ಶಿವಾಜಿ VS ರಾಯಣ್ಣ ಪ್ರತಿಮೆ ವಿವಾದ: ರಾಜಕೀಯ ನಾಯಕರ ನಿಲುವೇನು..?
ರಾಜ್ಯ

ಶಿವಾಜಿ VS ರಾಯಣ್ಣ ಪ್ರತಿಮೆ ವಿವಾದ: ರಾಜಕೀಯ ನಾಯಕರ ನಿಲುವೇನು..?

ರಾಯಣ್ಣ ಅಭಿಮಾನಿಗಳು ಪ್ರತಿಭಟನೆ ಮಾಡಿದ್ದಾರೆ. ಪ್ರಕರಣದಲ್ಲಿ ಮರಾಠಿಗರ ಕನ್ನಡಿಗರು ಅನ್ನುವ ಚರ್ಚೆ ತರಬಾರದು. ಕರ್ನಾಟಕ - ಮಹಾರಾಷ್ಟ್ರ ಅನ್ನೋದು ಚರ್ಚೆಗೆ ಬರಬಾರದು. ಕೆಲವರ ಸಂಕುಚಿತ ಭಾವನೆಗಳಿಂದ ಸಂಘರ್ಷ ಆಗುತ್ತಿದೆ- ಈಶ್ವರಪ್ಪ

ಕೃಷ್ಣಮಣಿ

ಬೆಳಗಾವಿಯ ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಶ್ಠಾಪನೆ ಮಾಡಿದ ವಿಚಾರ ವಿವಾದ ಸ್ವರೂಪ ಪಡೆದುಕೊಂಡಿದೆ. ಬೆಳಗಾವಿ ಭಾಗದ ಕನ್ನಡಿಗರು ಹಾಗೂ ಮರಾಠಿಗರ ನಡುವೆ ಪೈಪೋಟಿ ಎಂಬಂತೆ ವಿವಾದ ತಿರುಗಿದೆ. ಇದೀಗ ಪೀರನವಾಡಿ ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಳಕ್ಕೆ ಎಡಿಜಿಪಿ ಅಮರಕುಮಾರ ಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಯಣ್ಣ ಮೂರ್ತಿ ಸ್ಥಾಪನೆ ಮಾಡಿದ ಸ್ಥಳವನ್ನು ಪರಿಶೀಲನೆ ಮಾಡಿದ್ದು, ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಹಾಗೂ ಬೆಳಗಾವಿ ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜ‌ನ್ ಪರಿಶೀಲನೆಗೆ ಸಾಥ್ ಕೊಟ್ಟಿದ್ದಾರೆ.

ಸಂಗೊಳ್ಳಿ ರಾಯಣ್ಣನ ಮೂರ್ತಿ ಮರು ಪ್ರತಿಷ್ಠಾಪನೆ ಮಾಡಿದ್ದ ಕನ್ನಡ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಬೆಳಗಾವಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 20 ಕ್ಕೂ ಹೆಚ್ಚು ಕನ್ನಡ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಲಾಗಿದೆ. ನಿನ್ನೆ ರಾತ್ರಿ ರಾಯಣ್ಣನ ಪುತ್ಥಳಿಯನ್ನು ಕನ್ನಡ ಕಾರ್ಯಕರ್ತರು ಮರು ಪ್ರತಿಷ್ಠಾಪನೆ ಮಾಡಿದ್ದರು. ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪನೆ ಮಾಡಿದ ಸಂದರ್ಭದಲ್ಲಿ ಗಲಾಟೆ ನಡೆದಿರುವ ಹಿನ್ನೆಲೆಯಲ್ಲಿ ಪೀರನವಾಡಿಯ ಮರಾಠಿ ಯುವಕರ ವಿರುದ್ಧವೂ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸಿಎಂ ಯಡಿಯೂರಪ್ಪ ಮಾತನಾಡಿ, ಬೆಳಗಾವಿ ಘರ್ಷಣೆ ಬಗ್ಗೆ ನಾನು ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಸದ್ಯಕ್ಕೆ ಅಲ್ಲಿ ಪರಿಸ್ಥಿತಿ ಶಾಂತವಾಗಿದೆ. ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ. ಕನ್ನಡಿಗರು ಮತ್ತು ಮರಾಠಿಗರು ಸೋದರರಂತಿದ್ದಾರೆ. ಎಲ್ಲಾ ಸಮಸ್ಯೆ ಬಗೆಹರಿದಿದೆ. ಅಲ್ಲಿನ ಜಿಲ್ಲಾಧಿಕಾರಿ ಪರಿಸ್ಥಿತಿ ನಿಭಾಯಿಸಿದ್ದಾರೆ ಎಂದಿದ್ದಾರೆ ಸಿಎಂ ಬಿ.ಎಸ್ ‌ಯಡಿಯೂರಪ್ಪ.

