ಪಂಚಾಕ್ಷರಿ ಗವಾಯಿ ಚಿತ್ರಕ್ಕೆ ರಜತೋತ್ಸವದ ಸಂಭ್ರಮ
ರಾಜ್ಯ

ಪಂಚಾಕ್ಷರಿ ಗವಾಯಿ ಚಿತ್ರಕ್ಕೆ ರಜತೋತ್ಸವದ ಸಂಭ್ರಮ

ಚಿಂದೋಡಿ ಬಂಗಾರೇಶ್ ನಿರ್ದೇಶನದಲ್ಲಿ ತೆರೆಗೆ ಬಂದಿದ್ದ ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಸಿನಿಮಾ ತೆರೆಕಂಡು ನಾಳೆ ಸೆಪ್ಟೆಂಬರ್ 1ಕ್ಕೆ ಇಪತ್ತೈದು ವರ್ಷ! ಸಂಗೀತ ವಿಭಾಗದಲ್ಲಿ ಕನ್ನಡಕ್ಕೆ ಎರಡು ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಈ ಪ್ರಯೋಗ ಕನ್ನಡದ ಮಹತ್ವದ ಚಿತ್ರಗಳಲ್ಲೊಂದು.

ಶಶಿಧರ್‌ ಚಿತ್ರದುರ್ಗ

ಶಶಿಧರ್‌ ಚಿತ್ರದುರ್ಗ

ಕನ್ನಡ ನಾಡು ಕಂಡ ಅಪ್ರತಿಮ ಸಂಗೀತಗಾರ ಗಾನಯೋಗಿ ಪಂಚಾಕ್ಷರಿ ಗವಾಯಿ ಅವರ ಜೀವನಕತೆಯನ್ನು ಆಧರಿಸಿ 1995ರಲ್ಲಿ ಸಿನಿಮಾ ತೆರೆಗೆ ಬಂದಿತ್ತು. ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಎರಡೂ ಮಾದರಿಯಲ್ಲಿ ಚಿತ್ರದ ಗೀತೆಗಳಿಗೆ ಹಂಸಲೇಖ ಸಂಗೀತ ಸಂಯೋಜಿಸಿದ್ದರು. ಅಪ್ಪಟ ಸಂಗೀತಮಯ ಚಿತ್ರವಾಗಿ ಕನ್ನಡ ಬೆಳ್ಳಿತೆರೆಯನ್ನು ಸಿಂಗರಿಸಿದ್ದ ಚಿತ್ರ ಜನಮನ್ನಣೆ ಜೊತೆಗೆ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಬಾಚಿಕೊಂಡಿತ್ತು. ನಾಳೆ ಸೆಪ್ಟೆಂಬರ್ 1ಕ್ಕೆ ಈ ಚಿತ್ರ ತೆರೆಕಂಡು ಇಪ್ಪತ್ತೈದು ವರ್ಷಗಳಾಗುತ್ತವೆ. ನಿರ್ದೇಶಕ ಚಿಂದೋಡಿ ಬಂಗಾರೇಶ್ ಈ ಹೆಮ್ಮೆಯ ಪ್ರಯೋಗ ರೂಪುಗೊಂಡ ಬಗೆಯನ್ನು ಆಪ್ತವಾಗಿ ನೆನಪು ಮಾಡಿಕೊಳ್ಳುತ್ತಾರೆ.

