ಲಂಗು ಲಗಾಮಿಲ್ಲದ ಖಾಸಗಿ ಆಸ್ಪತ್ರೆಗಳ ನೆಗೆತ ಸಾಮಾನ್ಯ ಜನರ ಮೇಲೆ
ರಾಜ್ಯ

ಲಂಗು ಲಗಾಮಿಲ್ಲದ ಖಾಸಗಿ ಆಸ್ಪತ್ರೆಗಳ ನೆಗೆತ ಸಾಮಾನ್ಯ ಜನರ ಮೇಲೆ

ಅಂದಾಜು 40 ದಿನಗಳ ಕಾಲ ಚಿಕಿತ್ಸೆ ನಡೆದ ಬಳಿಕ ಜಿತೇಂದ್ರ ಪ್ರಸಾದ್‌ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದರು. ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತರಾಗಿದ್ದಾರೆ. ಆ ವೇಳೆ ಜಿತೇಂದ್ರ ಪ್ರಸಾದ್‌ ಪೋಷಕರು ಕಟ್ಟಿರುವ ಆಸ್ಪತ್ರೆ ಬಿಲ್ ಬರೋಬ್ಬರಿ 21 ಲಕ್ಷ ರೂಪಾಯಿ ಆಗಿತ್ತು.

ಕೃಷ್ಣಮಣಿ

ರಾಜ್ಯದಲ್ಲಿ ಕರೋನಾ ಸೋಂಕು ಹೆಚ್ಚಳವಾಗುತ್ತಿದ್ದ ಹಾಗೆ ವೈದ್ಯಕೀಯ ಸೌಲಭ್ಯ ಒದಗಿಸಲು ಸಾಧ್ಯವಾಗದೆ ಕಂಗೆಟ್ಟಿದ್ದ ರಾಜ್ಯ ಸರ್ಕಾರಕ್ಕೆ ಕಾಣಿಸಿದ್ದು ಖಾಸಗಿ ಆಸ್ಪತ್ರೆ ಎಂಬ ದಿವ್ಯೌಷಧ. ಸರ್ಕಾರದ ಸಮಸ್ಯೆಗೆ ಅಮೃತದಂತೆ ಕಂಡ ಖಾಸಗಿ ಆಸ್ಪತ್ರೆಗಳು, ಕರೋನಾ ಪೀಡಿತರಿಗೆ ಹಾಗು ಕರೋನಾ ಸೋಂಕು ಇಲ್ಲದವರಿಗೆ ಯಮನಂತೆ ಕಾಡುವುದಕ್ಕೆ ಶುರುಮಾಡಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೆಡ್‌ ಸಿಗದೆ ಎದುರಾಗಿದ್ದ ಸಮಸ್ಯೆಯನ್ನು ಖಾಸಗಿ ಆಸ್ಪತ್ರೆಗಳ ಮೂಲಕ ಸರಿ ಮಾಡಿಕೊಳ್ಳಲಾಗಿತ್ತು. ಆದರೆ, ಅದಾದ ಬಳಿಕ ಏನೇನು ಆಗುತ್ತಿದೆ ಎನ್ನುವ ಅರಿವು ಮಾತ್ರ ಸರ್ಕಾರದ ಚಿಂತನೆಯಲ್ಲಿ ಇಲ್ಲ. ಲಂಗು ಲಾಗಮು ಇಲ್ಲದ ಕುದುರೆಗಳು ರಥವನ್ನು ಎಳೆದುಕೊಂಡು ಹೋಗುವಂತೆ ಮನಸೋ ಇಚ್ಛೆ ಬಿಲ್‌ ಮಾಡುತ್ತಾ ಜನಸಾಮಾನ್ಯರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ.

ಕರೋನಾ ಸಂಕಷ್ಟದಲ್ಲಿ ಇಡೀ ನಾಡು ಸಿಲುಕಿರುವ ಈ ಕಾಲದಲ್ಲಿ ಖಾಸಗಿ ಆಸ್ಪತೆಯವರು ಸುಲಿಗೆ ಮಾಡಲು ನಿಂತಿದ್ದಾರೆ. 28 ವರ್ಷದ ಜಿತೇಂದ್ರ ಪ್ರಸಾದ್ ಎಂಬ ಯುವಕನಿಗೆ ಬೆಂಗಳೂರಿನ ಪಿಳ್ಳಣ್ಣ ಗಾರ್ಡನ್ ನಲ್ಲಿ ಜುಲೈ 9ರಂದು ಅಪಘಾತವಾಗಿತ್ತು. ಸಣ್ಣ ಪ್ರಮಾಣದಲ್ಲಿ ತಲೆಗೆ ಪೆಟ್ಟಾಗಿದ್ದರಿಂದ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಪ್ರಥಮ ಚಿಕಿತ್ಸೆ ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಲ್ಯಾಣ ನಗರದ “ಸ್ಪೆಷಲಿಸ್ಟ್ ಹೆಲ್ತ್‌ ಸಿಸ್ಟಮ್‌” ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಕರೋನಾ ತಪಾಸಣೆಗೆ ಸೂಚಿಸಿದ್ದರು. ಪರೀಕ್ಷೆ ಮಾಡಿಸಿದಾಗ ಕೋವಿಡ್‌ 19 ನೆಗೆಟಿವ್ ಬಂದಿತ್ತು. ಆ ಬಳಿಕವೇ ಪೆಟ್ಟಾದ ತಲೆಗೆ ಚಿಕಿತ್ಸೆ ಕೊಡಲಾಗಿತ್ತು.

