ಒಂದೆಡೆ ಚಿಕಿತ್ಸೆ ಸಿಗದೆ ಮಾಜಿ ಶಾಸಕ ಸಾವು: ಮತ್ತೊಂದೆಡೆ ಮಠಗಳಿಗೆ ಕೋಟಿ ಕೋಟಿ ಹಣ!
ರಾಜ್ಯ

ಒಂದೆಡೆ ಚಿಕಿತ್ಸೆ ಸಿಗದೆ ಮಾಜಿ ಶಾಸಕ ಸಾವು: ಮತ್ತೊಂದೆಡೆ ಮಠಗಳಿಗೆ ಕೋಟಿ ಕೋಟಿ ಹಣ!

ಹಾಸಿಗೆ ಮತ್ತು ಆಮ್ಲಜನಕದ ಕೊರತೆ ನೆಪವೊಡ್ಡಿ ಮಾಜಿ ಶಾಸಕರಿಗೆ ಚಿಕಿತ್ಸೆ ನಿರಾಕರಿಸಿದ ಪರಿಣಾಮ ಅವರ ಸಾವು ಸಂಭವಿಸಿದೆ ಎಂಬುದು ಜಿಲ್ಲಾಡಳಿತ ಮತ್ತು ಜಿಲ್ಲಾ ಕೋವಿಡ್ ಕಾರ್ಯಪಡೆಯ ಕಾರ್ಯವೈಖರಿ ಮತ್ತು ಅದೇ ಹೊತ್ತಿಗೆ ರಾಜ್ಯ ಸರ್ಕಾರದ ಆದ್ಯತೆಗಳ ಬಗ್ಗೆ ಕನ್ನಡಿ ಹಿಡಿದಿದೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಸಕಾಲದಲ್ಲಿ ಚಿಕಿತ್ಸೆ ಸಿಗದೆ, ಆಸ್ಪತ್ರೆಯಲ್ಲಿ ಅಗತ್ಯ ಹಾಸಿಗೆ ಮತ್ತು ಆಮ್ಲಜನಕದ ಪೂರೈಕೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮಾಜಿ ಶಾಸಕ ಎಂ ಜೆ ಅಪ್ಪಾಜಿ ಬುಧವಾರ ತಡರಾತ್ರಿ ಸಾವು ಕಂಡಿದ್ದಾರೆ.

ಸ್ವತಃ ಮುಖ್ಯಮಂತ್ರಿಗಳ ತವರು ಜಿಲ್ಲೆಯ ಜಿಲ್ಲಾಕೇಂದ್ರ ನಾಲ್ಕು ಖಾಸಗಿ ಆಸ್ಪತ್ರೆಗಳಲ್ಲಿ, ತೀವ್ರ ಎದೆನೋವು ಮತ್ತು ಉಸಿರಾಟದ ಸಮಸ್ಯೆಯಿಂದ ಗಂಭೀರ ಪರಿಸ್ಥಿತಿಯಲ್ಲಿದ್ದ ಮಾಜಿ ಶಾಸಕರಿಗೆ ಹಾಸಿಗೆ ಮತ್ತು ಆಮ್ಲಜನಕರ ನೆಪ ಹೇಳಿ ಚಿಕಿತ್ಸೆ ನಿರಾಕರಿಸಲಾಗಿದೆ. ಇದು ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಕೋವಿಡ್-19 ಸಾಂಕ್ರಾಮಿಕದ ನಿರ್ವಹಣೆ ಮತ್ತು ಅದಕ್ಕಾಗಿ ಮಾಡಿಕೊಂಡಿರುವ ತಯಾರಿಗೆ ಒಂದು ಜ್ವಲಂತ ನಿದರ್ಶನ. ಅದೇ ಹೊತ್ತಿಗೆ, ರಾಜ್ಯದ 39 ಧಾರ್ಮಿಕ ಮಠಗಳಿಗೆ ತಲಾ ಒಂದು ಕೋಟಿ ರೂ. ನಂತೆ ಬರೋಬ್ಬರಿ 39 ಕೋಟಿ ರೂಪಾಯಿಗಳನ್ನು ಇದೇ ಸರ್ಕಾರ ಹಂಚಿದ ಸುದ್ದಿಯೂ ಮಾಧ್ಯಮಗಳಲ್ಲಿ ವಿಜೃಂಭಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸ್ವತಃ ಬಿಜೆಪಿ ನಾಯಕರು ಮತ್ತು ಪ್ರಭಾವಿ ಸಚಿವರಿಗೆ ಸೇರಿದ ಆಸ್ಪತ್ರೆಯೂ ಸೇರಿದಂತೆ ಶಿವಮೊಗ್ಗ ನಗರದ ನಾಲ್ಕು ಖಾಸಗೀ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿ ಸಾಕಷ್ಟು ವಿಳಂಬ ಮಾಡಿದ ಬಳಿಕ, ಅಪ್ಪಾಜಿ ಗೌಡರ ಮನೆಮಂದಿ ಅವರನ್ನು ಕೊನೇ ಘಳಿಗೆಯಲ್ಲಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ ಕೆಲವೇ ಸಮಯದಲ್ಲಿ ಅವರು ಕೊನೆಯುಸಿರೆಳೆದರು ಎಂದು ಕುಟುಂಬವರ್ಗ ಮಾಹಿತಿ ನೀಡಿದೆ. ಆದರೆ, ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದರೂ ಮಾಜಿ ಶಾಸಕರಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗಲಿಲ್ಲ ಎಂದರೆ; ಇನ್ನು ಜನಸಾಮಾನ್ಯರ ಪರಿಸ್ಥಿತಿ ಏನು ಎಂಬುದು ಸದ್ಯ ಕೇಳಿಬರುತ್ತಿರುವ ಪ್ರಶ್ನೆ.

