ಅನ್‌ಲಾಕ್ 4: ಮೆಟ್ರೋ ಸಂಚಾರ ಹಾಗೂ ಕೆ ಆರ್ ಮಾರ್ಕೆಟ್ ಆರಂಭ
ರಾಜ್ಯ

ಅನ್‌ಲಾಕ್ 4: ಮೆಟ್ರೋ ಸಂಚಾರ ಹಾಗೂ ಕೆ ಆರ್ ಮಾರ್ಕೆಟ್ ಆರಂಭ

ಮೆಟ್ರೋ ಸಂಚಾರಕ್ಕೆ ಇನ್ನೂ ಒಂದು ವಾರ ಕಾಲಾವಕಾಶವಿದೆ. ಆದರೆ ಬೆಂಗಳೂರಿನ ಕೆ.ಆರ್.ಮಾರ್ಕೆಟ್ ನಾಳೆಯಿಂದಲೇ ಪುನಾರಂಭ ಆಗುತ್ತಿದೆ. ಬಿಬಿಎಂಪಿ ಸಿಬ್ಬಂದಿ ಪ್ರತಿ ಅಂಗಡಿ ಮುಂಭಾಗದಲ್ಲೂ ಕಸ ಗುಡಿಸಿ ಸ್ವಚ್ಛ ಮಾಡಿದ್ದಾರೆ.

ಕೃಷ್ಣಮಣಿ

ದೇಶದಲ್ಲಿ ‌ಕರೋನಾ‌ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕರೋನಾ ಪರೀಕ್ಷೆಗಳನ್ನು ಹೆಚ್ಚಿಸಿರುವ ಕಾರಣಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಐಸಿಎಂಆರ್ (Indian Council of Medical Research) ಹೆಳಿದೆ. ಭಾನುವಾರ ಒಂದೇ ದಿನದಲ್ಲಿ ಭಾರತ ದೇಶದಲ್ಲಿ‌8,46,278 ಜನರಿಗೆ ಕರೋನಾ ಪರೀಕ್ಷೆ ಮಾಡಲಾಗಿದೆ. ಈವರೆಗೆ 4,23,07,914 ಜನರಿಗೆ ಕರೋನಾ ಪರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದೆ. ಆದರೂ, ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ 36 ಲಕ್ಷ ದಾಟಿದೆ.

ಇಷ್ಟು ದಿನ ಲಾಕ್‌ಡೌನ್ ಆಗಿದ್ದರಿಂದ ಕಳೆದ 5 ತಿಂಗಳಲ್ಲಿ ಕರೋನಾ ಸೋಂಕು ಇಷ್ಟೊಂದು ಏರಿಕೆಯಾಗಿದೆ. ಇನ್ಮುಂದೆ ಯಾವುದೇ ಲಾಕ್‌ಡೌನ್ ಇರೋದಿಲ್ಲ. ಸೆಪ್ಟೆಂಬರ್‌7 ರಿಂದ ಕೇಂದ್ರ ಸರ್ಕಾರದ ಅನ್ಲಾಕ್ 4 ಜಾರಿಯಾಗುತ್ತಿದ್ದು, ʼನಮ್ಮ ಮೆಟ್ರೋʼಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಸೆಪ್ಟೆಂಬರ್ 7ರಿಂದ ನಮ್ಮ ಮೆಟ್ರೋ ರೈಲು ಸಂಚಾರ‌ ಆರಂಭಿಸಲಿದೆ. 5 ತಿಂಗಳಿಂದ ಸ್ಥಗಿತವಾಗಿದ್ದ ಮೆಟ್ರೋ ಸಂಚಾರ ಪುನಾರಂಭ ಆಗುವುದಕ್ಕಾಗಿ ಮೆಟ್ರೋ ನಿಗಮ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಮೆಟ್ರೋ ಪ್ರಯಾಣಿಕರು ಮಾಸ್ಕ್ ಹಾಕದಿದ್ದರೆ 500 ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಶಾರೀರಿಕ ಅಂತರಕ್ಕೂ ಮಾರ್ಕ್ ಮಾಡಲಾಗಿದೆ. ಪ್ರಯಾಣೀಕರು ಒಟ್ಟಿಗೆ ಕುಳಿತರೂ 500 ರೂಪಾಯಿ ದಂಡ ಬೀಳಲಿದೆ. ಮೆಟ್ರೋ ಸ್ಟೇಷನ್ಗಳಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಲು ಮುಂದಾಗಿರುವ ಮೆಟ್ರೋ ನಿಗಮ, ಸಿಸಿಟಿವಿ ದೃಶ್ಯಗಳ್ನು ಆಧರಿಸಿ ದಂಡ ಹಾಕುವುದಕ್ಕೆ ಸಿದ್ಧತೆ ನಡೆಸಿದ್ದಾರೆ.

