ಕಗ್ಗತ್ತಲಲಿ ಕ್ರಾಂತಿವೀರನ ಪ್ರತಿಮೆ ಅನಾವರಣ: ಬೆಳಗಾವಿ ಉದ್ವಿಗ್ನ
ರಾಜ್ಯ

ಕಗ್ಗತ್ತಲಲಿ ಕ್ರಾಂತಿವೀರನ ಪ್ರತಿಮೆ ಅನಾವರಣ: ಬೆಳಗಾವಿ ಉದ್ವಿಗ್ನ

ಪೀರನವಾಡಿಯಲ್ಲಿ ರಾತ್ರೋರಾತ್ರಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರಿಂದ ನೂರಾರು ಮರಾಠಾ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವಕರನ್ನು ಸಮಾಧಾನ ಮಾಡಲು ಡಿಸಿಪಿ ಹಾಗೂ ಹಿರಿಯ ಅಧಿಕಾರಿಗಳು ಎಷ್ಟೇ ಪ್ರಯತ್ನ ಮಾಡಿದರು ಬಗ್ಗದ ಯುವಕರು ನಮಗೂ ಶಿವಾಜಿ ಮೂರ್ತಿಯನ್ನು ಸ್ಥಾಪಿಸಲು ಅವಕಾಶ ಮಾಡಿ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.

ಕೃಷ್ಣಮಣಿ

ಬೆಳಗಾವಿಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ‌ಮೂರ್ತಿ‌‌ ಪ್ರತಿಷ್ಠಾಪನೆ ವಿಚಾರ ರಾಜ್ಯದಲ್ಲಿ ಹೊಸ ವಿವಾದ ಹುಟ್ಟುಹಾಕಿದೆ. ನಿನ್ನೆಯಷ್ಟೇ ಬೃಹತ್‌ ಹೋರಾಟ ನಡೆಸಿದ್ದ ಕನ್ನಡ ಹೋರಾಟಗಾರರು, ರಾತ್ರೋ ರಾತ್ರಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಸದ್ಯಕ್ಕೆ ಪೀರನವಾಡಿ ವೃತ್ತದಲ್ಲಿ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪನೆ ಆಗಿದೆ. ಆದರೆ ರಾತ್ರೋರಾತ್ರಿ ಕರುನಾಡಲ್ಲಿ ಕ್ರಾಂತಿವೀರನ ಪ್ರತಿಮೆ ಪ್ರತಿಷ್ಠಾಪಿಸಿದ್ದು ಯಾಕೆ ಎನ್ನುವ ಪ್ರಶ್ನೆ ಮೂಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮಧ್ಯರಾತ್ರಿ 2:30 ರ ಸುಮಾರಿಗೆ ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಈ ವೇಳೆ ಸ್ಥಳದಲ್ಲಿ ಪೊಲೀಸರು ಇರಲಿಲ್ಲ ಎನ್ನಲಾಗಿದೆ. ಬೇರೆ ಕಡೆ ನಡೆದಿದ್ದ ಕೊಲೆ ಪ್ರಕರಣದಲ್ಲಿ ಪರಿಶೀಲನೆಗಾಗಿ ಪೊಲೀಸರು ಸ್ಥಳಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ಸಮಯವನ್ನೇ ಬಳಸಿಕೊಂಡ ಕನ್ನಡ ಪರ ಹೋರಾಟಗಾರರು ಪೊಲೀಸರು ವಾಪಸ್‌ ಬರೋದರ ಒಳಗೆ ರಾಯಣ್ಣ ಮೂರ್ತಿ ಸ್ಥಾಪನೆ ಮಾಡಿದ್ದರು. ಮೊದಲೇ ಸಿದ್ಧಪಡಿಸಿದ್ದ ಕಾಂಕ್ರೀಟ್ ಬೇಸ್ ಮೇಲೆ 5 ಅಡಿ ಎತ್ತರದ ರಾಯಣ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ್ದರು. ವಿಷಯ ತಿಳಿದು ಬೆಳಗ್ಗಿನ ಜಾವ 3.15 ಕ್ಕೆ ಬಂದ ಪೊಲೀಸರು, ಪ್ರತಿಮೆಯನ್ನು ಏನು ಮಾಡಬೇಕೆಂದು ದಿಕ್ಕು ತೋಚದೆ ಸುಮ್ಮನಾದರು. ಕಡೇ ಬಜಾರ್ ಎಸಿಪಿ ಶಿವಾರೆಡ್ಡಿ ಭೇಟಿ, ಪರಿಶೀಲನೆ ಮಾಡಿದರು. ಆ ಬಳಿಕ ಮತ್ತೆ ಬೆಳಗ್ಗೆ 5.30 ಕ್ಕೆ ಬಂದ ಕನ್ನಡಪರ ಸಂಘಟನೆಯವರು ಘೋಷಣೆ ಕೂಗಿ ವಾಪಸ್ ತೆರಳಿದರು.

