ಹಿಂದುತ್ವ ಕಾರ್ಯಕರ್ತರ ಕೇಸ್‌ ವಾಪಸ್:‌ ʼಹೋರಾಟಗಾರʼರಿಗೆ ಹೊಸ ವ್ಯಾಖ್ಯಾನ ನೀಡಿದ ಸರ್ಕಾರ
ರಾಜ್ಯ

ಹಿಂದುತ್ವ ಕಾರ್ಯಕರ್ತರ ಕೇಸ್‌ ವಾಪಸ್:‌ ʼಹೋರಾಟಗಾರʼರಿಗೆ ಹೊಸ ವ್ಯಾಖ್ಯಾನ ನೀಡಿದ ಸರ್ಕಾರ

ಪೊಲೀಸರು ʼವಾಪಸ್‌ ಪಡೆದುಕೊಳ್ಳಬಹುದಾದ ಪ್ರಕರಣ ಅಲ್ಲ, ಈ ಪ್ರಕರಣಗಳನ್ನು ಕಾನೂನು ಇಲಾಖೆ ವಾಪಸ್ ಪಡೆದುಕೊಳ್ಳುವುದು ಸೂಕ್ತವಲ್ಲʼ ಎಂದು ಸಲಹೆ ಕೊಟ್ಟ ಬಳಿಕವೂ ಹಿಂದುತ್ವ ಕಾರ್ಯಕರ್ತರ ಮೇಲಿರುವ ಕ್ರಿಮಿನಲ್‌ ಕೇಸ್‌ಗಳನ್ನು ರದ್ದುಗೊಳಿಸುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಸ್ವಪಕ್ಷೀಯರ ಹಿತಾಸಕ್ತಿಗಾಗಿ ಅಧಿಕಾರ ದುರುಪಯೋಗಿಸಿಕೊಂಡಿದೆ.

ಕೃಷ್ಣಮಣಿ

ರಾಜ್ಯ ಹಾಗೂ ದೇಶದಲ್ಲಿ ಸಾಕಷ್ಟು ಸಂಘಟನೆಗಳು ಕೆಲಸ ಮಾಡುತ್ತವೆ. ಹಲವಾರು ಬಾರಿ ಸಂಘಟನೆಗಳು ವಿವಿಧ ಕಾರ್ಯ ನಿರ್ವಹಣೆ ಮಾಡುತ್ತ ಸಾಮಾಜಿಕ ಜವಾಬ್ದಾರಿಯಿಂದ ಸಾಕಷ್ಟು ಬಾರಿ ಸಾಕಷ್ಟು ಕಡೆಗಳಲ್ಲಿ ಹೋರಾಟ ಮಾಡುತ್ತಾರೆ. ಈ ರೀತಿಯ ಹೋರಾಟದಲ್ಲಿ ಪೊಲೀಸರಿಂದ ಕೇಸ್ ಗಳನ್ನು ಹಾಕಿಸಿಕೊಂಡಿರುತ್ತಾರೆ. ಸಾಕಷ್ಟು ವರ್ಷಗಳ ಕಳೆದರೂ ಕೋರ್ಟ್ ಗಳಿಗೆ ಅಲೆದಾಡುವುದು ತಪ್ಪುವುದಿಲ್ಲ. ನ್ಯಾಯ ಪಡೆಯಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಸಾಕಷ್ಟು ಹೋರಾಟಗಾರರು ಇಂದಿಗೂ ಬಡತನದಲ್ಲೇ ಬದುಕು ಸಾಗಿಸುತ್ತಿದ್ದು, ಕೋರ್ಟ್ ಗೆ ಹೋಗಲು, ವಕೀಲರಿಗೆ ಹಣ ಪಾವತಿ ಮಾಡಲು ಆಗದೆ ಇರುವ ಅದೆಷ್ಟೋ ರೈತ ಹೋರಾಟಗಾರರಿದ್ದಾರೆ. ನೀರು ಬಿಡುಗಡೆ ಮಾಡಿ ಎನ್ನುವ ಆಗ್ರಹದಿಂದಲೋ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯಂತಹ ರೈತ ವಿರೋಧಿ ನಿಲುವುಗಳು ಪ್ರಕಟ ಆಗುವುದರಿಂದಲೋ ರೈತರು ಹೋರಾಟ ಮಾಡಿ ಸಮಸ್ಯೆ ಎದುರಿಸುತ್ತಿರುತ್ತಾರೆ. ಸಮಾಜಕ್ಕಾಗಿ ಹೋರಾಟ ಮಾಡಿದವರು ದೀರ್ಘ ಕಾಲ ಸಮಸ್ಯೆ ಅನುಭವಿಸಬಾರದು ಎನ್ನುವ ಕಾರಣಕ್ಕೆ ಪ್ರಕರಣ ವಾಪಸ್‌ಪಡೆಯುವ ಪದ್ದತಿ ಜಾರಿಯಲ್ಲಿದೆ. ವಿಶೇಷ ಪ್ರಕರಣ ಎಂದು ಪರಿಗಣಿಸಿ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಕೇಸ್‌ಗಳನ್ನು ವಾಪಸ್ ಪಡೆದುಕೊಳ್ಳುತ್ತಾರೆ. ಇದೇ ರೀತಿ ರಾಜ್ಯ ಸರ್ಕಾರ ಕೇಸ್‌ ವಾಪಸ್‌ ಪಡೆಯುವುದಕ್ಕಾಗಿ ಸಂಪುಟ ಅಂಗೀಕಾರ ಮಾಡಿತ್ತು.

