯದಲ್ಲಿ ಕೆಲವು ತಿಂಗಳ ಹಿಂದೆ ಶಿವಮೊಗ್ಗ ಮತ್ತು ಸಾಗರ ಜನಪ್ರತಿನಿಧಿಗಳ ನಡುವೆ ಹಗ್ಗಜಗ್ಗಾಟವೂ ನಡೆದಿತ್ತು. ಈ ನಡುವೆ, ತಜ್ಞರ ಸಲಹೆ ಮೇರೆಗೆ ಪ್ರಯೋಗಾಲಯದ ಸಂಪೂರ್ಣ ರೂಪುರೇಷೆ ಸಹಿತ ವಿಸ್ತೃತ ಯೋಜನಾ ವರದಿ(ಡಿಪಿಆರ್)ಯನ್ನು ಸಿದ್ಧಪಡಿಸಿದ್ದು, ಸದ್ಯದಲ್ಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು ಮಾಧ್ಯಮ ಹೇಳಿಕೆಯನ್ನೂ ನೀಡಿದ್ದರು.

ಆದರೆ, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಮಲೆನಾಡಿನ ಜನ ಕರೋನಾ ಭೀತಿಯ ನಡುವೆ ಇರುವಾಗಲೇ ರಾಜಧಾನಿಯ ಉನ್ನತ ಮಟ್ಟದ ಅಧಿಕಾರಿಗಳು ಸದ್ದಿಲ್ಲದೆ ಪ್ರಯೋಗಾಲಯ ಸ್ಥಾಪನೆಯನ್ನು ಕೈಬಿಟ್ಟು, ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಈಗಾಗಲೇ ಇರುವ ಸಾಮಾನ್ಯ ವೈರಾಣು ಪತ್ತೆ ಪ್ರಯೋಗಾಲಯದಲ್ಲೇ ಸೋಂಕಿತರ ಮಾದರಿ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಈ ಸಂಬಂಧ ಈಗಾಗಲೇ ಎರಡು ಸುತ್ತಿನ ಸಭೆಗಳೂ ನಡೆದಿವೆ. ಆಗಸ್ಟ್ ಕೊನೆಯ ವಾರದ ಸಭೆಯಲ್ಲಿ ಡಿಪಿಆರ್ ತಯಾರಿಸಿದ್ದೇವೆ ಎಂದಿದ್ದ ಹಿರಿಯ ಅಧಿಕಾರಿಗಳೇ, ಕರೋನಾ ಸಂಕಷ್ಟ ಮತ್ತು ಆರ್ಥಿಕ ಬಿಕ್ಕಟ್ಟಿನ ನೆಪ ಹೇಳಿ ಡಿಪಿಆರ್ ಬದಿಗಿಟ್ಟಿದ್ದರು. ಬಳಿಕ ಸೆ.1ರಂದು ನಡೆದ ಮತ್ತೊಂದು ಸಭೆಯಲ್ಲಿ; ಸದ್ಯದ ಸ್ಥಿತಿಯಲ್ಲಿ ಪ್ರತ್ಯೇಕ ಪ್ರಯೋಗಾಲಯ ಬೇಡ. ಬೆಂಗಳೂರಿನಲ್ಲಿ ಈಗಾಗಲೇ ಇರುವ ಸಾಮಾನ್ಯ ಲ್ಯಾಬುಗಳನ್ನೇ ಬಳಸಿಕೊಳ್ಳಬಹುದು ಎಂದು ತಿರ್ಮಾನಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಉನ್ನತ ಮೂಲಗಳು ಹೇಳಿವೆ.

