BS ವಿಜಯೇಂದ್ರ ವಿರುದ್ಧ ಹೈಕಮಾಂಡ್‌ಗೆ ದೂರು ಕೊಟ್ಟವರು ಯಾರು..?
ರಾಜ್ಯ

BS ವಿಜಯೇಂದ್ರ ವಿರುದ್ಧ ಹೈಕಮಾಂಡ್‌ಗೆ ದೂರು ಕೊಟ್ಟವರು ಯಾರು..?

ರಾಜ್ಯದಲ್ಲಿ ʻಸಿಎಂ - ಸೂಪರ್ ಸಿಎಂʼ ಇದ್ದಾರೆ. ಅದೇ ರೀತಿ ದೇಶದಲ್ಲಿ ʻಜಿ.ಎಸ್.ಟಿ = ವಿ.ಎಸ್.ಟಿʼ ಅಂದರೆ ವಿಜಯೇಂದ್ರ ಸರ್ವೀಸ್‌ ಟ್ಯಾಕ್ಸ್‌ ಕೊಡಬೇಕು ಎಂದು ಟೀಕಿಸಿದ್ದಾರೆ. ಸೂಪರ್ ಸಿಎಂ ವಿಜಯೇಂದ್ರ ಬೇನಾಮಿ ಸಂಪತ್ತನ್ನು ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಕೃಷ್ಣಮಣಿ

ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಆಪರೇಷನ್‌ ಕಮಲ ಮಾಡುವ ಮೂಲಕ 2019ರ ಜುಲೈ ಅಂತ್ಯದ ವೇಳೆ ಅಧಿಕಾರ ಹಿಡಿದರು. ಅಲ್ಲಿಂದ ಇಲ್ಲೀವರೆಗೂ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಸಾಕಷ್ಟು ಬಿಜೆಪಿ ನಾಯಕರು ಕತ್ತಿ ಮಸೆಯುತ್ತಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಿಎಂ ಬಿ.ಎಸ್‌ ಯಡಿಯೂರಪ್ಪ ಕೆಲಸ ಕಾರ್ಯಗಳನ್ನು ಬಿ.ವೈ ವಿಜಯೇಂದ್ರ ನೋಡಿಕೊಳ್ಳುತ್ತಿದ್ದರು. ಜೊತೆಗೆ ವರ್ಗಾಣೆಯಲ್ಲೂ ವಿಜಯೇಂದ್ರ ಮೂಗು ತೂರಿಸುತ್ತಿದ್ದಾರೆ ಎನ್ನುವ ಆರೋಪ ಜೋರಾಗಿತ್ತು. ಹೈಕಮಾಂಡ್‌ ಗೂ ಈ ಬಗ್ಗೆ ಮಾಹಿತಿ ಕೊಡಲಾಗಿತ್ತು. ಆ ನಂತರ ವಿಜಯೇಂದ್ರ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ದಿನನಿತ್ಯದ ಕಾರ್ಯ ಕಲಾಪದಿಂದ ದೂರ ಉಳಿದರೂ ಪರೋಕ್ಷವಾಗಿ ಸರ್ಕಾರದ ಮೇಲೆ ಹಿಡಿತ ಸಾಧಿಸಿದ್ದಾರೆ ಎನ್ನುವುದು ಸುಳ್ಳು ಆರೋಪವೇನಲ್ಲ. ಅದನ್ನು ಬಿಜೆಪಿ ಹೈಕಮಾಂಡ್‌ಗೆ ತಲುಪಿಸಿದ್ದಾರೆ ಎನ್ನುವುದು ಕಾಂಗ್ರೆಸ್‌ ನಾಯಕರ ಆರೋಪ.