ಈ ನಡುವೆ ಪೀರನವಾಡಿ ವೃತ್ತದಲ್ಲಿ ಶಿವಾಜಿ ಮೂರ್ತಿ ಸ್ಥಾಪನೆಗೆ ಯತ್ನ ನಡೆದಿದೆ. ರಾಯಣ್ಣ ಮೂರ್ತಿ ಪ್ರತಿಷ್ಠಾಪಿಸಿದ್ದ ಸ್ಥಳಕ್ಕೆ ಬಂದ ಶಿವಾಜಿ ಅಭಿಮಾನಿಗಳು, ಬಾಲ ಶಿವಾಜಿ ಮೂರ್ತಿ ಕೂರಿಸಲು ಯತ್ನ ನಡೆಸಿದ್ದು, ಇದು ಶಿವಾಜಿ ಸರ್ಕಲ್ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಯಾವುದಕ್ಕೂ ಅನುಮತಿ ಕೊಡದ ಪೊಲೀಸರು, ಶಿವಾಜಿ ಮೂರ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರು ಹಾಗೂ ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ. ಗ್ರಾಮೀಣ ಎಸಿಪಿ ಸೇರಿದಂತೆ ಪೊಲೀಸ್‌ ಬಂದೋಬಸ್ತ್‌ ಹೆಚ್ಚಳ ಮಾಡಲಾಗಿದೆ.

ಈ ನಡುವೆ ಪೀರನವಾಡಿ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪನೆ ಹಿನ್ನೆಲೆ, ಸಂಗೊಳ್ಳಿ ‌ರಾಯಣ್ಣ ಮೂರ್ತಿ‌ ಬಳಿಗೆ ಕನ್ನಡ ಹೋರಾಗಾರರು ಆಗಮಿಸಿದ್ದು ಸ್ಥಳದಲ್ಲಿ ಮತ್ತಷ್ಟು ಬಿಗುವಿನ ವಾತಾವರಣ ನಿರ್ಮಾಣ ಮಾಡಿದೆ. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರ ಹರಸಾಹಸ ಮಾಡಿದ್ದಾರೆ. ಒಂದೇ ವೃತ್ತದಲ್ಲಿ 2 ಪ್ರತಿಮೆ ಬೇಡ ಎಂದು ಶಿವಾಜಿ ಅಭಿಮಾನಿಗಳು ಪಟ್ಟು ಹಿಡಿದಿದ್ದರು. ಆದರೆ ಪೀರನವಾಡಿಯಲ್ಲಿ ಸೇರಿರುವ ರಾಯಣ್ಣ ಪ್ರತಿಮೆ ಇರಲೇಬೇಕೆಂದು ಕನ್ನಡ ಸಂಘಟನೆಯವರು ಜೈಕಾರ ಹಾಕಿದರು. ಬಳಿಕ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಪಿ. ತ್ಯಾಗರಾಜನ್, ಮೂರ್ತಿ ಪ್ರತಿಷ್ಠಾಪನೆ ಸ್ಥಳ ಪರಿಶೀಲನೆ ಮಾಡಿದ್ದಾರೆ. ಪೀರನವಾಡಿ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶಿವಾಜಿ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಪೀರನವಾಡಿಯಲ್ಲಿ ರಾತ್ರೋರಾತ್ರಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರಿಂದ ನೂರಾರು ಮರಾಠಾ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವಕರನ್ನು ಸಮಾಧಾನ ಮಾಡಲು ಡಿಸಿಪಿ ಹಾಗೂ ಹಿರಿಯ ಅಧಿಕಾರಿಗಳು ಎಷ್ಟೇ ಪ್ರಯತ್ನ ಮಾಡಿದರು ಬಗ್ಗದ ಯುವಕರು ನಮಗೂ ಶಿವಾಜಿ ಮೂರ್ತಿಯನ್ನು ಸ್ಥಾಪಿಸಲು ಅವಕಾಶ ಮಾಡಿ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ಪರಿಸ್ಥಿತಿ ತಿಳಿಯಾಗುವುದು ಅನುಮಾನ ಎಂದು ಗೊತ್ತಾದ ಬಳಿಕ ಪೀರನವಾಡಿ ವೃತ್ತದಲ್ಲಿ ಪೊಲೀಸರಿಂದ ಲಾಠಿ ಪ್ರಹಾರ ನಡೆಸಿದರು. ಪ್ರತಿಭಟನೆ ಮಾಡದಂತೆ ಮನವಿ ಮಾಡಿದರೂ ಕೇಳದ ಗುಂಪನ್ನು ಲಾಠಿ ಚಾರ್ಜ್‌ ಮಾಡಿ ಖಾಕಿ ಪಡೆ ಚದುರಿಸಿದೆ.

