ಸಂಸದ ತೇಜಸ್ವಿ ಸೂರ್ಯ ಕನ್ನಡ ವಿರೋಧಿ ಧೋರಣೆ ಮತ್ತೊಮ್ಮೆ ಬಯಲು!
ರಾಜ್ಯ

ಸಂಸದ ತೇಜಸ್ವಿ ಸೂರ್ಯ ಕನ್ನಡ ವಿರೋಧಿ ಧೋರಣೆ ಮತ್ತೊಮ್ಮೆ ಬಯಲು!

ಮಾಜಿ ಐಪಿಎಸ್ ಅಧಿಕಾರಿ ಕನ್ನಡ ನಾಡಿನಲ್ಲೇ ಕೆಲಸ ಮಾಡಿದವರಾಗಿ, ಸ್ವತಃ ಅವರೇ ಕನ್ನಡದಲ್ಲಿ ವ್ಯವಹರಿಸುವಾಗ, ತಮ್ಮ ಬಿಜೆಪಿ ಸೇರ್ಪಡೆ ವಿಷಯವನ್ನು ಕೂಡ ಕನ್ನಡದಲ್ಲಿಯೇ ಟ್ವೀಟ್ ಮಾಡಿರುವಾಗ, ಕನ್ನಡದ ಅನ್ನ ತಿನ್ನುವ, ಕನ್ನಡಗಿರ ಮತ ಪಡೆದು ಸಂಸತ್ತಿಗೆ ಆಯ್ಕೆಯಾಗಿರುವ, ಕನ್ನಡಿಗರ ಆಶೀರ್ವಾದದಿಂದ ಅಧಿಕಾರ ಅನುಭವಿಸುತ್ತಿರುವ ಈ ಸಂಸದ, ಕನ್ನಡದಲ್ಲೇ ಶುಭಾಶಯ ಕೋರುವ ಬದಲು ತಮಿಳಿನಲ್ಲಿ ಶುಭಾಶಯ ಕೋರಿರುವುದರ ಹಿಂದೆ ಯಾವ ಉದ್ದೇಶವಿದೆ?

ಶಿವಕುಮಾರ್‌ ಎ

ಕಳೆದ ವರ್ಷ ಸರಿಸುಮಾರು ಇದೇ ಹೊತ್ತಿಗೆ ಕನ್ನಡ ಹೋರಾಟಗಾರರು ಗೂಂಡಾಗಳು ಎಂದು ಹೇಳಿಕೆ ನೀಡಿ ತಮ್ಮ ಕನ್ನಡ ವಿರೋಧಿ ಧೋರಣೆಯನ್ನು ಮೆರೆದಿದ್ದ ಸಂಸದ ತೇಜಸ್ವಿ ಸೂರ್ಯ, ಇದೀಗ ಮತ್ತೆ ಅಂತಹದ್ದೇ ವರಸೆ ಪ್ರದರ್ಶಿಸಿದ್ದು, ಬಿಜೆಪಿ ಸೇರಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ಅವರಿಗೆ ತಮಿಳು ಭಾಷೆಯಲ್ಲಿ ಶುಭಾಶಯ ಕೋರಿದ್ದಾರೆ.

