ಡ್ರಗ್ಸ್ ಮಾಫಿಯಾ ವಸೂಲಿ ಹಣದಿಂದಲೇ ಮೈತ್ರಿ ಸರ್ಕಾರವನ್ನು ಉರುಳಿಸಲಾಗಿದೆ- HDK ಗಂಭೀರ ಆರೋಪ
ರಾಜ್ಯ

ಡ್ರಗ್ಸ್ ಮಾಫಿಯಾ ವಸೂಲಿ ಹಣದಿಂದಲೇ ಮೈತ್ರಿ ಸರ್ಕಾರವನ್ನು ಉರುಳಿಸಲಾಗಿದೆ- HDK ಗಂಭೀರ ಆರೋಪ

ಜನಸೇವೆಯಲ್ಲಿ ವಿಶ್ವಾಸವಿಟ್ಟು ರಚ‌ನೆಗೊಂಡ ಸರಕಾರವೊಂದು ಮಾಫಿಯಾದ ಹಣದಿಂದ ಹೇಗೆ ಬುಡಮೇಲಾಯಿತು ಎಂಬುದಷ್ಟನ್ನೇ ಜನತೆಯ ಮುಂದೆ ಹೇಳಿದ್ದೇನೆ. ಆದರೆ ಸಚಿವ ಸುಧಾಕರ್ ಹೆಗಲು ಮುಟ್ಟಿಕೊಳ್ಳುವ ಪ್ರಮೇಯ ಉದ್ಭವಿಸಿದ್ದು ಏಕೆಂದು ಅರ್ಥವಾಗಲಿಲ್ಲ

ಪ್ರತಿಧ್ವನಿ ವರದಿ

ಡ್ರಗ್ಸ್ ಮಾಫಿಯಾ, ಬೆಟ್ಟಿಂಗ್ ದಂಧೆ ಮಾಡುವವರಿಂದ ವಸೂಲಿ ಮಾಡಿದ ಹಣದಿಂದಲೇ ನನ್ನ ಸರ್ಕಾರವನ್ನು ಬುಡಮೇಲು ಮಾಡಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ನೀಡಿರುವ ಹೇಳಿಕೆ ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಚರ್ಚಾ ವಿಷಯವಾಗಿರುವ ಡ್ರಗ್ಸ್‌ ಮಾಫಿಯಾದ ಬಗ್ಗೆ ಇನ್ನಷ್ಟು ಒಳಸುಳಿ ನೀಡಿದೆ. ಬೆಂಗಳೂರಿನಲ್ಲಿ ನಡೆದ ಭಾರೀ ಡ್ರಗ್ಸ್‌ ಬೇಟೆಯೊಂದಿಗೆ ಕನ್ನಡ ಚಿತ್ರರಂಗದಲ್ಲಿರುವ ಕೆಲವು ವ್ಯಕ್ತಿಗಳಿಗೆ ಡ್ರಗ್ಸ್‌ ಮಾಫಿಯಾದೊಂದಿಗೆ ಸಂಬಂಧವಿದೆಯೆಂದು ಆರೋಪಗಳು ಕೇಳಿಬರುತ್ತಿದೆ. ರಾಜಕೀಯಕ್ಕಿಂತಲೂ ಮೊದಲು ಚಿತ್ರರಂಗದಲ್ಲಿ ಕೆಲಸ ಮಾಡಿರುವ ಕುಮಾರಸ್ವಾಮಿಯ ಈ ಹೆಳಿಕೆಯೊಂದಿಗೆ ಡ್ರಗ್ ಮಾಫಿಯಾ ಮತ್ತು ಕನ್ನಡ ಸಿನೆಮಾ ಉದ್ಯಮದ ನಡುವಿನ ಸಂಬಂಧದ ಬಗ್ಗೆ ತನಿಖೆ ನಡೆಯುತ್ತಿರುವ ಈ ಹೊತ್ತಿಗೆ ಇನ್ನಷ್ಟು ಕುತೂಹಲಕಾರಿ ಅಂಶ ಸೇರಿಕೊಂಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್‌ ಅವರನ್ನು ಗುರಿ ಮಾಡಿ ನಡೆಸಿದ ಟ್ವೀಟ್ದಾಳಿಯಲ್ಲಿ ಕುಮಾರಸ್ವಾಮಿ ಈ ಹೇಳಿಕೆ ನೀಡಿದ್ದಾರೆ. “ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ನನ್ನ ಹಿನ್ನೆಲೆ ಬಗೆಗೆ ಮಾತನಾಡಿದ್ದಾರೆ. ಬಹುಶಃ ಸುಧಾಕರ್ ಅವರಿಗೆ ಸ್ಮರಣಶಕ್ತಿ ಕಡಿಮೆ ಇದ್ದಂತಿದೆ. ರಾಜಕೀಯವಾಗಿ ಈಗಾಗಲೇ ಎಷ್ಟು ನೆಲೆಗಳನ್ನು ಬದಲಾಯಿಸಿ ರಾತ್ರೋರಾತ್ರಿ ವಿಮಾನ ಬದಲಿಸಿ ಓಡಾಡಿ ಬಂದವರು ನನ್ನ ಹಿನ್ನೆಲೆ ಬಗೆಗೆ ಮಾತನಾಡಿದರೆ ರಾಜ್ಯದ ಜನತೆ ನಗುತ್ತಾರೆ.” ಎಂದು ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಈ ಕುರಿತಂತೆ ಸರಣಿ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ, ಡ್ರಗ್ಸ್ ಮಾಫಿಯಾ, ಬೆಟ್ಟಿಂಗ್ ದಂಧೆ ಮಾಡುವವರಿಂದ ವಸೂಲಿ ಮಾಡಿದ ಹಣದಿಂದಲೇ ನನ್ನ ಸರ್ಕಾರವನ್ನು ಬುಡಮೇಲು ಮಾಡಲಾಯಿತು ಎಂಬುದು ಸೂರ್ಯ-ಚಂದ್ರರಷ್ಟೇ ಸ್ಪಷ್ಟ. ಇದನ್ನು ಮುಂಬೈವೀರರು ಚೆನ್ನಾಗಿಯೇ ಬಲ್ಲರು. ಅದಕ್ಕೆ ಸಚಿವ ಸುಧಾಕರ್ ಹೊರತಲ್ಲ. ಸಚಿವ ಸ್ಥಾನ ಸಿಕ್ಕಿದೆ ಎಂಬ ಉತ್ಸಾಹದಲ್ಲಿ ನನ್ನ ಹಿನ್ನೆಲೆ-ಮುನ್ನೆಲೆ ಬಗೆಗೆ ಮಾತನಾಡುವುದು ಸುಧಾಕರ್ ಅವರ ನೈಜ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಅಧಿಕಾರ ಶಾಶ್ವತ ಮತ್ತು ತಮ್ಮ ಸ್ವಂತ ಶಕ್ತಿ ಎಂಬ ಭ್ರಮೆಯಲ್ಲಿ ಇರುವವರು ಮಾತ್ರ ಹೀಗೆ ಮಾತನಾಡುತ್ತಾರೆ ಎಂಬುದು ನನ್ನ ಗ್ರಹಿಕೆ ಎಂದು ಹೇಳಿದ್ದಾರೆ.

