ಬೆಂಗಳೂರು ಗಲಭೆ: ತನಿಖೆಗೆ ಕಾಂಗ್ರೆಸ್‌ ಹಿಂಜರಿಯುತ್ತಿದೆಯಾ?
ರಾಜ್ಯ

ಬೆಂಗಳೂರು ಗಲಭೆ: ತನಿಖೆಗೆ ಕಾಂಗ್ರೆಸ್‌ ಹಿಂಜರಿಯುತ್ತಿದೆಯಾ?

ನಮ್ಮ ಪಕ್ಷದ ಕಾರ್ಪೊರೇಟರ್‌ಗಳು ಇರುವಾಗ ಕಾವಲಭೈರಸಂದ್ರ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇರುವ ಆಸಕ್ತಿಯಾದರು ಏನು..?

ಕೃಷ್ಣಮಣಿ

ಡಿಜೆ ಹಳ್ಳಿ, ಕೆಜಿ ಹಳ್ಳಿ, ಕಾವಲ ಭೈರಸಂದ್ರದಲ್ಲಿ ನಡೆದ ಘರ್ಷಣೆಗೆ ಪೊಲೀಸರು ಕಾರಣ ಹುಡುಕುವ ಕೆಲಸ ಮಾಡುತ್ತಿದ್ದಾರೆ. ಕಳೆದೊಂದು ವಾರದಿಂದ ಆರೋಪಿಗಳ ಬಂಧನ ಕಾರ್ಯದಲ್ಲಿ ಬ್ಯುಸಿಯಾಗಿದ್ದ ಪೊಲೀಸ್‌ ಇಲಾಖೆ ಇದೀಗ ವಿಚಾರಣೆ ಶುರು ಮಾಡಿದೆ. ವಿಚಾರಣೆಯಲ್ಲಿ ಸಿಗುವ ಸುಳಿವಿನ ಆಧಾರದಲ್ಲಿ ಯಾವೆಲ್ಲಾ ನಾಯಕರು ವಿಚಾರಣೆಗೆ ಹಾಜರಾಗಬೇಕು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಆದರೆ ಬಿಬಿಎಂಪಿ ಮಾಜಿ ಮೇಯರ್‌ ಆಪ್ತ ಅರುಣ್‌ ಬಂಧನದ ಬಳಿಕ ಮಾಜಿ ಮೇಯರ್‌ ಸಂಪತ್‌ ರಾಜ್‌ ಅವರನ್ನು ಇಂದು ವಿಚಾರಣೆ ನಡೆಸಲಾಗಿದೆ. ಇನ್ನೋರ್ವ ಪಾಲಿಕೆ ಸದಸ್ಯ ಝಾಕಿರ್‌ ಕೂಡ ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ. ಸಂಪತ್ ರಾಜ್ ಅವರ ಹೇಳಿಕೆಗಳನ್ನು 18 ಪುಟಗಳಲ್ಲಿ ದಾಖಲಿಸಿಕೊಳ್ಳಲಾಗಿದೆ. ಝಾಕೀರ್‌ರಿಂದ 14 ಪುಟಗಳಲ್ಲಿ ಸಿಸಿಬಿ ತನಿಖಾ ಹೇಳಿಕೆ ‌ದಾಖಲಿಸಿಕೊಂಡಿದೆ. ಮತ್ತೆ ವಿಚಾರಣೆಗೆ ಕರೆದಾಗ ಬರಬೇಕು ಎಂದು ತಿಳಿಸಿ ವಾಪಸ್‌ ಕಳುಹಿಸಲಾಗಿದೆ. ಇದು ಕಾಂಗ್ರೆಸ್‌ ಪಕ್ಷವನ್ನು ಕೆರಳುವಂತೆ ಮಾಡಿದೆ.

ಸರ್ಕಾರದ ವಿರುದ್ಧ ಕೆಂಗಣ್ಣು ಬೀರಿದ ಸಿದ್ದರಾಮಯ್ಯ..!

