ಸ್ಯಾಂಡಲ್‌ವುಡ್‌ ಡ್ರಗ್‌ ಮಾಫಿಯಾ: ಇಂದ್ರಜಿತ್‌ ಲಂಕೇಶ್‌ರಿಂದ ಮಾಹಿತಿ ಪಡೆದ ಪೊಲೀಸರು
ರಾಜ್ಯ

ಸ್ಯಾಂಡಲ್‌ವುಡ್‌ ಡ್ರಗ್‌ ಮಾಫಿಯಾ: ಇಂದ್ರಜಿತ್‌ ಲಂಕೇಶ್‌ರಿಂದ ಮಾಹಿತಿ ಪಡೆದ ಪೊಲೀಸರು

ಇಂದ್ರಜಿತ್ ಲಂಕೇಶ್ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿ ಕೆಲವು ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ. ಇದರ ಬಗ್ಗೆ ನಾವು ತನಿಖೆ ನಡೆಸುತ್ತೇವೆ. ಹಾಗೂ ಮುಂದಿನ ಕಾನೂನು ಕ್ರಮ ಸಹ ಜರುಗಿಸುತ್ತೇವೆ, ಎಂದು ಅಪರಾಧ ವಿಭಾಗ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

ಕೃಷ್ಣಮಣಿ

ರಾಜ್ಯ ರಾಜಧಾನಿ ʼಉಡ್ತಾ ಪಂಜಾಬ್‌ʼ ಆಗಿದೆ ಎನ್ನುವ ಮಾತು ಸಾಕಷ್ಟು ದಿನಗಳಿಂದಲೂ ಕೇಳಿಕೊಂಡು ಬರ್ತಿತ್ತು. ಇದೀಗ ಕಳೆದೊಂದು ವಾರದಿಂದ ಉಡ್ತಾ ಪಂಜಾಬ್‌ ಆಗುವುದಲ್ಲ, ಆಗಿ ಹೋಗಿದೆ ಎಂಬ ಅಂಶವನ್ನು ಬಿಂಬಿಸುವ ಮಾಹಿತಿಗಳು ಬಹಿರಂಗವಾಗಿವೆ. ಈ ಮಾದಕ ದ್ರವ್ಯ ದಂಧೆಯಲ್ಲಿ ಭಾಗಿಯಾಗಿರುವವರನ್ನು ಹೆಕ್ಕಿ ಹೊರಗೆ ತೆಗೆಯಬೇಕು ಎನ್ನುವ ಮಾತುಗಳು ಕೇಳಲಾರಂಭಿಸಿದವು. ಅದರಲ್ಲಿ ಪ್ರಮುಖವಾದುದು ಕನ್ನಡ ಚಿತ್ರೋದ್ಯಮ ಅಂದ್ರೆ ನಮ್ಮ ಹೆಮ್ಮೆಯ ಸ್ಯಾಂಡಲ್‌ವುಡ್‌. Sandalwoodನ ನಟ ನಟಿಯರು ಡ್ರಗ್ಸ್‌ ಗೆ ದಾಸರಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಅದಕ್ಕೆ ಪೂರಕ ಎನ್ನುವಂತೆ ನನಗೆ ಗೊತ್ತಿರುವ ಮಾಹಿತಿಯನ್ನು ನಾನು ಪೊಲೀಸರ ಜೊತೆಗೂ ಹಂಚಿಕೊಳ್ಳಬಲ್ಲೆ. ಆದರೆ ಪೊಲೀಸರು ನನಗೆ ರಕ್ಷಣೆ ಕೊಡಬೇಕು ಎಂದು ನಟ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಮಾಧ್ಯಮಗಳ ಎದುರು ಹೇಳಿದ್ದರು. ಅವರು ಹೇಳಿದ್ದಂತೆ ಸಿಸಿಬಿ ಅಧಿಕಾರಿಗಳು ಇಂದ್ರಜಿತ್‌ ಲಂಕೇಶ್‌ ಗೆ ನೋಟಿಸ್‌ ಕೊಟ್ಟು ಕಳೆದ ಸೋಮವಾರ (30/05/2020) ರಂದು ವಿಚಾರಣೆಯನ್ನೂ ಮಾಡಿದರು.