ಮೊದಲಿನಿಂದಲೂ ಕನ್ನಡ ಭಾಷೆ ಮತ್ತು ಕನ್ನಡಿಗರ ವಿಷಯದಲ್ಲಿ ಅಸಡ್ಡೆಯ, ಉದಾಸೀನದ ಮತ್ತು ಕಿಡಿಗೇಡಿತನದ ಹೇಳಿಕೆಗಳ ಮೂಲಕವೇ ಗುರುತಿಸಿಕೊಂಡಿರುವ ಬಿಜೆಪಿ ಸಂಸದ, ಒಂದು ದೇಶ, ಒಂದು ಭಾಷೆ ಎಂಬ ಬಿಜೆಪಿ ಮತ್ತು ಸಂಘಪರಿವಾರದ ಸೂತ್ರಕ್ಕೆ ತಕ್ಕಂತೆ ಹಿಂದಿ ಭಾಷೆಯ ಹೇರಿಕೆಯ ಪ್ರಬಲ ಬೆಂಬಲಿಗರಾಗಿ, ಹಿಂದಿ ಭಾಷೆ ರಾಷ್ಟ್ರ ಭಾಷೆ ಎಂಬ ಸಂವಿಧಾನ ವಿರೋಧಿ ನಿಲುವಿಗೆ ಬದ್ಧರಾಗಿರುವವರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅವರ ಕನ್ನಡ ವಿರೋಧಿ ಧೋರಣೆಗೆ ಸಾಲು ಸಾಲು ಉದಾಹರಣೆಗಳಿರುವಾಗ, ಇದೀಗ ಅಣ್ಣಾಮಲೈ ವಿಷಯದಲ್ಲಿ; ಸ್ವತಃ ಮಾಜಿ ಐಪಿಎಸ್ ಅಧಿಕಾರಿ ಕನ್ನಡ ನಾಡಿನಲ್ಲೇ ಕೆಲಸ ಮಾಡಿದವರಾಗಿ, ಸ್ವತಃ ಅವರೇ ಕನ್ನಡದಲ್ಲಿ ವ್ಯವಹರಿಸುವಾಗ, ತಮ್ಮ ಬಿಜೆಪಿ ಸೇರ್ಪಡೆ ವಿಷಯವನ್ನು ಕೂಡ ಕನ್ನಡದಲ್ಲಿಯೇ ಟ್ವೀಟ್ ಮಾಡಿರುವಾಗ, ಕನ್ನಡದ ಅನ್ನ ತಿನ್ನುವ, ಕನ್ನಡಗಿರ ಮತ ಪಡೆದು ಸಂಸತ್ತಿಗೆ ಆಯ್ಕೆಯಾಗಿರುವ, ಕನ್ನಡಿಗರ ಆಶೀರ್ವಾದದಿಂದ ಅಧಿಕಾರ ಅನುಭವಿಸುತ್ತಿರುವ ಈ ಸಂಸದ, ಕನ್ನಡದಲ್ಲೇ ಶುಭಾಶಯ ಕೋರುವ ಬದಲು ತಮಿಳಿನಲ್ಲಿ ಶುಭಾಶಯ ಕೋರಿರುವುದರ ಹಿಂದೆ ಯಾವ ಉದ್ದೇಶವಿದೆ? ಸಂಸದರಿಗೆ ಕನ್ನಡ ಭಾಷೆ, ನೆಲ, ಜಲದ ಕುರಿತು ಇರುವ ಉಪೇಕ್ಷೆಗೆ ಇದು ಮತ್ತೊಂದು ಸಾಕ್ಷಿಯೇ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಕೇಳಿ ಬರತೊಡಗಿದೆ.