ಹಾಗೆ ನೋಡಿದರೆ ಸಿಎಂ ತವರು ಜಿಲ್ಲೆಯಲ್ಲಿ ಹೀಗೆ ಸ್ವತಃ ಅವರದೇ ಪಾಲುದಾರಿಕೆಯ ಪ್ರತಿಷ್ಠಿತ ಖಾಸಗೀ ಆಸ್ಪತ್ರೆಯೂ ಸೇರಿದಂತೆ ಹೃದಯಾಘಾತದಂತಹ ತುರ್ತು ಗಂಭೀರ ಆರೋಗ್ಯ ಸಮಸ್ಯೆಯಿಂದ ನರಳುತ್ತಿರುವವರಿಗೂ ತುರ್ತು ಚಿಕಿತ್ಸೆ ನೀಡದೇ ಹೊರದಬ್ಬುತ್ತಿರುವ ಪ್ರಕರಣಗಳ ವಾರದಲ್ಲಿ ನಾಲ್ಕಾರು ವರದಿಯಾಗುತ್ತಲೇ ಇವೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಇಂತಹ ಹತ್ತಾರು ಪ್ರಕರಣಗಳಲ್ಲಿ ಕೆಲವು ಹೃದಯಾಘಾತ ರೋಗಿಗಳು ಚಿಕಿತ್ಸೆಯೇ ಸಿಗದೇ ಸಾವುಕಂಡದ್ದೂ ಇದೆ. ಮಾಜಿ ಶಾಸಕರ ಪ್ರಕರಣ ಮಾತ್ರ ಅವರ ಅಭಿಮಾನಿಗಳ ಆಕ್ರೋಶದ ಕಾರಣಕ್ಕೆ ಸುದ್ದಿಯಾಗಿದೆ. ಉಳಿದಂತೆ ನಿತ್ಯ ಇಂತಹ ಅಮಾನವೀಯ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂಬುದು ಶಿವಮೊಗ್ಗದಲ್ಲಿ ಜನಜನಿತ ಸಂಗತಿ.