“ರಂಗಭೂಮಿ ಹಿನ್ನೆಲೆಯ ಕುಟುಂಬ ನಮ್ಮದು. ನನ್ನ ತಂದೆಯವರಿಗೆ ಗವಾಯಿಗಳ ಆಶ್ರಮದೊಂದಿಗೆ ಆತ್ಮೀಯ ಒಡನಾಟವಿತ್ತು. ಪಂಚಾಕ್ಷರಿ ಗವಾಯಿಗಳ ಗುರುಗಳಾದ ಹಾನಗಲ್ ಕುಮಾರಸ್ವಾಮಿ ಅವರ ಪರಮಭಕ್ತರಾಗಿದ್ದರು ನಮ್ಮ ತಂದೆ. ಅಂಧರಾದ ಪಂಚಾಕ್ಷರಿ ಗವಾಯಿ ಅವರನ್ನು ಆಶ್ರಮಕ್ಕೆ ಕರೆದುಕೊಂಡು ಬಂದು ಇಡೀ ನಾಡಿಗೆ ಸಂಗೀತದ ಜ್ಯೋತಿ ಹಚ್ಚಿದವರು ಹಾನಗಲ್ ಕುಮಾರಸ್ವಾಮಿಯವರು. ಸ್ಪೂರ್ತಿದಾಯಕವಾದ ಈ ಜೀವನಕತೆಯನ್ನು ತೆರೆಗೆ ತರಬೇಕೆಂದು ಪಣತೊಟ್ಟೆ. ಒಂದೂವರೆ ವರ್ಷಗಳ ಕಾಲ ಸಂಶೋಧನೆ ನಡೆಸಿ, ಚಿತ್ರಕಥೆ ಮಾಡಿಕೊಂಡು ನಿರ್ದೇಶನಕ್ಕೆ ಸಜ್ಜಾದೆ” ಎನ್ನುತ್ತಾರೆ ನಿರ್ದೇಶಕ ಚಿಂದೋಡಿ ಬಂಗಾರೇಶ್.

ನಿರ್ದೇಶಕ ಚಿಂದೋಡಿ ಬಂಗಾರೇಶ್, ಹಂಸಲೇಖ ಮತ್ತು ಎಸ್‌ಪಿಬಿ
ನಿರ್ದೇಶಕ ಚಿಂದೋಡಿ ಬಂಗಾರೇಶ್, ಹಂಸಲೇಖ ಮತ್ತು ಎಸ್‌ಪಿಬಿ

ಚಿತ್ರಕಥೆ ಮಾಡಿಕೊಂಡ ಚಿಂದೋಡಿ ಬಂಗಾರೇಶ್ ನಿರ್ಮಾಪಕರ ಬಗ್ಗೆ ಆಲೋಚನೆ ನಡೆಸಿದಾಗ ಅವರ ಸೋದರತ್ತೆ, ರಂಗಕರ್ಮಿ ಪದ್ಮಶ್ರೀ ಚಿಂದೋಡಿ ಲೀಲಾ ಅವರೇ ಚಿತ್ರ ನಿರ್ಮಾಣಕ್ಕೆ ಮುಂದಾದರು. ಇನ್ನು ಬಹುಮುಖ್ಯವಾಗಿ ಚಿತ್ರದಲ್ಲಿ ಸಂಗೀತಕ್ಕೇ ಹೆಚ್ಚಿನ ಪ್ರಾಧಾನ್ಯತೆ. ಚಿಂದೋಡಿಯವರ ಅಪೇಕ್ಷೆಯಂತೆ ಕೊನೆಗೆ ಹಂಸಲೇಖ ಅವರೇ ಈ ಸಂಗೀತ ಯಜ್ಞಕ್ಕೆ ಸನ್ನದ್ಧರಾದರು. ಇದನ್ನು ಸವಾಲಾಗಿ ಸ್ವೀಕರಿಸಿದ ಹಂಸಲೇಖ ಚಿತ್ರದ ಹತ್ತು ಗೀತೆಗಳಿಗೆ ಶಾಸ್ತ್ರೀಯ ಮಟ್ಟು ಹಾಕಿ ಹಾಡುಗಳನ್ನು ಸಿಂಗರಿಸಿದರು. ಚಿತ್ರದ ಪ್ರತೀ ಹಂತದಲ್ಲೂ ಪಂಚಾಕ್ಷರಿಗಳ ಶಿಷ್ಯ ಪುಟ್ಟರಾಜ ಗವಾಯಿಗಳು ಜೊತೆಗಿದ್ದರು ಎಂದು ನೆನೆಯುತ್ತಾರೆ ಚಿಂದೋಡಿ ಬಂಗಾರೇಶ್.

