NIAಗೆ ವರ್ಗವಾಗುತ್ತಾ ಬೆಂಗಳೂರು ಗಲಭೆ ಪ್ರಕರಣ..?
ರಾಜ್ಯ

NIAಗೆ ವರ್ಗವಾಗುತ್ತಾ ಬೆಂಗಳೂರು ಗಲಭೆ ಪ್ರಕರಣ..?

ರಾಜ್ಯ ಸರ್ಕಾರಕ್ಕೆ ಕ್ಲೈಮ್‌ ಕಮಿಷನರ್‌ ನೇಮಕ ಮಾಡಿ ಅಧಿಸೂಚನೆ ಹೊರಡಿಸಲು 1 ವಾರಗಳ ಕಾಲಾವಾಕಾಶವನ್ನು ಹೈಕೋರ್ಟ್‌ ನೀಡಿದೆ. ಜೊತೆಗೆ ಸೆಪ್ಟೆಂಬರ್11ಕ್ಕೆ ಮತ್ತೆ ವಿಚಾರಣೆಗೆ ಬರಲಿದ್ದು, ಮತ್ತೊಮ್ಮೆ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ಕೈಗೊಂಡ ಕಾರ್ಯಗಳು ಹಾಗೂ ತನಿಖೆಯ ಸ್ಥಿತಿಗತಿಯನ್ನು ತಿಳಿಸಬೇಕಿದೆ.

ಕೃಷ್ಣಮಣಿ

ಬೆಂಗಳೂರು ಗಲಭೆ ಪ್ರಕರಣದ ತನಿಖೆಯನ್ನು ಎನ್ಐಎ National Investigation Agency ಗೆ ವರ್ಗಾಯಿಸಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಇದುವರೆಗೆ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ ಎಂದು ಸೂಚನೆ ಕೊಟ್ಟಿತ್ತು. ಜೊತೆಗೆ ಗಲಭೆಯ ಸಂದರ್ಭದಲ್ಲಿ ಹಾನಿಗೊಳಗಾದ ಆಸ್ತಿಗೆ ಪರಿಹಾರವನ್ನು ನಿರ್ಧರಿಸಲು ಹೈಕೋರ್ಟ್ ನಿರ್ಧರಿಸಿದ್ದು, ಇತ್ತೀಚೆಗೆ ನಿವೃತ್ತರಾದ ನ್ಯಾಯಾಧೀಶ ಕೆಂಪಣ್ಣ ಅವರನ್ನು ಕ್ಲೈಮ್‌ ಕಮಿಷನರ್‌ ಆಗಿ ನೇಮಕ ಮಾಡಲಾಗಿದೆ

ಆಗಸ್ಟ್ 11 ರಂದು ಬೆಂಗಳೂರಿನ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣದ ಬಗ್ಗೆ ವಕೀಲ ಅಮೃತೇಶ್ ಅವರು ಸಲ್ಲಿಸಿದ ಅರ್ಜಿಯನ್ನು ಬೆಂಗಳೂರು ಗಲಭೆಯಲ್ಲಿ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೆಸಿಒಸಿಎ) ಮತ್ತು ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಯ ಅನ್ವಯ ಅರ್ಜಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (National Investigation Agency) ವರ್ಗಾಯಿಸಲು ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಅರ್ಜಿ ವಿಚಾರಣೆ ಮಾಡಿದ ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ನೀಡಿದೆ. ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ಅಶೋಕ್ ಎಸ್ ಕಿನಗಿ ಈ ಆದೇಶ ಮಾಡಿದ್ದಾರೆ.

ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಪೊಲೀಸರಿಗೆ ದೂರು ನೀಡುವಲ್ಲಿ ಮೂರು ದಿನಗಳ ವಿಳಂಬವನ್ನು ಪ್ರಶ್ನಿಸಿದ ಅಮೃತೇಶ್, ಗಾಯಗೊಂಡ ಪೊಲೀಸ್ ಸಿಬ್ಬಂದಿಗೆ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯಗಳಿಗಾಗಿ ನಿರ್ದೇಶನಗಳನ್ನು ಕೋರಿದ್ದರು. ಹಿಂಸಾಚಾರದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಶ್ರೀಧರ್ ಪ್ರಭು ಎಂಬುವರು ಸಲ್ಲಿಸಿದ್ದ ಮನವಿಯಲ್ಲಿ, ತನಿಖೆಯನ್ನು ಎನ್ಐಎ ಅಥವಾ ಇನ್ನಾವುದೇ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗೆ ವರ್ಗಾಯಿಸಲು ಕೋರಿದ್ದರು.

ಗಲಭೆಗಳ ತನಿಖೆಗೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡ ಕ್ರಮಗಳನ್ನು ಕೋರ್ಟ್‌ಗೆ ತಿಳಿಸುವಂತೆ ಕೋರ್ಟ್‌ ನಿರ್ದೇಶನ ನೀಡಿದೆ. ಮುಚ್ಚಿದ ಲಕೋಟೆಯಲ್ಲಿ ಮಾಹಿತಿಯನ್ನು ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆಗಸ್ಟ್ 28ರಂದು ನಡೆದ ವಿಚಾರಣೆ ವೇಳೆ ರಾಜ್ಯ ಸರ್ಕಾರ ವರದಿಯನ್ನು ಸಲ್ಲಿಸಿದ್ದು, ಗಲಭೆಯ ಸಮಯದಲ್ಲಿ ಹಾನಿಗೊಳಗಾದ ಆಸ್ತಿಗೆ ಪರಿಹಾರವನ್ನು ನಿರ್ಧರಿಸಲು ಕ್ಲೈಮ್‌ ಕಮಿಷನರ್‌ ನೇಮಕ ಮಾಡಿದ್ದು, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್11ಕ್ಕೆ ಮುಂದೂಡಿಕೆ ಮಾಡಿ ಆದೇಶ ಮಾಡಿದೆ.

ಕ್ಲೈಮ್‌ ಕಮಿಷನರ್‌ಗೆ ಕಚೇರಿ, ಪೀಠೋಪಕರಣಗಳು, ವಾಹನಗಳು, ಮತ್ತು ಸಾಕಷ್ಟು ಸಿಬ್ಬಂದಿ ಸೇರಿದಂತೆ ಮೂಲ ಸೌಕರ್ಯಗಳನ್ನು ರಾಜ್ಯ ಸರ್ಕಾರ ಒದಗಿಸಲು ಸೂಚಿಸಿರುವ ಹೈಕೋರ್ಟ್, ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾಗಿ ಅವರ ಸ್ಥಾನಮಾನವನ್ನು ಪರಿಗಣಿಸಿ ಸಂಭಾವನೆ ನಿಗದಿಪಡಿಸುವಂತೆಯೂ ತಿಳಿಸಿದೆ. ಹೈಕೋರ್ಟ್‌ನಲ್ಲಿ ಕುಳಿತುಕೊಳ್ಳುವ ನ್ಯಾಯಾಧೀಶರಿಗೆ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು. ಸಂಭಾವನೆ ನಿಗದಿಪಡಿಸುವಾಗ ಪಿಂಚಣಿ ಪ್ರಯೋಜನಗಳನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕು. ಅವರ ನೇಮಕಾತಿಗೆ ಸಂಬಂಧಿಸಿದಂತೆ ಒಂದು ವಾರದೊಳಗೆ ಅಧಿಸೂಚನೆ ಹೊರಡಿಸಬೇಕು ಎಂದು ನಿರ್ದೇಶನ ನೀಡಿದೆ. ಜೊತೆಗೆ ಕ್ಲೈಮ್‌ ಕಮಿಷನರ್‌ ನೇಮಕದ ಬಗ್ಗೆ ವ್ಯಾಪಕ ಪ್ರಚಾರ ನೀಡುವ ಮೂಲಕ ಆಯುಕ್ತರ ಮುಂದೆ ಆಸ್ತಿ ನಾಶವಾದ ಅಥವಾ ಹಾನಿಗೊಳಗಾದ ವ್ಯಕ್ತಿಗಳನ್ನು ಮನವಿ ಸಲ್ಲಿಸಲು ಅನುಕೂಲ ಆಗುವಂತೆ ಮಾಡಿ ಎಂದು ಸೂಚಿಸಲಾಗಿದೆ.