ರಾಜ್ಯ ಸರ್ಕಾರದ ವಿರುದ್ಧ ಸರಣಿ ಟ್ವೀಟ್‌ಗಳ ಮೂಲಕ ವಾಗ್ದಾಳಿ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಯ ಹಾದಿ ತಪ್ಪಿಸುವ ಕೆಲಸವನ್ನು ಸ್ವತಃ ಸರ್ಕಾರ ಮಾಡ್ತಿದೆ ಎಂದು ರಾಜ್ಯ ಸರ್ಕಾರದ ಮೇಲೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇರ ಆರೋಪ ಮಾಡಿದ್ದಾರೆ. ಕಾವಲ್‌ ಭೈರಸಂದ್ರ ಗಲಭೆಯ ತನಿಖೆಯ ಹಾದಿ ತಪ್ಪಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಯೋಜಿತ ರೀತಿಯಲ್ಲಿ ಮಾಡುತ್ತಿದೆ. ದಿನಕ್ಕೊಬ್ಬ ಸಚಿವರು, ಶಾಸಕರು ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ, ಗಲಭೆಗೆ ಎಸ್‌ಡಿಪಿಐ, ಕಾಂಗ್ರೆಸ್ ಮತ್ತು ಭಯೋತ್ಪಾದಕರು ಕಾರಣವೆಂದು ತರಹೇವಾರಿ ಹೇಳಿಕೆಗಳೇ ಇದಕ್ಕೆ ಸಾಕ್ಷಿಯಾಗಿದೆ. ಗಲಭೆಯ ಹಿಂದಿನ ಅಪರಾಧಿಗಳನ್ನು ಪತ್ತೆ ಹಚ್ಚುವುದಕ್ಕಿಂತ ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಿಲುಕಿಸುವುದು ಹೇಗೆ..? ಇದನ್ನು ಕೋಮುಗಲಭೆ ಎಂದು ಬಣ್ಣಿಸಿ, ರಾಜಕೀಯ ಲಾಭ ಗಳಿಸುವುದು ಹೇಗೆ ಬಿಜೆಪಿ ನಾಯಕರು ತಲೆಕೆಡಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ನಮ್ಮ ಪಕ್ಷದ ಶಾಸಕನ ಮೇಲೆ ನಮಗೇನು ಹಗೆತನ..?

ಇಡೀ ರಾಜ್ಯದಲ್ಲಿ ಅತ್ಯಧಿಕ ಮತಗಳಿಸಿ ಆಯ್ಕೆಯಾಗಿರುವ ನಮ್ಮದೇ ಪಕ್ಷದ ಶಾಸಕರು ಆ ಕ್ಷೇತ್ರದಲ್ಲಿ ಇದ್ದಾರೆ, ನಮ್ಮ ಪಕ್ಷದ ಕಾರ್ಪೊರೇಟರ್‌ಗಳು ಇರುವಾಗ ಕಾವಲಭೈರಸಂದ್ರ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇರುವ ಆಸಕ್ತಿಯಾದರು ಏನು..? ಎಂದು ಪ್ರಶ್ನಿಸಿದ್ದಾರೆ. ಅಲ್ಲಿ ಚುನಾವಣೆ ಎದುರಿಸಿ ಗೆಲ್ಲಲಾಗದ ರಾಜಕೀಯ ಪಕ್ಷಗಳೇ ಪ್ರಕರಣದ ರಾಜಕೀಯ ಲಾಭ ಪಡೆಯಲು ಹೊರಟಿರುವುದು ಸ್ಪಷ್ಟವಾಗಿದೆ. ಕಾವಲ ಭೈರಸಂದ್ರ ಗಲಭೆಯ ನಿಜವಾದ ತನಿಖೆ ಸರ್ಕಾರದ ಗುಪ್ತಚರ ಇಲಾಖೆ ವೈಫಲ್ಯದಿಂದ ಶುರುವಾಗಬೇಕು. ಸರ್ಕಾರದ ಪ್ರಕಾರ ಇದು ಪೂರ್ವಯೋಜಿತ ಕೃತ್ಯವಾಗಿದ್ದರೆ ಅದು ಯಾಕೆ ಪೊಲೀಸರ ಗಮನಕ್ಕೆ ಬಂದಿಲ್ಲ..? ಪ್ರಚೋದನಕಾರಿ ಪೋಸ್ಟ್ ಹಾಕಿರುವ ನವೀನ್ ವಿರುದ್ಧ ಪ್ರಕರಣ ದಾಖಲಿಸಲು ವಿಳಂಬ ಮಾಡಿದ್ದು ಏಕೆ..? ಬೆಂಗಳೂರು ಎಸ್‌ಡಿಪಿಐ ನಾಯಕರು ತಪ್ಪು ಮಾಡಿದ್ದರೆ ಅವರನ್ನು ಶಿಕ್ಷಿಸಿ, ಆ ಸಂಘಟನೆ ತಪ್ಪು ಮಾಡಿದ್ದರೆ ಅದರ ವಿರುದ್ಧ ಕ್ರಮಕೈಗೊಳ್ಳಿ ಎಂದು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