ಮೆಟ್ರೋ ರೂಪಿಸಿರುವ 2002ರ ಕಾನೂನು ಪ್ರಕಾರ 50 ರೂಪಾಯಿಯಿಂದ 5000 ರೂಪಾಯಿ ವರೆಗೆ ದಂಡ ವಿಧಿಸಲು ಕಾನೂನಲ್ಲಿ ಅವಕಾಶವಿದ್ದು ಸದ್ಯಕ್ಕೆ ಎಲ್ಲಾ ಅಪರಾಧಗಳಿಗೂ 500 ರೂಪಾಯಿ ದಂಡ ವಿಧಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಸ್ಟೇಷನ್‌ಗಳಲ್ಲಿ ಟಿಕೆಟ್ ಪಡೆದುಕೊಳ್ಳುವ ವ್ಯವಸ್ಥೆ ಇರುವುದಿಲ್ಲ, ಕೇವಲ ಸ್ಮಾರ್ಟ್ ಕಾರ್ಡ್ ಇದ್ದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಎಂದು ಘೋಷಣೆ ಮಾಡಿದ್ದಾರೆ. ಮೆಟ್ರೋ ಸಿಬ್ಬಂದಿ ಸ್ಟಿಕ್ಕರ್ ಹಾಕಿರುವ ಜಾಗದಲ್ಲಿ ಯಾವುದೇ ಕಾರಣಕ್ಕೂ ಕೂರುವಂತಿಲ್ಲ. ಮೆಟ್ರೋ ಸ್ಟೇಷನ್ನಲ್ಲಿ ಉಗುಳಿದರೂ ದಂಡ, ಸ್ಟೇಷನ್ ಆವರಣದಲ್ಲಿ ಕಸ ಹಾಕಿದರೂ ಹಾಕ್ತಾರೆ ದಂಡ. ಹದ್ದಿನ ಕಣ್ಣಿಡುವ ಮೆಟ್ರೋ ಸಿಬ್ಬಂದಿ ಬರೆ ಹಾಕಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಕನಿಷ್ಠ ಮೂರು ತಿಂಗಳ ಕಾಲ ಸ್ಮಾರ್ಟ್‌ಕಾರ್ಡ್‌ ಬಳಸಿಲ್ಲವಾದರೆ ಆಕ್ಟೀವೇಷನ್‌ಮಾಡಿಸಲು ಇಂತಿಷ್ಟು ಫೈನ್‌ ಹಾಕುವ ವ್ಯವಸ್ಥೆ ಹಿಂದೆ ಇತ್ತು. ಆದರೆ ಈಗ ಕಳೆದ 5 ತಿಂಗಳಿಂದ ಯಾರೊಬ್ಬರೂ ಕಾರ್ಡ್‌ ಬಳಸಿರಲು ಸಾಧ್ಯವೇ ಇಲ್ಲ. ಹಾಗಾಗಿ ಕಾರ್ಡ್‌ಗಳು ಬ್ಲಾಕ್‌ಆಗಿರುತ್ತವೋ..? ಅಥವಾ ಸರತಿ ಸಾಲು ತಪ್ಪಿಸುವ ಉದ್ದೇಶದಿಂದ ಎಲ್ಲಾ ಕಾರ್ಡ್‌ಗಳನ್ನೂ ಸಾಮೂಹಿಕವಾಗಿ ಚಾಲನೆಯಲ್ಲಿ ಇಟ್ಟಿದ್ದಾರೆಯೇ ಎನ್ನುವ ಬಗ್ಗೆ ಮಾಹಿತಿ ಸ್ಪಷ್ಟಪಡಿಸಬೇಕಿದೆ. ಇಲ್ಲದಿದ್ದರೆ ಮೆಟ್ರೋ ಸಂಚಾರ ಶುರುವಾದ ಬಳಿಕ ಕ್ಯೂ ನಿಲ್ಲುವ ಜೊತೆಗೆ ಫೈನ್‌ ಬೇರೆ ಕಟ್ಟಬೇಕಿರುತ್ತದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮೆಟ್ರೋ ಸಂಚಾರಕ್ಕೆ ಇನ್ನೂ ಒಂದು ವಾರ ಕಾಲಾವಕಾಶವಿದೆ. ಆದರೆ ಬೆಂಗಳೂರಿನ ಕೆ.ಆರ್.‌ಮಾರ್ಕೆಟ್‌ ನಾಳೆಯಿಂದಲೇ ಪುನಾರಂಭ ಆಗುತ್ತಿದೆ. ಬಿಬಿಎಂಪಿ ಸಿಬ್ಬಂದಿ ಪ್ರತಿ ಅಂಗಡಿ ಮುಂಭಾಗದಲ್ಲೂ ಕಸ ಗುಡಿಸಿ ಸ್ವಚ್ಛ ಮಾಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಂಗಡಿ ಎದುರು ಮಾರ್ಕಿಂಗ್ ವ್ಯವಸ್ಥೆ ಮಾಡಿದ್ದಾರೆ. ನಾಳೆಯಿಂದ ಮಾರ್ಕೆಟ್‌ ಓಪನ್‌ ಆದ ಬಳಿಕ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದ್ದು, ಮಾರ್ಕೆಟ್‌ ನಲ್ಲಿ ಮಾರ್ಷಲ್ಗಳು ಸುತ್ತಾಡುತ್ತಿರುತ್ತಾರೆ. ಸಾಮಾಜಿಕ ಅಂತರ, ಮಾಸ್ಕ್‌ ಹಾಕಿಲ್ಲವಾದರೆ ದಂಡ ಹಾಕುವುದು ಖಂಡಿತ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಕೆ. ಆರ್. ಮಾರುಕಟ್ಟೆ ಕಳೆದ 5 ತಿಂಗಳಿನಿಂದ ಬಂದ್ ಆಗಿತ್ತು. ಬೆಂಗಳೂರಿನಲ್ಲಿ ಕೋವಿಡ್ 19 ಕೇಸ್ ಹೆಚ್ಚಾದ ಕಾರಣ ಮಾರ್ಕೆಟ್ ಬಂದ್ ಮಾಡಲಾಗಿತ್ತು. ಕೇಸ್ ಹೆಚ್ಚಾದ ಬೆನ್ನಲ್ಲೇ ಡೆತ್ ರೇಟ್ ಕೂಡ ಹೆಚ್ಚಿತ್ತು. ಆದರೆ ಇದೀಗ ಈ ಹಿಂದೆ ಇದ್ದ ಸಾವಿನ ಸರಾಸರಿ 1.85 ರಿಂದ 1.53ಕ್ಕೆ ಇಳಿಕೆಯಾಗಿದೆ. ಜೀವ ಬಹು ಮುಖ್ಯ ಎನ್ನುವುದು ನಿಜ ಆದರೆ ಜೀವನ ಕೂಡ ಜೀವದಷ್ಟೇ ಮುಖ್ಯ. ಆರ್ಥಿಕ ವಲಯದಲ್ಲೂ ಚೇತರಿಕೆ ಕಾಣಬೇಕಿದೆ. ಮಾರುಕಟ್ಟೆ ತೆರಯಲು ಅವಕಾಶ ನೀಡಲಾಗ್ತಿದೆ. ರೈತ ಸಂಘದವರು ಮಾರ್ಕೆಟ್ ತೆರೆಯಲು ಮನವಿ ಮಾಡಿಕೊಂಡಿದ್ದರು. ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಅವಕಾಶ ಕೊಡಿ ಎಂದಿದ್ದರು, ಇದೀಗ ಮಾರುಕಟ್ಟೆ ತೆರೆಯಲು ಅವಕಾಶ ನೀಡಲಾಗಿದೆ. ಕಡ್ಡಾಯವಾಗಿ ಮಾರಾಟಗಾರರು, ಗ್ರಾಹಕರು ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಂಗಡಿಗಳು ಸ್ಯಾನಿಟೈಸೇಷನ್ ಮಾಡಬೇಕು ಎಂದು ಸೂಚಿಸಿದ್ದಾರೆ. 15 ಮಾರ್ಷಲ್ ನೇಮಕ ಮಾಡಲಾಗಿದೆ, ನಿಯಮ ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುವುದು ಎಂದಿದ್ದಾರೆ.