ಹಿಂದಿ ಹೇರಿಕೆಯ ವಿಷಯದಲ್ಲಿ ಕೂಡ ಸದಾ ಹಿಂದಿಯ ಪರವಾಗಿ ವಕಾಲತು ವಹಿಸುವ, ಕನ್ನಡ ವಿರೋಧಿ ನಿಲುವು ತಳೆಯುವ ಸಂಸದರು, ಕಳೆದ ಆಗಸ್ಟ್ ನಲ್ಲಿ ಬೆಂಗಳೂರಿನ ಜೈನ ಸಮುದಾಯಕ್ಕೆ ಸೇರಿದ ಕಟ್ಟಡವೊಂದರ ಮುಂದಿನ ನಾಮಫಲಕ ಕನ್ನಡದಲ್ಲಿ ಇಲ್ಲ ಎಂಬ ಕಾರಣಕ್ಕೆ ಅದನ್ನು ತೆರವುಗೊಳಿಸಿದ್ದ ಕನ್ನಡ ಹೋರಾಟಗಾರರ ವಿರುದ್ಧ ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಕನ್ನಡ ನಾಡಿನಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿರಬೇಕು, ಜೊತೆಗೆ ಕನ್ನಡವೇ ಸಂವಹನದ ಭಾಷೆಯೂ ಆಗಬೇಕು ಎಂಬ ನಿಲುವಿನ ಹಿನ್ನೆಲೆಯಲ್ಲಿ ಎಲ್ಲಾ ನಾಮಫಲಕಗಳಲ್ಲಿ ಕನ್ನಡ ಪ್ರಧಾನವಾಗಿರಬೇಕು ಎಂಬುದು ದಶಕಗಳ ಕನ್ನಡ ಪರ ಧೋರಣೆ. ಆ ಹಿನ್ನೆಲೆಯಲ್ಲಿ ಕೆಲವು ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಕನ್ನಡವಿಲ್ಲದ, ಕೇವಲ ಹಿಂದಿಯಲ್ಲಿದ್ದ ನಾಮಫಲಕವನ್ನು ತೆರವುಗೊಳಿಸಿದ್ದರು. ಆ ಸಂದರ್ಭದಲ್ಲಿ ಕನ್ನಡ ನೆಲದಲ್ಲಿ ಬದುಕು ಕಟ್ಟಿಕೊಂಡವರಿಗೆ, ಕನ್ನಡ ಬಳಸುವ ಬಗ್ಗೆ ತಿಳಿ ಹೇಳುವ ಬದಲು, ಈ ಬಿಜೆಪಿ ಸಂಸದರು, ತಮ್ಮ ಪಕ್ಷದ ನೀತಿಯಂತೆ ಹಿಂದಿ ಪರ ಕೈ ಎತ್ತಿದ್ದರು. ಅಷ್ಟೇ ಅಲ್ಲ; ಕನ್ನಡಪರ ಹೋರಾಟಗಾರರನ್ನು ಗೂಂಡಾಗಳೆಂದು ಕರೆದು, ನಿಂದಿಸಿದ್ದರು.

ಆ ಬಳಿಕ ಕೂಡ ರೈಲ್ವೆ, ಬ್ಯಾಂಕಿಂಗ್, ಮೆಟ್ರೋ ಮುಂತಾದ ಕಡೆ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆಯ ವಿಷಯದಲ್ಲಾಗಲೀ, ಇನ್ನಾವುದೇ ರೀತಿಯ ಕನ್ನಡದ ಮೇಲಿನ ಸವಾರಿಯ ವಿಷಯದಲ್ಲಾಗಲೀ ಈ ಸಂಸದರು, ಸದಾ ಒಂದೋ ಹಿಂದಿ ಪರ ವಕಾಲತು ವಹಿಸುತ್ತಿದ್ದಾರೆ, ಇಲ್ಲವೇ ತಮಗೂ ಕನ್ನಡಕ್ಕೂ ಸಂಬಂಧವೇ ಇಲ್ಲ ಎಂಬ ಧೋರಣೆ ತಳೆಯುತ್ತಿದ್ದಾರೆ. ಇವರು ಕರ್ನಾಟಕದ ಸಂಸದರೋ, ತಮಿಳುನಾಡಿನ ಸಂಸದರೋ? ಅಥವಾ ಹಿಂದಿ ಜನರ ಪ್ರತಿನಿಧಿಯೋ? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿವೆ.