SPBಗೆ ರಾಷ್ಟ್ರಪ್ರಶಸ್ತಿಯ ಗೌರವ!

ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಲು ಹಂಸಲೇಖ ಏಳೆಂಟು ತಿಂಗಳು ವ್ಯಯಿಸಿದ್ದರು. ಪುರಂದರ ದಾಸರು, ತಾನಸೇನ್, ಶಿಶುನಾಳ ಷರೀಫ, ಪಂಚಾಕ್ಷರಿ ಗವಾಯಿ, ನಿಜಗುಣ ಶಿವಯೋಗಿ, ಸರ್ಪಭೂಷಣರ ರಚನೆಗಳಲ್ಲದೆ ಚಿತ್ರಕ್ಕಾಗಿ ಹಂಸಲೇಖ ಅವರು ಮೂರು ಹಾಡುಗಳನ್ನು ರಚಿಸಿದ್ದಾರೆ. ಇನ್ನು ಸಾಂಗ್ ರೆಕಾರ್ಡಿಂಗ್ ಹಿಂದೆಯೂ ಹಲವು ಅಚ್ಚರಿಯ ಸಂಗತಿಗಳು ನಡೆದವು. ಒಂದು ಹಂತದಲ್ಲಿ ಎಸ್‌ಪಿಬಿಯವರು ‘ಉಮಂಡು ಘಮಂಡು’ ಗೀತೆಯನ್ನು ತಮ್ಮಿಂದ ಹಾಡಲು ಸಾಧ್ಯವೇ ಇಲ್ಲ ಎಂದು ಕೈಚೆಲ್ಲಿದ್ದರು. ಪಟ್ಟು ಬಿಡದ ಹಂಸಲೇಖ ಮತ್ತೆ ಮತ್ತೆ ಹಾಡಿಸಿದ್ದಾರೆ. ಆರು ಗಂಟೆಗಳ ಕಾಲದ ಸತತ ಪ್ರಯತ್ನದ ನಂತರ ಕೊನೆಗೆ ಹಾಡು ಓಕೆ ಆಗಿದೆ. “ಸಂಕೇತ್ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಆಗಿದ್ದು. ಎಸ್‌ಪಿಬಿ ಎಲ್ಲರನ್ನೂ ಹೊರಗೆ ಕಳುಹಿಸಿ ತಾವೊಬ್ಬರೇ ತಪ್ಪಸ್ಸಿನಂತೆ ಹಾಡು ಪ್ರಾಕ್ಟೀಸ್ ಮಾಡಿ ಓಕೆ ಮಾಡಿದರು” ಎನ್ನುತ್ತಾರೆ ನಿರ್ದೇಶಕ ಚಿಂದೋಡಿ ಬಂಗಾರೇಶ್.