ಬೆಳಗಾವಿಯ ಪೀರನವಾಡಿಯಲ್ಲಿನ ಘಟನೆ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ. ಮುಖ್ಯಮಂತ್ರಿಗಳ ಗಮನಕ್ಕೂ ಮಾಹಿತಿ ‌ನೀಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ಸಿಎಂ ಮಾತನಾಡಿ ಸೌಹಾರ್ದಯುತವಾಗಿ ಬಗೆಹರಿಸಲು ಸೂಚಿಸಿದ್ದಾರೆ. ಸಂಗೊಳ್ಳಿ ರಾಯಣ್ಣ, ಶಿವಾಜಿ ಇಬ್ಬರು ಸ್ವಾತಂತ್ರ ಹೋರಾಟಗಾರರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯಬೇಕು, ಪೀರನವಾಡಿ ಹಿರಿಯರು ಮಾತುಕತೆ ಮೂಲಕ‌ ಬಗೆಹರಿಸಿಕೊಳ್ತಾರೆ. ಸಂಜೆ ನಾಲ್ಕು ಗಂಟೆಗೆ ಎರಡು ಕಡೆಯವರನ್ನು ಸೇರಿಸಿ ಸಭೆ ಮಾಡಲಾಗಿದೆ ಎಂದಿದ್ದಾರೆ.

ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಸಂಬಂಧ ಘರ್ಷಣೆ ನಡೆದಿರುವ ವಿಚಾರದ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಬೆಳಗಾವಿಯಲ್ಲಿ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಸರ್ಕಾರ ನ್ಯಾಯಯುತವಾಗಿ ವಿವಾದವನ್ನು ಬಗೆಹರಿಸುತ್ತದೆ. ಕಾನೂನು ಪ್ರಕಾರವೇ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಈಗಾಗಲೇ ಸಿಎಂ ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹಾಗಾಗಿ ಶಾಂತಿಯುತವಾಗಿ ವರ್ತಿಸಬೇಕು ಎಂದಿದ್ದಾರೆ.

ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಪ್ರತಿಮೆ ಸ್ಥಾಪನೆಗಾಗಿ ಹೋರಾಟ ನಡೆಸುತ್ತಿರುವವರ ಮೇಲೆ ಪೊಲೀಸರ ಲಾಠಿ ಪ್ರಹಾರ ಮಾಡಿರುವುದು ಖಂಡನೀಯ ಎಂದ ಸಿದ್ದರಾಮಯ್ಯ ಖಂಡಿಸಿದ್ದಾರೆ. ಈಗಷ್ಟೇ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಕಮಿಷನರ್ ಜೊತೆಗೆ ಮಾತನಾಡಿ, ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸುವಂತೆ ತಿಳಿಸಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಚಿಕ್ಕಮಗಳೂರಲ್ಲಿ ಮಾತನಾಡಿದ ಸಚಿವ ಸಿ.ಟಿ ರವಿ, ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿಚಾರ ವಿವಾದ ಸ್ವರೂಪ ಪಡೆಯಬಾರದು. ರಾಯಣ್ಣ ಪ್ರತಿಮೆ ನಿರ್ಮಾಣವಾಗಲೇಬೇಕು. ಸಂಗೊಳ್ಳಿ ರಾಯಣ್ಣ ಹೆಸರು ಇಡೋದು ಹೆಮ್ಮೆಯ ವಿಷಯ ಎಂದಿದ್ದಾರೆ. ಏನೇ ಅಡೆತಡೆ ಇದ್ದರೂ ಬಗೆಹರಿಸುವುದಾಗಿ ಸಿಎಂ ಹೇಳಿದ್ದಾರೆ. ಈಗ ಸಂಘರ್ಷದ ರೂಪ ಪಡೆದಿರುವುದು ದುರಾದೃಷ್ಟಕರ. ಸಂಘರ್ಷದ ಹಿಂದೆ ರಾಜಕೀಯ ದುರುದ್ದೇಶ ಇರಬಹುದು. ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣದ ಹಿಂದೆ ರಾಜಕೀಯ ಪ್ರೇರಣೆ ಇದೆ. ಇಲ್ಲೂ ಕೂಡಾ ಅದೇ ರೀತಿ ರಾಜಕೀಯ ದುರ್ಬಳಕೆ ಮಾಡಲು ಸಂಚು ಹೂಡಿರುವ ಸಾಧ್ಯತೆ ಇದೆ. ಸಂಚು ರೂಪಿಸುವ ಹಂತದಲ್ಲಿದ್ದರೆ ತನಿಖೆ ನಡೆಸುವ ಅವಶ್ಯಕತೆ ಇದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಆಗಲೇಬೇಕು, ಚೆನ್ನಾಗಿ ಆಗಬೇಕು ಎಂದಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಗೆ ತಿರುಗೇಟು ನೀಡಿರುವ ಸಚಿವ ಸಿ.ಟಿ ರವಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು. ಕಾಗಿನೆಲೆ ಸ್ವಾಮೀಜಿ ಭೇಟಿ ಮಾಡಿದ್ದಾಗ ಸಿಎಂ ಬಿ.ಎಸ್.‌ಯಡಿಯೂರಪ್ಪ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಗೊಂದಲ ಸೃಷ್ಟಿ ಮಾಡೋದು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಂಚು ಅನ್ನೋದು ಸ್ಪಷ್ಟವಾಗುತ್ತಿದೆ. ಈ ಹಿಂದೆ ಸಿಎಂ ಆಗಿದ್ದವರು ಯೋಚಿಸಬೇಕು. ನಾಳೆ ಮತ್ತೊಬ್ಬರು ಸಿಎಂ ಆಗಬಹುದು ಅವರ ಆದೇಶ ಅಂತಿಮ ತಾನೇ. ಏನಾದರೂ ಮಾಡಿ ರಾಜ್ಯದ ಜನರ ನೆಮ್ಮದಿ ಹಾಳುಮಾಡುವ ಸಂಚು ನಡೆದಿದೆ. ಈ ಸಂಚಿಗೆ ಸಿದ್ದರಾಮಯ್ಯನವರು ಬಲಿಯಾಗಬಾರದು ಎಂದು ಸಲಹೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಘರ್ಷಣೆ ಬಗ್ಗೆ ಮಾಜಿ ಸಿಎಂ ಹೆಚ್‌. ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆಗೆ ವಿರೋಧಿಸಿ ಮರಾಠಿ ಭಾಷಿಕರು ದಾಂಧಲೆ ನಡೆಸಿದ್ದು ಅಕ್ಷಮ್ಯ. ನಮ್ಮ ನೆಲದ ಅಪ್ರತಿಮ ಹೋರಾಟಗಾರ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ. ಎಂಇಎಸ್, ಶಿವಸೇನೆ ಅಥವಾ ಮತ್ಯಾರೇ ಆಗಲಿ, ನಮ್ಮ ನಾಡಿನ ಹೆಮ್ಮೆಯ ವೀರಪುತ್ರ ಸಂಗೊಳ್ಳಿ ರಾಯಣ್ಣನಿಗೆ ಅಪಮಾನ ಮಾಡಿದರೆ ಕನ್ನಡಿಗರ ಸಹನೆ ಪರೀಕ್ಷಿಸಿದಂತೆ ಆಗುತ್ತದೆ. ಇಂತಹ ಉದ್ಧಟತನಗಳನ್ನು ಕನ್ನಡಿಗರು ಸಹಿಸುವುದಿಲ್ಲ ಎಂದು ಎಚ್ಚರಿಸುತ್ತೇನೆ ಎಂದಿದ್ದಾರೆ. ಸಂಗೊಳ್ಳಿ ರಾಯಣ್ಣ ನಮ್ಮ ನಾಡಿನ ಹೆಮ್ಮೆ. ಅವರ ಪ್ರತಿಮೆ ಸ್ಥಾಪನೆಗೆ ವಿರೋಧಿಸುವುದು ಕನ್ನಡಿಗರ ಕೆಚ್ಚೆದೆಯ ಸ್ವಾಭಿಮಾನ ಕೆಣಕಿದಂತೆ. ನಾಡಿನ ವೀರಪುತ್ರ ಮತ್ತು ವನಿತೆಯರ ವಿರುದ್ಧ ನಮ್ಮ ನೆಲದಲ್ಲಿ ತಗಾದೆ ತೆಗೆದರೆ ತಕ್ಕಪಾಠ ಕಲಿಸಬೇಕಾಗುತ್ತದೆ. ನಮ್ಮ ನಾಡಿನ ನೆಲ-ಜಲ, ಭಾಷೆ ಮತ್ತು ಗಡಿ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ಈ ನೆಲದ ಅಸ್ಮಿತೆಗೆ ಭಂಗ ತರುವವರನ್ನು ಹೆಡೆಮುರಿ ಕಟ್ಟುವುದು ಸ್ವಾಭಿಮಾನಿ ಕನ್ನಡಿಗರ ರಕ್ತದಲ್ಲೇ ಇದೆ. ಕನ್ನಡಿಗರೆಂದರೆ - ಸಾಧುಂಗೆ ಸಾಧು, ಮಾಧುರ್ಯಂಗೆ ಮಾಧುರ್ಯನ್, ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಎಂದು ನೇರವಾಗಿ ವಾಗ್ದಾಳಿ ಮಾಡಿದ್ದಾರೆ.

