ಜೆ ಎಚ್ ಪಟೇಲ್: ಕನ್ನಡನಾಡು ಕಂಡ ಅಪ್ರತಿಮ ಜನನಾಯಕ
ರಾಜ್ಯ

ಜೆ ಎಚ್ ಪಟೇಲ್: ಕನ್ನಡನಾಡು ಕಂಡ ಅಪ್ರತಿಮ ಜನನಾಯಕ

ಪಟೇಲರು ಸಂಸತ್ತಿನಲ್ಲಿ ಕನ್ನಡದಲ್ಲಿ ಅಷ್ಟೇ ಅಲ್ಲದೆ ಪ್ರಥಮ ಭಾರಿ ಪ್ರಾದೇಶಿಕ ಭಾಷೆಯೊಂದರಲ್ಲಿ ಮಾತನಾಡಿದ ಪ್ರಥಮ ಪ್ರಜಾ ಪ್ರತಿನಿಧಿ. ಕನ್ನಡದಲ್ಲಿ ಮಾತನಾಡಿದ್ದನ್ನು ಕಂಡು ಹರ್ಷಿತರಾದ ಸ್ಪೀಕರ್ ನೀಲಂ ಸಂಜೀವರೆಡ್ಡಿಯವರು ಪಟೇಲರನ್ನು ಪ್ರೋತ್ಸಾಹಿಸಿ ಮಾತನಾಡಿದ್ದರು. ಅಂದಿನಿಂದ ಸಂಸತ್ತಿನಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡುವ ಪರಿಪಾಠ ಆರಂಭಗೊಂಡಿತು.

ಡಾ. ಜೆ ಎಸ್ ಪಾಟೀಲ

ಜಯದೇವಪ್ಪ ಹಾಲಪ್ಪ ಪಟೇಲ್ˌ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿನ ಚಿರಸ್ಥಾಯಿ ಹೆಸರು. ಕರ್ನಾಟಕದಲ್ಲಿ ಅವರ ಸಮಾಜವಾದಿ ಸಿದ್ಧಾಂತˌ ಆಕರ್ಶಕ ವ್ಯಕ್ತಿತ್ವ ˌ ನಿಸ್ಕಪಟ ಸ್ವಭಾವˌ ನಿಷ್ಟುರತೆˌ ನಿರ್ಧಾರಯುತ ಗಟ್ಟಿತನˌ ಸ್ನೇಹಮಯಿ ನಡತೆಗಳನ್ನು ಸರಿಸಟ್ಟುವ ಮತ್ತೊಮ್ಮ ನಾಯಕ ವಿರಳ. ಪಟೇಲರು ಹುಟ್ಟಿದ್ದು 1 ಅಕ್ಟೋಬರ್ 1930 ರಲ್ಲಿ ಅಂದಿನ ಮೈಸೂರು ಸಂಸ್ಥಾನ ವ್ಯಾಪ್ತಿಯ ಶಿವಮೊಗ್ಗ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದ ಶ್ರೀಮಂತ ಜಮೀನ್ದಾರಿ ಮನೆತನದಲ್ಲಿ. ತಂದೆ ಹಾಲಪ್ಪ ಪಟೇಲ್ ಅಂದಿನ ಮೈಸೂರು ಪ್ರಜಾ ಪ್ರತಿನಿಧಿ ಸಭೆಯ ಸದಸ್ಯರಾಗಿದ್ದವರು. ಪಟೇಲರು ತಮ್ಮ ಪದವಿವರೆಗಿನ ಶಿಕ್ಷಣವನ್ನು ಕರ್ನಾಟಕದಲ್ಲಿ ಪೂರೈಸಿಕೊಂಡು ಪುಣೆಯಲ್ಲಿ ಕಾನೂನು ಪದವಿ ಮುಗಿಸಿದರು. ತನ್ನ ಚಿಕ್ಕಂದಿನಲ್ಲೇ 1942 ರ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸಿದ್ದರು. ತಮ್ಮ ರಾಜಕೀಯವನ್ನು ಸಂಯುಕ್ತ ಪ್ರಜಾ ಸೋಷಲಿಸ್ಟ್ ಪಕ್ಷದ ಮೂಲಕ ಆರಂಭಿಸಿದರು.