ಅದಕ್ಕೂ ಮೊದಲು ಕ್ಲೈಮ್‌ ಕಮಿಷನರ್‌ಗೆ ಆಸ್ತಿ ಮೌಲ್ಯದ ಬಗ್ಗೆ ಮೌಲ್ಯಮಾಪಕರು ಮಾಡಿರುವ ಪಟ್ಟಿಯನ್ನು ಪೂರೈಸುವಂತೆಯೂ ತಿಳಿಸಲಾಗಿದೆ. ಹಾನಿಯನ್ನು ಗುರುತಿಸಲು ಮತ್ತು ಹಾನಿಗೊಳಗಾದವ ಜೊತೆಗೆ ಗಮನ ಸೆಳೆಯುವ ಉದ್ದೇಶದಿಂದ ನೀವು ಕೈಗೊಂಡ ವೀಡಿಯೊಗಳು ಮತ್ತು ರೆಕಾರ್ಡಿಂಗ್‌ಗಳನ್ನು ಕ್ಲೈಮ್‌ ಕಮಿಷನರ್‌ಗೆ ಸಲ್ಲಿಸುವಂತೆ ತಿಳಿಸಲಾಗಿದೆ. ಕ್ಲೈಮ್‌ ಕಮಿಷನರ್‌ ಒಂದು ವೇಳೆ ಸಾಕ್ಷಿಗಳನ್ನು ಕರೆಸಬೇಕಾದ ಸಂಧರ್ಭ ಬಂದರೆ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್‌ಗೆ ಮನವಿ ಸಲ್ಲಿಸಬಹುದು ಎಂದು ತಿಳಿಸಿದೆ.

ರಾಜ್ಯ ಸರ್ಕಾರ ಕ್ಲೈಮ್‌ ಕಮಿಷನರ್‌ ನೇಮಕ ಮಾಡಿ ಅಧಿಸೂಚನೆ ಹೊರಡಿಸಲು 1 ವಾರಗಳ ಕಾಲಾವಾಕಾಶ ನೀಡಲಾಗಿದೆ. ಜೊತೆಗೆ ಸೆಪ್ಟೆಂಬರ್11ಕ್ಕೆ ಮತ್ತೆ ವಿಚಾರಣೆಗೆ ಬರಲಿದ್ದು, ಮತ್ತೊಮ್ಮೆ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ಕೈಗೊಂಡ ಕಾರ್ಯಗಳು ಹಾಗೂ ತನಿಖೆಯ ಸ್ಥಿತಿಗತಿಯನ್ನು ತಿಳಿಸಬೇಕಿದೆ. ಒಂದು ವೇಳೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳು ನ್ಯಾಯಾಧೀಶರಿಗೆ ಸಮಂಜಸ ಎನಿಸದಿದ್ದರೆ ಎನ್ಐಎ ತನಿಖೆಗೆ ಆದೇಶ ಮಾಡಬಹುದು. ಅಥವಾ ಒಂದು ವೇಳೆ ರಾಜ್ಯ ಪೊಲೀಸರೇ ಸಮರ್ಥವಾಗಿ ತನಿಖೆ ಮಾಡುತ್ತಿದ್ದು ನೊಂದವರಿಗೆ ನ್ಯಾ ಸಿಗಲಿದೆ ಎನ್ನುವ ಭರವಸೆ ಕೋರ್ಟ್‌ಗೆ ಸಿಕ್ಕರೆ ಅರ್ಜಿ ಇತ್ಯರ್ಥ ಮಾಡಲೂ ಬಹುದಾಗಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com