ರಾಜ್ಯ ಸರ್ಕಾರ ಕ್ವಾರಂಟೈನ್‌ನಲ್ಲಿದೆಯೇ?
ರಾಜ್ಯ

ರಾಜ್ಯ ಸರ್ಕಾರ ಕ್ವಾರಂಟೈನ್‌ನಲ್ಲಿದೆಯೇ?

ಕೋವಿಡ್ - 19 ಸಾಂಕ್ರಾಮಿಕ ಕಾಯಿಲೆ ಸಮಯದಲ್ಲಿ ಲೂಟಿ ಮಾಡಿ ವಿರೋಧ ಪಕ್ಷಗಳಿಗೆ ಆಹಾರವಾಗಿದ್ದ ರಾಜ್ಯ ಬಿಜೆಪಿ ಸರ್ಕಾರ, ಎಡವಟ್ಟು ಮೇಲೆ ಎಡವಟ್ಟು ಮಾಡಿಕೊಳ್ಳುತ್ತಿದೆ.

ಕೃಷ್ಣಮಣಿ

ಕೋವಿಡ್ - 19 ಸಾಂಕ್ರಾಮಿಕ ಕಾಯಿಲೆ ಸಮಯದಲ್ಲಿ ಲೂಟಿ ಮಾಡಿ ವಿರೋಧ ಪಕ್ಷಗಳಿಗೆ ಆಹಾರವಾಗಿದ್ದ ರಾಜ್ಯ ಬಿಜೆಪಿ ಸರ್ಕಾರ, ಎಡವಟ್ಟು ಮೇಲೆ ಎಡವಟ್ಟು ಮಾಡಿಕೊಳ್ಳುತ್ತಿದೆ. ಒಂದೊಂದು ಕಡೆ ಕೋವಿಡ್‌ ರೋಗಿಗಳಿಗೆ ಸೂಕ್ತ ಆಹಾರ ಸೇರಿದಂತೆ ಚಿಕಿತ್ಸೆ ಅಲಭ್ಯವಾಗಿದ್ದರೆ, ಇನ್ನೂ ಹಲವಾರು ಕಡೆಗಳಲ್ಲಿ ಬೇರೆ ಬೇರೆ ಅವಾಂತರ ಸೃಷ್ಟಿಸಿಕೊಂಡು ಸರ್ಕಾರಕ್ಕೇ ಕೋವಿಡ್ ಬಂದಿದೆಯೇನೋ ಎನ್ನುವ ಹಾಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಉಡುಪಿಯಲ್ಲಿ ಶವ ಅದಲು ಬದಲು..!

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋಟೇಶ್ವರ ಮೂಲದ ವ್ಯಕ್ತಿ ನ್ಯುಮೋನಿಯಾದಿಂದ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತ್ತು. ಕೋಟೇಶ್ವರ ನೇರಂಬಳ್ಳಿಯ ಗಂಗಾಧರ ಆಚಾರ್ಯ ಮೃತ ಶರೀರವವನ್ನು ಮನೆಯಂಗಳಕ್ಕೆ ತಂದಿಟ್ಟರು. ಮೃತ ವ್ಯಕ್ತಿಯ ಶವವನ್ನು ನೋಡುವುದಕ್ಕೆ ಅವಕಾಶವಿಲ್ಲ ಅಂತ್ಯಸಂಸ್ಕಾರದ ಜಾಗ ತೋರಿಸಿದರೆ, ಅಲ್ಲಿಗೆ ತೆಗೆದುಕೊಂಡು ಹೋಗಿ ಸಂಸ್ಕಾರ ಮಾಡೋಣ ಎಂದಿದಿದ್ದರು. ಆದರೂ ಪಟ್ಟು ಬಿಡದ ಕುಟುಂಬಸ್ಥರು, ನಾವೂ ಕೂಡ ಪಿಪಿಇ ಕಿಟ್‌ ಹಾಕಿಕೊಂಡಿದ್ದೇವೆ, ನಮಗೆ ನಮ್ಮ ತಂದೆಯನ್ನು ಅಂತಿಮ ಬಾರಿ ತೋರಿಸಲೇ ಬೇಕು ಎಂದು ಪಟ್ಟು ಹಿಡಿದಾಗ ಅನಿವಾರ್ಯವಾಗಿ ಶವದ ಚೀಲದ ಜಿಪ್‌ ತೆರೆದು ಮುಖ ತೋರಿಸಲಾಯ್ತು. ಆಗಲೇ ಬಯಲಾಗಿದ್ದು ಆರೋಗ್ಯ ಇಲಾಖೆಯ ಬೇಜವಾಬ್ದಾರಿಯ ಮುಖ.