ರಾಮ್ ಮನೋಹರ್ ಲೋಹಿಯಾ ಮತ್ತು ಶಾಂತವೇರಿ ಗೋಪಾಲಗೌಡರಿಂದ ಪ್ರಭಾವಿತರಾಗಿ ಅವರ ಅನುಯಾಯಿಯಾದ ಪಟೇಲರು ಸಮಾಜವಾದಿ ಸಿದ್ಧಾಂತವನ್ನು ಮೈಗೂಡಿಸಿಕೊಂಡಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಿ ಸಮಾಜವಾದಿ ಚಳುವಳಿಯನ್ನು ಕಟ್ಟುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಸ್ವತಃ ಜಮೀನ್ದಾರಿ ಮನೆತನದಲ್ಲಿ ಹುಟ್ಟಿದ್ದ ಪಟೇಲರು ಗೇಣಿದಾರರ ಚಳುವಳಿಯನ್ನು ಬೆಂಬಲಿಸಿದ್ದ ಅಪರೂಪದ ನಾಯಕ. ಶ್ರೀಮಂತಿಕೆಯ ಹಾವಭಾವಗಳಿದ್ದರೂ ಅದನ್ನು ತಲೆಗೇರಿಸಿಕೊಳ್ಳದೆ ಎಲ್ಲರೊಂದಿಗೆ ಸಹಜವಾಗಿ ವರ್ತಿಸುತ್ತಿದ್ದ ಸ್ನೇಹಜೀವಿ. 1967 ರಲ್ಲಿ ಶಿವಮೊಗ್ಗ ಸಂಸದೀಯ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಪಟೇಲರು ಸಂಸತ್ತಿನಲ್ಲಿ ಕನ್ನಡದಲ್ಲಿ ಅಷ್ಟೇ ಅಲ್ಲದೆ ಪ್ರಥಮ ಭಾರಿ ಪ್ರಾದೇಶಿಕ ಭಾಷೆಯೊಂದರಲ್ಲಿ ಮಾತನಾಡಿದ ಪ್ರಥಮ ಪ್ರಜಾ ಪ್ರತಿನಿಧಿ. ಸಂವಿಧಾನದ 8 ನೇ ವಿಧಿಯನ್ನು ಪ್ರಥಮ ಬಾರಿ ಸದುಪಯೋಗ ಪಡಿಸಿಕೊಂಡ ಪಟೇಲರು ಕನ್ನಡದಲ್ಲಿ ಮಾತನಾಡಿದ್ದನ್ನು ಕಂಡು ಹರ್ಷಿತರಾದ ಅಂದಿನ ಲೋಕಸಭೆಯ ಸ್ಪೀಕರ್ ನೀಲಂ ಸಂಜೀವರೆಡ್ಡಿಯವರು ಪಟೇಲರನ್ನು ಪ್ರೋತ್ಸಾಹಿಸಿ ಮಾತನಾಡಿದ್ದರು. ಅಂದಿನಿಂದ ಸಂಸತ್ತಿನಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡುವ ಪರಿಪಾಠ ಆರಂಭಗೊಂಡಿತು.

ಮುಂದೆ ಇಂದಿರಾ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ 1975-77 ರ ವರೆಗೆ ಜೈಲಿನಲ್ಲಿದ್ದರು. 1978 ರಲ್ಲಿ ಪ್ರಥಮ ಭಾರಿಗೆ ಚೆನ್ನಗಿರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ನಂತರ 1983 ರಲ್ಲಿ ಎರಡನೇ ಬಾರಿಗೆ ಕ್ರಾಂತಿರಂಗ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದರು. ಅಂದು ಮುಖ್ಯಮಂತ್ರಿಯಾಗಬೇಕಾದವರು ತೆರೆಯ ಮರೆಗೆ ಸರಿದರೆ ತೆರೆಯ ಹಿಂದಿದ್ದ ರಾಮಕ್ರಷ್ಣ ಹೆಗಡೆ ನಾಟಕೀಯ ಬೆಳವಣಿಗೆಯೊಂದರಲ್ಲಿ ಜನತಾರಂಗ ಸರಕಾರದ ಮುಖ್ಯಮಂತ್ರಿಯಾಗಿ ನೇಮಕವಾದರು. ಅದು ಕರ್ನಾಟಕದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರಕಾರವಾಗಿತ್ತು. ಗುಂಡೂರಾಯರ ದುರಾಡಳಿತದಿಂದ ರೈತರ ಮೇಲಿನ ಗೋಲಿಬಾರ್ ಗೋಕಾಕ್ ಚಳುವಳಿ ಮತ್ತು ಇದೆಲ್ಲವನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸಿದ ಲಂಕೇಶ್ ಪತ್ರಿಕೆ ಕಾಂಗ್ರೆಸ್ ಸೋಲಿಗೆ ಕಾರಣವಾಯಿತು. ಹೆಗಡೆ ಸಂಪುಟದಲ್ಲಿ ಪಟೇಲರು ಮಂತ್ರಿಯಾದರು. 1985 ರಲ್ಲಿ ಮತ್ತೆ ಶಾಸಕರಾಗಿ, ಮಂತ್ರಿಯಾಗಿ ಬೊಮ್ಮಾಯಿ ಸಂಪುಟದಲ್ಲೂ ಮುಂದುವರೆದರು.