ಯುವಕ ಜಿತೇಂದ್ರ ಪ್ರಸಾದ್‌ ಪೋಷಕರ ಬಳಿ ಆಸ್ಪತ್ರೆಯ ಬಿಲ್‌ ಪಾವತಿ ಮಾಡಲು ಶಕ್ತಿ ಇದೆ ಎನ್ನುವುದು ಗೊತ್ತಾದ ಬಳಿಕ ಅದನ್ನೇ ಬಂಡವಾಳ ಮಾಡಿಕೊಂಡ ಸ್ಪೆಷಲಿಸ್ಟ್ ಆಸ್ಪತ್ರೆಯವರು, ದಿನದಿಂದ ದಿನಕ್ಕೆ ಬಿಲ್‌ ಹೆಚ್ಚಳ ಮಾಡುತ್ತಾ ಸಾಗಿದ್ದಾರೆ. ಪ್ರತಿದಿನ ಮೆಡಿಸಿನ್ ಗಾಗಿ 40 ಸಾವಿರ, ಆಸ್ಪತ್ರೆ ಚಿಕಿತ್ಸೆಗಾಗಿ 35 ರಿಂದ 40 ಸಾವಿರ ಹಣ ಕಟ್ಟಿಸಿಕೊಳ್ಳಲು ಮುಂದಾದರು. ಅಂದರೆ ಪ್ರತಿ ದಿನ 70 ರಿಂದ 80 ಸಾವಿರ ಬಿಲ್ ಮಾಡಲು ಶುರು ಮಾಡಿದ್ದರು. ಕೆಲವು ದಿನಗಳ ಬಳಿಕ ಜಿತೇಂದ್ರ ಪ್ರಸಾದ್ ಗೆ ಉಸಿರಾಟದ ಸಮಸ್ಯೆ ಆಗಿದೆ ಎಂದು ಹೇಳಿ ಐಸಿಯುವಿಗೆ ಶಿಫ್ಟ್‌ ಮಾಡಿ ವೆಂಟಿಲೇಟರ್ ಅಳವಡಿಸಿದ್ದರು. ಅಪಘಾತವಾಗಿ ತಲೆಗೆ ಬಿದ್ದಿದ್ದ ಪೆಟ್ಟು ವಾಸಿಯಾಗಿತ್ತು. ಆದರೂ ಮತ್ತೊಂದು ಕಾರಣ ಹೇಳಿದ ಆಸ್ಪತ್ರೆಯವರು, ಲಂಗ್ಸ್ ಇನ್ಫೆಕ್ಷನ್ ಆಗಿದೆ ಎಂದಿದ್ದರು.

ಹೀಗೆ ಸಾಗುತ್ತಾ ಬಂದ ಚಿಕಿತ್ಸಾ ಕ್ರಮ ಬರೋಬ್ಬರಿ ಅಂದಾಜು 40 ದಿನಗಳ ಕಾಲ ನಡೆಯಿತು. ಆ ಬಳಿಕ ಒಂದು ದಿನ ಜಿತೇಂದ್ರ ಪ್ರಸಾದ್‌ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದರು. ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೆ ಜಿತೇಂದ್ರ ಪ್ರಸಾದ್ ಮೃತರಾಗಿದ್ದಾರೆ. ಜಿತೇಂದ್ರ ಪ್ರಸಾದ್‌ ಪೋಷಕರು ಕಟ್ಟಿರುವ ಆಸ್ಪತ್ರೆ ಬಿಲ್ ಬರೋಬ್ಬರಿ 21 ಲಕ್ಷ ರೂಪಾಯಿ ಆಗಿತ್ತು. ಇಷ್ಟೊಂದು ಹಣ ಕಟ್ಟಿದ ಮೇಲೂ ಮಗ ಬದುಕಲಿಲ್ಲ ಎನ್ನುವ ಆಕ್ರೋಶ ಕುಟುಂಬಸ್ಥರಲ್ಲಿತ್ತು. ಇದನ್ನು ಅರಿತ ಹಾಸ್ಪಿಟಲ್‌ ಆಡಳಿತ ಮಂಡಳಿ, ನಿಮ್ಮ ಮಗನಿಗೆ ಕೋವಿಡ್ 19 ಪಾಸಿಟಿವ್ ಬಂದಿದೆ, ಕೂಡಲೇ ಮೃತದೇಹ ತೆಗೆದುಕೊಂಡು ಹೋಗಿ, ಇಲ್ಲವಾದರೆ ಬಿಬಿಎಂಪಿ ಅಧಿಕಾರಿಗಳೇ ಬಂದು ನಿಮ್ಮ ಮಗನ ಮೃತದೇಹ ತೆಗೆದುಕೊಂಡು ಹೋಗುತ್ತಾರೆ. ಪೋಸ್ಟ್ ಮಾರ್ಟಮ್ ಮಾಡಬೇಕಾಗುತ್ತೆ. ಪೋಲಿಸ್ ಕಂಪ್ಲೆಂಟ್ ಕೂಡ ಆಗುತ್ತೆ ಎಂದು ಬೆದರಿಸಿದ್ದರು. ಇದೀಗ ಕುಟುಂಬಸ್ಥರು ಆಸ್ಪತ್ರೆಯ ವಂಚನೆ ವಿರುದ್ಧ ಸಿಡಿದೆದ್ದಿದ್ದಾರೆ.

