ಕರೋನಾ ವಾರಿಯರ್ಸ್‌ ಸಾವು: ಪರಿಹಾರದಲ್ಲಿ ಸರ್ಕಾರದ ತಾರತಮ್ಯ

ಪರಿಹಾರ ಹಣ ಕೊಡದಿರಲು ಹಾಸನದ ವೈದ್ಯನ ಕುಟುಂಬಸ್ಥರು ಮಾಡಿರುವ ತಪ್ಪೇನು, ನೋಡೆಲ್‌ ಅಧಿಕಾರಿ ಡ್ಯೂಟಿ ಮಾಡುತ್ತಿದ್ದಾಗ ಸಾವನ್ನಪ್ಪಿದರೆ ಕರೋನಾ ವಾರಿಯರ್ ಆಗುವುದಿಲ್ಲವೇ..?
ಕರೋನಾ ವಾರಿಯರ್ಸ್‌ ಸಾವು: ಪರಿಹಾರದಲ್ಲಿ ಸರ್ಕಾರದ ತಾರತಮ್ಯ

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ವೈದ್ಯಾಧಿಕಾರಿ (Taluk Health Officer) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲಾ ಪರಿಷತ್‌ ಸಿಇಒ ಒತ್ತಡ ಹೇರಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಯ್ತು ಎಂದು ಸಹೋದ್ಯೋಗಿ ವೈದ್ಯರು ಪ್ರತಿಭಟನೆ ಮಾಡಿದ್ದರು. ಆಗಸ್ಟ್‌20 ರಂದು ಸಂಜೆ ಮೈಸೂರಿನ ಜಿಲ್ಲಾ ವೈದ್ಯಾಧಿಕಾರಿ (District Health Officer) ಕಚೇರಿ ಬಳಿ ಶವವಿಟ್ಟು ಪ್ರತಿಭಟನೆ ಮಾಡಿದ್ದರು. ಸ್ಥಳಕ್ಕೆ ಭೇಟಿ ನೀಡು 30 ಲಕ್ಷ ಪರಿಹಾರ ಘೋಷಣೆ ಮಾಡಿ, ಪಿಹೆಚ್‌ಡಿ ಮಾಡಿರುವ ಪತ್ನಿಗೆ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ಕೊಡುತ್ತೇವೆ ಎಂದ ಬಳಿಕವೂ ವೈದ್ಯಕೀಯ ಶಿಕ್ಷಣ ಸಚಿವರ ವಿರುದ್ಧ ಆಕ್ರೋಶ ತಣ್ಣಗಾಗಿಲ್ಲ.

ಮಾನವೀಯ ನೆಲೆಗಟ್ಟೋ..? ಪ್ರತಿಭಟನೆಯ ಭಯವೋ..?

Dr. ನಾಗೇಂದ್ರ ಅವರ ಸಾವಿಗೆ ಜಿಲ್ಲಾ ಪಂಚಾಯತಿ ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಅವರ ಒತ್ತಡವೇ ಕಾರಣ ಎಂದು ಆರೋಪ ಮಾಡಲಾಗಿತ್ತು. ಆದರೆ ಆ ಬಳಿಕ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಜೊತೆ ಮೃತ ಡಾ. ನಾಗೇಂದ್ರ ಮಾತನಾಡಿರುವ ಆಡಿಯೋ ಕೂಡ ಬಿಡುಗಡೆ ಆಗಿತ್ತು. ಆ ಸಂಭಾಷಣೆಯುಲ್ಲಿ ಡಿಸಿ ಅಭಿರಾಮ್‌ ಶಂಕರ್‌ ಅವರು ಕರೋನಾ Rapid antigen test ಸರಿಯಾಗಿ ಮಾಡದೆ ಇರುವ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಈಗ ಸಿಕ್ಕಿರುವ ಆಡಿಯೋ ಕ್ಲಿಪ್‌ನ ಸಂಭಾಷಣೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್‌ಜಿ ಶಂಕರ್‌, ಎಷ್ಟು ಸ್ವಾಬ್‌ ತೆಗೆಯಲು ಹೇಳಿದ್ರೆ, ಎಷ್ಟು ಸ್ವಾಬ್‌ ತೆಗೆಯುತ್ತಿದ್ದೀರಿ..? ಎಂದು ಪ್ರಶ್ನೆ ಮಾಡಿದ್ದಾರೆ. ಅದರಲ್ಲೂ 150 ಟಾರ್ಗೆಟ್‌ ಇದ್ದರೆ 100 ತೆಗೆದರೂ ಸರಿ. ಆದರೆ 20, 25 ತೆಗೆದರೆ ಯಾವ ಲೆಕ್ಕ, ನೀವೇನು ಆಟ ಆಡ್ತಿದ್ದೀರಾ..? ಬೀದಿಯಲ್ಲಿ ನಿಂತು ತೆಗೆದುಕೊಳ್ಳಿ, ಮಾರ್ಕೆಟ್‌ಗೆ ಹೋಗಿ ಪರೀಕ್ಷೆ ಮಾಡಿಸಿ ಎಂದು ಹೇಳಿದ್ದಾರೆ. ಜನ ಕರೋನಾ ಟೆಸ್ಟ್‌ ಮಾಡಿಸಲು ಆಗದೆ ಸಾಯುತ್ತಿದ್ದಾರೆ, ನೀವು ಇಲ್ಲಿ ಡ್ರಾಮಾ ಮಾಡ್ತಿದ್ದೀರಾ..? ಎಂದು ಪ್ರಶ್ನಿಸಿದ್ದಾರೆ.