ಜನತಾ ಪಕ್ಷದ ಒಳಜಗಳ ಮತ್ತು ದೇವೇಗೌಡರ ಸಂಕುಚಿತ ನಡವಳಿಕೆಯಿಂದ 1999 ರಲ್ಲಿ ಬೊಮ್ಮಾಯಿ ಸರಕಾರ ಪತನವಾಯಿತು. 1994 ರಲ್ಲಿ ಮತ್ತೆ ಜನತಾದಳ ಅಧಿಕಾರಕ್ಕೆ ಬಂದಿತು. ಅಂದು ಮುಖ್ಯಮಂತ್ರಿ ರೇಸಿನಲ್ಲಿ ಮುಂಚೂಣಿಯಲ್ಲಿದ್ದವರು ಪಟೇಲ್ ಮತ್ತು ದೇವೇಗೌಡರು. ಕೊನೆಗೆ ಸಂಧಾನದ ಫಲದಿಂದ ದೇವೇಗೌಡರು ಮುಖ್ಯಮಂತ್ರಿಯಾಗಿˌ ಪಟೇಲರು ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಪಟೇಲರು ತಮಗಿದ್ದ ಅನನ್ಯ ಅಧ್ಯಯನಶೀಲತೆˌ ಸಂಸದೀಯ ಪಟುತ್ವ ಮತ್ತು ಮಾತಿನ ಮೇಲಿನ ಹಿಡಿತದಿಂದ ಎಲ್ಲರ ಸ್ನೇಹ ಸಂಪಾದಿಸಿದ್ದರು. ರಾಜಕೀಯ ಅಷ್ಟೇ ಅಲ್ಲದೆ ಸಾಂಸ್ಕ್ರತಿಕ ಮತ್ತು ಸಾಹಿತ್ಯ ರಂಗದವರೊಡನೆಯೂ ಪಟೇಲರ ಒಡನಾಟವಿತ್ತು. ಇಪ್ಪತ್ನಾಲ್ಕು ಗಂಟೆ ರಾಜಕೀಯ ಮಾಡುವ ದೇವೇಗೌಡರನ್ನು ಪಟೇಲರು ಹಾಸ್ಯಮಯವಾಗಿ ಛೇಡಿಸುತ್ತಿದ್ದರು. ಪಟೇಲರನ್ನು ಸದಾ ದೇವೇಗೌಡರು ಅಣ್ಣ ಅಣ್ಣ ಎಂದೇ ಸಂಬೋಧಿಸುತ್ತಿದ್ದರು.