ಇದೇ ರೀತಿಯ ಕನ್ನಡ ವಿರೋಧಿ ಧೋರಣೆ ಮೊನ್ನೆ ಮೊನ್ನೆ, ಪರ್ಯೂಷಣ್ ದಿನದ ಸಂದರ್ಭದಲ್ಲಿ ಕೂಡ ಮುಂದುವರಿದಿದ್ದು, ರಾಜ್ಯದ ಬಹುತೇಕ ಜೈನರು ತಮ್ಮ ಮಾತೃಭಾಷೆಯೊಂದಿಗೆ ಕನ್ನಡ ಮಾತನಾಡುವವರಾಗಿದ್ದರೂ, ಕನ್ನಡಿಗ ಜೈನರು ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿದ್ದರೂ, ಈ ಸಂಸದರು ಮಾತ್ರ ಹಿಂದಿಯಲ್ಲಿ ಅವರಿಗೆ ಶುಭಾಶಯ ಕೋರುವ ಮೂಲಕ ತಮ್ಮ ಹಿಂದಿ ಮೋಹವನ್ನು ಪ್ರದರ್ಶಿಸಿದ್ದರು. ಆ ಬಗ್ಗೆ ಕೂಡ ನೆಟ್ಟಿಗರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿ, ಜೈನರಿಗೆ ಹಿಂದಿ ಬಿಟ್ಟು ಬೇರೆ ಭಾಷೆ ಬರುವುದಿಲ್ಲವೆ? ಜೈನರನ್ನು ಓಲೈಸುವ ಭರದಲ್ಲಿ ಕನ್ನಡವನ್ನು ಏಕೆ ಹೀಗಳೆಯುತ್ತೀರಿ, ಕನ್ನಡ ಭಾಷೆಯನ್ನು ಯಾಕೆ ಅವಮಾನಿಸುತ್ತೀರಿ. ಕನ್ನಡ ನೆಲದಲ್ಲಿ ಕನ್ನಡಿಗರಾಗಿ ಕನ್ನಡ ಮಾತನಾಡಲು ನಿಮಗೆ ಏನು ಅಡ್ಡಿ? ಕನ್ನಡದಲ್ಲೇ ಶುಭಾಶಯ ಕೋರಿದ್ದರೆ ಅದಕ್ಕೆ ಜೈನರು ವಿರೋಧಿಸುತ್ತಿದ್ದರೆ? ಯಾಕೆ ಹಿಂದಿಯನ್ನು ಪರೋಕ್ಷವಾಗಿ ಹೇರುತ್ತಿದ್ದೀರಿ? ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ.

ಹಾಗೆ ನೋಡಿದರೆ ತೇಜಸ್ವಿ ಸೂರ್ಯ ಅವರ ಈ ಹತ್ತಿದ ಏಣಿಯನ್ನೇ ಒದೆಯುವ, ಅಥವಾ ಹೊತ್ತ ನೊಗವನ್ನೇ ಮುರಿಯುವ ಸ್ವಭಾವ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರವಲ್ಲ; ಕನ್ನಡಿಗರ ವಿಷಯದಲ್ಲಿಯೂ ಪ್ರದರ್ಶನಗೊಂಡಿದೆ. ಕಳೆದ ವರ್ಷ ನೂರು ವರ್ಷಗಳಲ್ಲೇ ಕಂಡರಿಯದ ಪ್ರಮಾಣದ ಮಹಾ ಪ್ರವಾಹದಿಂದಾಗಿ ಇಡೀ ರಾಜ್ಯ ಸಂಕಷ್ಟಕ್ಕೆ ಸಿಲುಕಿದಾಗ, ನೂರಾರು ಜೀವಹಾನಿಯಾಗಿ, ಬರೋಬ್ಬರಿ 38 ಸಾವಿರ ಕೋಟಿ ರೂ.ಗಳಷ್ಟು ಭಾರೀ ಆಸ್ತಿಪಾಸ್ತಿ ನಷ್ಟವಾಗಿ ಪರಿಹಾರ ನೀಡಲು ರಾಜ್ಯ ಸರ್ಕಾರದ ಬೊಕ್ಕಸ ಬರಿದಾಗಿ ಕೇಂದ್ರದತ್ತ ಕೈಚಾಚಿದಾಗ ಕೂಡ ಈ ಸಂಸದರು ರಾಜ್ಯದ ಪರ ದನಿ ಎತ್ತಿರಲಿಲ್ಲ. ರಾಜ್ಯದ ಒಬ್ಬ ಸಂಸದನಾಗಿ ಜನರ ಸಂಕಷ್ಟ ಅರಿತು, ತಮ್ಮದೇ ಬಿಜೆಪಿ ಸರ್ಕಾರದ ಮುಂದೆ, ತಾವೇ ಹಾಡಿಹೊಗಳು ಗುಣಗಾನ ಮಾಡುವ ಪ್ರಧಾನಿ ಮೋದಿಯವರ ಮುಂದೆ ವಾಸ್ತವಾಂಶಗಳನ್ನು ಇಟ್ಟು, ಬಂದರೆ ಹೋದರೆ ಹಿಂದೆ ಮುಂದೆ ಬಾಲಬಡುಕತನ ಪ್ರದರ್ಶಿಸುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪರಿಸ್ಥಿತಿ ಅರುಹಿ ಹೆಚ್ಚಿನ ನೆರವು ಕೇಳುವ ಬದಲು ಈ ಸಂಸದ ಮಹಾಶಯ, ಕನ್ನಡಿಗರಿಗೆ ಕೇಂದ್ರದ ಅನುದಾನ ನೀಡುವುದು ಬೇಡ ಎಂಬ ಹೇಳಿಕೆ ನೀಡಿದ್ದರು!