ಆಗಸ್ಟ್‌ 20 ರಂದು ನಡೆದ ಸಚಿವ ಸಂಪುಟದಲ್ಲಿ 62 ರೈತರ ಪ್ರಕರಣಗಳನ್ನು ವಾಪಸ್‌ ಪಡೆಯುವ ನಿರ್ಧಾರವಾಗಿತ್ತು. ಕ್ಯಾಬಿನೆಟ್‌ ಸಭೆ ಬಳಿಕ ಮಾತನಾಡಿದ್ದ ಕಾನೂನು ಸಚಿವ ಜೆಸಿ ಮಾಧುಸ್ವಾಮಿ, ರೈತರ ಮೇಲಿನ 62 ಕೇಸ್ ಹಿಂಪಡೆಯಲು ಸಚಿವ ಸಂಪುಟ ಅಸ್ತು ಎಂದಿದೆ. 62 ಮೊಕದ್ದಮೆ ಹಿಂಪಡೆಯಲು ಅನುಮೋದನೆ ಪಡೆಯಲಾಗಿದೆ. ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಕೇಸ್‌ಗಳನ್ನು ವಾಪಸ್‌ ಪಡೆಯುತ್ತೇವೆ. ಆದರೆ ಖಾಸಗಿ ಪ್ರಕರಣಗಳ ವಾಪಸ್ ಪಡೆಯುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ರೈತ ಹೋರಾಟದ ಕೇಸ್ ಮಾತ್ರ ವಾಪಸ್ ಪಡೆಯುತ್ತೇವೆ ಎಂದಿದ್ದರು. ರೈತರ ಮೇಲಿನ ಕೇಸ್‌ಗಳನ್ನು ಸರ್ಕಾರ ವಾಪಸ್‌ ಪಡೆಯುತ್ತದೆ ಎನ್ನುವ ಮಾಹಿತಿ ಸಿಗುತ್ತಿದ್ದ ಅನ್ನದಾತ ಹೋರಾಟಗಾರರ ಬಳಗದಲ್ಲಿ ಸಂಭ್ರಮದ ಹೊನಲು ಹರಿದಿತ್ತು. ಆದರೀಗ ಸರ್ಕಾರ ಹೋರಾಟಗಾರರು ಎಂದರೆ ಹೀಗೆ..! ಎನ್ನುವ ಮೂಲಕ ಹೊಸ ವ್ಯಾಖ್ಯಾನ ಬರೆಯಲು ಮುಂದಾಗಿದೆ.

ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ಕೇಸ್‌ ವಾಪಸ್‌..!

ಅಚ್ಚರಿ ಆದರೂ ಇದು ಸತ್ಯ. ರೈತ ನಾಯಕರು, ಹೋರಾಟಗಾರರ ವಿರುದ್ಧದ ಮೊಕದ್ದಮೆಗಳನ್ನು ವಾಪಸ್‌ ಪಡೆಯುತ್ತೇವೆ ಎಂದಿದ್ದ ರಾಜ್ಯ ಸರ್ಕಾರ ರೈತ ನಾಯಕರನ್ನು ಬದಿಗಿಟ್ಟು, ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ಕೇಸ್‌ಗಳನ್ನು ವಾಪಸ್‌ ಪಡೆದುಕೊಂಡಿದೆ. ವಿಶೇಷ ಎಂದರೆ ಪೊಲೀಸ್‌ ಡಿಜಿ, ಐಜಿಪಿ ಮಟ್ಟದ ಅಧಿಕಾರಿಗಳು ʼಇದು ವಾಪಸ್‌ ಪಡೆದುಕೊಳ್ಳಬಹುದಾದ ಪ್ರಕರಣ ಅಲ್ಲ, ಈ ಪ್ರಕರಣಗಳನ್ನು ಕಾನೂನು ಇಲಾಖೆ ವಾಪಸ್ ಪಡೆದುಕೊಳ್ಳುವುದು ಸೂಕ್ತವಲ್ಲʼ ಎಂದು ಸಲಹೆ ಕೊಟ್ಟ ಬಳಿಕವೂ ಹಿಂದುತ್ವ ಕಾರ್ಯಕರ್ತರ ಮೇಲಿರುವ ಕ್ರಿಮಿನಲ್‌ ಕೇಸ್‌ಗಳನ್ನು ರದ್ದುಗೊಳಿಸುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಸ್ವಪಕ್ಷೀಯರ ಹಿತಾಸಕ್ತಿಗಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಆದರೆ ಸರ್ಕಾರ ಮಾತ್ರ ವೈಯಕ್ತಿಕ ಪ್ರಕರಣಗಳು ಹಾಗೂ ಗಂಭೀರ ಸ್ವರೂಪದ ಮೊಕದ್ದಮೆಗಳನ್ನು ವಾಪಸ್ ಪಡೆದಿಲ್ಲ ಎಂದು ಸಮಜಾಯಿಷಿ ನೀಡಿದೆ. ಆದರೆ ಈಗ ನಾವು ಹೇಳುವ ಕೆಲವೊಂದಿಷ್ಟು ಪ್ರಕರಣಗಳು ಸೂಕ್ತವೋ..? ಅಕ್ರಮ ಅನ್ಯಾಯವೋ ಎಂದು ನೀವೇ ನಿರ್ಧಾರ ಮಾಡಬೇಕಿದೆ.

ಹೋರಾಟಗಾರರ ಹೆಸರಲ್ಲಿ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧದ ಗಂಭೀರ ಸ್ವರೂಪದ ಪ್ರಕರಣಗಳು ಹಿಂದಕ್ಕೆ ಪಡೆಯಲಾಗಿದೆ. ಈ ಎಲ್ಲಾ ಪ್ರಕರಣಗಳು ಕ್ರಿಮಿನಲ್ ಪ್ರಕರಣಗಳು ಹಾಗೂ ಗಂಭೀರ ಸ್ವರೂಪದ ಕೇಸ್‌ಗಳಾಗಿವೆ. ಡಿಜಿ-ಐಜಿಪಿ ಕಚೇರಿ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಕಾನೂನು ಇಲಾಖೆ ಬಹುತೇಕ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತಡಿಸಿದ ಬಳಿಕವೂ ಎಲ್ಲಾ ಅಭಿಪ್ರಾಯವನ್ನು ಕಡೆಗಣಿಸಿ ಕೇಸ್‌ ವಾಪಸ್‌ ಪಡೆದುಕೊಳ್ಳಾಗಿದೆ.

