ರಾಜ್ಯಗಳಿಗೆ ಸಾಲ ಕೊಡಿಸುವ ಬದಲು ಕೇಂದ್ರವೇ ಸಾಲ ಪಡೆದು ನಷ್ಟ ತುಂಬಲಿ: HD ಕುಮಾರಸ್ವಾಮಿ
ರಾಜ್ಯ

ರಾಜ್ಯಗಳಿಗೆ ಸಾಲ ಕೊಡಿಸುವ ಬದಲು ಕೇಂದ್ರವೇ ಸಾಲ ಪಡೆದು ನಷ್ಟ ತುಂಬಲಿ: HD ಕುಮಾರಸ್ವಾಮಿ

ತಾಳ ತಪ್ಪಿದ ಕೇಂದ್ರ ಸರ್ಕಾರದ ದಿಕ್ಕೆಟ್ಟ ಅರ್ಥ ವ್ಯವಸ್ಥೆ ಮತ್ತು ಮುನ್ನೋಟದ ಅಂದಾಜು ಗ್ರಹಿಸದ ವೈಫಲ್ಯದ ಫಲವಾಗಿ ರಾಜ್ಯ ಸರ್ಕಾರಗಳು ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಪರಿಸ್ಥಿತಿಗೆ ಸಿಲುಕಿ ನಲುಗುತ್ತಿವೆ. ರಾಜ್ಯಗಳಿಗೆ ಸಾಲ ಕೊಡಿಸುವ ಬದಲು ಕೇಂದ್ರವೇ RBI ನಿಂದ ಸಾಲ ಪಡೆದು ರಾಜ್ಯಗಳಿಗೆ ನಷ್ಟ ಪರಿಹಾರ ತುಂಬಿ ಕೊಡಲಿ

ಪ್ರತಿಧ್ವನಿ ವರದಿ

ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲನ್ನು ಕೇಂದ್ರ ತಡೆ ಹಿಡಿದಿರುವುದನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಖಂಡಿಸಿದ್ದಾರೆ. ನ್ಯಾಯವಾಗಿ ರಾಜ್ಯಗಳಿಗೆ ಬರಬೇಕಾದ ಮೊತ್ತವನ್ನು ತಡೆಹಿಡಿದು ಒಕ್ಕೂಟ ವ್ಯವಸ್ಥೆಯ ನಂಬಿಕೆಯ ಮೇಲೆ ಕೊಡಲಿಯೇಟು ನೀಡಿದ್ದಾರೆ ಎಂದಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ, ಸರಕು ಮತ್ತು ಸೇವಾ ತೆರಿಗೆ (GST) ನಷ್ಟ ತುಂಬಿಕೊಡುವ ಬದ್ಧತೆಯಿಂದ ಹಿಂದೆ ಸರಿದಿರುವ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ಮೇಲೆ ಗದಾಪ್ರಹಾರ ಮಾಡುವ ಮೂಲಕ ಹೊಣೆಗೇಡಿತನ ಪ್ರದರ್ಶಿಸಿರುವುದು ತೀವ್ರ ಖಂಡನೀಯ. ಕರೋನಾ ಸಂಕಷ್ಟ 'ದೇವರ ಅಸಮಾನ್ಯ ಆಟ' ಎನ್ನುವ ಮೂಲಕ ಒಕ್ಕೂಟ ವ್ಯವಸ್ಥೆಯ ರಾಜ್ಯಗಳ ಬಹುದೊಡ್ಡ ನಂಬಿಕೆಗೆ ಕೊಡಲಿಪೆಟ್ಟು ಕೊಟ್ಟಿದೆ. ಸುಲಭದ ಬಡ್ಡಿದರದಲ್ಲಿ ಸಾಲ ತೆಗೆದುಕೊಳ್ಳಿ. ಪಡೆದ ಸಾಲವನ್ನು ರಾಜ್ಯಗಳೇ ತೀರಿಸಿ ಎನ್ನುವ ಆಯ್ಕೆ ಮುಂದಿಟ್ಟು ರಾಜ್ಯಗಳ ಆರ್ಥಿಕತೆಗೆ ಕೇಂದ್ರ ಸರ್ಕಾರ 'ಕೊಳ್ಳಿ' ಇಟ್ಟಿದೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಯಾವುದೇ ಪ್ರಲೋಭನೆ ಒಡ್ಡುವ ಮೂಲಕ ರಾಜ್ಯಗಳ ಆರ್ಥಿಕತೆಯ ವ್ಯವಸ್ಥೆ ಮೇಲೆ ನಿಯಂತ್ರಣ ಸಾಧಿಸುವ ಕಾನೂನು, ತಿದ್ದುಪಡಿ ಮಸೂದೆಗಳು ಭವಿಷ್ಯದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಅಪಾಯ ಇಲ್ಲದಿಲ್ಲ ಎಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ್ದರು. ಇಂತಹದೊಂದು ಅಪಾಯ ಈಗ ಎದುರಾಗಿದೆ. ಈಗ ಸಂಗ್ರಹವಾಗಿರುವ ತೆರಿಗೆಯಲ್ಲಿ ರಾಜ್ಯ ಸರ್ಕಾರಗಳಿಗೆ ಪರಿಹಾರ ನೀಡಲು 97 ಸಾವಿರ ಕೋಟಿ ರೂ ಹಾಗೂ ಆದಾಯ ಕೊರತೆ ಎದುರಾಗಲಿರುವ 2.35 ಲಕ್ಷ ಕೋಟಿ ರೂಪಾಯಿಗಳನ್ನು ರಾಜ್ಯಗಳು ಸಾಲ ಪಡೆಯುವ ಆಯ್ಕೆಗಳನ್ನು ಮುಂದಿಟ್ಟಿದೆ ಎಂದು ಟ್ವೀಟ್ದಾಳಿ ನಡೆಸಿದ್ದಾರೆ.