ಇನ್ನೂ ರಾಯಣ್ಣ ಬ್ರಿಗೇಡ್‌ ಸ್ಥಾಪಿಸುವ ಮೂಲಕ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿದ್ದ ಕೆ.ಎಸ್‌. ಈಶ್ವರಪ್ಪ ಬೆಂಗಳೂರಿನಲ್ಲಿ ಮಾತನಾಡಿ, ರಾಯಣ್ಣ ಪ್ರತಿಮೆ ಸಂಘರ್ಷ ಸರಿಯಲ್ಲ. ಸಂಗೊಳ್ಳಿ ರಾಯಣ್ಣ ಮತ್ತು ರಾಣಿ ಚೆನ್ನಮ್ಮ ಅಮ್ಮ ಮಗ ಥರ. ಚೆನ್ನಮ್ಮಾಗೆ ರಾಯಣ್ಣ ಅಮ್ಮ ಅಂತಿದ್ದರು. ಇಬ್ಬರ ಮಧ್ಯೆ ಜಾತಿ ವಿಚಾರ ಬರಲಿಲ್ಲ. ಶಿವಾಜಿ, ಅಹಲ್ಯ ಬಾಯಿ ಹೋಳ್ಕರ್, ರಾಯಣ್ಣ, ಚೆನ್ನಮ್ಮ ಇವರಿಗೆಲ್ಲ ಜಾತಿ ಪ್ರಶ್ನೆ ಇರಲಿಲ್ಲ, ಪ್ರಾಂತೀಯತೆ ಇರಲಿಲ್ಲ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಇಡುವ ವಿಚಾರದಲ್ಲಿ ಸಿಎಂ, ನಾನು, ಸಿದ್ದರಾಮಯ್ಯ ವಿರೋಧ ಇಲ್ಲ. ಸಿಎಂ ಕೂಡಾ ಕಾಗಿನೆಲೆ ಸ್ವಾಮೀಜಿಗಳ ಜತೆ ಚರ್ಚೆ ಮಾಡಿ, ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಡುವ ಬಗ್ಗೆ ಭರವಸೆ ಕೊಟ್ಟಿದ್ದಾರೆ. ನಿನ್ನೆ ರಾಯಣ್ಣ ಅಭಿಮಾನಿಗಳು ಪ್ರತಿಭಟನೆ ಮಾಡಿದ್ದಾರೆ. ಪ್ರಕರಣದಲ್ಲಿ ಮರಾಠಿಗರ ಕನ್ನಡಿಗರು ಅನ್ನುವ ಚರ್ಚೆ ತರಬಾರದು. ಕರ್ನಾಟಕ - ಮಹಾರಾಷ್ಟ್ರ ಅನ್ನೋದು ಚರ್ಚೆಗೆ ಬರಬಾರದು. ಕೆಲವರ ಸಂಕುಚಿತ ಭಾವನೆಗಳಿಂದ ಸಂಘರ್ಷ ಆಗುತ್ತಿದೆ. ನಾನು ನಾಳೆ ಬೆಳಗ್ಗೆ ಬೆಳಗಾವಿಗೆ ಭೇಟಿ ಕೊಡುತ್ತೇನೆ. ಯಾವ ಪರಿಸ್ಥಿತಿ ಇದೆ ನೋಡಿ ಬಳಿಕ ಬೆಳಗಾವಿ ಜಿಲ್ಲಾಡಳಿತ ಜೊತೆಗೆ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿಚಾರವಾಗಿ ಚರ್ಚೆ ಮಾಡುತ್ತೇನೆ ಎಂದಿದ್ದಾರೆ.

ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಪರವಾಗಿ ಶಾಸಕ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದು, ಕರ್ನಾಟಕದ ಅಸ್ಮಿತೆಯ ವಿಚಾರದಲ್ಲಿ ರಾಜಿ ಇಲ್ಲ. ಸಂಗೊಳ್ಳಿ ರಾಯಣ್ಣ ಕರುನಾಡಿನ ಅಸ್ಮಿತೆ ಮತ್ತು ಹೆಮ್ಮೆ. ರಾಜ್ಯ ಸರ್ಕಾರ ಬೆಳಗಾವಿಯ ಪೀರನವಾಡಿಯಲ್ಲಿ ರಾಯಣ್ಣ ಪ್ರತಿಮೆಯನ್ನು ಮರು ಪ್ರತಿಷ್ಟಾಪಿಸಲಿ. ನಮ್ಮದೇ ನೆಲದಲ್ಲಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸಲು ರಾಜ್ಯ ಸರ್ಕಾರಕ್ಕೆ ಹಿಂಜರಿಕೆ ಯಾಕೆ..? ಎಂದು ಪ್ರಶ್ನಿಸಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಕಾಂಗ್ರೆಸ್‌ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಈ ಸಮಸ್ಯೆಯನ್ನು ಜಿಲ್ಲಾಡಳಿತವೇ ಬಗೆಹರಿಸಬೇಕು. ಅವರೇ ಜವಾಬ್ದಾರಿ ತೆಗೆದುಕೊಳ್ಳಬೇಕು. ಎರಡು ಸಮುದಾಯಗಳ ಮಧ್ಯೆ ಸಮಸ್ಯೆಯಿದೆ. ಸ್ಥಳೀಯವಾಗಿಯೇ ಇದನ್ನು ಬಗೆಹರಿಸಬೇಕು. ಇದನ್ನು ನಾನು ಮೊದಲೇ ಹೇಳಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರು, ಎಲ್ಲ ಶಾಸಕರು, ಜಿಲ್ಲಾಧಿಕಾರಿ ಸೇರಿ ಬಗೆಹರಿಸಬೇಕು. ಎಲ್ಲರೂ ಸೇರಿ ಸಂಧಾನ ಮಾಡಿದರೆ ಒಳ್ಳೆಯದು. ಎಲ್ಲರನ್ನು ಕರೆದು ಸಂಧಾನ ಮಾಡಿದರೆ ಸಮಸ್ಯೆ ಮುಗಿಯುತ್ತದೆ. ಸಮುದಾಯಗಳ ಮುಖಂಡರು, ಎಲ್ಲ ಶಾಸಕರನ್ನು ಸಭೆ ಕರೆಯುವಂತೆ ಸತೀಶ್‌ ಜಾರಕಿಹೊಳಿ ಆಗ್ರಹ ಮಾಡಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಶಿವಾಜಿ, ರಾಯಣ್ಣ ಇಬ್ಬರೂ ಮಹಾಪುರುಷರೇ ಆಗಿದ್ದು, ನಾನೂ ಕೂಡ ಬೆಳಗಾವಿ ಘಟನೆಯನ್ನ ನೋಡುತ್ತಿದ್ದೇನೆ. ಸರ್ಕಾರ ಅಲ್ಲಿ ಶಾಂತಿ ಮೂಡಿಸುವ ಕೆಲಸ ಮಾಡಬೇಕು. ಎರಡೂ ಸಂಘಟನೆಗಳು ಇಬ್ಬರ ಶಾಂತಿಯಿಂದಿರಬೇಕು. ಘರ್ಷಣೆ ಆಗುತ್ತಿದೆ ಎಂದರೆ ಗುಪ್ತಚರ ಇಲಾಖೆ ಏನು ಮಾಡುತ್ತಿದೆ..? ಮೊದಲೇ ಎರಡು ಸಮುದಾಯ ಕರೆಸಿ ಮಾತನಾಡಬಹುದಿತ್ತು. ತಕ್ಷಣವೇ ಅಲ್ಲಿ ಶಾಂತಿ ಮೂಡಿಸಬೇಕು ಎಂದು ಸರ್ಕಾರಕ್ಕೆ ಈಶ್ವರ್ ಖಂಡ್ರೆ ಆಗ್ರಹ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಬೇಹುಗಾರಿಕೆ ಪಡೆ ಸಂಪೂರ್ಣ ವೈಫಲ್ಯ ಅನುಭವಿಸುತ್ತಿದೆ. ಡಿಜೆಹಳ್ಳಿ ಇರಬಹುದು, ಬೆಳಗಾವಿ ಘಟನೆ ಇರಬಹುದು ಎಲ್ಲದರಲ್ಲೂ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದರ ಬಗ್ಗೆ ಸರ್ಕಾರ ಹೆಚ್ಚಿನ ಗಮನಹರಿಸಬೇಕು ಎಂದಿದ್ದಾರೆ.

