ಕೋವಿಡ್‌19 ನಿರ್ಬಂಧ: ರಾಜ್ಯ ಸರ್ಕಾರದಿಂದ ಬಹುಮುಖ್ಯ ಬದಲಾವಣೆ..!
ರಾಜ್ಯ

ಕೋವಿಡ್‌19 ನಿರ್ಬಂಧ: ರಾಜ್ಯ ಸರ್ಕಾರದಿಂದ ಬಹುಮುಖ್ಯ ಬದಲಾವಣೆ..!

ಸರ್ಕಾರ ತನ್ನ ಜವಾಬ್ದಾರಿಯನ್ನು ನಿಧಾನವಾಗಿ ಕಳಚುತ್ತಾ ಬಂದಿತ್ತು. ಆದರೆ ಇದೀಗ ಅಂತಿಮ ಹಂತಕ್ಕೆ ಬಂದಿದ್ದು, ಸೆಪ್ಟೆಂಬರ್‌1 ರಿಂದ ನಾಲ್ಕನೇ ಹಂತದ ಅನ್‌ಲಾಕ್‌ ಆಗುತ್ತಿದ್ದು, ಬಹುತೇಕ ಎಲ್ಲಾ ವ್ಯವಹಾರ ವಹಿವಾಟು ಮಾಮೂಲಿಯಂತೆ ನಡೆಯುತ್ತದೆ.

ಕೃಷ್ಣಮಣಿ

ರಾಜ್ಯ ಸರ್ಕಾರ ಕರೋನಾ ನಿಯಂತ್ರಣ ಮಾಡಿತೋ ಬಿಟ್ಟಿತೋ, ಎನ್ನುವುದು ಬೇರೆ ವಿಚಾರ. ಆದರೆ, ಒಂದೊಂದೇ ನಿರ್ಬಂಧಗಳನ್ನು ತೆರವು ಮಾಡುತ್ತಾ ಬಂದಿರುವ ರಾಜ್ಯ ಸರ್ಕಾರ, ಇಂದಿನಿಂದ ಕೋವಿಡ್‌19 ವಿಚಾರವಾಗಿ ರೂಪಿಸಿದ್ದ ಮಾರ್ಗಸೂಚಿಗಳಲ್ಲಿ ಸೂಚಿಸಿದ್ದ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಿದೆ. ಕರೋನಾ ಸೋಂಕು ಬಂದಿದೆ ಎಂದು ರೋಗಿಗಳು ಕಾಲ್‌ಮಾಡಿದ ತಕ್ಷಣ ನಿಮ್ಮ ಮನೆ ಬಳಿಗೆ ಬರುತ್ತಿದ್ದ ಆರೋಗ್ಯ ಅಧಿಕಾರಿಗಳು ಇನ್ಮುಂದೆ ಬರುವುದಿಲ್ಲ. ನಿಮ್ಮ ಮನೆ ಮುಂದೆ ಕರೋನಾ ಪೇಷೆಂಟ್‌ ಇದ್ದಾರೆ ಎಂದು ಸ್ಟಿಕ್ಕರ್‌ ಅಂಟಿಸುವುದೂ ಇಲ್ಲ. ಅಂದರೆ ಕರೋನಾ ಒಂದು ಸಾಂಕ್ರಾಮಿಕ ಕಾಯಿಲೆ ನಿಮ್ಮ ಎಚ್ಚರದಲ್ಲಿ ನೀವು ಇರಿ ಎನ್ನುವುದಷ್ಟೇ ಸರ್ಕಾರದ ಕೆಲಸ.

ಅಂತಾರಾಜ್ಯ ಸಂಚಾರದ ಮೇಲೆ ಇರಲ್ಲ ನಿಗಾ..!