ವಿಚಾರಣೆ ಬಳಿಕ ಮಾತನಾಡಿದ್ದ ಇಂದ್ರಜಿತ್‌ ಲಂಕೇಶ್‌, ನಾನು ಸುಮಾರು 10 ರಿಂದ 15 ಜನರ ಹೆಸರನ್ನು ಅಧಿಕಾರಿಗಳಿಗೆ ಕೊಟ್ಟಿದ್ದೇನೆ. ನಾನು ಕೊಟ್ಟಿರುವ ಮಾಹಿತಿಗೆ ಸೂಕ್ತ ದಾಖಲೆಗಳನ್ನೂ ಕೊಟ್ಟಿದ್ದೇನೆ. ನಾನು ಕೊಟ್ಟ ಮಾಹಿತಿ ಕಂಡು ಕ್ಷಣಕಾಲ ಅಧಿಕಾರಿಗಳೇ ಶಾಕ್‌ ಆಗಿದ್ದರು ಎಂದಿದ್ದರು. ಅಧಿಕಾರಿಗಳೂ ಕೂಡ ಇಂದ್ರಜಿತ್‌ ಲಂಕೇಶ್‌ ಕೊಟ್ಟ ಮಾಹಿತಿ ಮೇರೆಗೆ ನೋಟಿಸ್‌ ಕೊಟ್ಟು ವಿಚಾರಣೆಗೆ ಕರೆಯಲು ಸಜ್ಜಾಗುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇಂದ್ರಜಿತ್ ಲಂಕೇಶ್ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿ ಕೆಲವು ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ. ಇದರ ಬಗ್ಗೆ ನಾವು ತನಿಖೆ ನಡೆಸುತ್ತೇವೆ. ಹಾಗೂ ಮುಂದಿನ ಕಾನೂನು ಕ್ರಮ ಸಹ ಜರುಗಿಸುತ್ತೇವೆ. ಇಂದ್ರಜಿತ್ ಲಂಕೇಶ್ ಸಿಸಿಬಿಗೆ ಬಂದು ಕೊಟ್ಟ ಮಾಹಿತಿಗೆ ಅವರನ್ನ ಅಭಿನಂದಿಸುತ್ತೇವೆ. ಡ್ರಗ್ಸ್ ಬಗ್ಗೆ ಯಾರ ಬಳಿಯಾದರೂ ಮಾಹಿತಿ ಇದ್ದರೆ ಕೊಡಬಹುದು. ಡ್ರಗ್ಸ್ ವಿರುದ್ದ ಹೋರಾಟದಲ್ಲಿ ಸಹಕಾರ ನೀಡಬಹುದು ಎಂದು ಸೋಮವಾರ ಅಪರಾಧ ವಿಭಾಗ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದರು. ಆದರೆ ಸಾಕ್ಷ್ಯ ಕೊಟ್ಟಿದ್ದಾರೋ ಇಲ್ಲವೋ ಎನ್ನುವ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಿರಲಿಲ್ಲ. ಆದರೆ ಇದೀಗ ಸಾಕ್ಷ್ಯ ಕೊಟ್ಟಿರಲಿಲ್ಲ ಎನ್ನುವ ಮಾಹಿತಿ ಹೊರಬಿದ್ದಿದೆ.

ಇಂದ್ರಜಿತ್ ಲಂಕೇಶ್ ವಿಚಾರಣೆ ಮುಗಿಸಿದ ಬಳಿಕ ಇಂದ್ರಜಿತ್‌ ಒದಗಿಸಿದ ದಾಖಲೆಗಳ ಜೊತೆಗೆ ಬೆಂಗಳೂರು ಪೊಲೀಸ್‌ ಕಮೀಷನರ್ ಕಚೇರಿಗೆ ಎಸಿಪಿ ಗೌತಮ್ ಮತ್ತು ಇನ್ಸ್‌ಪೆಕ್ಟರ್ ಬೋಳೆತೀನ್ ತೆರಳಿದ್ದರು ಎನ್ನಲಾಗಿತ್ತು. ಕಮೀಷನರ್ ಕಚೇರಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ, ಡ್ರಗ್ಸ್ ಜಾಲದ ಬಗ್ಗೆ ಇಂದ್ರಜಿತ್ ಕೊಟ್ಟ ಮಾಹಿತಿ ಮತ್ತು ಸಾಕ್ಷ್ಯಗಳ ಬಗ್ಗೆ ಚರ್ಚೆ ನಡೆಸಿದ್ದರು. ಯಾರ ಯಾರ ಮೇಲೆ ಆರೋಪ ಇದೆ. ಮುಂದೆ ಕೈಗೊಳ್ಳಬೇಕಾದ ಕಾನೂನು ಕ್ರಮಗಳು ಏನು ಎಂಬುದರ ಬಗ್ಗೆ ಚರ್ಚೆ ಮಾಡಿದ್ದರು.