ಹೋರಾಟಗಾರ - ಕೇಸ್‌ ನಂ: 01

ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ದಾಖಲಾಗಿದ್ದ ಕೇಸ್ ವಾಪಸ್ ಪಡೆದುಕೊಳ್ಳಲಾಗಿದೆ. ಸಂಸದ ಪ್ರತಾಪ್‌ಸಿಂಹ ಡಿಸೆಂಬರ್‌3 ರಂದು 2017 ರಂದು ಹುಣಸೂರು ಪಟ್ಟಣದಲ್ಲಿ ಹನುಮ ಜಯಂತಿ ಪ್ರಯುಕ್ತ ಮಾಡಿದ ಬೃಹತ್‌ರ್ಯಾಲಿ ನಡೆಸಲು ಅನುಮತಿ ಇರಲಿಲ್ಲ. ಹುಣಸೂರಿನಲ್ಲಿ 114 ನಿಷೇಧಾಜ್ಞೆ ಜಾರಿ ಇದ್ದರೂ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಲು ಯತ್ನಿಸಿದ್ದರು. ಈ ವೇಳೆ ಸಂಸದ ಪ್ರತಾಪ್ ಸಿಂಹ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮೇಲೆ ಕಾರನ್ನು ವೇಗವಾಗಿ ನುಗ್ಗಿಸಿದ ಆರೋಪ ಇತ್ತು. ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಐಪಿಸಿ 279, 353, 188 ಮತ್ತು 332ರಡಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ರಾಜ್ಯ ಸರ್ಕಾರ ಹೋರಾಟಗಾರರ ಹೆಸರಿನಲ್ಲಿ ಮೊಕದ್ದಮ್ಮೆ ವಾಪಸ್‌ ಪಡೆದಿದೆ. ವಾಪಸ್‌ ಪಡೆಯಲು ಯೋಗ್ಯವಲ್ಲ ಎಂದರೂ ಹಠ ಹಿಡಿದು ವಾಪಸ್‌ ತೆಗೆದುಕೊಳ್ಳಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದೇ ಪ್ರಕರಣದಲ್ಲಿ ಹನುಮ ಜಯಂತಿ ಪ್ರಯುಕ್ತ ಮೆರವಣಿಗೆ ನಡೆಸಿದ ಹಿನ್ನೆಲೆ ಹುಣಸೂರು ಪಟ್ಟಣ ಠಾಣೆಯಲ್ಲಿ ದಾಖಲಾಗಿದ್ದ ಬೆಂಬಲಿಗರ ವಿರುದ್ಧದ ಪ್ರಕರಣಗಳನ್ನೂ ನ್ನೂ ವಾಪಸು ಪಡೆದುಕೊಂಡಿದೆ. ಇನ್ನೂ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ದಾಂಧಲೆ ನಡೆಸಿ, ಕೋಮು ಗಲಭೆಗೆ ಪ್ರಚೋದಿಸಿದ ಆರೋಪದಡಿ ಹಿಂದೂ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನೂ ವಾಪಸು ಪಡೆದುಕೊಳ್ಳಲಾಗಿದೆ.

