ಆಯುರ್ವೇದದ ಅಮೂಲ್ಯ ರತ್ನ ʼಅಗ್ನಿಶಿಖೆʼ ಪತ್ತೆ
ರಾಜ್ಯ

ಆಯುರ್ವೇದದ ಅಮೂಲ್ಯ ರತ್ನ ʼಅಗ್ನಿಶಿಖೆʼ ಪತ್ತೆ

ಈ ಸಸ್ಯದ ಬೇರು ಗಡ್ಡೆಯನ್ನು ವಿಷಜಂತು, ವಿಷಕೀಟ, ಚೇಳು, ಹಾವು ಇತ್ಯಾದಿಗಳು ಕಡಿದಾಗ ಲೇಪನಕ್ಕಾಗಿ ಬಳಸುವುದು ವಾಡಿಕೆ. ಶುಚಿಗೊಳಿಸಿ ನಿಗದಿಪಡಿಸಿದ ಗಡ್ಡೆಯ ಸೇವನೆಯಿಂದ ನಾಗರಹಾವಿನ ವಿಷ ಇಳಿಮುಖವಾಗುತ್ತದೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ಹೇಳುತ್ತಾರೆ.

ಕೆ. ಶ್ರೀಕಾಂತ್

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ..... ಲಿಲಿಯೇಸಿ ಕುಟುಂಬಕ್ಕೆ ಸೇರಿದ ಗಿಡವೊಂದನ್ನು ಮತ್ತೆ ಈ ಬಾರಿಯ ಮುಂಗಾರು ಮಳೆ ಕರುಣಿಸಿದೆ. ಹೌದು, ವಿಷಜಂತುಗಳ ವಿಷವನ್ನೇ ಕರಗಿಸಬಲ್ಲ ಅಮೂಲ್ಯವಾದ ಔಷಧೀಯ ಗುಣ ಹೊಂದಿರುವ ಸಸ್ಯವೊಂದು ಮಳೆ ಅಭಾವ, ಅರಣ್ಯನಾಶದಿಂದ ವಿನಾಶದಂಚಿನಲ್ಲಿತ್ತು. ಇಷ್ಟು ದಿನ ಕಣ್ಮರೆಯಾಗಿದ್ದ ಸಸ್ಯ ಈ ಬಾರಿಯ ಮುಂಗಾರು ಮಳೆಗೆ ನರೇಗಲ್ ಹೋಬಳಿಯ ಹಳ್ಳ, ಸರುವು ಭಾಗದ ಅಡವಿ ಪ್ರದೇಶದಲ್ಲಿ ಮತ್ತೆ ಪತ್ತೆಯಾಗಿದೆ. ಇದು ಒಂದು ಬಳ್ಳಿ ತರಹದ ಗಿಡವಾಗಿದೆ. ಇದು ಲಿಲಿಯೇಸಿ ಕುಟುಂಬಕ್ಕೆ ಸೇರಿದೆ. ಇದನ್ನು ಸಂಸ್ಕೃತದಲ್ಲಿ ಲಾಂಗಲೀ, ತಾಮ್ರಚೂಡ, ಆಂಗ್ಲ ಭಾಷೆಯಲ್ಲಿ ಫೈರ್‌ ಲಿಲ್ಲಿ ಹಾಗೂ ವೈಜ್ಞಾನಿಕವಾಗಿ ಗ್ಲೋರಿಯೊಸಾ ಸುರ‍್ಬಾ ಎಂದು ಕರೆದರೆ ಕನ್ನಡದಲ್ಲಿ ಅಗ್ನಿಶಿಖೆ, ಗೌರಿ ಹೂ, ಕೋಳಿ ಜುಟ್ಟಿನ ಹೂ, ಕೋಳಿ ಕಟುಕನ ಗಡ್ಡೆ, ಕಾಲಿಹರಿ, ನೆಲಗುಲಿಕ ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ.

ಮಳೆಗಾಲ ಆರಂಭಗೊಂಡಾಗ ಅಡವಿ, ಪೊದರು ಪ್ರದೇಶಗಳಲ್ಲಿ ಕಂಡುಬರುತ್ತದೆ. ಈಗ ನರೇಗಲ್ ಹೋಬಳಿ ಕೆಲ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ನಿಂತಿದೆ. ಈ ಸಸ್ಯವು ಕೆಂಪು ಅಥವಾ ಮರಳು ಮಣ್ಣಿನ ಭಾಗದಲ್ಲಿ ನೀರು ಹರಿದು ಹೋಗುವ ವ್ಯವಸ್ಥೆಯಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಕೋಮಲವಾದ ಉದ್ದನೆಯ ತಿಳಿ ಹಸಿರು ಬಣ್ಣದ ಎಲೆಗಳನ್ನು ಹೊಂದಿದ್ದು ಹಳದಿ ಮತ್ತು ಕೆಂಪು ಬಣ್ಣದ ಹೂವುಗಳು ತುಂಬಾ ಸುಂದರವಾಗಿರುತ್ತವೆ. ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲಿ ಹೂ ಬಿಡುವ ಈ ಸಸ್ಯ ನೋಡುಗರನ್ನು ಆಕರ್ಷಿಸುತ್ತದೆ. ನೈಸರ್ಗಿಕವಾಗಿ ಚಿಟ್ಟೆಗಳು ಮತ್ತು ಸೂರಹಕ್ಕಿಗಳು ಗೌರಿಹೂವಿನ ಪರಾಗಸ್ಪರ್ಷ ಮಾಡುತ್ತವೆ.