ಆದರೆ, “ಪ್ರಮುಖವಾಗಿ ರೋಗ ಪತ್ತೆಯಲ್ಲಿ ಆಗುವ ವಿಳಂಬ ಮತ್ತು ಅದರಿಂದಾಗಿ ಚಿಕಿತ್ಸೆಯಲ್ಲಿ ಆಗುವ ವಿಳಂಬದ ಹಿನ್ನೆಲೆಯಲ್ಲಿ ಸಾಕಷ್ಟು ಸೋಂಕಿತರು ಜೀವಕಳೆದುಕೊಳ್ಳುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಸೋಂಕಿನ ಪ್ರದೇಶವಾದ ಶಿವಮೊಗ್ಗ ಜಿಲ್ಲೆಯಲ್ಲಿಯೇ ಕೆಎಫ್ ಡಿ ರೋಗ ಸಂಶೋಧನಾ ಕೇಂದ್ರ ಸ್ಥಾಪನೆಯಾಗಬೇಕು ಮತ್ತು ಸೋಂಕಿನ ಕುರಿತ ಹೆಚ್ಚಿನ ಸಂಶೋಧನೆಯ ದೃಷ್ಟಿಯಿಂದಲೂ ಪ್ರಯೋಗಾಲಯ ಇಲ್ಲಿರುವುದು ಅನುಕೂಲಕರ ಎಂಬುದು ನಮ್ಮ ಒತ್ತಾಯ. ಆದರೆ, ಈಗ ಇಲ್ಲಿನ ಜನ ಮತ್ತು ಜನಪ್ರತಿನಿಧಿಗಳ ಗಮನಕ್ಕೇ ತಾರದೆ, ಉನ್ನತ ಅಧಿಕಾರಿಗಳು ಪ್ರಯೋಗಾಲಯ ಪ್ರಸ್ತಾವನೆಯನ್ನೇ ಕೈಬಿಡಲು ನಿರ್ಧರಿಸಿರುವುದು ಸರಿಯಲ್ಲ. ಇಂತಹ ಏಕಪಕ್ಷೀಯ ನಿರ್ಧಾರ ಮಲೆನಾಡಿನ ಜನರಿಗೆ ಬಗೆಯುವ ದ್ರೋಹ. ಕೂಡಲೇ ಇಂತಹ ಪ್ರಸ್ತಾಪವನ್ನು ಕೈಬಿಟ್ಟು, ಈ ಹಿಂದಿನಂತೆಯೇ ಜಿಲ್ಲೆಯಲ್ಲಿಯೇ(ಯಾವ ಜಾಗವಾದರೂ) ಪ್ರಯೋಗಾಲಯ ಸ್ಥಾಪನೆಯಾಗಬೇಕು ಮತ್ತು ಹೆಚ್ಚಿನ ವಿಳಂಬವಿಲ್ಲದೆ ಶೀಘ್ರವೇ ಕಾಮಗಾರಿ ಪ್ರಾರಂಭಿಸಬೇಕು” ಎಂದು ಕೆಎಫ್ ಡಿ ಜನಜಾಗೃತಿ ಒಕ್ಕೂಟದ ಸಂಚಾಲಕ ಹಾಗೂ ಹಿರಿಯ ವಕೀಲ ಕೆ ಪಿ ಶ್ರೀಪಾಲ್ ಆಗ್ರಹಿಸಿದ್ದಾರೆ.

ಮಲೆನಾಡಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಿನ ಮಂಗಗಳಲ್ಲಿ ಕಂಡುಬರುವ ಒಂದು ವಿಧದ ಉಣುಗು ಮೂಲಕ ಈ ವೈರಾಣು ಹರಡುತ್ತಿದೆ. ಮಂಗನಿಂದ ವಿವಿಧ ರೀತಿಯಲ್ಲಿ ಮನುಷ್ಯರಿಗೆ ಹರಡುವ ವೈರಾಣು, ಸಕಾಲಿಕ ಚಿಕಿತ್ಸೆ ಸಿಗದೇ ಹೋದಲ್ಲಿ ಮತ್ತು ಅಗತ್ಯ ರೋಗ ನಿರೋಧಕ ಶಕ್ತಿ ಇಲ್ಲದೇ ಹೋದಲ್ಲಿ ಜೀವ ಬಲಿತೆಗೆದುಕೊಳ್ಳುತ್ತದೆ. ಪ್ರತಿ ವರ್ಷದ ಅಕ್ಟೋಬರ್-ನವೆಂಬರಿನಿಂದ ಮೇ-ಜೂನ್ ವರೆಗೆ ಸಕ್ರಿಯವಾಗಿರುವ ವೈರಸ್ ಮಳೆಗಾಲದಲ್ಲಿ ನಿಷ್ಕ್ರಿಯವಾಗಿರುತ್ತದೆ. ಆದರೆ, 1957ರಲ್ಲಿ ಸೋಂಕು ಪತ್ತೆಯ ಬಳಿಕ ಈ ವೈರಸ್ ಕುರಿತು ಗಣನೀಯ ಸಂಶೋಧನೆಯೇ ಆಗಿಲ್ಲ. ಈ ಸುದೀರ್ಘ ಅವಧಿಯಲ್ಲಿ ವೈರಾಣುವಿನಲ್ಲಿ ಆಗಿರಬಹುದಾದ ಬದಲಾವಣೆಗಳೇನು? 1990ರ ಸುಮಾರಿಗೆ ಕಂಡುಹಿಡಿದ ಲಸಿಕೆ ಈಗಲೂ ವೈರಾಣುವಿನ ಮೇಲೆ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತಿದೆಯೇ? ಸದ್ಯ ಬೆಂಗಳೂರಿನ ಪ್ರಾಣಿ ರೋಗ ಸಂಶೋಧನಾ ಕೇಂದ್ರವಾದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ(ಎನ್ ಎ ಎಚ್ ವಿಬಿ)ಯಲ್ಲಿ ತಯಾರಿಸುತ್ತಿರುವ ಲಸಿಕೆಗಳ ಗುಣಮಟ್ಟ ಏನು? ಆ ಲಸಿಕೆಗಳಿಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮತಿ ಇದೆಯೇ? ಎಂಬ ಪ್ರಶ್ನೆಗಳ ಹಿನ್ನೆಲೆಯಲ್ಲಿ ವೈರಾಣು ಮತ್ತು ಲಸಿಕೆಯ ಕುರಿತ ಹೆಚ್ಚಿನ ಅಧ್ಯಯನವೂ ಆಗಬೇಕಿದೆ. ಆ ಮೂಲಕ ಈ ವೈರಾಣು ಸೋಂಕು ಕೂಡ ಮುಂದೊಂದು ದಿನ ಕರೋನಾದಂತಹ ಭೀಕರ ಸ್ವರೂಪ ತಾಳುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.