ಎಸ್‌ಪಿಬಿ ಸಾವಿರಾರು ಕನ್ನಡ ಹಾಡುಗಳನ್ನು ಹಾಡಿದ್ದರೂ ಅವರಿಗೆ ಕನ್ನಡ ಗೀತೆಗಳ ಗಾಯನಕ್ಕೆ ರಾಷ್ಟ್ರಪ್ರಶಸ್ತಿಯ ಗೌರವ ಸಿಕ್ಕಿರಲಿಲ್ಲ. ಗವಾಯಿ ಸಿನಿಮಾದ ‘ಉಮಂಡು ಘಮಂಡು’ ಹಾಡು ಈ ಗೌರವ ಕಲ್ಪಿಸಿತು. ಮತ್ತೊಂದೆಡೆ ಶ್ರೇಷ್ಠ ಸಂಗೀತ ಸಂಯೋಜನೆಗೆ ಹಂಸಲೇಖ ರಾಷ್ಟ್ರಪ್ರಶಸ್ತಿಗೆ ಭಾಜನರಾದರು. ಅತ್ಯುತ್ತಮ ಚಿತ್ರ, ಅತ್ಯುತ್ತಮ ಸಂಗೀತ ಮತ್ತು ಅತ್ಯುತ್ತಮ ಪೋಷಕ ಪಾತ್ರಕ್ಕಾಗಿ ಗಿರೀಶ್ ಕಾರ್ನಾಡ್ ರಾಜ್ಯಪ್ರಶಸ್ತಿಗೆ ಪಾತ್ರರಾದರು. ಚಿತ್ರದಲ್ಲಿ ಗಿರೀಶ್ ಕರ‍್ನಾಡ್ ಹಾನಗಲ್ ಕುಮಾರಸ್ವಾಮಿ ಪಾತ್ರ ನಿರ್ವಹಿಸಿದ್ದರು. ನಟ ಲೋಕೇಶ್ ಮತ್ತು ವಿಜಯರಾಘವೇಂದ್ರ ಅವರ ವೃತ್ತಿಬದುಕಿನಲ್ಲಿ ಈ ಸಿನಿಮಾ ಮಹತ್ವದ ಪ್ರಯೋಗವಾಗಿ ದಾಖಲಾಯ್ತು.

ವರನಟ ಡಾ. ರಾಜಕುಮಾರ್ ಚಿತ್ರದಲ್ಲಿನ ‘ಸಾವಿರದ ಶರಣು’ ಹಾಡಿಗೆ ದನಿಯಾಗಿದ್ದರು. ಚಿತ್ರ ನೋಡಿದ ಅವರು ಲೋಕೇಶ್ ಅಭಿನಯಿಸಿದ್ದ ಶೀರ್ಷಿಕೆ ಪಾತ್ರವನ್ನು ಹಾಗೂ ಬಂಗಾರೇಶರ ನಿರ್ದೇಶನವನ್ನು ಹಾಡಿ ಹೊಗಳಿದ್ದರು. “ಮೆಜಸ್ಟಿಕ್‌ನ ಕಲ್ಪನಾ ಚಿತ್ರಮಂದಿರದಲ್ಲಿ ಸಿನಿಮಾ ತೆರೆಕಂಡಿತ್ತು. ರವೀಂದ್ರ ಕಲಾಕ್ಷೇತ್ರದಿಂದ ಥಿಯೇಟರ್‌ವರೆಗೆ ಪುಟ್ಟರಾಜ ಗವಾಯಿಗಳನ್ನು ಜನಪದ ಮೇಳದೊಂದಿಗೆ ಸಾರೋಟಿನಲ್ಲಿ ಕರೆದೊಯ್ದಿದ್ದೆವು. ಥಿಯೇಟರ್‌ನಲ್ಲಿ ನನ್ನ ಸೋದರತ್ತೆ, ರಂಗಕರ್ಮಿ ಚಿಂದೋಡಿ ಲೀಲಾ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಎಂಟು ಸಂಗೀತಗಾರರನ್ನು ಸನ್ಮಾನಿಸಿದ್ದರು. ಅದೊಂದು ಅಭೂತಪೂರ್ವ ಸಮಾರಂಭ” ಎಂದು ನೆನಪು ಮಾಡಿಕೊಳ್ಳುತ್ತಾರೆ ನಿರ್ದೇಶಕ ಚಿಂದೋಡಿ ಬಂಗಾರೇಶ್.