ಶವ ಅದಲು ಬದಲು, ಕುಂದಾಪುರಕ್ಕೆ ಬಂದಿತ್ತು ಬೇರೆ ಶವ..!

ಉಡುಪಿ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಕುಂದಾಪುರದ ಕೋಟೇಶ್ವರ ಮೂಲದ ನೇರಂಬಳ್ಳಿಯ ಗಂಗಾಧರ ಆಚಾರ್ಯ ಅವರ ಶವದ ಬದಲಾಗಿ, ಕಾರ್ಕಳ ಮೂಲದ ಪ್ರಕಾಶ್ ಎಂಬುವವರ ಶವ ಕುಂದಾಪುರಕ್ಕೆ ರವಾನೆ ಮಾಡಲಾಗಿತ್ತು. ಅಂತ್ಯ ಸಂಸ್ಕಾರಕ್ಕೂ ಮುನ್ನ ಶವದ ಮುಖ ನೋಡಿದ ಕುಟುಂಬಸ್ಥರು, ಇವರು ನಮ್ಮವರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಷ್ಟು ದಿನಗಳ ಕಾಲ ನಮ್ಮ ತಂದೆಯನ್ನು ನೋಡುವುದಕ್ಕೂ ಬಿಡಲಿಲ್ಲ ಎಂದು ಅಳಲು ತೋಡಿಕೊಂಡರು. ವಿಷಯ ತಿಳಿಯುತ್ತಿದ್ದ ಹಾಗೆ ನೂರಾರು ಜನರು ಸ್ಥಳಕ್ಕೆ ಜಮಾಯಿಸಿ ಅಧಿಕಾರಿಗಳು ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಬಳಿಕ ವಾಪಸ್ ಶವವನ್ನು ಜಿಲ್ಲಾಸ್ಪತ್ರೆಗೆ ತಂದು ಅದಲು ಬದಲು ಆಗಿದ್ದ ಶವವನ್ನು ಸರಿಯಾಗಿ ನೋಡಿಕೊಂಡು ತೆಗೆದುಕೊಂಡು ಹೋದರು. ಆ ಬಳಿಕ ಅಂತ್ಯಕ್ರಿಯೆ ಮಾಡಲಾಯ್ತು.