ಕನ್ನಡ ನುಡಿ, ಕನ್ನಡ ಭಾಷೆ, ಕನ್ನಡ ಧ್ವಜ, ಕನ್ನಡ ನೆಲ-ಜಲದ ವಿಷಯದಲ್ಲಿ ಮಾತ್ರವಲ್ಲ; ಕನ್ನಡಿಗರ ವಿಷಯದಲ್ಲಿ ಕೂಡ ಸದಾ ಕನ್ನಡ ವಿರೋಧಿ ನಿಲುವು ಮತ್ತು ಹೇಳಿಕೆಗಳ ಮೂಲಕ ಹೆಸರಾಗಿರುವ ಈ ಸಂಸದರು, ಕನ್ನಡಿಗರನ್ನು ಮತ್ತು ಕನ್ನಡ ಭಾಷೆಯನ್ನು ಎಷ್ಟು ಲಘುವಾಗಿ ಪರಿಗಣಿಸಿದ್ದಾರೆ ಎಂಬುದನ್ನು ಇದೀಗ ಮತ್ತೊಂದು ನಿದರ್ಶನ ಸಿಕ್ಕಿದ್ದು, ಕನ್ನಡದ ಬದಲು, ತಮಿಳಿನಲ್ಲಿ ಅಣ್ಣಾ ಮಲೈಗೆ ಶುಭಾಶಯ ಕೋರಿ ತಮ್ಮ ತಮಿಳು ಪ್ರೀತಿ ಮೆರೆದಿದ್ದಾರೆ!

ಕನ್ನಡಿಗರ ಔದಾರ್ಯ ಮತ್ತು ಸಹನೆಯನ್ನು ಬಲಹೀನತೆ ಎಂದು ಕನ್ನಡಿಗರ ಮೇಲೆ ಪದೇಪದೆ ಸವಾರಿ ಮಾಡುವ ಬಿಜೆಪಿಯ ದಾಷ್ಟ್ರ್ಯಕ್ಕೆ ಸಂಸದ ತೇಜಸ್ವಿ ಸೂರ್ಯ ಒಂದು ಮುಖವಾಣಿಯಂತೆ ಕೆಲಸ ಮಾಡುತ್ತಿದ್ದು, ಏಕ ರಾಷ್ಟ್ರ, ಏಕ ಭಾಷೆ, ಏಕ ಧರ್ಮ, ಏಕ ಸಂಸ್ಕೃತಿ ಎಂಬ ಆ ಪಕ್ಷದ ಸಿದ್ಧಾಂತವನ್ನು ಈ ಸಂಸದರು ಹೀಗೆ ಪರೋಕ್ಷವಾಗಿ ಕನ್ನಡಿಗರ ಮೇಲೆ ಹೇರತೊಡಗಿದ್ದಾರೆ. ಕನ್ನಡ ಭಾಷೆ ಮತ್ತು ಕನ್ನಡಿಗರ ಮೇಲಿನ ವ್ಯವಸ್ಥಿತ ದಾಳಿಯ ಒಂದು ತಂತ್ರ ಇದಾಗಿದ್ದು, ಇದನ್ನು ಕನ್ನಡಿಗರು ಲಘುವಾಗಿ ಪರಿಗಣಿಸಬಾರದು ಎಂಬ ಆಕ್ರೋಶ ಜಾಲತಾಣದಲ್ಲಿ ವ್ಯಕ್ತವಾಗಿದೆ!

Click here to follow us on Facebook , Twitter, YouTube, Telegram

Pratidhvani
www.pratidhvani.com