ಬೆಳಗಾವಿಯ ಪೀರನವಾಡಿ ಪುತ್ಥಳಿ ಗಲಾಟೆ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಆಗ್ರಹ ಮಾಡಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್‌, ಇದು ಬಹಳ ದುರಾದೃಷ್ಟಕರ ವಿಚಾರ. ಸಂಗೊಳ್ಳಿ ರಾಯಣ್ಣನ ಅವರ ತ್ಯಾಗ, ಬಲಿದಾನ ದೊಡ್ಡದು, ಅಂತಹ ವೀರ ಒಂದು ಕಡೆ, ಈ ದೇಶ ಒಗ್ಗಟ್ಟಾಗಿ ಕಟ್ಟಿದ ಶಿವಾಜಿ ಮಹಾರಾಜರು ಇನ್ನೊಂದು ಕಡೆ, ಇವರಿಬ್ಬರು ದೇಶದ ಹೆಮ್ಮೆ, ವಿಶ್ವಮಾನವರು. ಇಂಥವರ ಪುತ್ಥಳಿ ವಿಷಯದಲ್ಲಿ ರಾಜಕಾರಣ ಆಗಬಾರದು. ನಮ್ಮ ದೇಶಕ್ಕೆ ಇಬ್ಬರೂ ವೀರ ಪುತ್ರರೇ. ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಬೇಕು. ಸಂಬಂಧಿಸಿದವರು ಶಾಂತ ರೀತಿಯಿಂದ ಕುಳಿತು ಬಗೆಹರಿಸಬೇಕು. ನಾನು ಯಾವಾಗಲೂ ಎಂಇಎಸ್ ವಿರೋಧಿಸುತ್ತಲೇ ಬಂದಿದ್ದೇನೆ. ಎಂಇಎಸ್‌ನ ಈ ಕೃತ್ಯಗಳನ್ನು ಖಂಡಿಸುತ್ತೇವೆ ಎಂದಿದ್ದಾರೆ.

ಬೆಳಗಾವಿಯಲ್ಲಿ ಸಂಗೋಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿಚಾರವಾಗಿ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಮಾತನಾಡಿ, ಕಾನೂನು ರೀತಿಯಾಗಿ ಅದನ್ನು ಸೂಚಿಸುವ ಸ್ಥಳದಲ್ಲೇ ಪ್ರತಿಷ್ಠಾಪನೆ ಮಾಡಬೇಕು. ಕೋರಿಕೆ ಪ್ರಕಾರ ಬೇಕೆಂದ ಕಡೆ ಪ್ರತಿಷ್ಠಾಪಿಸಬೇಕು. ಎಲ್ಲಾ ಶಾಂತ ರೀತಿಯಾಗಿ ಮುಗಿದು ಹೋಗುತ್ತದೆ. ಸಂಗೊಳ್ಳಿ ರಾಯಣ್ಣ ಅವರು ಸ್ವಾತಂತ್ರ್ಯ ಹೋರಾಟಗಾರರು ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು. ಸರ್ಕಾರಕ್ಕೆ ಸಹಕಾರ ಕೊಡಬೇಕು. ಪದೇ, ಪದೇ ಈ ರೀತಿ ಕ್ಯಾತೆ ತೆಗೆಯೋದು ಸರಿಯಲ್ಲ ಎಂದು ಮನವಿ ಮಾಡಿದ್ದಾರೆ.