ಕೋವಿಡ್ ಟಾಸ್ಕ್ ಫೋರ್ಸ್ ಮತ್ತು ಜಿಲ್ಲಾಧಿಕಾರಿಗಳು ಕಳೆದ ವಾರವಷ್ಟೇ ಇಂತಹ ದೂರುಗಳ ಹಿನ್ನೆಲೆಯಲ್ಲಿ ಖಾಸಗೀ ಆಸ್ಪತ್ರೆ ಮತ್ತು ಸರ್ಕಾರಿ ವೈದ್ಯರ ಸಭೆ ನಡೆಸಿದ್ದರು. ಸಭೆಯಲ್ಲಿ ಹಾಸಿಗೆ ಅಥವಾ ಆಮ್ಲಜನಕ ಲಭ್ಯವಿಲ್ಲ ಎಂಬ ನೆಪ ಹೇಳಿ ಯಾವುದೇ ರೋಗಿಯನ್ನು ಚಿಕಿತ್ಸೆ ನೀಡದೆ ಸಾಗಹಾಕಬಾರದು. ತುರ್ತು ಚಿಕಿತ್ಸೆ ನಿರಾಕರಿಸಬಾರದು. ಜೊತೆಗೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎಂದು ಹೇಳಿ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಅದರೊಂದಿಗೆ, ಜಿಲ್ಲೆಯ ಖಾಸಗೀ ಆಸ್ಪತ್ರೆಗಳಲ್ಲಿ ಸರ್ಕಾರದ ನಿಯಮಾನುಸಾರ ಕೋವಿಡ್ ರೋಗಿಗಳಿಗೆ ಪ್ರತ್ಯೇಕ ಹಾಸಿಗೆ ಮತ್ತು ಇತರೆ ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆಯನ್ನು ಸಿದ್ಧಪಡಿಸಲಾಗಿದೆಯೇ? ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆಗಳು ಸಿದ್ಧವಿವೆ. ಆ ಪೈಕಿ ಎಷ್ಟು ಈಗಾಗಲೇ ರೋಗಿಗಳಿಗೆ ನೀಡಲಾಗಿದೆ ಮತ್ತು ಎಷ್ಟು ಖಾಲಿ ಇವೆ? ಎಷ್ಟು ಆಮ್ಲಜನಕ ವ್ಯವಸ್ಥೆಯಾಗಿದೆ? ಮುಂತಾದ ಬಗ್ಗೆ ನಿರಂತರ ಗಮನಹರಿಸಲು ಮತ್ತು ಮಾಹಿತಿ ಸಂಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ನೀಡಲು ಹಿರಿಯ ವೈದ್ಯರನ್ನೊಳಗೊಂಡ ಪ್ರತ್ಯೇಕ ತಂಡ ರಚಿಸುವುದಾಗಿಯೂ ಜಿಲ್ಲಾಧಿಕಾರಿಗಳೇ ಹೇಳಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ಕೂಡ ಈ ಮಾತು ಆಡಿದ್ದರು.

ಆದರೆ, ಆ ಭರವಸೆ ನೀಡಿ ವಾರ ಕಳೆಯುವುದರೊಳಗೆ ಹಾಸಿಗೆ ಮತ್ತು ಆಮ್ಲಜನಕದ ನೆಪವೊಡ್ಡಿ ಮಾಜಿ ಶಾಸಕರಿಗೆ ಚಿಕಿತ್ಸೆ ನಿರಾಕರಿಸಿದ ಪರಿಣಾಮ ಅವರ ಸಾವು ಸಂಭವಿಸಿದೆ ಎಂಬುದು ಜಿಲ್ಲಾಡಳಿತ ಮತ್ತು ಜಿಲ್ಲಾ ಕೋವಿಡ್ ಕಾರ್ಯಪಡೆಯ ಕಾರ್ಯವೈಖರಿ ಮತ್ತು ಅದೇ ಹೊತ್ತಿಗೆ ರಾಜ್ಯ ಸರ್ಕಾರದ ಆದ್ಯತೆಗಳ ಬಗ್ಗೆ ಬೆಳಕು ಚೆಲ್ಲಿದೆ.