ಕಳೆದ ವಾರ ಬೆಳಗಾವಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಕರೋನಾ ಸೋಂಕಿನಿಂದ ಸಾವನ್ನಪ್ಪಿರುವ ಶಂಕೆ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರಕ್ಕೂ ಯಾರೂ ಬಾರದೆ ಇದ್ದ ಕಾರಣ ಮಗನೊಬ್ಬ ಅಪ್ಪನ ಶವವನ್ನು ಸೈಕಲ್​ನಲ್ಲಿ ಇಟ್ಟು ಸಾಗಿದ್ದ ಘಟನೆ ಜರುಗಿತ್ತು. ಚೆನ್ನಮ್ಮನ ಕಿತ್ತೂರು ತಾಲೂಕಿನ M.K ಹುಬ್ಬಳ್ಳಿಯ ಗಾಂಧಿ ನಗರದ 2ನೇ ವಾರ್ಡ್​ನಲ್ಲಿ ನಡೆದ ಅಮಾನವೀಯ ಘಟನೆಗೆ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅನಾರೋಗ್ಯಗೊಂಡಿದ್ದ ಕಾರಣ ಆಸ್ಪತ್ರೆಗೆ ಹೋಗಿದ್ದ ವೃದ್ಧನಿಗೆ ಕರೋನಾ ಸೋಂಕಿನ ಲಕ್ಷಣ ಇದ್ದಿದ್ದರಿಂದ ಕೋವಿಡ್‌ ಪರೀಕ್ಷೆ ಮಾಡಿಸಲು ವೈದ್ಯರು ಸೂಚನೆ ಕೊಟ್ಟಿದ್ದರು. ಆದರೆ ಚಿಕಿತ್ಸೆ​ ಮಾಡಿಸಿಕೊಳ್ಳದೆ ಆ ವೃದ್ಧ ವಾಪಸ್ಸಾಗಿ ರಾತ್ರಿಯೇ ಸಾವನ್ನಪ್ಪಿದ್ದನು. ಸ್ಮಶಾನಕ್ಕೆ ಶವ ತೆಗೆದುಕೊಂಡು ಹೋಗಲು ಆಂಬ್ಯುಲೆನ್ಸ್​ ಕೊಡುವಂತೆ ಸ್ಥಳೀಯ ಆಸ್ಪತ್ರೆ ಸಿಬ್ಬಂದಿಗೆ ಮನವಿ ಮಾಡಿಕೊಂಡಿದ್ದರೂ ಆಂಬ್ಯುಲೆನ್ಸ್​ ನೀಡಲು ಸ್ಥಳೀಯ ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದರು. ಅಂತಿಮವಾಗಿ ಸಹಾಯಕ್ಕೆ ಯಾರೂ ಬಾರದೆ ಇದ್ದಾಗ ಸೈಕಲ್​ನಲ್ಲೇ ತಂದೆಯ ಶವಯಾತ್ರೆ ಮಾಡಿದ್ದ.

ಸುಮಾರು 1 ಕಿ.ಮೀ ಕ್ರಮಿಸಿದ ಬಳಿಕ ಅದೇ ವಾರ್ಡಿನ ಸದಸ್ಯ ಪುಟ್ಟಪ್ಪ ಪಟ್ಟಣ್ಣ ಶೆಟ್ಟಿ ನೆರವು ನೀಡಿದ್ದು, ತನ್ನ ಟಾಟಾ ಏಸ್​ ವಾಹನ ಕಳುಹಿಸಿಕೊಟ್ಟಿದ್ದರು. ಸುರಿವ ಮಳೆಯೊಳಗೆ ತಂದೆಯ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದ ಮಗ. ಬೆಳಗಾವಿಯಲ್ಲಿ ಈ ರೀತಿಯ ಘಟನೆ ಇದೇ ಮೊದಲೇನಲ್ಲ. ಇದಕ್ಕೂ ಮುನ್ನ, ಜೂನ್‌ ಮೊದಲ ವಾರದಲ್ಲಿ ಇದೇ ರೀತಿಯ ಮತ್ತೊಂದು ಘಟನೆ ಜರುಗಿತ್ತು. ಮಲಗಿದ್ದಾಗಲೇ ಸಾವನ್ನಪ್ಪಿದ್ದ ಓರ್ವ ವೃದ್ಧನಿಗೆ ಕರೋನಾ ಬಂದಿರಬಹುದು ಎನ್ನುವ ಭಯದಲ್ಲಿ ಅಂತ್ಯಸಂಸ್ಕಾರಕ್ಕೆ ಜನರಿಲ್ಲದೆ ನಾಲ್ಕು ಚಕ್ರದ ತಳ್ಳುವ ಗಾಡಿಯಲ್ಲಿ ಶವಯಾತ್ರೆ ಮಾಡಲಾಗಿತ್ತು