ಪಕ್ಷದ ನಾಯಕರಿಗೆ ಕಿರುಕುಳ ನೀಡಲಾಗುತ್ತಿದೆ- ಡಿಕೆಶಿ

ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ವಿಚಾರಣೆ ಬಗ್ಗೆ ದೆಹಲಿಯಲ್ಲಿ ಗುಡುಗಿರುವ ಡಿ.ಕೆ ಶಿವಕುಮಾರ್‌, ಉದ್ದೇಶಪೂರ್ವಕವಾಗಿ ನಮ್ಮ ನಾಯಕರ ವಿಚಾರಣೆ ನಡೆಸಲಾಗುತ್ತಿದೆ. ಕಾಂಗ್ರೆಸ್ ಪಾತ್ರ ಇದೇ ಎಂದು ಸಾಬೀತು ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರದ ಹುಳುಕು ಮುಚ್ಚಿಕೊಳ್ಳಲು ಈ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ನಮ್ಮ ಪಕ್ಷದ ನಾಯಕರಿಗೆ ಕಿರುಕುಳ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮೇಲೆ ತಪ್ಪು ಅಭಿಪ್ರಾಯ ಮೂಡಿಸುವ ಕೆಲಸ‌ ಮಾಡುತ್ತಿದೆ. ನಮ್ಮ ನಾಯಕರದು ಯಾವುದೇ ಪಾತ್ರ ಈ ಪ್ರಕರಣದಲ್ಲಿಲ್ಲ ಎನ್ನುವುದನ್ನು ನಾನು ಪೊಲೀಸ್ ಮೂಲಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ನನಗಿರುವ ಮಾಹಿತಿ ಪ್ರಕಾರ ನವೀನ್ ಬಿಜೆಪಿ ಕಾರ್ಯಕರ್ತ, ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮುಖ್ಯ, ಈ ಅಂಶವನ್ನೇ‌ ನವೀನ್ ಹಂಚಿಕೊಂಡಿದ್ದಾರೆ. ನನಗೆ ಶುಭಾಶಯ ಕೋರಿದಾಕ್ಷಣ ಕಾಂಗ್ರೆಸ್ ಕಾರ್ಯಕರ್ತ ಅಲ್ಲ. ನವೀನ್ ಮೇಲೆ ಆರೋಪ ಬಂದಾಗ ಯಾಕೆ ಬಂಧಿಸಿಲ್ಲ..? ಎನ್ನುವುದು ಪೊಲೀಸರು ಉತ್ತರ ಹೇಳಬೇಕಿದೆ. ಶಾಸಕರಿಗೆ ರಕ್ಷಣೆ ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ, ಆದರೂ ಬಿಜೆಪಿ, ದಲಿತರ ಹೆಸರಿನ ಮೇಲೆ ರಾಜಕಾರಣ ಮಾಡುತ್ತಿದೆ‌ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಎಸ್‌ಡಿಪಿಐ ಸಂಘಟನೆ ನಿಷೇಧ ಮಾಡುವ ಧೈರ್ಯ ಸರ್ಕಾರಕ್ಕೆ ಇದೆಯಾ..? ಎಂದು ರಾಜ್ಯ ಸರ್ಕಾರವನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮುಸ್ಲಿಂ ಮತಗಳನ್ನು ಒಡೆಯಲು ಎಸ್‌ಡಿಪಿಐ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯೋಜಿತ ರೀತಿಯಲ್ಲಿ ಎಸ್‌ಡಿಪಿಐ ಬಳಸಿಕೊಳ್ಳುತ್ತಾ ಬಂದಿದ್ದಾರೆ. ಈಗ ಅದನ್ನು ನಿಷೇಧಿಸುವ ಧೈರ್ಯ ಇದೆಯೇ..? ಎಂದು ರಾಜ್ಯ ಸರ್ಕಾರವನ್ನು ಪಶ್ನೆ ಮಾಡಿದ್ದಾರೆ.