ಅಂತಾರಾಜ್ಯದಿಂದ ಆಗಮಿಸುವ ಪ್ರಯಾಣಿಕರಿಗೆ ಇಲ್ಲೀವರೆಗೂ ಹೋಂ ಕ್ವಾರಂಟೈನ್‌ ಎಂದು ಸೀಲ್‌ ಹಾಕಲಾಗ್ತಿತ್ತು. ಮೊದಲ 14 ದಿನಗಳ ಕಾಲ, ಆ ಬಳಿಕ 7 ದಿನಗಳ ಕಾಲ ಮನೆಯಲ್ಲಿ ಕ್ವಾರಂಟೈನ್‌ ಆಗುವುದು ಕಡ್ಡಾಯವಾಗಿತ್ತು. ಆದರೆ ಇನ್ಮುಂದೆ ಆ ನಿಯಮಗಳು ಇರುವುದಿಲ್ಲ. ಅಂದರೆ ಯಾವುದೇ ರಾಜ್ಯದ ವ್ಯಕ್ತಿ ಕರ್ನಾಟಕಕ್ಕೆ ಬರಬಹುದು, ಹೋಗಬಹುದು. ಯಾವುದೇ ತಪಾಸಣೆಯೂ ಇಲ್ಲ, ಕ್ವಾರಂಟೈನ್‌ ಕೂಡ ಇಲ್ಲ. ಗಡಿಯಲ್ಲಿ ತಪಾಸಣೆಯನ್ನೂ ಮಾಡಲ್ಲ, ಸೇವಾ ಸಿಂಧುವಿನಲ್ಲಿ ಪಾಸ್‌ ಪಡೆಯಬೇಕಾದ ಅವಶ್ಯಕತೆಯೂ ಇನ್ಮುಂದೆ ಇರುವುದಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ ಕರೋನಾ ದೇಶಕ್ಕೆ ಕಾಲಿಡುವ ಮೊದಲು ನಾವು ಹೇಗಿದ್ದೆವೋ ಹಾಗೆ ಇರಬಹುದು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸೋಮವಾರ ರಾಜ್ಯದಲ್ಲಿ ಹೊಸದಾಗಿ ಕರೋನಾ ಸೋಂಕು 5,851 ಜನರಲ್ಲಿ ಕಾಣಿಸಿಕೊಂಡಿದೆ. ರಾಜ್ಯ ರಾಜಧಾನಿ ಬೆಂಗಳೂರು ಒಂದರಲ್ಲೇ 1,918 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದುವರಗೆ ರಾಜ್ಯದಲ್ಲಿ 2,83,665 ಜನರಲ್ಲಿ ಕರೋನಾ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂದು 8,061 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರಲ್ಲಿ 2,034 ಜನ ಬೆಂಗಳೂರಿನವರಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಒಟ್ಟು 1,97,625 ಜನ ಕರೋನಾ ಸೋಂಖಿನ ವಿರುದ್ಧ ಹೋರಾಟ ಮಾಡಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ದುಃಖದ ವಿಚಾರ ಎಂದರೆ ಸೋಮವಾರ ಒಂದೇ ದಿನ ರಾಜ್ಯದಲ್ಲಿ 130 ಜನರು ಕೋವಿಡ್ – 19 ಸೋಂಕಿಗೆ ಬಲಿಯಾಗಿದ್ದಾರೆ. ಅದರಲ್ಲಿ 26 ಜನರು ಬೆಂಗಳೂರಿನವರು ಎನ್ನುವುದು ಇನ್ನೂ ಗಂಭೀರವಾದ ವಿಚಾರ. ಉಳಿದವರು ವಿವಿಧ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ.

ಬೆಂಗಳೂರಿನ 250 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 406 ಜನರು ಕರೋನಾ ಸೋಂಕು ಉಲ್ಬಣಗೊಂಡು ಉಸಿರಾಟ ಸಮಸ್ಯೆ ಹೆಚ್ಚಾಗಿ ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ಕೊಟ್ಟಿದೆ ಆದರೂ ಅಂತಾರಾಜ್ಯ ಸಂಚಾರ ಮುಕ್ತ ಮಾಡಿ ಆದೇಶ ಮಾಡಿದೆ.

