ಆನ್ಲೈನ್ ಜೂಜಿಗೆ ಜಾಹಿರಾತು: ಸ್ಟಾರ್ ನಟರ ವಿರುದ್ಧ ಪ್ರಶ್ನೆಯೆತ್ತಿದ ಚೇತನ್
ರಾಜ್ಯ

ಆನ್ಲೈನ್ ಜೂಜಿಗೆ ಜಾಹಿರಾತು: ಸ್ಟಾರ್ ನಟರ ವಿರುದ್ಧ ಪ್ರಶ್ನೆಯೆತ್ತಿದ ಚೇತನ್

ನಾವು ಯಾವುದೇ ಆರೋಪಗಳನ್ನು ಹೋರಿಸಿದರೂ ಅದನ್ನು ಸಮರ್ಥಿಸಲು ಅಥವಾ ಉತ್ತರಿಸಲು ಆ ಧ್ವನಿಯೇ ಇಲ್ಲದಿರುವ ಸಮಯದಲ್ಲಿ ಅವರ ಮೇಲೆ ಕೆಸರು ಎರಚುವುದನ್ನು ನಾನು ಖಂಡಿಸುತ್ತೇನೆ

ಪ್ರತಿಧ್ವನಿ ವರದಿ

ಸಕ್ರಿಯ ಚಳವಳಿಗಳಲ್ಲಿ ಪಾಲ್ಗೊಳ್ಳುವ ನಟ ಚೇತನ್‌ ಅಹಿಂಸಾ, ತಮಗೆ ತಪ್ಪು ಎಂದು ಅನಿಸಿದ್ದನ್ನು ನೇರವಾಗಿ ಹೇಳುತ್ತಾ ಬಂದವರು. ಸಾಮಾನ್ಯವಾಗಿ ನಟರು ಚಳವಳಿಗಳಿಂದ, ಸಕ್ರಿಯ ರಾಜಕಾರಣವನ್ನು ಪ್ರಶ್ನಿಸುವುದರಿಂದ ದೂರವೇ ಉಳಿಯುತ್ತಾರೆ. ತಮ್ಮ ಕೆರಿಯರ್‌ ಹಾಳಾಗುವ ಭಯವು ಅವರನ್ನು ಕಾಡುತ್ತಿರುತ್ತದೆ. ಆದರೆ ನಟ ಚೇತನ್‌, ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಸಾಮಾಜಿಕ ಜವಾಬ್ದಾರಿಯನ್ನು ಎಲ್ಲೂ ಬಿಟ್ಟುಕೊಟ್ಟವರಲ್ಲ. ಯಾವುದೇ ಮುಲಾಜಿಗೆ ಒಳಗಾಗದೆ ಚಿತ್ರರಂಗದ ಪ್ರಭಾವಿಗಳನ್ನು ಎದುರಿಸಿದವರು.

ತಮ್ಮ ಫೈರ್‌ ಸಂಸ್ಥೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಮಾನತೆ ಮೂಡಿಸಲು ಪ್ರಯತ್ನಿಸುತ್ತಿರುವ ಚೇತನ್‌, ಸ್ಯಾಂಡಲ್‌ವುಡ್‌ನಲ್ಲಿರುವ ಹುಳುಕುಗಳ ಕಡೆಗೂ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಕನ್ನಡ ಚಿತ್ರರಂಗದ ವಿರುದ್ಧ ಡ್ರಗ್‌ ಮಾಫಿಯಾದ ಆರೋಪ ಬರುತ್ತಿರುವ ಹಿನ್ನಲೆಯಲ್ಲಿ ಚೇತನ್‌ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಪ್ರಸ್ತುತವಾಗಿ ಎಲ್ಲರ ಗಮನ ಮಾದಕವಸ್ತುಗಳನ್ನು ಖಾಸಗಿಯಾಗಿ ಬಳಸುವ ಚಲನಚಿತ್ರ ಸಿಬ್ಬಂದಿ ಮತ್ತು ನಟರನ್ನು ಬಹಿರಂಗಪಡಿಸುವುದರ ಮೇಲಿದೆ...

ಕೇವಲ ಹಣಕ್ಕಾಗಿ ಮದ್ಯ (ಸೋಡ), ಗುಟ್ಕಾ/ಪಾನ್ ಮಸಾಲಾ, ಜೂಜು (ರಮ್ಮಿ), ಇನ್ನು ಇತ್ಯಾದಿಗಳ ಬಗ್ಗೆ ಮುಕ್ತವಾಗಿ ಜಾಹೀರಾತು ನೀಡುವ 'ಸ್ಟಾರ್ಸ್'ಗಳ ಮೇಲೆ ಬೆರಳು ತೋರಿಸದಿರುವುದು ಮೋಸವಲ್ಲವೇ? ಇವರು ಸಾಮಾಜಿಕ ದುಷ್ಕೃತ್ಯಗಳ 'ರಾಯಭಾರಿಗಳಲ್ಲವೇ'?” ಎಂದು ಚೇತನ್‌ ಪ್ರಶ್ನಿಸಿದ್ದಾರೆ.