ಉಡುಪಿಯಲ್ಲೂ ಖಾಸಗಿ ಆಸ್ಪತ್ರೆ ಮಣಿಪಾಲ ಕೆಎಂಸಿ ಆಸ್ಪತ್ರೆ ಶವ ಬದಲಾವಣೆ ಮಾಡಿ ಸುದ್ದಿಯಾಗಿತ್ತು. ಕಾರ್ಕಳದ ವ್ಯಕ್ತಿಯ ದೇಹವನ್ನು ಕುಂದಾಪುರಕ್ಕೆ ಕಳುಹಿಸಿಕೊಡಲಾಗಿತ್ತು. ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ ಮಣಿಪಾಲ ಕೆಎಂಸಿ ಆಸ್ಪತ್ರೆ. ಕರೋನಾ ಸೋಂಕು ಬಂದಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದ ಕಾರ್ಕಳ ತಾಲೂಕು ಅಜೆಕಾರು ಮೂಲದ ಬಾಲಕೃಷ್ಣ ಶೆಟ್ಟಿ ಮೃತದೇಹವನ್ನು ಕುಟುಂಬಸ್ಥರಿಗೆ ನೀಡದೆ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದಾರೆ. ಉಡುಪಿಯ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೋನಾ ಸೋಂಕಿಗೆ ತುತ್ತಾಗಿದ್ದ ವಿಜಯ ಬ್ಯಾಂಕ್ ನ ನಿವೃತ್ತ ಡಿಜಿಎಂ ಬಾಲಕೃಷ್ಣ ಶೆಟ್ಟಿ ದಾಖಲಾಗಿದ್ದರು. ಕಫದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕೃಷ್ಣ ಶೆಟ್ಟಿ ಅವರು ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದರು. ಆದರೆ ಬಾಲಕೃಷ್ಣ ಶೆಟ್ಟಿ ಕುಟುಂಬಸ್ಥರು ಬರುವ ಮೊದಲೇ ಸ್ವಯಂ ಸೇವಕರಿಂದ ಅಂತ್ಯ ಸಂಸ್ಕಾರ ಮಾಡಿಸಿ ಎಡವಟ್ಟು ಮಾಡಿಬಿಟ್ಟಿದೆ. ಮಣಿಪಾಲ ಶವಾಗಾರದ ಎದುರು ಅಂತ್ಯ ಸಂಸ್ಕಾರ ನಡೆಸಲು ಬಂದ ಕುಟುಂಬಸ್ಥರು ಕಣ್ಣೀರು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.

ಇದೆಲ್ಲಾ ಗಮನಿಸುವಾಗ, ಖಾಸಗಿ ಆಸ್ಪತ್ರೆಗಳು ಕೋವಿಡ್‌ ಹೆಸರು ಹೇಳಿಕೊಂಡು ಲೂಟಿ ಮಾಡುತ್ತಿವೆಯಾ ಎನ್ನುವ ಅನುಮಾನ ಮೂಡಿಸುತ್ತಿದೆ. ಒಂದು ವೇಳೆ ಖಾಸಗಿ ಆಸ್ಪತ್ರೆಗಳು ಕೋವಿಡ್‌ 19 ರೋಗಿಗಳಿಗೆ ಇಂತಿಷ್ಟೇ ಬಿಲ್‌ ಮಾಡಬೇಕು ಎಂದು ನಿಯಮವಿದೆ. ಆದರೆ ಬೇರೆ ಯಾವುದೋ ಕಾಯಿಲೆಗೆ ಚಿಕಿತ್ಸೆ ದಾಖಲಾಗಿದ್ದಾಗ ಕರೋನಾ ಎಂದು ಹೇಳಿ ಬಿಲ್‌ ಮಾಡಲು ಯಾವ ಮಿತಿ ಇರುವುದಿಲ್ಲ. ಒಟ್ಟಾರೆ ಲಂಗು ಲಗಾಮು ಇಲ್ಲದ ಕುದುರೆಯಂತೆ ಸಾಗುತ್ತಿರುವ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣ ಮಾಡಲು ಸರ್ಕಾರ ಎಡವುತ್ತಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com