ಕರೋನಾ ಲಾಕ್ ಡೌನ್ ಆಗಿದ್ದರಿಂದ 5 ತಿಂಗಳಿಂದ ಬಂದ್‌ಆಗಿದ್ದ ಬಾರ್, ಪಬ್, ಕ್ಲಬ್, ರೆಸ್ಟೊರೆಂಟ್ಗಳು ಮಂಗಳವಾರದಿಂದ ತೆರೆಯುತ್ತವೆ. ಬಾರ್ & ರೆಸ್ಟೊರೆಂಟ್, ಕ್ಲಬ್, ಪಬ್ ಓಪನ್ ಮಾಡಲು ಸರ್ಕಾರ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಕಳೆದ 5 ತಿಂಗಳಿಂದ ಬಾರ್ಗಳನ್ನು ತೆರೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಆದಾಯದಲ್ಲಿ ಭಾರೀ ಖೋತಾ ಆಗಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ 3606 ಬಾರ್ & ರೆಸ್ಟೊರೆಂಟ್, 526 ಪಬ್, 55 ಸಣ್ಣ ಬಾರ್ ಗಳಿವೆ 1226 ಹೋಟೆಲ್ ಲಾಡ್ಜಿಂಗ್, 75 ಸ್ಟಾರ್ ಹೋಟೆಲ್ಸ್, 244 ಕ್ಲಬ್ ಕೆಲಸ ಮಾಡುತ್ತಿವೆ. 2020-21ನೇ ಸಾಲಿನಲ್ಲಿ ಅಬಕಾರಿ ಇಲಾಖೆಯಿಂದ 22, 700 ಕೋಟಿ ವರಮಾನ ಬರುವ ನಿರೀಕ್ಷೆ ಮಾಡಲಾಗಿತ್ತು. ಆದರೆ ಹೆಚ್ಚು ಕಡಿಮೆ ಅರ್ಧ ವರ್ಷ ಲಾಕ್‌ಡೌನ್ ಆಗಿರುವ ಕಾರಣ ಈ ಬಾರಿ ಈವರೆಗೆ 1,435 ಕೋಟಿ ರೂಪಾಯಿ ಆದಾಯ ಖೋತಾ ಆಗಿದೆ ಎನ್ನಲಾಗಿದೆ. ಮದ್ಯ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಲು ಅವಕಾಶ ನೀಡದೆ ಹೋಗಿದ್ದರೆ ನಷ್ಟದ ಪ್ರಮಾಣ ಬರೋಬ್ಬರಿ 3 ಸಾವಿರ ಕೋಟಿ ಆಗುತ್ತಿತ್ತು ಎಂದಿದ್ದಾರೆ. ನಾಳೆಯಿಂದಲೇ ಬಾರ್, ರೆಸ್ಟೊರೆಂಟ್ ಓಪನ್ ಮಾಡಲು ಮಾಲೀಕರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಸರ್ಕಾರದ ಅಧಿಕೃತ ಗೈಡ್ ಲೈನ್ಸ್ಗೆ ಕಾಯುತ್ತಿದ್ದಾರೆ. ಸಿಬ್ಬಂದಿಯ ಆರೋಗ್ಯ ಕಾಪಾಡುವುದರ ಜೊತೆಗೆ ಗ್ರಾಹಕರ ರಕ್ಷಣೆ ಕೂಡ ಮಾಡ್ಬೇಕಿದೆ.