ಆನ್‌ಲೈನ್‌ ಜೂಜು ಜಾಹಿರಾತಿನಲ್ಲಿ ಕನ್ನಡ ಸೇರಿದಂತೆ ಭಾರತ ಚಿತ್ರರಂಗದ ದಿಗ್ಗಜ ನಟ, ನಟಿಯರು ನಟಿಸುತ್ತಿದ್ದಾರೆ. ಇದು ಅವರ ಅಭಿಮಾನಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ, ಹಾಗಾಗಿ ನಟರು ಸಾಮಾಜಿಕ ಕಳಕಳಿಯಿಂದ ಇಂತಹ ಜಾಹಿರಾತುಗಳಿಂದ ದೂರವಿರಬೇಕೆಂದು ಆಗ್ರಹಿಸಿ ಈ ಹಿಂದೆಯೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಆಗ್ರಹಿಸಿದ್ದರು.

ಸುದೀಪ್‌, ಪ್ರಕಾಶ್‌ ರಾಜ್‌, ಬಾಹುಬಲಿಯ ಖ್ಯಾತಿಯ ರಾಣಾ ದಗ್ಗುಬಾಟಿ ಮೊದಲಾದ ಖ್ಯಾತ ನಟರು ಆನ್‌ಲೈನ್‌ ಜೂಜಿನ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಉಪೇಂದ್ರ ಈ ಹಿಂದೆ ಸೋಡಾದ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು.

ನಮ್ಮೊಂದಿಗೆ ಇಲ್ಲದವರ ವಿರುದ್ಧ ಕೆಸರೆರಚುವುದನ್ನು ನಾನು ಖಂಡಿಸುತ್ತೇನೆ- ಚೇತನ್‌

ಡ್ರಗ್‌ ಮಾಫಿಯಾದ ಕುರಿತಂತೆ ವದಂತಿಗಳು ಹಬ್ಬುತ್ತಿದ್ದ ಹಿನ್ನಲೆಯಲ್ಲಿ ಇಂದ್ರಜಿತ್‌ ಲಂಕೇಶ್‌ ಇತ್ತೀಚೆಗೆ ಮೃತಪಟ್ಟ ನಟನ ಮರಣೋತ್ತರ ಪರೀಕ್ಷೆ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದ್ದರು. ಇತ್ತೀಚೆಗೆ ಮೃತಪಟ್ಟ ಯುವ ನಟ ಚಿರು, ಹಾಗಾಗಿ ಚಿರು ಅವರ ವಿರುದ್ಧವೇ ಆರೋಪ ಮಾಡಲಾಗುತ್ತಿದೆ ಎಂದು ಇಂದ್ರಜಿತ್‌ ವಿರುದ್ಧ ಅಪಸ್ವರಗಳು ಎದ್ದಿದ್ದವು.

ಇದನ್ನು ಖಂಡಿಸಿರುವ ಚೇತನ್‌ ನಮಗೆ ಬೇಕಾಗಿರುವುದು ಮಾದಕ ವಸ್ತುವಿನ ಜಾಗೃತಿ ಅಭಿಯಾನ, ಪುನರ್ವಸತಿ ಕಾರ್ಯಕ್ರಮಗಳು, ಸರ್ಕಾರದ ಉತ್ತಮ ನೀತಿಗಳು, ಮತ್ತು ಸರಿಯಾದ ತನಿಖೆಗಳು. ಬೇಡವಾದದ್ದು: ಮಸಿ ಬಳಿಯುವುದು/ಉದ್ರೇಕಕಾರಿ ಹೇಳಿಕೆಗಳು ಎಂದು ಹೇಳಿದ್ದಾರೆ. ಅಲ್ಲದೆ ಕನ್ನಡ ಚಿತ್ರರಂಗದ ಯಾವುದೇ ಸಾಮಾಜಿಕ ಅಭ್ಯಾಸಗಳ ಬಗ್ಗೆ ಗೊತ್ತಿಲ್ಲದ ನನಗೆ ನಮ್ಮ ನಡುವೆ ಇಲ್ಲದ ವ್ಯಕ್ತಿಯ ಮೇಲೆ ಕೆಸರೆರಾಚಾಟ ಮಾಡುತ್ತಿರುವುದರ ಬಗ್ಗೆ ದುಃಖವಿದೆ. ನಾವು ಯಾವುದೇ ಆರೋಪಗಳನ್ನು ಹೋರಿಸಿದರೂ ಅದನ್ನು ಸಮರ್ಥಿಸಲು ಅಥವಾ ಉತ್ತರಿಸಲು ಆ ಧ್ವನಿಯೇ ಇಲ್ಲದಿರುವ ಸಮಯದಲ್ಲಿ ಅವರ ಮೇಲೆ ಕೆಸರು ಎರಚುವುದನ್ನು ನಾನು ಖಂಡಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com