ಬೆಂಗಳೂರು ಗಲಭೆ: ಸರ್ಕಾರಕ್ಕೆ 13 ಅಂಶಗಳ ಪತ್ರ ಬರೆದ ಸಿದ್ದರಾಮಯ್ಯ..!
ರಾಜ್ಯ

ಬೆಂಗಳೂರು ಗಲಭೆ: ಸರ್ಕಾರಕ್ಕೆ 13 ಅಂಶಗಳ ಪತ್ರ ಬರೆದ ಸಿದ್ದರಾಮಯ್ಯ..!

ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ಅವರಿಗೆ 13 ಅಂಶಗಳುಳ್ಳ ಪತ್ರ ಬರೆದಿದ್ದಾರೆ. ಬೆಂಗಳೂರಿನ ಕೆ.ಜಿ ಹಳ್ಳಿ ಮತ್ತು ಡಿ.ಜೆ ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಎಲ್ಲಾ ದುಷ್ಕೃತ್ಯಗಳಿಗೂ ಸರ್ಕಾರದ ವೈಫಲ್ಯವೇ ನೇರ ಕಾರಣ ಎಂದು ಅರೋಪಿಸಿದ್ದಾರೆ.

ಕೃಷ್ಣಮಣಿ

ಬೆಂಗಳೂರಿನಲ್ಲಿ ಆಗಸ್ಟ್‌ 11 ರಂದು ನಡೆದಿದ್ದ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ಅವರಿಗೆ 13 ಅಂಶಗಳುಳ್ಳ ಪತ್ರ ಬರೆದಿದ್ದಾರೆ. ಬೆಂಗಳೂರಿನ ಕೆ.ಜಿ ಹಳ್ಳಿ ಮತ್ತು ಡಿ.ಜೆ ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಎಲ್ಲಾ ದುಷ್ಕೃತ್ಯಗಳಿಗೂ ಸರ್ಕಾರದ ವೈಫಲ್ಯವೇ ನೇರ ಕಾರಣ ಎಂದು ಅರೋಪಿಸಿದ್ದಾರೆ. ಈ ಘಟನೆಯಲ್ಲಿ ಗುಪ್ತಚರ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ. ಸರ್ಕಾರ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸದೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾ, ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಸರ್ಕಾರ ಘಟನೆಯನ್ನು ಸೂಕ್ತವಾಗಿ ನಿರ್ವಹಿಸಿಲ್ಲ ಎಂದಿರುವ ಸಿದ್ದರಾಮಯ್ಯ, ಡಿ.ಜೆ ಹಳ್ಳಿ, ಕೆಜಿ ಹಳ್ಳಿ ಘಟನೆ ನೈತಿಕ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು. ಇಂಥಹ ಪ್ರಕರಣವನ್ನು ನಿಭಾಯಿಸೋಕೆ ‌ಆಗದಿದ್ದರೆ ಸರ್ಕಾರ ಅಂತಾ ಯಾಕಿರಬೇಕು..? ಎಂದು ಪ್ರಶ್ನಿಸಿದ್ದಾರೆ. ಯಾರಾದರೂ ಒಬ್ಬರು ಅವಹೇಳನಕಾರಿ ಫೋಸ್ಟ್‌ ಹಾಕಿದ್ದಾರೆ ಎಂದಾಗ ದೂರು ದಾಖಲಾಗಿದೆ. ಆದರೆ ಪೊಲೀಸರು ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ..? ಎಂದು ಸರ್ಕಾರವನ್ನು ಕುಟುಕಿದ್ದಾರೆ. ಇನ್ನೂ ಒಂದು ವೇಳೆ ಪೊಲೀಸರು ತಕ್ಷಣ ಕ್ರಮ ತೆಗೆದುಕೊಂಡಿದ್ದರೆ ಹೀಗೆ ಆಗುತ್ತಿರಲಿಲ್ಲ. ಪ್ರವಾದಿ ಬಗೆಗೆ ಕೆಟ್ಟ ಚಿತ್ರ ರಚಿಸಿ ಕೊಟ್ಟವರು ಯಾರು..? ಪ್ರವಾದಿ ಪೈಗಂಬರ್ ಚಿತ್ರ ಕಳಿಸಿದವರು ಯಾರು..? ಇದರ ಹಿಂದೆ ದೊಡ್ಡ ಪಿತೂರಿಯಿದೆ ಎಂದಿದ್ದಾರೆ.