ಆ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಬ್ರಿಟನ್ ವೈದ್ಯಕೀಯ ಸಂಶೋಧನಾ ಸಂಸ್ಥೆ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಸೇರಿದಂತೆ ವಿವಿಧ ಸಂಸ್ಥೆಗಳ ಜಂಟಿ ಸಹಭಾಗಿತ್ವದಲ್ಲಿ ಕಳೆದ ಎರಡು ವರ್ಷದಿಂದ ಸಂಶೋಧನೆಯ ಪ್ರಯತ್ನಗಳೂ ಆರಂಭವಾಗಿವೆ. ಆ ಸಂಶೋಧನೆಗೂ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಯೋಗಾಲಯ ಶಿವಮೊಗ್ಗದಲ್ಲೇ ಆಗಬೇಕಿದೆ. ಇಲ್ಲವಾದಲ್ಲಿ, ಇದೇ ಮೊದಲ ಬಾರಿಗೆ ವ್ಯವಸ್ಥಿತವಾಗಿ ಬಹುಕೋಟಿ ರೂ. ಅನುದಾನದಲ್ಲಿ ನಡೆಯುತ್ತಿರುವ ಸೋಂಕು ಕುರಿತ ಸಂಶೋಧನೆಗೂ ಹಿನ್ನೆಡೆಯಾಗಲಿದೆ.

ಆದರೆ, ಬೆಂಗಳೂರಿನಲ್ಲಿ ಕೂತು ತೀರ್ಮಾನ ಕೈಗೊಳ್ಳುವ ಅಧಿಕಾರಶಾಹಿಗೆ ಮಲೆನಾಡಿನ ಕಾಡಿನಂಚಿನ ಆಗುಹೋಗುಗಳ ಬಗ್ಗೆಯಾಗಲೀ, ಇಲ್ಲಿನ ಜನರ ಆತಂಕವಾಗಲೀ ಅರ್ಥವಾಗದು. ತಮ್ಮ ಮೂಗಿನ ನೇರಕ್ಕೆ ತೀರ್ಮಾನ ಕೈಗೊಳ್ಳುವ ಅವರಿಗೆ, ಅಂತಿಮವಾಗಿ ಜನಹಿತಕ್ಕಿಂತಲೂ ಇತರೆ ಆಸಕ್ತಿಗಳು, ಅನುಕೂಲಗಳೇ ಮುಖ್ಯವಾಗಿವೆ. ಹಾಗಾಗಿ, ಇದೊಂದು ರೀತಿಯಲ್ಲಿ ‘ದೇವರು ಕೊಟ್ಟರೂ ಪೂಜಾರಿ ಕೊಡಲಾರ’ ಎಂಬ ಸ್ಥಿತಿ!

Click here to follow us on Facebook , Twitter, YouTube, Telegram

Pratidhvani
www.pratidhvani.com