ಕರೋನಾ ವಾರಿಯರ್ಸ್‌ ಸಾವು: ಪರಿಹಾರದಲ್ಲಿ ಸರ್ಕಾರದ ತಾರತಮ್ಯ
ಮೈಸೂರು ವೈದ್ಯಾಧಿಕಾರಿ ಸಾವು ಪ್ರಕರಣ: ಸಚಿವ ಸುಧಾಕರ್‌ ಅನ್ನು ತರಾಟೆಗೆ ತೆಗೆದುಕೊಂಡ ಸಹೋದ್ಯೋಗಿ ವೈದ್ಯೆ

Dr. ನಾಗೇಂದ್ರ ಸಾವಿನ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ 50 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ, ಜೊತೆಗೆ ಅನುಕಂಪದ ಆಧಾರದಲ್ಲಿ ಕುಟುಂಬಸ್ಥರಿಗೆ ಒಂದು ಉದ್ಯೋಗವನ್ನು ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಜೊತೆಗೆ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಒಂದು ವಾರದೊಳಗೆ ತನಿಖೆ ಮಾಡಿ ವರದಿ ಕೊಡುವಂತೆಯೂ ಸಿಎಂ ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ. Dr. ನಾಗೇಂದ್ರ ಸಾವು ಸಮಾಜಕ್ಕೆ ಹಾಗೂ ಅವರ ಕುಟುಂಬದ ವರ್ಗಕ್ಕೆ ತುಂಬಲಾರದ ನಷ್ಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಕರೋನಾ ವಾರಿಯರ್ಸ್‌ ಸೋಂಕು ಬಂದು ಸಾವನ್ನಪ್ಪಿದರೆ 30 ಲಕ್ಷ ಪರಿಹಾರ ಘೋಷಣೆ ಮಾಡಿರುವಂತೆ ಪರಿಹಾರ ನೀಡುವುದು ಸರಿ. ಬೇಕಿದ್ದರೆ ಪರಿಹಾರ ಮೊತ್ತವನ್ನು 50 ಲಕ್ಷಕ್ಕೆ ಏರಿಕೆ ಮಾಡಿದರೂ ಅಡ್ಡಿಯಿಲ್ಲ.

ಹಾಸನದಲ್ಲೂ ಕರೋನಾ ವಾರಿಯರ್ ಸಾವು..!