ಅಂತರರಾಜ್ಯ ಪ್ರಯಾಣಕ್ಕೆ ಹೇರಿಕೆ ಮಾಡಿದ್ದ ಯಾವುದೇ ನಿಯಮಗಳು ಇಂದಿನಿಂದ ಜಾರಿಯಲ್ಲಿ ಇರುವುದಿಲ್ಲ. ಸೋಂಕಿನ ಲಕ್ಷಗಳು ಇಲ್ಲದಿದ್ದರೆ, ಕ್ವಾರಂಟೈನ್‌ ಆಗುವ ಅವಶ್ಯಕತೆಯೂ ಇಲ್ಲ. ನಿಮ್ಮ ಕೆಲಸ ಕಾರ್ಯಗಳಲ್ಲಿ ನೀವು ತೊಡಗಿಕೊಳ್ಳಲು ನೀವು ಸರ್ವ ಸ್ವತಂತ್ರರು. ಒಂದು ವೇಳೆ ನಿಮ್ಮಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ ಆಪ್ತಮಿತ್ರ ಸಹಾಯವಾಣಿಯನ್ನು ಸಂಪರ್ಕಿಸಿ ಅಥವಾ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕ ಮಾಡಿ ಎಂದು ತಿಳಿಸಲಾಗಿದೆ. ಒಂದು ವೇಳೆ ನೀವು ಅಂತರ ರಾಜ್ಯದಿಂದ ಆಗಮಿಸುವಾಗಲೇ ನಿಮ್ಮಲ್ಲಿ ಕರೋನಾ ರೋಗ ಗುಣಲಕ್ಷಣಗಳು ಕಂಡು ಬಂದರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಿರಿ ಎಂದು ಸರ್ಕಾರ ಸಲಹೆ ನೀಡಿದೆ.

ಒಟ್ಟಾರೆ, ಸರ್ಕಾರ ತನ್ನ ಜವಾಬ್ದಾರಿಯನ್ನು ನಿಧಾನವಾಗಿ ಕಳಚುತ್ತಾ ಬಂದಿತ್ತು. ಆದರೆ ಇದೀಗ ಅಂತಿಮ ಹಂತಕ್ಕೆ ಬಂದಿದ್ದು, ಸೆಪ್ಟೆಂಬರ್‌1 ರಿಂದ ನಾಲ್ಕನೇ ಹಂತದ ಅನ್‌ಲಾಕ್‌ ಆಗುತ್ತಿದ್ದು, ಬಹುತೇಕ ಎಲ್ಲಾ ವ್ಯವಹಾರ ವಹಿವಾಟು ಮಾಮೂಲಿಯಂತೆ ನಡೆಯುತ್ತದೆ ಎನ್ನಲಾಗ್ತಿದೆ. ಅಂದರೆ ಅಂದಿನಿಂದ ಹೆಲ್ತ್‌ಬುಲೆಟಿನ್‌ ಬಿಡುಗಡೆ ಮಾಡುವುದು ಅನುಮಾನ. ಸಿನಿಮಾ ಥಿಯೇಟರ್‌ಗಳೂ ತೆರೆಯುತ್ತವೆ. ಈಗಾಗಲೇ ಸಾಮಾಜಿಕ ಅಂತರ ಕಣ್ಮರೆಯಾಗಿದ್ದು, ಯಥಾಸ್ಥಿತಿಯಂತೆ ಜನರನ್ನು ಕರೋನಾ ಕೂಪಕ್ಕೆ ತಳ್ಳಲು ಸರ್ಕಾರ ಸಿದ್ಧತೆ ನಡೆಸಿದೆ.

ಮಲೆರಿಯಾ, ಡೇಂಘೀ ಜ್ವರಂದಂತೆ ಕರೋನಾ ಕೂಡ ಒಂದು ಜ್ವರ. ಉಸಿರಾಟ ಸಮಸ್ಯೆ ಆದವರಿಗೆ ಐಸಿಯು ಚಿಕಿತ್ಸೆ ಇಲ್ಲದಿದ್ದರೆ ಸಾಮಾನ್ಯ ಚಿಕಿತ್ಸೆ. ಇದು ಸರ್ಕಾರದ ನಿರ್ಧಾರ. ಸೋಂಕಿಗೆ ಯಾವುದೇ ಮದ್ದಿಲ್ಲ, ಅತೀ ಶೀಘ್ರವಾಗಿ ಹರಡುತ್ತದೆ, ಆದರೂ ಸರ್ಕಾರ ಮಾತ್ರ ಜನರ ಆರೋಗ್ಯದ ಮೇಲೆ ನಿಗಾ ಇಡುವ ಕೆಲಸದಿಂದ ತನ್ನನ್ನು ತಾನೇ ಬಿಡುಗಡೆ ಮಾಡಿಕೊಂಡಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕಾಳಜಿ ಈ ಮೂಲಕ ಜನರಿಗೆ ಮನದಟ್ಟಾಗುತ್ತಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com