ಪೀರನವಾಡಿ ಸಂಗೋಳ್ಳಿ ರಾಯಣ್ಣ ಪ್ರತಿಮೆ ವಿವಾದದ ಬಗ್ಗೆ ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಲಾಠಿ ಚಾರ್ಜ್ ನಡೆದಿರುವ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಇಲ್ಲ. ಗಲಾಟೆ ನಡೆದಿಲ್ಲ ಸಣ್ಣ ಪುಟ್ಟ ಘಟನೆ ನಡೆದಿದೆ. ಈ ಬಗ್ಗೆ ಡಿಸಿ, ಎಸ್‌ಪಿ ಅವರ ಜೊತೆ ಮಾತನಾಡಿ ಕ್ರಮ ಕೈಗೊಳ್ಳುತ್ತೆವೆ. ಕಾನೂನು ರೀತಿ ಕ್ರಮ ಕೈ ಗೊಳ್ಳಲು ಸೂಚನೆ ನೀಡುತ್ತೇನೆ ಎಂದಿದ್ದಾರೆ. ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಮೇಲೆ ಚಪ್ಪಲಿ ಎಸೆದಿರುವ ಆರೋಪ ಸುಳ್ಳು, ಏಳೆಂಟು ಜನರ ಗುಂಪು ಬಂದಿತ್ತು ಲಾಠಿ ಚಾರ್ಜ ಮಾಡಲಾಗಿದೆ. ಸದ್ಯ ಪೀರನವಾಡಿಯಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಸಂಗೋಳ್ಳಿ ರಾಯಣ್ಣ, ಶಿವಾಜಿ ದೇಶದ ಆಸ್ತಿ. ಅವರನ್ನು ಜಾತಿಗೆ ಸಿಮೀತ ಮಾಡುವುದಿಲ್ಲ. ಅವರಿಗೆ ಯಾವುದೇ ಅಪಮಾನ ಆಗದಂತೆ ಸರಿಪಡಿಸುತ್ತೇವೆ ಎಂದಿದ್ದಾರೆ.

ಪೀರನವಾಡಿ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ವಿಚಾರವಾಗಿ ಶಿವಾಜಿ ಅಭಿಮಾನಿಗಳ ಜೊತೆಗೆ ಜಿಲ್ಲಾಧಿಕಾರಿ ಮಹತ್ವದ ಸಭೆ ಮಾಡಿದ್ದಾರೆ. ಜಿಲ್ಲಾಧಿಕಾರಿ ಎಂ ಜಿ ಹಿರೇಮಠ, ನಗರ ಪೊಲೀಸ್ ಆಯುಕ್ತ ಕೆ ತ್ಯಾಗರಾಜನ್ ನೇತೃತ್ವದಲ್ಲಿ ಸಭೆ ನಡೆದಿದೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮಾತುಕತೆ ಮಾಡಿದ್ದಾರೆ. ಸಭೆಯಲ್ಲಿ ಗ್ರಾಮಸ್ಥರು ಹಲವು ಬೇಡಿಕೆ ಮುಂದಿಟ್ಟಿದ್ದಾರೆ. ರಾಯಣ್ಣ ಮೂರ್ತಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು, ಪೀರನವಾಡಿ ವೃತ್ತವನ್ನು ಶಿವಾಜಿ ವೃತ್ತ ಎಂದು ಮುಂದುವರಿಸಬೇಕೆಂದು ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳ ಜೊತೆಗೆ ಚರ್ಚೆ ಮಾಡುವೆ ಎಂದು ಜಿಲ್ಲಾಧಿಕಾರಿ ಆಶ್ವಾಸನೆ ನೀಡಿದ್ದಾರೆ. ಇನ್ನೊಂದು ಕಡೆ ಪೀರನವಾಡಿ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪನೆ ಮಾಡಿದ ಸಂಭ್ರಮದಲ್ಲಿರುವ ಕನ್ನಡ ಕಾರ್ಯಕರ್ತರು, ಚೆನ್ನಮ್ಮ ವೃತ್ತದಲ್ಲಿ ಕನ್ನಡ ಪರ ಘೋಷಣೆ ಕೂಗುತ್ತಾ ವಿಜಯೋತ್ಸವ ಆಚರಣೆ ಮಾಡಿದ್ದಾರೆ. ರಾಯಣ್ಣ ಹಾಗೂ ಚನ್ನಮ್ಮ ಪರ ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com