ಈ ಸಸ್ಯದ ಬೇರು ಗಡ್ಡೆಯನ್ನು ವಿಷಜಂತು, ವಿಷಕೀಟ, ಚೇಳು, ಹಾವು ಇತ್ಯಾದಿಗಳು ಕಡಿದಾಗ ಲೇಪನಕ್ಕಾಗಿ ಬಳಸುವುದು ವಾಡಿಕೆ. ಶುಚಿಗೊಳಿಸಿ ನಿಗದಿಪಡಿಸಿದ ಗಡ್ಡೆಯ ಸೇವನೆಯಿಂದ ನಾಗರಹಾವಿನ ವಿಷ ಇಳಿಮುಖವಾಗುತ್ತದೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ಹೇಳುತ್ತಾರೆ. ಅನಾದಿ ಕಾಲದಿಂದಲೂ ಗಿರಿಜನ, ಬುಡಕಟ್ಟು ಜನ, ಅರಣ್ಯವಾಸಿಗಳು, ಕುರಿಗಾಯಿಗಳು ಇದರ ಬೇರುಗಡ್ಡೆಯನ್ನು ಸಂರಕ್ಷಿಸಿಟ್ಟುಕೊಳ್ಳುತ್ತ ಬಂದಿದ್ದಾರೆ. ಅಷ್ಟೇ ಅಲ್ಲದೆ ತೀವ್ರ ಸ್ವರೂಪದ ಸಂಧಿವಾತ, ಚರ್ಮರೋಗ, ಹುಣ್ಣು(ಕುರ) ನಿವಾರಣೆಗೂ ಬಳಸುತ್ತಾರೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ಮಾಹಿತಿ ನೀಡಿದರು.

ಅಗ್ನಿಶಿಖೆ ಸಸ್ಯದಲ್ಲಿ ಕೋಲ್ಶಿಸಿನ್ ಎಂಬ ಆಲ್ಕಲಾಯಿಡ್ ಇರುತ್ತದೆ. ಇದು ಔಷಧಿ ತಯಾರಿಗೆ ಬೇಕಾಗುವ ಪ್ರಮುಖ ರಾಸಾಯನಿಕ ಇದಾಗಿದೆ. ಈ ರಾಸಾಯನಿಕವು ನೈಸರ್ಗಿಕ ರೂಪದಲ್ಲಿ ಲಭಿಸುವುದರಿಂದ ಈ ಸಸ್ಯದ ಬೇರುಗಡ್ಡೆ ಹಾಗೂ ಬೀಜಗಳಿಗೆ ಜಾಗತಿಕ ಮಟ್ಟದಲ್ಲಿ ಬೆಲೆಬಾಳುವ ಮಾರುಕಟ್ಟೆಯಿದೆ. ಈಗಲೂ ಈ ಅಪರೂಪದ ಸಸ್ಯದ ಮೇಲೆ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳು ನಡೆಯುತ್ತಿವೆ ಎನ್ನುತ್ತಾರೆ ಆಯುಷ್ ವೈದ್ಯ ಡಾ. ನಾಗರಾಜ ಎಲ್. ಗ್ರಾಮಪುರೋಹಿತ್.

ದೇವರಿಗೆ ಅತಿಪ್ರಿಯವಾದ ಹೂವಾಗಿದ್ದು ಕಾಡು ಜನರು ಧಾರ್ಮಿಕ ಆಚರಣೆಗಳಲ್ಲಿ ಎಲ್ಲಿಂದಲಾದರೂ ಹುಡುಕಿ ತಂದು ದೇವರಿಗೆ ಅರ್ಪಿಸಿ ಗೌರವಿಸುವ ಸಂಪ್ರದಾಯವಿದೆ ಎಂದು ಗ್ರೀನ್ ಆರ್ಮಿ ತಂಡದ ಸದಸ್ಯ ಕಿರಣಕುಮಾರ ತಳಕವಾಡ ತಿಳಿಸಿದರು.

ಇಂತಹ ಹಲವಾರು ಸಸ್ಯಗಳು ಉತ್ತರ ಕರ್ನಾಟಕದ ಬಯಲು ಸೀಮೆಯ ಪ್ರದೇಶದಲ್ಲಿವೆ. ಅವುಗಳನ್ನು ಗುರುತಿಸುವ ಕಾರ್ಯವಾಗಬೇಕು. ಅವುಗಳನ್ನು ಒಂದೆಡೆ ಸೇರಿಸಿ, ಬೆಳೆಸಿ ಪೋಷಿಸಿ ಅವುಗಳಿಂದಾಗುವ ಉಪಯೋಗವನ್ನು ಸಾಮಾನ್ಯ ಜನರಿಗೆ ತಲುಪಿಸುವ ಯೋಜನೆಯನ್ನು ರೂಪಿಸಬೇಕು. ಇಂದು ಅನೇಕ ಜನರು ಸಂಧಿವಾತ, ಚರ್ಮರೋಗ, ಜ್ವರ ಹೀಗೆ ಅನೇಕ ಸಂಕಷ್ಟ ಗಳಿಂದ ಬಳಲುತ್ತಿದ್ದಾರೆ. ಅಲೋಪಥಿಕ್ ಔಷಧಿಗಳಿಗಿಂತ ಅಯರ್ವೇದದ ಗಿಡಮೂಲಿಕೆಗಳಿಂದ ರೋಗಗಳ ನಿವಾರಣೆ ಸಾಧ್ಯ. ಇಂತಹ ಕೆಲಸಕ್ಕೆ ಪಾರಂಪರಿಕ ವೈದ್ಯರು ಮುಂದಾಗಬೇಕಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com