ಮೈಸೂರಿನ ಕಾಂಗ್ರೆಸ್‌ ಮುಖಂಡರು ಬುಧವಾರ ಪತ್ರಿಕಾಗೋಷ್ಠಿ ನಡೆಸಿ ವಿಜಯೇಂದ್ರ ವಿರುದ್ಧ ಆರೋಪಗಳು ಹೊರಿಸಿದ್ದಾರೆ. ಕಾಂಗ್ರೆಸ್ ವಕ್ತಾರ ಎಂ. ‌ಲಕ್ಷ್ಮಣ್ ಮಾತನಾಡಿ, ವಿಜಯೇಂದ್ರ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪರ್ಯಾಯ ಸರಕಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಪತ್ರವನ್ನು ಪ್ರದರ್ಶನ ಮಾಡಿದ್ದಾರೆ. ವಿಜಯೇಂದ್ರ ಬರೋಬ್ಬರಿ 31 ಜನರ ಕೂಟವನ್ನು ರಚನೆ ಮಾಡಿಕೊಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಸಿಎಂ ಪುತ್ರ ಬಿ.ವೈ ವಿಜಯೇಂದ್ರ 5 ಸಾವಿರ ಕೋಟಿ ಹಣವನ್ನು ಸಂಗ್ರಹ ಮಾಡಿದ್ದಾರೆ ಎಂದು ಬಿಜೆಪಿ ಶಾಸಕರೇ ಪತ್ರ ಬರೆದು ಹೈಕಮಾಂಡ್‌ ಗೆ ದೂರಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಎಂ ಲಕ್ಷ್ಮಣ್‌, ಬಿಜೆಪಿ ಶಾಸಕರು ಬರೆದಿದ್ದಾರೆ ಎನ್ನಲಾದ ಪತ್ರವನ್ನು ಬಿಡುಗಡೆ ಮಾಡಿದ್ದು, ಮೈಸೂರಿನ ಬಿಜೆಪಿ ಶಾಸಕರೇ ಸಹಿ ಮಾಡಿರೋ ಪತ್ರ ಇದು ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಿಜೆಪಿ ಶಾಸಕರೇ ಬರೆದಿದ್ದಾರೆ ಎನ್ನುವ ಪತ್ರ ಬಿಡುಗಡೆ ಬಳಿಕ ಮಾತನಾಡಿರುವ ಎಂ. ಲಕ್ಷ್ಮಣ್‌, ವಿಜಯೇಂದ್ರ ಕುರಿತು ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಶಾಸಕರೇ ಹೈಕಮಾಂಡ್ ಗೆ ಬರೆದಿದ್ದಾರೆ ಎನ್ನಲಾದ ಪತ್ರ ಬಿಡುಗಡೆ ಮಾಡಿದ್ದು ಮಾತ್ರವಲ್ಲದೆ, ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ಆಡಿಯೋ ಕ್ಲೀಪಿಂಗ್, ವೀಡಿಯೋ ಕ್ಲೀಪಿಂಗ್ ಗಳನ್ನು ಕ್ರೂಢೀಕರಿಸಿದ್ದೇವೆ. ಸೆಪ್ಟೆಂಬರ್‌ 2ನೇ ವಾರ ಅಥವಾ 3ನೇ ವಾರ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಡುಗಡೆ ಮಾಡುತ್ತೀವಿ ಎಂದಿದ್ದಾರೆ. ರಾಜ್ಯದಲ್ಲಿ ʻಸಿಎಂ - ಸೂಪರ್ ಸಿಎಂʼ ಇದ್ದಾರೆ. ಅದೇ ರೀತಿ ದೇಶದಲ್ಲಿ ʻಜಿ.ಎಸ್.ಟಿ = ವಿ.ಎಸ್.ಟಿʼ ಅಂದರೆ ವಿಜಯೇಂದ್ರ ಸರ್ವೀಸ್‌ ಟ್ಯಾಕ್ಸ್‌ ಕೊಡಬೇಕು ಎಂದು ಟೀಕಿಸಿದ್ದಾರೆ. ಸೂಪರ್ ಸಿಎಂ ವಿಜಯೇಂದ್ರ ಬೇನಾಮಿ ಸಂಪತ್ತನ್ನು ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಬಿಜೆಪಿ ಉಳಿಸಿ ಅಂತ ಬಿಜೆಪಿ ಹೈಕಮಾಂಡ್ ಗೆ ಬಿಜೆಪಿ ಶಾಸಕರು ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಜೊತೆಗೆ ಪ್ರತಿ ಇಲಾಖೆಗಳಿಗೆ ಉಸ್ತುವಾರಿಗಳನ್ನು‌ ಮಾಡಿಕೊಂಡು ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸೆಪ್ಟೆಂಬರ್‌ ಎರಡನೇ ವಾರದಲ್ಲಿ ಸಂಸತ್‌ ಅಧಿವೇಶನ ನಡೆಯುವ ಸಮಯದಲ್ಲಿ ದೆಹಲಿಯಲ್ಲೇ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ತುಂಬಾ ಸ್ಪಷ್ಟವಾಗಿ ಹೇಳಿದ್ದಾರೆ. ಕಾಂಗ್ರೆಸ್‌ ವಕ್ತಾರ ಎಂ ಲಕ್ಷ್ಮಣ್‌ ಅವರ ಆರೋಪಗಳು ಇಂದಿಗೆ ಸಾಬೀತಾಗದೇ ಇರಬಹುದು. ಆದರೆ ಅವರ ಮಾತುಗಳಲ್ಲಿ ಸ್ಪಷ್ಟತೆ ಇದ್ದು, ಸೆಪ್ಟೆಂಬರ್‌ ನಲ್ಲಿ ಬಿಜೆಪಿ ವಿರುದ್ಧ ಭ್ರಷ್ಟಚಾರದ ಬಾಂಬ್‌ ಸಿಡಿಯುವುದು ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿಬಂದಿವೆ.