ಸ್ಯಾಂಡಲ್ ವುಡ್ ನಲ್ಲಿ ನಟ-ನಟಿಯರು ಡ್ರಗ್ಸ್ ಸೇವನೆ ಬಗ್ಗೆ ಮಾಹಿತಿ ಕೊಟ್ಟ ಬಳಿಕ ಸಿಸಿಬಿ ಪೊಲೀಸರಿಗೆ ಮನವಿ ಮಾಡಿದ್ದ ಇಂದ್ರಜಿತ್ ಲಂಕೇಶ್‌ ನನ್ನನ್ನು ಸಾಕ್ಷಿಯಾಗಿ ಪರಿಗಣಿಸಬೇಡಿ. ನಾನು ಮಾಹಿತದಾರ ಅಷ್ಟೆ, ನೀವು ಈ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಬಹುದು ಎಂದು ಎಂದು ಮನವಿ ಮಾಡಿದ್ದಾರೆ ಎನ್ನುವ ಮಾಹಿತಿ ಹೊರಬಿತ್ತು. ಆದರೀಗ ಸಾಕ್ಷಿಯನ್ನೇ ಕೊಡದೆ ಮಾಧ್ಯಮಗಳ ಎದುರು ಬಡಾಯಿ ಕೊಚ್ಚಿಕೊಂಡಿದ್ದಾರೆ ಎನ್ನಲಾಗ್ತಿದೆ.

ಸಾಕ್ಷಿಗಳ ಸಮೇತ ಬಂದಿದ್ದಾರೆ ಎನ್ನುವಂತೆ ಲ್ಯಾಪ್‌ ಟಾಪ್‌ ಹಾಗೂ ಫೈಲ್‌ಗಳ ಜೊತೆಗೆ ಬಂದಿದ್ದ ಇಂದ್ರಜಿತ್‌ ಲಂಕೇಶ್‌ ವಿಚಾರಣೆ ಎದುರಿಸಿದ್ದರು. ಆದರೆ ವಿಚಾರಣೆ ವೇಳೆ ಕೆಲವು ಹಿಂದಿನ ಘಟನೆಗಳು ಹಾಗೂ ಕೆಲವರ ಹೆಸರುಗಳನ್ನು ಅಷ್ಟೇ ಇಂದ್ರಜಿತ್ ಲಂಕೇಶ್‌ ಹೇಳಿದ್ದಾರೆ ಎನ್ನಲಾಗಿದೆ. ತನ್ನ ಹೇಳಿಕೆಗೆ ಯಾವುದೇ ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ ಎನ್ನಲಾಗಿದೆ. ಹೀಗಾಗಿ ಮತ್ತೆ ವಿಚಾರಣೆಗೆ ಬರುವಂತೆ ಸೂಚನೆ ನೀಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಇಂದ್ರಜಿತ್ ಲಂಕೇಶ್ ಕೊಟ್ಟ ಮಾಹಿತಿ ಮೇರೆಗೆ ತನಿಖೆ ಆರಂಭ ಆಗಿದೆ. ಕೆಲವು ಹೆಸರುಗಳು ಹೇಳಿದ್ದಾರೆ ಅದರ ಮೇಲೆ ತನಿಖೆ ಕೈಗೊಳ್ಳಲಾಗುವುದು. ಅವರು ಮಾಡಿರುವ ಆರೋಪ ಸಂಬಂಧ ಯಾವುದೇ ಪುರಾವೆಗಳು ಕೊಟ್ಟಿಲ್ಲ. ಏನಾದ್ರು ಪುರಾವೆಗಳು ಇದ್ದರೆ ತರುವಂತೆ ಮತ್ತೆ ನೋಟಿಸ್ ಕೊಟ್ಟು ಕರೆಯಲಾಗುವುದು. ಆದರೆ ಅವರು ಹೇಳಿರುವ ಹೆಸರುಗಳನ್ನು ಬಹಿರಂಗ ಪಡಿಸಲು ಆಗುವುದಿಲ್ಲ ಎಂದಿದ್ದಾರೆ.