ಸುಧಾಕರ್‌ ವಿರುದ್ಧ ಸತತ ದಾಳಿ ನಡೆಸಿದ ಕುಮಾರಸ್ವಾಮಿ, ಕಳೆದ ಎರಡು ದಶಕಗಳಿಂದ ಸುಧಾಕರ್ ಅವರು ಯಾವ್ಯಾವ ನಾಯಕರಿಗೆ ಎಂತೆಂಥ ಸೇವೆಗಳನ್ನು ಮಾಡಿದ್ದಾರೆ ಎಂಬ ಹಿನ್ನೆಲೆ ಬಗೆಗೆ ನಾನು ಮಾತನಾಡಲಾರೆ. ಜನಸೇವೆಯಲ್ಲಿ ವಿಶ್ವಾಸವಿಟ್ಟು ರಚ‌ನೆಗೊಂಡ ಸರಕಾರವೊಂದು ಮಾಫಿಯಾದ ಹಣದಿಂದ ಹೇಗೆ ಬುಡಮೇಲಾಯಿತು ಎಂಬುದಷ್ಟನ್ನೇ ಜನತೆಯ ಮುಂದೆ ಹೇಳಿದ್ದೇನೆ. ಆದರೆ ಸಚಿವ ಸುಧಾಕರ್ ಹೆಗಲು ಮುಟ್ಟಿಕೊಳ್ಳುವ ಪ್ರಮೇಯ ಉದ್ಭವಿಸಿದ್ದು ಏಕೆಂದು ಅರ್ಥವಾಗಲಿಲ್ಲ ಎಂದಿದ್ದಾರೆ.

ಇಂತಹ ಮಾಫಿಯಾಗಳಿಂದ ಹಣ ಪಡೆದು ಸರ್ಕಾರವನ್ನು ಉರುಳಿಸುವ ಯತ್ನ ಮಾಡುವ ಕಿಂಗ್‌ಪಿನ್‌ಗಳ ಕುರಿತಾಗಿ ತನಿಖೆ ನಡೆಸಲು 2018ರಲ್ಲೇ ಕುಮಾರಸ್ವಾಮಿಯವರು ಆದೇಶ ನೀಡಿದ್ದರು. ಆದರೆ, ಆ ತನಿಖೆಯಿಂದ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ದಿ ಹಿಂದೂ ವರದಿ ಮಾಡಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com