ಹಾಸನದ ಆಲೂರಿನಲ್ಲಿ ಮಕ್ಕಳತಜ್ಞನಾಗಿ ಕೆಲಸ ಮಾಡುತ್ತಿದ್ದ ಡಾ ಶಿವಕಿರಣ್‌ ಹೃದಯಾಘಾತದಿಂದ ಸಾವಿಗೀಡಾಗಿದ್ದರು. ದಾವಣಗೆರೆಯ ಕೊಡಗನೂರು ಗ್ರಾಮದ 47 ವರ್ಷದ ವೈದ್ಯ ಸತತ 3 ತಿಂಗಳು ಯಾವುದೇ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದ್ದರಿಂದ ಒತ್ತಡಕ್ಕೆ ಸಿಲುಕಿ ಹೃದಯಾಘಾತಕ್ಕೆ ಆಗಿದೆ ಎನ್ನಲಾಗಿತ್ತು. ಜೂನ್‌ 3 ರಂದು ಮನೆಯಲ್ಲೇ ತಲೆಸುತ್ತು ಬಂದು ಬಿದ್ದಿದ್ದ ವೈದ್ಯ ಡಾ ಶಿವಕಿರಣ್‌, ಜೂನ್‌ 10 ರಂದು ಚಿಕಿತ್ಸೆ ಫಲಕಾರಿ ಆಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಹಾಸನ District Health Officer ಪರಿಹಾರಕ್ಕಾಗಿ ಮನವಿ ಮಾಡಿಕೊಂಡಿದ್ದರು. ಆದರೆ ಇಲ್ಲೀವರೆಗೂ ಪರಿಹಾರದ ಹಣ ಆ ಕುಟುಂಬಸ್ಥರ ಕೈ ಸೇರಿಲ್ಲ. ನೇತ್ರತಜ್ಞೆ ಆಗಿರುವ ಪತ್ನಿ ಡಾ ರೇಣುಕಾ ಶಿವಕಿರಣ್‌ 11 ವರ್ಷದ ಮಗನ ಜೊತೆ ಜೀವನ ಸಾಗಿಸುತ್ತಿದ್ದಾರೆ.

ಡಾ ಶಿವಕಿರಣ್
ಡಾ ಶಿವಕಿರಣ್
ಕರೋನಾ ವಾರಿಯರ್ಸ್‌ ಸಾವು: ಪರಿಹಾರದಲ್ಲಿ ಸರ್ಕಾರದ ತಾರತಮ್ಯ
ಮೈಸೂರಲ್ಲಿ ವೈದ್ಯಾಧಿಕಾರಿ ಅಸಹಜ ಸಾವು: ವೈದ್ಯರಿಗೆ ಹೆಚ್ಚುತ್ತಿದೆಯಾ ಒತ್ತಡ?

ಬೆಂಗಳೂರಿನಲ್ಲಿ ಕರ್ತವ್ಯದಲ್ಲಿ ಇದ್ದಾಗಲೇ ಸಾವು..!

ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ನೋಡೆಲ್‌ ಅಧಿಕಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. KAS ಶ್ರೇಣಿಯ ಉಪವಿಭಾಗಾಧಿಕಾರಿ ಆಗಿದ್ದ ಗಂಗಾಧರಯ್ಯ, ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನೋಡೆಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಈ ವೇಳೆ ಹೃದಯಾಘಾತಕ್ಕೆ ಒಳಗಾದವರನ್ನು ಸಪ್ತಗಿರಿ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದರು. ಕರ್ತವ್ಯ ನಿರತ ಅಧಿಕಾರಿ ಸಾವಿಗೆ ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪ ಸಂತಾಪ ಸೂಚಿಸಿದ್ದರು. ಕೋವಿಡ್ - 19 ಕರ್ತವ್ಯದಲ್ಲಿದ್ದಾಗಲೇ ಹೆಚ್.ಗಂಗಾಧರಯ್ಯ ಹೃದಯಾಘಾತದಿಂದ ಮರಣ ಹೊಂದಿದ್ದರಿಂದ ತೀವ್ರ ಸಂತಾಪದ ಜೊತೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 25 ಲಕ್ಷ ರೂಪಾಯಿ ಪರಿಹಾರ ಘೋಷಣೆ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ ಘೋಷಣೆ ಮಾಡಿದ್ದರು.

ಕರೋನಾ ವಾರಿಯರ್ಸ್‌ ಸಾವು: ಪರಿಹಾರದಲ್ಲಿ ಸರ್ಕಾರದ ತಾರತಮ್ಯ
ಹಾಸನ: ದಣಿವರಿಯದೆ ಕರ್ತವ್ಯ ನಿರ್ವಹಿಸಿದ ‘ಕರೋನಾ ವಾರಿಯರ್ʼ ಸಾವು

ಸರ್ಕಾರದ ತಾರತಮ್ಯ ಎಷ್ಟು ಸರಿ..?