ಹೋರಾಟಗಾರ - ಕೇಸ್‌ ನಂ: 02

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರ ಬೆಂಬಲಿಗರ ಮೇಲಿನ ಕೇಸ್ ವಾಪಾಸ್ ಪಡೆಯಲು ಮುಂದಾಗಿದೆ. ಸಿಎಂರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಬೆಂಬಲಿಗರ ವಿರುದ್ಧ ಫೆಬ್ರವರಿ 6, 2019ರಂದು ದಾವಣಗೆರೆಯ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಎಂ.ಪಿ. ರೇಣುಕಾಚಾರ್ಯರ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಧಾನಸಭಾ ಕ್ಷೇತ್ರದ ಚುನಾವಣೆ ವೇಳೆ ರೇಣುಕಾಚಾರ್ಯ ಜಯಗಳಿಸಿದ ಬೆನ್ನಲ್ಲೇ ಬಿಜೆಪಿ ಬೆಂಬಲಿಗರು ಹೊನ್ನಾಳಿ ಪಟ್ಟಣದಲ್ಲಿ ಜೈಕಾರ ಹಾಕುತ್ತಾ ಅಕ್ರಮವಾಗಿ ಗುಂಪು ಕಟ್ಟಿಕೊಂಡಿದ್ದರು. ಕಾಂಗ್ರೆಸ್ ಮುಖಂಡರಾದ ಹೆಚ್‌.ಪಿ. ಮಂಜಪ್ಪ ಮನೆ ಹತ್ತಿರ ನಿಂದಿಸುತ್ತಾ ಸುತ್ತಾಡಿದ್ದರು. ಕಾಂಗ್ರೆಸ್‌ ಮುಖಂಡರ ಮನೆಯವರೊಂದಿಗೂ ಜಗಳ ಮಾಡಿ, ಹಲ್ಲೆ ಮಾಡಿ ಕೊಲೆ ಮಾಡಬೇಕೆಂಬ ಉದ್ದೇಶದಿಂದ ಮಂಜಪ್ಪರ ಸಹೋದರನ ಅಂಗಡಿ ಮುಂದೆ ಪಟಾಕಿ ಸಿಡಿಸಲು ಹೋಗಿದ್ದರು. ಆ ವೇಳೆ ಅಲ್ಲಿ ಜಗಳವಾಡಿ ಇಬ್ಬರಿಗೆ ಚಾಕು ಇರಿದ ಆರೋಪ ಇತ್ತು. ಈ ಸಂಬಂಧ ಹೊನ್ನಾಳಿ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 231/2018 ಕಲಂ ಅಡಿ 143, 144, 147, 148 ಮತ್ತು 504, 307, 323, 324 ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ.

ಹಿಂದುತ್ವ ಕಾರ್ಯಕರ್ತರ ಕೇಸ್‌ ವಾಪಸ್:‌ ʼಹೋರಾಟಗಾರʼರಿಗೆ ಹೊಸ ವ್ಯಾಖ್ಯಾನ ನೀಡಿದ ಸರ್ಕಾರ

ಹೋರಾಟಗಾರ - ಕೇಸ್‌ ನಂ: 03

ಸಚಿವ ಬಿ.ಸಿ.ಪಾಟೀಲ್ ಬೆಂಬಲಿಗರ ಮೇಲೆ ಹಾವೇರಿಯ ರಟ್ಟಿಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಕೇಸ್‌ ವಾಪಸ್‌ ಪಡೆಯಲಾಗಿದೆ. ಗಣೇಶ ವಿಸರ್ಜನೆ ವೇಳೆ ದೊಂಬಿ ನಡೆಸಿದ ಹಿನ್ನೆಲೆಯಲ್ಲಿ ದಾಖಲಾದ ಪ್ರಕರಣ ವಾಪಸ್ ಪಡೆಯಲು ಸರ್ಕಾರ ಮುಂದಾಗಿದೆ. ಸರ್ಕಾರಿ ವಾಹನ ಜಖಂ, ಆಸ್ತಿಪಾಸ್ತಿ ನಾಶ, ಅಧಿಕಾರೊಗಳಿಗೆ ಗಾಯ ಮಾಡಿದ್ದ ಗಂಭೀರ ಆರೋಪ ಇವರ ಮೇಲಿತ್ತು. ಪ್ರಕರಣ ವಾಪಸು ಪಡೆಯಲು ಕೃಷಿ ಸಚಿವ ಬಿ.ಸಿ ಪಾಟೀಲ್‌ ಮನವಿ ಮೇರೆಗೆ ಪ್ರಕರಣ ವಾಪಸ್‌ ಪಡೆದುಕೊಳ್ಳಲು ಮುಂದಾಗಿದ್ದಾರೆ.