ಅದೃಷ್ಟ ತಂದುಕೊಟ್ಟ ಪಾತ್ರ

“ಚಿತ್ರ ತೆರೆಕಂಡು ಇಪ್ಪತ್ತೈದು ವರ್ಷಗಳಾದವು ಎನ್ನುವುದನ್ನು ನೆನಪು ಮಾಡಿಕೊಂಡರೆ ಅಚ್ಚರಿಯಾಗುತ್ತದೆ. ನಾನಾಗ ಹತ್ತನೇ ತರಗತಿ ಮುಗಿಸಿದ್ದೆ. ‘ಚಿನ್ನಾರಿ ಮುತ್ತ’ ಮತ್ತು ‘ಕೊಟ್ರೇಶಿ ಕನಸು’ ಚಿತ್ರಗಳು ತೆರೆಕಂಡಿದ್ದವು. ತಂದೆಯವರ ಮೂಲಕ ನನಗೆ ಪಾತ್ರದ ಬಗ್ಗೆ ಮಾಹಿತಿ ಸಿಕ್ಕಿತು. ಆಗ ಗವಾಯಿಗಳ ದೊಡ್ಡ ವ್ಯಕ್ತಿತ್ವವನ್ನು ಅರಿಯುವಷ್ಟು ವಯಸ್ಸು ನನ್ನದಾಗಿರಲಿಲ್ಲ. ನಿರ್ದೇಶಕರು ಹೇಳಿದಂತೆ ಶ್ರದ್ಧೆಯಿಂದ ಅಭಿನಯಿಸಿದೆ. ಚಿತ್ರದಲ್ಲಿ ಎಂತೆಂಥಹ ದೊಡ್ಡ ನಟರೊಂದಿಗೆ ಪಾತ್ರ ಮಾಡಿದ್ದೆನಲ್ಲ ಎಂದು ನೆನೆದರೆ ಈಗ ಸೋಜಿಗವೆನಿಸುತ್ತದೆ” ಎನ್ನುತ್ತಾರೆ ನಟ ವಿಜಯ ರಾಘವೇಂದ್ರ. ಅವರು ಚಿತ್ರದಲ್ಲಿ ಬಾಲಕ ಗವಾಯಿಗಳ ಪಾತ್ರ ನಿರ್ವಹಿಸಿದ್ದರು.

vt

ಅಂಧನಾಗಿ ನಟಿಸುವಾಗ ವಿಜಯ್ ಅವರು ಕಣ್ಣಿಗೆ ಲೆನ್ಸ್ ಹಾಕಿಕೊಳ್ಳುತ್ತಿದ್ದರಂತೆ. ತುಂಬಾ ಹೊತ್ತು ಲೆನ್ಸ್ ಹಾಕಿದಾಗ ಕಣ್ಣಿಗೆ ತೊಂದರೆಯಾಗುತ್ತಿತ್ತು. ಆಗೆಲ್ಲಾ ಚಿತ್ರೀಕರಣದ ಸಂದರ್ಭದಲ್ಲಿ ಹಾಜರಿರುತ್ತಿದ್ದ ವೈದ್ಯರು ಅವರಿಗೆ ನೆರವಾಗುತ್ತಿದ್ದರಂತೆ. “ಈ ಚಿತ್ರದ ಪಾತ್ರಪೋಷಣೆಗೆ ನನಗೆ ಆರ್ಯಭಟ ಗೌರವ ಲಭಿಸಿತು. ಪಂಚಾಕ್ಷರಿ ಗವಾಯಿ ಸಿನಿಮಾ ಆಗಿ ಇಪ್ಪತ್ತು ವರ್ಷಗಳ ನಂತರ ಗವಾಯಿಗಳ ಶಿಷ್ಯರಾದ ‘ಶಿವಯೋಗಿ ಶ್ರೀ ಪುಟ್ಟಯ್ಯಜ್ಜ’ ಅವರ ಜೀವನ ಕತೆ ಆಧರಿಸಿದ ಚಿತ್ರದಲ್ಲಿ ನಟಿಸಿದೆ. ಈ ಪಾತ್ರಕ್ಕೆ ರಾಜ್ಯಪ್ರಶಸ್ತಿಯ ಗೌರವ ಸಿಕ್ಕಿತು. ಆ ನಿಟ್ಟಿನಲ್ಲಿ ನಾನು ಅದೃಷ್ಟವಂತ ನಟ” ಎನ್ನುತ್ತಾರೆ ವಿಜಯ ರಾಘವೇಂದ್ರ.

Click here to follow us on Facebook , Twitter, YouTube, Telegram

Pratidhvani
www.pratidhvani.com