ಮೂಕ ಅರ್ಜಿಗೂ ಸರ್ಕಾರ ಮಾನ್ಯತೆ ಕೊಡಬೇಕು..!

ಕಾಂಗ್ರೆಸ್‌ ವಕ್ತಾರ ಎಂ ಲಕ್ಷ್ಮಣ್‌ ಅವರು ಹೇಳುವ ಮಾತೆಂದರೆ ಯಾವುದೇ ಒಂದು ಮೂಕ ಅರ್ಜಿ ಬಂದರೂ ಆ ಬಗ್ಗೆ ತನಿಖೆ ಮಾಡಿ ಸತ್ಯಾಸತ್ಯತೆ ತಿಳಿಯಬೇಕಿರುವುದು ಸರ್ಕಾರದ ಧರ್ಮವಾಗಿದೆ. ಇದನ್ನು ಸ್ವತಃ ಸುಪ್ರೀಂಕೋರ್ಟ್‌ ಕೂಡ ಹೇಳಿದೆ. ನಾವು ಬಿಡುಗಡೆ ಮಾಡಿರುವ ಪತ್ರದಲ್ಲಿ ಏಳು ಮಂದಿ ಶಾಸಕರು ಸಹಿ ಮಾಡಿದ್ದಾರೆ. ಈ ಪತ್ರ ಯಾರು ಬರೆದಿದ್ದು..? ಏನಿದರ ಮರ್ಮ ಎನ್ನುವುದನ್ನಾದರೂ ರಾಜ್ಯ ಸರ್ಕಾರ ಪತ್ತೆ ಮಾಡುವ ಕೆಲಸ ಮಾಡಬೇಕಲ್ಲವೇ..? ಎಂದು ಪ್ರಶ್ನೆ ಮಾಡುತ್ತಾರೆ. ನಾವು ವಿಡಿಯೋ, ಆಡಿಯೋ ಬಿಡುಗಡೆ ಮಾಡುತ್ತೇವೆ. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಲ್ಲ ಎಂದಿದ್ದಾರೆ.

ಕಾಂಗ್ರೆಸ್‌ ಆರೋಪಕ್ಕೆ ಟ್ವಿಟ್ಟರ್‌ ಮೂಲಕ ತಿರುಗೇಟು..!