ಹೋರಾಟಗಾರ - ಕೇಸ್‌ನಂ: 04

ಧಾರವಾಡದ ಬಿಜೆಪಿ ಶಾಸಕ ಅಮೃತ್ ದೇಸಾಯಿ‌ ಬೆಂಬಲಿಗರು 2015ರಲ್ಲಿ ಗಣೇಶ ವಿಸರ್ಜನೆ ವೇಳೆ ಮಸೀದಿಗಳಿಗೆ ಕಲ್ಲು ತೂರಾಟ ಮಾಡಿದ್ದರು. ಜೀವ ಬೆದರಿಕೆ ಹಾಕಿದ್ದರು. ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಹೋರಾಟಗಾರರು ಎನ್ನುವ ಹಣೆಪಟ್ಟಿಯಲ್ಲಿ ಪ್ರಕರಣಗಳನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ. ಆದರೆ ಇವರೆಲ್ಲಾ ನಿಜವಾದ ಹೋರಾಟಗಾರರೇ..? ತಮ್ಮ ಸ್ವಂತ ಪಕ್ಷದ ಗೂಂಡಾಗಿರಿ ಮಾಡುವ ಕಾರ್ಯಕರ್ತರನ್ನು ರಕ್ಷಣೆ ಮಾಡುವುದಕ್ಕಾಗಿಯೇ ಸರ್ಕಾರ ವಿಶೇಷ ಪ್ರಕರಣಗಳು ಎಂದು ಪರಿಗಣಿಸಿ ಕಾನೂನು ಕಣ್ಣೀಗೆ ಮಣ್ಣೆರುವ ಕೆಲಸ ಮಾಡುತ್ತಿದೆಯೇ ಎನ್ನುವ ಆರೋಪ ಎದುರಾಗಿದೆ. ಈ ರೀತಿ ಪ್ರಕರಣಗಳನ್ನು ಸರ್ಕಾರ ವಾಪಸ್‌ ಪಡೆಯುತ್ತದೆ ಎನ್ನುವ ಕಾರಣಕ್ಕೆ ಈಗ ವಿರೋಧ ಪಕ್ಷಗಳಲ್ಲಿರುವ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಂಡು ಮುಂದೊಂದು ಅವರ ಸರ್ಕಾರ ಅಧಿಕಾರಕ್ಕೆ ಬಂದಾಗ ಇದೇ ರೀತಿ ಮಾಡಿದರೂ ಬಿಜೆಪಿ ನಾಯಕರು ಸುಮ್ಮನಿರುತ್ತಾರೆಯೇ ಎನ್ನುವುದಕ್ಕೂ ಉತ್ತರ ಕೊಡಬೇಕಿದೆ.

ರಾಜ್ಯದಲ್ಲಿ ವಿರೋಧ ಪಕ್ಷಗಳೂ ಕೂಡ ಆಡಳಿತ ಪಕ್ಷದ ತಾಳಕ್ಕೆ ತಕ್ಕಂತಗೆ ಕುಣಿಯುತ್ತಿವೆ. ಸರ್ಕಾರದ ಕಿವಿ ಹಿಂಡುವ ಕೆಲಸವನ್ನು ಮಾಧ್ಯಮಗಳು ಮಾಡಬೇಕಿದೆ. ಆದರೆ ಅಲ್ಲೊಬ್ಬರು ಇಲ್ಲೊಬ್ಬರು ಈ ರೀತಿಯ ಸುದ್ದಿಗಳಿಗೆ ಮಾನ್ಯತೆ ಕೊಟ್ಟು ಉಳಿದವರು ಸುಮ್ಮನಾಗುತ್ತಾ ಸರ್ಕಾರವನ್ನೇ ಓಲೈಸಿಕೊಳ್ಳಲು ಮುಂದಾಗಿರುವುದರಿಂದ ಸರ್ಕಾರ ಮೂಗುದಾರವಿಲ್ಲದ ಕೋಣ ನುಗ್ಗಿದಂತೆ ಅಕ್ರಮಗಳನ್ನು ಮಾಡುತ್ತಲೇ ಸಾಗುತ್ತಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com