ಬಾರ್ ಗಳಲ್ಲಿ ಮದ್ಯ ಪೂರೈಕೆ ವೇಳೆ ಪಾಲಿಸಲೇಬೇಕಾದ ನಿಯಮಗಳು ಎಂದರೆ ಶೇಕಡ 50ರಷ್ಟು ಗ್ರಾಹಕರಿಗಷ್ಟೇ ಪ್ರವೇಶ ಅವಕಾಶವಿದ್ದು, ಹೆಚ್ಚಿನ ಗ್ರಾಹಕರಿಗೆ ಅವಕಾಶವಿಲ್ಲ. ಬಾರ್‌ ಬಳಿ ಜನಜಂಗುಳಿ ಸೇರುವಂತಿಲ್ಲ. ಗುಂಪು ಗುಂಪಾಗಿ ಕೂರುವಂತಿಲ್ಲ. ಶಾರೀರಿಕ ಅಂತರ ಪಾಲನೆ ಕಡ್ಡಾಯ. ಟೇಬಲ್ಗಳ ನಡುವೆ ಅಂತರ ಇರಲೇ ಬೇಕು. ಆಹಾರ, ಮದ್ಯ ವಿತರಣೆ ವೇಳೆ ಮುನ್ನೆಚ್ಚರಿಕೆ ಕಾಯ್ದುಕೊಳ್ಳಬೇಕು. ಬಾರ್ ಮತ್ತು ರೆಸ್ಟೋರೆಂಟ್ ಕೆಲಸಗಾರರು ಗ್ರಾಹಕರ ಕೈಗೆ ಮದ್ಯ ಕೊಡುವಂತಿಲ್ಲ. ಬಾಗಿಲ ಬಳಿ ಮದ್ಯ ಅಥವಾ ಆಹಾರ ಇಡಬೇಕು ಗ್ರಾಹಕನೇ ತೆಗೆದುಕೊಂಡು ಹೋಗಬೇಕು. ಹೊಟೇಲ್, ಲಾಡ್ಜ್ ಗಳಲ್ಲಿ ಗ್ರಾಹಕರು ರೂಂ ಖಾಲಿ ಮಾಡಿದ ಪ್ರತೀ ಸಲವೂ ರೂಂಗಳಿಗೆ ಸ್ಯಾನಿಟೈಸ್ ಸಿಂಪಡಣೆ ಮಾಡಬೇಕು. ನೌಕರರು ವಯಸ್ಸಾಗಿದ್ರೆ, ಗರ್ಭಿಣಿ ಇದ್ದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ವ್ಯಾಲೆಟ್ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಹೊಟೇಲ್, ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಪಾರ್ಟಿಗಳಿಗೆ ಅವಕಾಶ ಇಲ್ಲ. ಗ್ರಾಹಕ ಅಥವಾ ನೌಕರರಿಗೆ ಸೋಂಕು ಪತ್ತೆಯಾದರೆ, ಅವರನ್ನು ಪ್ರತ್ಯೇಕಿಸಿ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಬೇಕು. ಪ್ರತಿಯೊಬ್ಬರಿಗೂ ಸಾಮಾಜಿಕ ಅಂತರ ಕಡ್ಡಾಯದ ಜೊತೆಗೆ ಕೋವಿಡ್ 19 ಮಾರ್ಗಸೂಚಿ ಫಲಕ ಪ್ರದರ್ಶನ ಕಡ್ಡಾಯ. ಇ - ಪೇಮೆಂಟ್ ಬಳಕೆಗೆ ಸೂಚನೆ ಕೊಡಲಾಗಿದೆ. ಬಾರ್, ಪಬ್ಗಳಿಗೆ ಬರುವವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಪ್ರತಿಯೊಬ್ಬರಿಗೂ ಹ್ಯಾಂಡ್ ಸ್ಯಾನಿಟೈಸರ್ ಕಡ್ಡಾಯ. ಏರ್ ಕಂಡೀಷನ್ ಮಿತಿಯಲ್ಲಿ ಇರಬೇಕು ಎಂದಿದ್ದಾರೆ.