ಕಾಂಗ್ರೆಸ್‌ ವಕ್ತಾರ ಎಂ ಲಕ್ಷ್ಮಣ್‌ ಮಾಡಿರುವ ಆರೋಪದ ಬಗ್ಗೆ ಸಿಎಂ ಪುತ್ರ ವಿಜಯೇಂದ್ರ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕಟ್ಟು ಕಥೆ ಕಟ್ಟುವುದರಲ್ಲಿ, ಹಸೀ ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಸಿಗರು ಎತ್ತಿದ ಕೈ, ನನ್ನನ್ನು ಗುರಿಯಾಗಿಸಿಕೊಂಡು ಮೈಸೂರಿನಲ್ಲಿ ಇಂದು ಇಂಥದ್ದೇ ಒಂದು ಹಾಸ್ಯಾಸ್ಪದವಾದ ಜೊಳ್ಳು ಆರೋಪವನ್ನು ಮಾಡಲಾಗಿದೆ. ದುರುದ್ದೇಶಪೂರಿತ, ರಾಜಕೀಯ ಪಿತೂರಿಯ ಆರೋಪಗಳಿಗೆ ನಾನೆಂದೂ ಬೆನ್ನು ತೋರುವುದಿಲ್ಲ. ಅಪಪ್ರಚಾರಗಳು ನನ್ನ ನೈತಿಕ ಸ್ಥೈರ್ಯವನ್ನು ಕುಂದಿಸದು ಎಂದಿದ್ದಾರೆ.

ಬಿಜೆಪಿ ಹೈಕಮಾಂಡ್‌ ಗೆ ಪತ್ರ ಬರೆದಿರೋದು ಸತ್ಯವೇ..?

ಸಿಎಂ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಸಿಡಿದೆದ್ದ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲಲ್ಲೇ ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಬಿ.ಎಸ್.‌ ಯಡಿಯೂರಪ್ಪ ವಿರುದ್ಧ ನೇರವಾಗಿಯೇ ಬಂಡಾಯ ಸಾರಿದ್ದಾರೆ. ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಹೈಕಮಾಂಡ್‌ ನಾಯಕರನ್ನೂ ಭೇಟಿ ಮಾಡಿದ್ದಾರೆ. ಆದರೆ ವಿಜಯೇಂದ್ರ ಬಗ್ಗೆ ಪತ್ರ ಬರೆದಿದ್ದು ಯಾರು. ಅದೂ ಅಲ್ಲದೆ ವಿಜಯೇಂದ್ರ ಟೀಂನಲ್ಲೀ ಕೆಲಸ ಮಾಡುವವರ ಸಂಪೂರ್ಣ ವಿವರದ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಯಾರು..? ಕಾಂಗ್ರೆಸ್‌ ನಾಯಕರಿಗೆ ಸಾಕ್ಷ್ಯಗಳು ಸಿಗುವಂತೆ ವ್ಯವಸ್ಥೆ ಮಾಡುತ್ತಿರುವವರು ಯಾರು ಎನ್ನುವುದನ್ನು ಹುಡುಕುವುದು ಸರ್ಕಾರಕ್ಕೆ ಸವಾಲಾಗಿದೆ. ಅದರಲ್ಲೂ ಸೂಪರ್‌ ಸಿಎಂ ಎಂದಿರುವ ವಿಜಯೇಂದ್ರ ಅವರಿಗೆ ಕೆಂಗಣ್ಣು ಕಾರುವಂತೆ ಮಾಡಲಾಗಿದೆ ಎನ್ನುವುದು ಮಾತ್ರ ಸತ್ಯ.

BS ವಿಜಯೇಂದ್ರ ವಿರುದ್ಧ ಹೈಕಮಾಂಡ್‌ಗೆ ದೂರು ಕೊಟ್ಟವರು ಯಾರು..?

Click here to follow us on Facebook , Twitter, YouTube, Telegram

Pratidhvani
www.pratidhvani.com