“ಕೊಟ್ಟವ ಕೋಡಂಗಿ; ಇಸ್ಕೊಂಡವ ಈರಭದ್ರ” ಎಂಬಂತೆ ರಾಜ್ಯ ಸರ್ಕಾರಗಳು ಕಣ್ಣುಬಾಯಿ ಬಿಡುತ್ತಿವೆ. ಈಗ ಕರೋನಾ ನೆಪ ಮುಂದಿಟ್ಟು ಅನ್ಯಾಯ ಮಾಡಿಬಿಟ್ಟರೆ ರಾಜ್ಯಸರ್ಕಾರಗಳು ಏನು ಮಾಡಬೇಕು? ಕೋವಿಡ್ 19 ಮತ್ತು ನೆರೆಯಿಂದ ಬಳಲಿರುವ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿವೆ. ತಾಳ ತಪ್ಪಿದ ಕೇಂದ್ರ ಸರ್ಕಾರದ ದಿಕ್ಕೆಟ್ಟ ಅರ್ಥ ವ್ಯವಸ್ಥೆ ಮತ್ತು ಮುನ್ನೋಟದ ಅಂದಾಜು ಗ್ರಹಿಸದ ವೈಫಲ್ಯದ ಫಲವಾಗಿ ರಾಜ್ಯ ಸರ್ಕಾರಗಳು ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಪರಿಸ್ಥಿತಿಗೆ ಸಿಲುಕಿ ನಲುಗುತ್ತಿವೆ. ರಾಜ್ಯಗಳಿಗೆ ಸಾಲ ಕೊಡಿಸುವ ಬದಲು ಕೇಂದ್ರವೇ RBI ನಿಂದ ಸಾಲ ಪಡೆದು ರಾಜ್ಯಗಳಿಗೆ ನಷ್ಟ ಪರಿಹಾರ ತುಂಬಿ ಕೊಡಲಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com