1996 ರಲ್ಲಿ ಹೆಗಡೆ ಪ್ರಧಾನಿಯಾಗುವುದು ತಪ್ಪಿಸಲು ದೆಹಲಿಗೆ ಹೋಗಿದ ದೇವೇಗೌಡರು ಅಕಸ್ಮಾತಾಗಿ ಪ್ರಧಾನಿಯಾಗಿ ಆಯ್ಕೆಯಾದರು. ಅಂದಿನ ಕಾಂಗ್ರೆಸ್ ಬೆಂಬಲಿತ ಸಮ್ಮಿಶ್ರ ಸರಕಾರದ ನೇತ್ರತ್ವ ವಹಿಸಲು ಜನತಾರಂಗದ ಎಲ್ಲ ನಾಯಕರು ಹಿಂಜರಿದ ಕಾರಣ ಅಲ್ಲಿದ್ದವರ ಕಣ್ಣಿಗೆ ಬಿದ್ದ ದೇವೇಗೌಡರನ್ನೇ ಅವರು ಪ್ರಧಾನಿಯಾಗಿ ಆಯ್ಕೆ ಮಾಡಿ ಕನ್ನಡಿಗರಿಗೆ ಅಚ್ಚರಿಯನ್ನು ನೀಡಿದ್ದರು. ದೇವೇಗೌಡರು ಮೂರು ದಶಕಗಳಿಂದ ಮುಖ್ಯಮಂತ್ರಿಯಾಗಲು ಹವಣಿಸಿ ಅಧಿಕಾರ ವಹಿಸಿಕೊಂಡ ಕೇವಲ ಒಂದೂವರೆ ವರ್ಷದಲ್ಲೇ ಪ್ರಧಾನಿ ಸ್ಥಾನಕ್ಕೆ ಬಡ್ತಿ ಪಡೆದರು. ಪ್ರಧಾನಿ ಸ್ಥಾನ ಅವರಿಗೆ ಲಾಟರಿ ಆಗಿತ್ತು. ಆದರೆ ಆ ಸ್ಥಾನದ ಅನಿಶ್ಚಿತತೆ ಅವರನ್ನು ಒಳಗೊಳಗೆ ವಿಚಲಿತರನ್ನಾಗಿ ಮಾಡಿತ್ತು. ಕೊನೆಗೆ ಕರ್ನಾಟಕದ ಮುಖ್ಯಮಂತ್ರಿ ಸ್ಥಾನ ತನ್ನ ಮಗನಿಗೆ ವಹಿಸಿಕೊಡಲು ಒಳಗೊಳಗೆ ಮಸಲತ್ತು ಮಾಡಿದ ದೇವೇಗೌಡರು ಸ್ವಾಭಾವಿಕ ಉತ್ತರಾಧಿಕಾರಿಯಾಗಿ ಆಯ್ಕೆಯಾಗಬೇಕಿದ್ದ ಪಟೇಲರ ವಿರುದ್ಧ ಸಿದ್ಧರಾಮಯ್ಯನವರನ್ನು ಎತ್ತಿ ಕಟ್ಟಿದರು. ಆ ಗಲಾಟೆಯಲ್ಲಿ ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡುವ ಉದ್ದೇಶ ದೇವೇಗೌಡರಿಗೆ ಇದ್ದದ್ದು ಎಲ್ಲರೂ ಸುಲಭವಾಗಿ ಊಹಿಸಬಹುದಾಗಿತ್ತು. ಆದರೆ ಕೊನೆಗೆ ಪಟೇಲರು ಮುಖ್ಯಮಂತ್ರಿಯಾಗಿ, ಮತ್ತು ಸಿದ್ಧರಾಮಯ್ಯ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದರು.

ಪಟೇಲರ ಮುಖ್ಯಮಂತ್ರಿತ್ವದ ಅವಧಿ ಹೂವಿನ ಹಾಸಿಗೆಯಾಗಿರಲಿಲ್ಲ. ಪ್ರಧಾನಿಯಾಗಿ ದಿಲ್ಲಿಗೆ ಹೋದರೂ ದೇವೇಗೌಡರು ವಾರದ ಕೊನೆಗೆ ಬೆಂಗಳೂರಿಗೆ ಬಂದು ಪಟೇಲರ ಸರಕಾರನ್ನು ನಿಯಂತ್ರಿಸುತ್ತಿದ್ದರು. ಪ್ರಧಾನಿಯಾದ ತಕ್ಷಣ ತಮ್ಮ ರಾಜಕೀಯ ಎದುರಾಳಿಯಾಗಿದ್ದ ಹೆಗಡೆಯನ್ನು ಪಕ್ಷದಿಂದ ಉಚ್ಛಾಟಿಸುವಂತೆ ಮಾಡಿದ್ದ ಗೌಡರು ತಮ್ಮ ಸೇಡಿನ ರಾಜಕೀಯ ಮುಂದುವರೆಸಿದ್ದರು. ಅಂಥ ಪ್ರಕ್ಷುಬ್ಧ ಕಾಲದಲ್ಲೂ ಪಟೇಲರು ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಜಿಲ್ಲಾ ವಿಂಗಡನೆಯಂತ ಐತಿಹಾಸಿಕ ನಿರ್ಧಾರನ್ನು ಅನುಷ್ಠಾನಗೊಳಿಸಿದರು. ನೀರಾವರಿಗೆ ಅಪಾರ ಪ್ರಮಾಣದ ಅನುದಾನ ನೀಡಿದರು. ಕೂಡಲಸಂಗಮ ಅಭಿವ್ರದ್ಧಿ ಪ್ರಾಧಿಕಾರ ರಚಿಸಿ ಅದರ ಸರ್ವಾಂಗೀಣ ಅಭಿವ್ರದ್ಧಿಗೆ ಮುಂದಡಿಯಿಟ್ಟರು. ಪಟೇಲರು ತಮ್ಮ ಸಹೋದ್ಯೋಗಿಗಳ ಕೆಲಸದಲ್ಲಿ ಎಂದಿಗೂ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ತಮ್ಮ ಹಾಸ್ಯಮಯ ಮಾತಿನಿಂದ ಸಹೋದ್ಯೋಗಿಗಳುˌ ಅಧಿಕಾರಿಗಳು ಮತ್ತು ವಿರೋಧಿಗಳನ್ನು ಏಕಕಾಲದಲ್ಲಿ ನಿಭಾಯಿಸುವ ಜಾಣ್ಮೆˌ ಕೌಶಲ್ಯ ಪಟೇಲರಲ್ಲಿತ್ತು. ಎಲ್ಲದಕ್ಕೂ ಹೆಚ್ಚಾಗಿ ಅವರು ತಮ್ಮ ಕುಟುಂಬದ ಸದಸ್ಯರನ್ನು ರಾಜಕೀಯವಾಗಿ ಬೆಳೆಸುವುದು ವಿರೋಧಿಸಿಕೊಂಡು ಬಂದದ್ದು. ಕೆಲವರು ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಅವರ ಮಕ್ಕಳನ್ನು ರಾಜಕೀಯಕ್ಕೆ ತರಲು ಮಾಡಿದ ಕುಮ್ಮಕ್ಕನ್ನು ಪಟೇಲರು ವಿರೋಧಿಸಿˌ ಆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು.