ಬೆಳಗಾವಿಯಲ್ಲಿ ಈ ಬಗ್ಗೆ ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್, ಕಲ್ಲು ತೂರಾಟ ನಡೆಸಿದ ಉದ್ರಿಕ್ತರ ಮೇಲೆ ಲಾಠಿ ಚಾರ್ಚ್ ಮಾಡಲಾಗಿದೆ. ಕೆಲವರು ಯುವಕರ ಗುಂಪಿನಿಂದ ಪ್ರಚೋದನೆ ಮಾಡಿದ್ದಾರೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಯಿಂದ ಶಿವಾಜಿ ವೃತ್ತದ ಹೆಸರಿಗೆ ಧಕ್ಕೆ ಆಗುತ್ತದೆ ಎನ್ನುವ ಆತಂಕದಿಂದ ಸ್ಥಳೀಯರು ಪ್ರತಿಭಟನೆ ಮಾಡಿದ್ದಾರೆ. ಯಾವುದೇ ವೃತ್ತದಲ್ಲಿ, ಮಹಾನಾಯಕರ ಹೆಸರಿಗೆ ಧಕ್ಕೆ ಆಗಲ್ಲ. ನಗರದ ಆಯಾ ಕಟ್ಟಿನ ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸಂಗೊಳ್ಳಿ ರಾಯಣ್ಣ ‌ಮೂರ್ತಿ ಸ್ಥಾಪನೆ ಅನಧಿಕೃತ. ಈ ಬಗ್ಗೆ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಬೆಳಗಾವಿಯಲ್ಲಿ ಘರ್ಷಣೆ ನಡೆದಿರುವ ವಿಚಾರದ ಬಗ್ಗೆ ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಏನು ಆಗಿದೆ ಎಂಬುದನ್ನು ಜಿಲ್ಲಾಧಿಕಾರಿಗಳಿಂದ ತಿಳಿದು ಕೊಂಡು ಶಾಂತ ರೀತಿಯಲ್ಲಿ ಸಮಸ್ಯೆ ಬಗೆ ಹರಿಸಲು ಸೂಚನೆ ನೀಡಿದ್ದೇನೆ ಎಂದಿದ್ದಾರೆ. ಬೆಳಗಾವಿ ಡಿಸಿ ಜೊತೆಗೆ ದೂರವಾಣಿಯಲ್ಲಿ ಮಾತನಾಡಿ ಮಾಹಿತಿ ಪಡೆದು ಎಲ್ಲಾ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ಕೊಡಬೇಡಿ. ಶಾಂತಿಯುತವಾಗಿ ಪರಿಸ್ಥಿತಿ ನಿಭಾಯಿಸಿ ಎಂದು ಡಿಸಿಗೆ ಸೂಚನೆ ನೀಡಿದ್ದಾರೆ.

ರಾತ್ರೋರಾತ್ರಿ ಮೂರ್ತಿ ಸ್ಥಾಪನೆ ಸರಿಯೇ..?

ಸಂಗೊಳ್ಳಿ ರಾಯಣ್ಣ ದೇಶ ಕಂಡ ಅಪ್ರತಿಮ ಹೋರಾಟಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಿರುವುದರಲ್ಲಿ ತಪ್ಪೇನು ಇಲ್ಲ. ಆದರೆ ರಾತ್ರೋರಾತ್ರಿ ಪ್ರತಿಮೆ ಸ್ಥಾಪಿಸಬೇಕಾದ ಅಗತ್ಯ ಏನಿತ್ತು. ಬೆಳಗ್ಗೆ ಸಮಯದಲ್ಲೇ ಪ್ರತಿಮೆ ಸ್ಥಾಪನೆ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಪೊಲೀಸರ ರಕ್ಷಣೆಯಲ್ಲೇ ಈ ಕೆಲಸ ಆಗಬೇಕಿತ್ತು ಎನ್ನುವುದು ಸಾಕಷ್ಟು ಕನ್ನಡಿಗರ ಅಭಿಪ್ರಾಯವಾಗಿದೆ. ಆದರೂ ಈಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಆಗಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದಲ್ಲಿ, ಪೊಲೀಸ್‌ ಆಯುಕ್ತರು ಅನಧಿಕೃತ ಎಂದು ಪ್ರತಿಮೆ ಸ್ಥಳಾಂತರ ಮಾಡಲು ಮುಂದಾದರೆ ಉದ್ವಿಗ್ನ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಮರಾಠಿ-ಕನ್ನಡಿಗ ಎನ್ನುವ ವಿವಾದ ಶುರುವಾಗಲಿದ್ದು, ಕನ್ನಡ ನಾಡಿನಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನಾವರಣಕ್ಕೆ ವಿರೋಧ ಮಾಡಿದರೆ ಸಂಕಷ್ಟ ಉಲ್ಬಣ ಆಗಲಿದೆ ಎನ್ನುವುದನ್ನು ಸರ್ಕಾರ ಮನಗಂಡು ಸೂಕ್ತ ರಕ್ಷಣೆ ಕೊಡುವ ಕೆಲಸ ಆಗಬೇಕಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com