ಇಂದ್ರಜಿತ್‌ ಹೇಳಿದ್ದು ಸತ್ಯವೆಂದೂ ಸಾಬೀತು ಮಾಡಲಿ..!

ಇಂದ್ರಜಿತ್‌ ಲಂಕೇಶ್‌ ಹೇಳೀಕೆಯನ್ನೇ ದಿನವಿಡಿ ಮಾಧ್ಯಮಗಳು ರಾಜ್ಯ, ದೇಶದಲ್ಲಿ ಪ್ರಚಾರ ಮಾಡಿವೆ. ನಾನು ಕೊಟ್ಟಿರುವ ಸಾಕಷಿ ಕಂಡು ಸಿಸಿಬಿ ಪೊಲೀಸರೇ ಬೆಚ್ಚಿದ್ದಾರೆ ಎಂದಿದ್ದ ಇಂದ್ರಜಿತ್‌ ಲಂಕೇಶ್‌ ಮಾಧ್ಯಮಗಳ ಎದುರು ಪ್ರಚಾರಕ್ಕಾಗಿ ಸುಳ್ಳು ಹೇಳಿದ್ದಾರೆಯೇ..? ಎನ್ನಿಸುತ್ತಿದೆ. ಅಥವಾ ಇಂದ್ರಜಿತ್‌ ವಿಚಾರಣೆ ಬಳಿಕ ಸಾಕ್ಷ್ಯ ಕೊಟ್ಟಿಲ್ಲ ಎಂದು ಹೇಳುವುದಕ್ಕೆ ಪೊಲೀಸರು ತೆಗೆದುಕೊಂಡ ಸಮಯ ಬರೋಬ್ಬರಿ ಎರಡು ದಿನಗಳ ಕಾಲ. ಅಷ್ಟರಲ್ಲಿ ಕಮಿಷನರ್‌ ಕಚೇರಿ, ಗೃಹ ಸಚಿವರ ಭೇಟಿ, ಸಿಎಂ ಬಿ.ಎಸ್‌ ಯಡಿಯೂರಪ್ಪ ಅವರಿಗೆ ಮಾಹಿತಿ ಸೇರಿದಂತೆ ಸಾಕಷ್ಟು ಕಡೆಗೆ ಫೈಲ್‌ ಓಡಾಡಿದೆ. ಎಲ್ಲೆಲ್ಲಿ ಯಾರು ಯಾರ ಹೆಸರು ಪಟ್ಟಿಯಿಂದ ಮಾಯವಾಗಿದೆಯೋ..? ಯಾರು ಬಲ್ಲರು..! ಒಂದು ವೇಳೆ ಇಂದ್ರಜಿತ್‌ ಲೋಕೇಶ್‌ ಮಾಹಿತಿ ಜೊತೆಗೆ ಸಾಕ್ಷ್ಯವನ್ನೂ ಕೊಟ್ಟಿದ್ದರೆ ಮಾಹಿತಿ ಸೋರಿಕೆ ಮಾಡಿ ತಾನು ಸತ್ಯವಂತ ಎಂಬುದನ್ನು ಸಾಬೀತು ಮಾಡಲಿ. ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂದು ಸಾಬೀತು ಮಾಡಲಿ. ಇಲ್ಲದಿದ್ದರೆ ಪ್ರಚಾರಕ್ಕೆ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣದಲ್ಲಿ ಇಂದ್ರಜಿತ್‌ ಲಂಕೇಶ್‌ಗೆ ಶಿಕ್ಷೆಯಾಗಲಿ.

ಒಟ್ಟಾರೆ, ಈ ಕಳ್ಳ ಪೊಲೀಸ್‌ ಆಟದಲ್ಲಿ ಯಾರಿಗಾದರೂ ಒಬ್ಬರಿಗೆ ಶಿಕ್ಷೆಯಾಗುವ ಮೂಲಕ ಯಾರಾದರೂ ಒಬ್ಬರು ಸತ್ಯವಂತರೆಂದು ಸಾಬೀತು ಮಾಡಿಕೊಳ್ಳಲಿ. ಈ ಮೂಲಕ ರಾಜ್ಯದ ಜನತೆಗೆ ಸತ್ಯ ಗೊತ್ತಾಗಲಿ.

Click here to follow us on Facebook , Twitter, YouTube, Telegram

Pratidhvani
www.pratidhvani.com