ಬಿಜೆಪಿ ಆಡಳಿತಕ್ಕೆ ಜನರ ಜೀವಕ್ಕಿಂತ ಮಠಮಾನ್ಯಗಳೇ ಆದ್ಯತೆಯಾಗಿವೆ. ಜನರ ಪ್ರಾಣ ಉಳಿಸುವ ಯೋಜನೆಗಳಿಗಿಂತ ಭರ್ಜರಿ ಲಾಭ ತರುವ ಫ್ಲೈಓವರ್, ರಿಂಗ್ ರೋಡ್, ವಿಮಾನ ನಿಲ್ದಾಣದಂತಹ ಕಾಮಗಾರಿಗಳು ಆದ್ಯತೆಯಾಗಿವೆ. ಹಾಗಾಗಿ, ಸರ್ಕಾರದ ಮತ್ತು ಸ್ಥಳೀಯ ಆಡಳಿತಗಳ ನಿರ್ಲಕ್ಷ್ಯಕ್ಕೆ ಜೀವಗಳು ಹಾದಿಬೀದಿ ಹೆಣಗಳಾಗುತ್ತಿವೆ. ಸರ್ಕಾರಕ್ಕೆ ಇನ್ನಾದರೂ ಜನರ ಜೀವದ ಬಗ್ಗೆ ಕಿಂಚಿತ್ತೂ ಕಾಳಜಿ ಉಳಿದಿದ್ದರೆ, ಮಾಜಿ ಶಾಸಕರಿಗೆ ಚಿಕಿತ್ಸೆ ನಿರಾಕರಿಸುವ ಮೂಲಕ ಅವರ ಸಾವಿಗೆ ಕಾರಣವಾಗಿರುವ ಖಾಸಗೀ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಿ. ಸಿಸಿಟಿವಿ ಫೂಟೇಜ್ ಪಡೆದು ತನಿಖೆ ನಡೆಸಿ ಬಿಗಿ ಕ್ರಮ ಕೈಗೊಂಡು, ಜನರ ಹಿತ ಮರೆತಿಲ್ಲ ಎಂಬುದನ್ನು ಸಾಬೀತು ಮಾಡಲಿ ಎಂಬ ಅಪ್ಪಾಜಿ ಗೌಡರ ಅಭಿಮಾನಿಗಳ ಆಕ್ರೋಶದಲ್ಲಿ ಹುರುಳಿಲ್ಲದೆ ಇಲ್ಲ!

ಹೀಗೆ ಒಂದು ಕಡೆ ಹಾಸಿಗೆಯಂತಹ ಕನಿಷ್ಟ ಆರೋಗ್ಯ ಸೌಕರ್ಯವೂ ಸಿಗದೆ, ಖಾಸಗೀ ಆಸ್ಪತ್ರೆಗಳ ಮೇಲೆ ಕನಿಷ್ಟ ನಿಯಂತ್ರಣವೂ ಇಲ್ಲದೆ ಜನ ಸಾಯುತ್ತಿರುವಾಗ, ರಾಜ್ಯ ಬಿಜೆಪಿ ಸರ್ಕಾರ ಮಠಮಾನ್ಯಗಳಿಗೆ ಕೋಟಿ ಕೋಟಿ ಹಣ ನೀಡುತ್ತಿದೆ. ಕೋವಿಡ್ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಕೈತಪ್ಪಿ ಹೋಗುತ್ತಿರುವ ಹೊತ್ತಿನಲ್ಲಿ ರಾಜ್ಯದ ಎಲ್ಲಾ ಆರ್ಥಿಕ ಸಂಪನ್ಮೂಲವನ್ನು ತೊಡಗಿಸಿ, ಜನರ ಜೀವ ಉಳಿಸುವ ಆಸ್ಪತ್ರೆ, ವೈದ್ಯಕೀಯ ಸೌಲಭ್ಯ, ಸಿಬ್ಬಂದಿಯನ್ನು ಒದಗಿಸುವುದು ಆದ್ಯತೆಯಾಗಬೇಕಿತ್ತು. ಆದರೆ, ಅದರ ಬದಲಾಗಿ ಮಠಗಳಿಗೆ ಜನರ ತೆರಿಗೆ ಹಣ ಹಂಚಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಕನಿಷ್ಟ ಹಾಸಿಗೆಗಳೂ ಇಲ್ಲದೆ, ಆಮ್ಲಜನಕವಿಲ್ಲದೆ, ವೆಂಟಿಲೇಟರುಗಳಿಲ್ಲದೆ, ಅಗತ್ಯ ಸಿಬ್ಬಂದಿ ಇಲ್ಲದೆ ಸಾವಿನ ಕೂಪಗಳಾಗಿ ಮಾರ್ಪಡಿಸಲಾಗುತ್ತಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com