ಗಲಭೆ ಘಟನೆ ನಡೆದಿರುವುದು ಸೂಕ್ಷ್ಮ ಪ್ರದೇಶದಲ್ಲಿ, ಪೊಲೀಸ್ ಠಾಣೆಯನ್ನೇ ರಕ್ಷಿಸಿಕೊಳ್ಳಲಾಗದ ನೀವು..! ರಾಜ್ಯದ ಜನರನ್ನ ಹೇಗೆ ರಕ್ಷಿಸುತ್ತೀರಾ..? ಎಂದು ಪ್ರಶ್ನಿಸಿದ್ದಾರೆ. ಇನ್ನೂ ರಾಜ್ಯದ ಗೃಹ ಸಚಿವರನ್ನ ಒಬ್ಬ ಕೋಮುವಾದಿ ಭೇಟಿಯಾಗಿದ್ದ, ಆ ವೇಳೆ ಅವನ ಮೇಲಿನ ಕೇಸ್ ವಾಪಸ್ ಪಡೆಯುತ್ತೇವೆ ಎಂದಿದ್ದು ಏಕೆ..? ಈ ರೀತಿ ಮಾಡಿದಾಗ ಸಮಾಜದ ಸ್ವಾಸ್ಥ್ಯವನ್ನ ನಿಮ್ಮ ಸರ್ಕಾರ ಕಾಪಾಡಲು ಸಾಧ್ಯವೇ..? ಎಂದು ಸಿಎಂ ಬಿ.ಎಸ್‌ ಯಡಿಯೂರಪ್ಪಗೆ ಬರೆದ ಪತ್ರದಲ್ಲಿ ಸಿದ್ದರಾಮಯ್ಯ ಉಲ್ಲೇಖ ಮಾಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ..!

ಬಿಜೆಪಿ ಪಕ್ಷದಲ್ಲಿ ಎರಡು ಬಣಗಳಾಗಿದ್ದು, ಒಂದು ಬಣ ಬಿ.ಎಸ್‌ ಯಡಿಯೂರಪ್ಪರನ್ನ ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಿಗೊಳಿಸುವ ಹುನ್ನಾರ ಮಾಡ್ತಿದ್ದಾರೆ ಎಂದಿದ್ದ ಸಿದ್ದರಾಮಯ್ಯ ಟ್ವೀಟ್ ಗೆ ಸಚಿವ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯಗೆ ಸಿಎಂ ಕುರ್ಚಿ ಮೇಲೆ ವ್ಯಾಮೋಹ ಹೋಗಿಲ್ಲ. ಇದೊಂದು ಬಾಲಿಶ ಹೇಳಿಕೆ ಎಂದಿದ್ದಾರೆ. ಈ ಜನ್ಮದಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲ್ಲ. ಬಿಜೆಪಿ, ಕೆಜಿಪಿಯಿಂದ ಸಿದ್ದರಾಮಯ್ಯ ಅಕಸ್ಮಿಕವಾಗಿ ಸಿಎಂ ಆದ್ರು. ಅದನ್ನು ಅವರು ಉಳಿಸಿಕೊಂಡಿಲ್ಲ. ಕಾಂಗ್ರೆಸ್ ಪಕ್ಷವನ್ನು ಮುಳುಗಿಸಿದ್ರು. ಸಿದ್ದರಾಮಯ್ಯ ಅವಧಿಯಲ್ಲಿ ಗುಂಪುಗಾರಿಕೆ ಹೆಚ್ಚಾಗಿತ್ತು. ಧರ್ಮಗಳ ಮಧ್ಯೆ ಗಲಭೆಗಳು ಆಗ್ತಿದೆ. ನಮ್ಮ ನಾಯಕರು ಯಾರು ನನ್ನ ಬೆಂಬಲಕ್ಕೆ ಬಂದಿಲ್ಲ ಅಂತ ಅಖಂಡ ಶ್ರೀನಿವಾಸ್ ಮೂರ್ತಿ ಹೇಳಿದ್ದಾರೆ. ಈ ಹೇಳಿಕೆ ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗಬೇಕು. ಸಿಬಿಐ ತನಿಖೆ ಮಾಡಿ ಅಂತ ಕೇಳ್ತಿದ್ದಾರೆ. ಆದರೆ ಇದು ಕೋಮುಗಲಭೆ ಅಲ್ಲ ಮತಾಂಧರ ದೊಂಬಿ. ಈ ಘಟನೆಯನ್ನು ಕಾಂಗ್ರೆಸ್ ಖಂಡನೆ ಮಾಡಿಲ್ಲ. ಸರ್ಕಾರ ಬಿದ್ದು ಹೋಗಲಿ ಅಂತ ಕಾಂಗ್ರೆಸ್ ಈ ಕುತಂತ್ರ ಮಾಡ್ತಿದೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಲ್ಲ. ಕನಸು ಕಾಣೋದು ಬೇಡ ಎಂದು ಸಿದ್ದರಾಮಯ್ಯಗೆ ಈಶ್ವರಪ್ಪ ಸಲಹೆ ನೀಡಿದ್ದಾರೆ.