ಕಿತ್ತೂರಿನಲ್ಲಿ ಸೈಕಲ್ ನಲ್ಲಿ ಮೃತ ದೇಹ ಸಾಗಿಸಿದ ಘಟನೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಂಡನೆ ವ್ಯಕ್ತಪಡಿಸಿ, ʼಅಂತ್ಯಕ್ರಿಯೆಗೆ ಸೈಕಲ್ ನಲ್ಲಿ ಮೃತ ದೇಹ ಸಾಗಿಸಿದ್ದಾರೆ. ಬೆಳಗಾವಿಯ ಕಿತ್ತೂರಿನಲ್ಲಿ ಇಂತ ಘಟನೆ ನಡೆದಿದೆ. ಬಿ ಎಸ್. ಯಡಿಯೂರಪ್ಪನವರೇ ಎಲ್ಲಿದೆ ನಿಮ್ಮ ಸರ್ಕಾರ..? ಯಾಕೆ ಆ್ಯಂಬುಲೆನ್ಸ್ ಗಳೇ ಸಿಗ್ತಿಲ್ವೇ..? ಕರೋನಾ ಸೋಂಕಿನ ಸನ್ನಿವೇಶದಲ್ಲಿ ಸರ್ಕಾರದ ಸಾಧನೆ ಶೂನ್ಯ. ನಿಮ್ಮ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಕ್ರೋಶ ಹೊರಹಾಕಿದ್ದರು.

ಮೈಸೂರಿನಲ್ಲಿ ಮತ್ತೊಂದು ಅಮಾನವೀಯ ಘಟನೆ..!

ಮಂಡ್ಯದ 21 ವರ್ಷದ ಯುವಕ ಶರತ್ ಎಂಬಾತನಿಗೆ ಎದೆನೋವು ಕಾಣಿಸಿಕೊಂಡ ಕೂಡಲೇ ಮೈಸೂರಿನ ಆಸ್ಪತ್ರೆಗಳಿಗೆ ಎಡತಾಕಿದರೂ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಘಟನೆ ಆಗಸ್ಟ್‌ ಮೊದಲ ವಾರದಲ್ಲಿ ಸಂಭವಿಸಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ಅಲೆದು ಕಣ್ಣೀರಿಟ್ಟರೂ ಚಿಕಿತ್ಸೆ ಕೊಡಲಿಲ್ಲ. ಕೊನೆಗೂ ಚಿಕಿತ್ಸೆ ಸಿಗದೆ ಯುವಕ ಶರತ್‌ ಮೃತಪಟ್ಟಿದ್ದ. ವೈದ್ಯರ ಬೇಜವಾಬ್ದಾರಿ ನಡೆ ವಿರುದ್ದ ಯುವಕನ ಕುಟುಂಬಸ್ಥರ ಆಕ್ರೋಶ ಹೊರಹಾಕಿದರು. ಒಟ್ಟಾರೆ ಕೋವಿಡ್‌ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿದೆಯೇ ಅಂದರೆ ಅದೂ ಇಲ್ಲ. ಕೋವಿಡ್ ಅಲ್ಲದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿದೆಯೇ ಎಂದರೆ ಅದೂ ಸಿಗ್ತಿಲ್ಲ. ಅದೆಲ್ಲಾ ಹೋಗಲಿ ಸತ್ತವರಿಗೆ ಆಂಬ್ಯುಲೆನ್ಸ್‌ ಸಿಗುತ್ತಿದೆಯಾ ಅಂದರೆ ಅದೂ ಇಲ್ಲ. ಇನ್ನೂ ಡಿ.ಕೆ. ಶಿವಕುಮಾರ್ ಸರ್ಕಾರ ಬದುಕಿದ್ಯಾ ಅಂತಾ ಕೇಳಿರೋದ್ರಲ್ಲಿ ಅಚ್ಚರಿಯೇನಿಲ್ಲ. ಜನರೂ ಅದನ್ನೇ ಮಾಡನಾಡಿಕೊಳ್ಳುತ್ತಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com