ಹಾಸನದ ವೈದ್ಯ ಸತತ ಮೂರು ತಿಂಗಳ ಕಾಲ ನಿರಂತರ ಸೇವೆ ಮಾಡಿ ಬಳಲಿ ಒತ್ತಡದಿಂದ ಹೃದಯಾಘಾತವಾದರೆ ಇಲ್ಲೀವರೆಗೂ ಪರಿಹಾರ ಘೋಷಣೆ ಆಗಿಲ್ಲ. ಇತ್ತ ನೋಡೆಲ್‌ ಅಧಿಕಾರಿ ಆಗಿ ಕೆಲಸ ಮಾಡುತ್ತಿದ್ದ ಗಂಗಾಧರಯ್ಯ ಸಾವಿಗೆ ಕೇವಲ 25 ಲಕ್ಷ ಪರಿಹಾರ ಘೋಷಣೆ ಮಾಡಿ ಕೈ ತೊಳೆದುಕೊಂಡಿದೆ. ಆದರೆ ಮೈಸೂರಿನಲ್ಲಿ ವೈದ್ಯ ಆತ್ಮಹತ್ಯೆ ಮಾಡಿಕೊಂಡರೆ ಸರ್ಕಾರ 50 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡುತ್ತದೆ. ಯಾಕಂದರೆ ವೈದ್ಯನ ಪರವಾಗಿ ನೂರಾರು ವೈದ್ಯರು ಪ್ರತಿಭಟನೆ ಮಾಡಿದರು ಎನ್ನುವ ಕಾರಣಕ್ಕೆ. ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ವೈದ್ಯರು ಸೇವೆ ಸ್ಥಗಿತ ಮಾಡುವ ಬೆದರಿಕೆ ಹಾಕಿದ್ದಕ್ಕೆ. ಆದರೆ, ಬೇರೆಯವರ ಸಾವಿನ ಬಗ್ಗೆ ಒಗ್ಗಟ್ಟಿನಿಂದ ಕೇಳಲಿಲ್ಲ, ಸರ್ಕಾರ ಕೊಡಲಿಲ್ಲ.

ಪರಿಹಾರ ಹಣ ಕೊಡದಿರಲು ಹಾಸನದ ವೈದ್ಯನ ಕುಟುಂಬಸ್ಥರು ಮಾಡಿರುವ ತಪ್ಪೇನು, ನೋಡೆಲ್‌ ಅಧಿಕಾರಿ ಡ್ಯೂಟಿ ಮಾಡುತ್ತಿದ್ದಾಗ ಸಾವನ್ನಪ್ಪಿದರೆ ಕರೋನಾ ವಾರಿಯರ್ ಆಗುವುದಿಲ್ಲವೇ..? ಬೆಂಗಳೂರಿನಲ್ಲಿ ಕರೋನಾ ಸೋಂಕಿನಿಂದ ಪೌರ‌ ಕಾರ್ಮಿಕರೂ ಸಾವನ್ನಪ್ಪಿದ್ದಾರೆ. ಸರ್ಕಾರ ಎಲ್ಲರಿಗೂ 50 ಲಕ್ಷವನ್ನೇ ಪರಿಹಾರವಾಗಿ ಕೊಡಬೇಕು. ಒಬ್ಬರಿಗೊಂದು ನ್ಯಾಯ.. ಮತ್ತೊಬ್ಬರಿಗೆ ಇನ್ನೊಂದು ನ್ಯಾಯ.. ಸರಿಯಲ್ಲ.. ದೆಹಲಿ ಸರ್ಕಾರದಲ್ಲಿ ಓರ್ವ ಪೌರ ಕಾರ್ಮಿಕ ಸಿಬ್ಬಂದಿ ಸಾವನ್ನಪ್ಪಿರುವ ಕಾರಣ 1 ಕೋಟಿ ರೂಪಾಯಿ ಪರಿಹಾರ ಕೊಡಲಾಗಿದೆ. ಕರ್ನಾಟಕ ಸರ್ಕಾರದ ಬಳಿ ಅಷ್ಟೊಂದು ಶಕ್ತಿ ಇಲ್ಲದಿದ್ದರೆ 50 ಲಕ್ಷವನ್ನೇ ಕೊಡಲಿ ಆದರೆ ಎಲ್ಲರಿಗೂ ಒಂದೇ ಪರಿಹಾರ ಸಿಗುವಂತಾಗಲಿ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com