ಪಟೇಲರು ಮುಖ್ಯಮಂತ್ರಿ ಅವಧಿ ಪೂರೈಸುವುದು ಕಷ್ಟವಾಗುವಂತ ಪರಿಸ್ಥಿತಿಯನ್ನು ದೇವೇಗೌಡರು ತಂದಿಟ್ಟಿದ್ದರು. ಹೆಡಗೆ ದೇವೇಗೌಡರ ವಯ್ಯಕ್ತಿಕ ವೈಮನಸ್ಸು ಪಟೇಲರ ಸರಕಾರವನ್ನು ಅವಧಿಗೆ ಮೊದಲೇ ಬಲಿಪಡೆಯಿತು. ಅಧಿಕಾರ ಕಳೆದು ಕೊಂಡಿದ್ದಕ್ಕಿಂತ ಜನಾತಾ ದಳ ಪಕ್ಷ ಇಬ್ಭಾಗವಾಗಿದ್ದರಿಂದ ಪಟೇಲರು ಮಾನಸಿಕವಾಗಿ ಜರ್ಜರಿತರಾದರು. ಮುಂದಿನ ಕೆಲವೇ ದಿನಗಳ ನಂತರ ಅವರ ಆರೋಗ್ಯ ಹದಗೆಟ್ಟಿತು. 12 ಡಿಸ್ಸೆಂಬರ್ 2000 ರಂದು ಪಟೇಲರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಲಿಂಗೈಕ್ಯರಾದರು. ಪಟೇಲರ ಅಗಲಿಕೆಯಿಂದ ಕಾಂಗ್ರೆಸ್ ವಿರೋಧಿ ರಾಜಕೀಯ ಶಕ್ತಿ ಕನ್ನಡ ನೆಲದಲ್ಲಿ ತನ್ನ ಶಕ್ತಿ ಕಳೆದುಕೊಂಡಿತು. ಪಟೇಲರು ಕಾಂಗ್ರೆಸ್ ಸದಸ್ಯರಲ್ಲದ ಕರ್ನಾಟಕದ ಪ್ರಥಮ ಮುಖ್ಯಮಂತ್ರಿಗಳು ಎಂದು, ಇತಿಹಾಸದಲ್ಲಿ ಹೆಸರಾದರು. ಅದಕ್ಕೂ ಮೊದಲು ಕಾಂಗ್ರೆಸ್ಸೇತರ ಪಕ್ಷದಿಂದ ಮುಖ್ಯಮಂತ್ರಿಗಳಾಗಿದ್ದ ಹೆಗಡೆ, ಬೊಮ್ಮಾಯಿ, ದೇವೇಗೌಡರು ಒಂದು ಕಾಲದಲ್ಲಿ ಕಾಂಗ್ರೆಸ್ ಸದಸ್ಯರಾಗಿದ್ದವರೆ ಆಗಿದ್ದರು. ಪಟೇಲರು ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಒಬ್ಬ ಧೀಮಂತ ನಾಯಕನಾಗಿ ತಮ್ಮ ಛಾಪನ್ನು ಒತ್ತಿ ಹೋದರೂ ಅವರ ನೆನಪು ಸದಾ ನಮ್ಮೊಂದಿಗೆ ಇರಬಲ್ಲದು.

Click here to follow us on Facebook , Twitter, YouTube, Telegram

Pratidhvani
www.pratidhvani.com