ಎಲ್ಲಾ ವ್ಯವಹಾರವನ್ನು ಸರ್ಕಾರವೇನೋ ಓಪನ್‌ಮಾಡಿದೆ. ಮಾರ್ಕೆಟ್‌ಕೂಡ ವ್ಯವಹಾರಕ್ಕೆ ಮುಕ್ತವಾಗ್ತಿದೆ. ಆದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ. ಆದರೆ ಪಾಲನೆ ಮಾಡ್ತಾರಾ..? ಎನ್ನುವುದೇ ಪ್ರಶ್ನೆಯಾಗಿದೆ. ಬಸ್‌ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಎರಡು ದಿನಗಳ ಕಾಲ ಎಲ್ಲಾ ನಿಯಮಗಳನ್ನು ಪಾಲನೆ ಮಾಡಲಾಯ್ತು. ಆದರೆ ಆ ಬಳಿಕ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸಂಚಾರ ಮಾಡುತ್ತಿದ್ದಾರೆ. ಬೆಂಗಳೂರಿನ ರಸ್ತೆಗಳು ಮೊದಲಿನಂತೆಯೇ ಟ್ರಾಫಿಕ್‌ ಜಾಮ್‌ ಆಗುತ್ತಿದೆ. ಅಲ್ಲಿ ಸಾಮಾಜಿಕ ಅಂತರ ಎಂದು ನಗೆಪಾಟಲು ಅಲ್ಲವೇ..?

Click here to follow us on Facebook , Twitter, YouTube, Telegram

Pratidhvani
www.pratidhvani.com