ಸರ್ಕಾರದ ಪರವಾಗಿ ಮೂವರು ವಕೀಲರ ನೇಮಕ..!

ಡಿ.ಜೆ ಹಳ್ಳಿ , ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಸರ್ಕಾರದ ಪರ ನ್ಯಾಯಾಲಯದಲ್ಲಿ ವಾದ ಮಂಡನೆಗೆ ಕಾನೂನು ಇಲಾಖೆ ಅಭಿಯೋಜಕರ ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ. ಪಿ. ಪ್ರಸನ್ನ ಕುಮಾರ್, ತೇಜಸ್. ಪಿ ಹಾಗೂ ಓ.ಬಿ ಚಂದ್ರಶೇಖರ್ ಸೇರಿದಂತೆ ಮೂವರು ವಿಶೇಷ ಅಭಿಯೋಜಕರಾಗಿ ಸರ್ಕಾರದ ಪರವಾಗಿ ವಾದ ಮಂಡಿಸಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ವಿಶೇಷ ಅಭಿಯೋಜಕರಾಗಿ ನೇಮಕಗೊಂಡ ಬಳಿಕ ಮೂವರು ವಕೀಲರು ಸಿಸಿಬಿ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದಾರೆ. ಡಿ.ಜೆ.ಹಳ್ಳಿ ಠಾಣೆಗೂ ಆಗಮಿಸಿ ಸಿಸಿಬಿ ಡಿಸಿಪಿ ಕುಲದೀಪ್‌ ಕುಮಾರ್ ಜೈನ್ ಅವರನ್ನು ಭೇಟಿ ಮಾಡಿದ್ದಾರೆ.

ಒಟ್ಟಾರೆ, ಗಲಭೆ ಯಾಕೆ ಆಯ್ತು ಎನ್ನುವುದಕ್ಕಿಂತ, ಎಷ್ಟು ಪ್ರಮಾಣದಲ್ಲಿ ರಾಜಕೀಯ ಲಾಭ ಮಾಡಿಕೊಳ್ಳಬಹುದು ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌, ಬಿಜೆಪಿ ಪೈಪೋಟಿ ನಡೆಸುತ್ತಿವೆ. ಈ ಘಟನೆಗೂ ನನಗೂ ಸಂಬಂಧವೇ ಇಲ್ಲ ಎನ್ನುವಂತೆ ಜೆಡಿಎಸ್‌ ಮೌನಕ್ಕೆ ಶರಣಾಗಿದೆ. ತನಿಖೆಯಿಂದ ನಿಜವಾದ ಆರೋಪಿಗಳಿಗೆ ಶಿಕ್ಷೆಯಾದರೆ ಎಲ್ಲದಕ್ಕೂ ಮುಕ್ತಿ ಸಿಕ್ಕಂತಾಗುತ್ತದೆ. ಇಲ್ಲದಿದ್ದರೆ ರಾಜಕೀಯ ಕೆಸರೆರಚಾಟದಲ್ಲಿ ಗಲಭೆ ಮುಚ್ಚಿ ಹೋದರೂ ಅಚ್ಚರಿ ಏನಿಲ್ಲ ಎನ್ನಬೇಕಾಗುತ್ತದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com