ಕರೋನಾ ಇಲ್ಲದ ಮಹಿಳೆಯನ್ನು ಕ್ವಾರಂಟೈನ್‌‌ನಲ್ಲಿರಿಸಿದ ಬಿಬಿಎಂಪಿ
ರಾಜ್ಯ

ಕರೋನಾ ಇಲ್ಲದ ಮಹಿಳೆಯನ್ನು ಕ್ವಾರಂಟೈನ್‌‌ನಲ್ಲಿರಿಸಿದ ಬಿಬಿಎಂಪಿ

ಅಧಿಕಾರಿಗಳು ಮಾತ್ರ ತಪ್ಪನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿರಲಿಲ್ಲ. ಅಲ್ಲದೆ ಐಸೊಲೇಷನ್ ಅವಧಿಯನ್ನು ವಿರಾಮದ ವೇಳೆಯಂತೆ ಭಾವಿಸಲು ಸಲಹೆ ನೀಡಿದ್ದಾರೆ.

ಪ್ರತಿಧ್ವನಿ ವರದಿ

ಕೋವಿಡ್ ಪಾಸಿಟಿವ್ ವರದಿ ಬಂದ ಹಿನ್ನಲೆಯಲ್ಲಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಕುಳಿತ ಮಹಿಳೆ, ಪ್ಲಾಸ್ಮಾ ದಾನ ಮಾಡುವ ಸಲುವಾಗಿ ಕೋವಿಡ್ ನೆಗೆಟಿವ್ ವರದಿ ಪಡೆಯಲು ಮುಂದಾದಾಗ ತನಗೆ ಕೋವಿಡ್ ಇರಲೇ ಇಲ್ಲವೆಂಬ ಆಘಾತಕಾರಿ ಮಾಹಿತಿ ತಿಳಿದುಬಂದಿದೆ.

ಬೆಂಗಳೂರಿನ 28 ವರ್ಷದ ಮಹಿಳೆಗೆ ಆಗಸ್ಟ್ ಮೊದಲ ವಾರದಲ್ಲಿ ಸಣ್ಣಗೆ ಜ್ವರದ ಲಕ್ಷಣಗಳು ಕಾಣಿಸಲಾರಂಭಿಸಿತ್ತು. ಆಗಸ್ಟ್ 2ರಂದು ಜಯನಗರದ ಆಸ್ಪತ್ರೆಯಲ್ಲಿ ಸ್ವಾಬ್ ಪರೀಕ್ಷೆ ಮಾಡಿಸಿದ ಮಹಿಳೆ, ಮರುದಿನ ಬಿಬಿಎಂಪಿ ಅಧಿಕಾರಿಗಳಿಂದ ಕರೆ ಸ್ವೀಕರಿಸಿದ್ದಾರೆ. ಕರೆ ಮಾಡಿದ ಅಧಿಕಾರಿಗಳು ಕರೋನಾ ಪಾಸಿಟಿವ್ ಇರುವುದಾಗಿ ತಿಳಿಸಿ, ಐಸೋಲೇಶನ್ ಇರುವಂತೆ ಸೂಚಿಸಿದ್ದಾರೆ.

ಅಧಿಕಾರಿಗಳ ಮಾರ್ಗದರ್ಶನದಂತೆ ಹೋಂ ಐಸೋಲೇಶನ್‌ನಲ್ಲಿದ್ದ ಮಹಿಳೆ ಆಗಸ್ಟ್ 16 ರಂದು ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. ತದನಂತರ ನೆಗೇಟಿವ್ ವರದಿ ಪರೀಕ್ಷೆ ಮಾಡಲು ತೆರಳಿದ್ದಾಗ ಆಕೆಗೆ ಕೋವಿಡ್ ಸೋಂಕು ಇರಲೇ ಇಲ್ಲವೆಂಬ ಮಾಹಿತಿ ಸಿಕ್ಕಿದೆ.

ಮೊದಲ ಬಾರಿ ಪರೀಕ್ಷೆ ನಡೆಸಿದಾಗ ನಿಮ್ಹಾನ್ಸ್ ಆಸ್ಪತ್ರೆ ಸಿಬ್ಬಂದಿಗಳ ಕಡೆಯಿಂದ ಉಂಟಾದ ತಾಂತ್ರಿಕ ದೋಷದಿಂದ ಕೋವಿಡ್‌ ಪಾಸಿಟಿವ್ ಇರುವವರ ಪಟ್ಟಿಯಲ್ಲಿ ಆಕೆಯ ಹೆಸರೂ ಸೇರಿಕೊಂಡಿತ್ತು. ಬಳಿಕ ಅದನ್ನು ICMR ಪೋರ್ಟಲ್‌ಗೆ ಮಾಹಿತಿ ನೀಡಿ ಸರಿಪಡಿಸಲು ಕೋರಿತ್ತು. ಆದರೆ, ಬಿಬಿಎಂಪಿ ಆಕೆಯ ವರದಿಯನ್ನು ಪಾಸಿಟಿವ್ ಎಂದೇ ದಾಖಲು ಮಾಡಿ, ಕರೋನಾ ಸೋಂಕಿತರ ಪಟ್ಟಿಯಲ್ಲಿ ಸೇರಿಸಿಕೊಂಡಿತ್ತು. ಒಟ್ಟಿನಲ್ಲಿ ಅಧಿಕಾರಿಗಳ ನಿರ್ಲಕ್ಷದಿಂದ ಬೆಂಗಳೂರಿನಲ್ಲಿ ಓರ್ವ ಮಹಿಳೆ ವಿನಾಕಾರಣ ಹೋಂ ಐಸೋಲೇಷನ್‌ನಲ್ಲಿರಬೇಕಾಯಿತು.

ತಪ್ಪನ್ನು ಒಪ್ಪದ ಅಧಿಕಾರಿಗಳು

ಇಷ್ಟೆಲ್ಲಾ ಆಗಿಯೂ ಅಧಿಕಾರಿಗಳು ಮಾತ್ರ ತಪ್ಪನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿರಲಿಲ್ಲ. ಅಲ್ಲದೆ ಐಸೊಲೇಷನ್ ಅವಧಿಯನ್ನು ವಿರಾಮದ ವೇಳೆಯಂತೆ ಭಾವಿಸಲು ಸಲಹೆ ನೀಡಿದ್ದಾರೆ. ಆದರೆ ಮಹಿಳೆಗೆ ಅಲರ್ಜಿ ಸಮಸ್ಯೆಯಿದ್ದು ಐಸೊಲೇಷನ್‌ನಲ್ಲಿದ್ದಷ್ಟು ಸಮಯವೂ ಅಧಿಕಾರಿಗಳು ನೀಡಿರುವ ಮಾತ್ರೆಯನ್ನು ಸೇವಿಸಿದ್ದಾರೆ. ಅದರಿಂದಾಗಿ ಆಕೆ ತೀವ್ರ ಹೊಟ್ಟೆನೋವಿನಿಂದ ಬಳಲಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com