ಬಿ ಎಸ್‌ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ತಂತ್ರವೇ..?

ರಾಜ್ಯ ಸರ್ಕಾರ ಎರಡು ಗುಂಪುಗಳಾಗಿ ಒಡೆದು ಹೋಗಿದೆ. ಬಿಎಸ್‌ಯಡಿಯೂರಪ್ಪ ಅವರನ್ನು ಪದಚ್ಯುತಿಗೆ ಕೆಲವರು ಬಿಜೆಪಿ ಪಕ್ಷದಲ್ಲೇ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪಕ್ಷದ ನಾಯಕರು ಮಾಡುತ್ತಿರುವ ಪ್ರಯತ್ನವನ್ನು ಮರೆ ಮಾಚಿಕೊಳ್ಳುವ ಉದ್ದೇಶದಿಂದ ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣವನ್ನು ಸರ್ಕಾರ ಬಳಸುತ್ತಿದೆ ಎಂದಿದ್ದಾರೆ ಮಾಜಿ ಸಿದ್ದರಾಮಯ್ಯ.

ಗಲಭೆ ತನಿಖೆಗೆ ಕಾಂಗ್ರೆಸ್‌ ಹಿಂಜರಿಕೆ ಯಾಕೆ?

ಕೆಜಿ ಹಳ್ಳಿ, ಡಿಜೆ ಹಳ್ಳಿ. ಕಾವಲ ಭೈರಸಂದ್ರ ಗಲಭೆ ಬಗ್ಗೆ ಇಲ್ಲೀವರೆಗೂ 73 FIR ದಾಖಲು ಮಾಡಲಾಗಿದೆ. ಕೆಜಿ ಹಳ್ಳಿ ಪೊಲೀಸ್‌ಠಾಣೆಯಲ್ಲಿ 19 FIR, ಹಾಗೂ ಡಿಜೆ ಹಳ್ಳಿ ಠಾಣೆಯಲ್ಲಿ 54 FIR ದಾಖಲು ಮಾಡಿಕೊಳ್ಳಲಾಗಿದೆ. ಗಲಭೆ ಹಿಂದಿನ ಕಾಣದ ಕೈಗಳ ಹುಡುಕಾಟದಲ್ಲಿ ಪೊಲೀಸ್‌ ಪಡೆ ಕೆಲಸ ಮಾಡುತ್ತಿದೆ. ಅನುಮಾನ ಬಂದವರಿಗೆ ನೋಟಿಸ್ ‌ಕೊಟ್ಟು ವಿಚಾರಣೆಗೆ ಕರೆಸಿಕೊಳ್ಳಲಾಗುತ್ತಿದೆ. ಅದರಲ್ಲಿ ಕಾಂಗ್ರೆಸ್ ‌ನಾಯಕರು ಇದ್ದಾರೆ ಎನ್ನುವುದು ನಿಜ. ಆದರೆ ಕಾಂಗ್ರೆಸ್‌ನಾಯಕರು ದುಷ್ಕೃತ್ಯದಲ್ಲಿ ಭಾಗಿಯಾಗಿಲ್ಲ ಎನ್ನುವುದೇ ಆದರೆ ತನಿಖೆಗೆ ಒಳಪಡಲು ಭಯವೇತಕ್ಕೆ..? ಅಲ್ಲವೇ..? ವಿಚಾರಣೆಯಲ್ಲಿ ಪೊಲೀಸರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಬರುವುದಕ್ಕೆ ಭಯವೇಕೆ..? ಕಾಂಗ್ರೆಸ್‌ ನಾಯಕರು ನಾಯಕರು ಸರ್ಕಾರದ ಮೇಲೆ ಮುಗಿ ಬೀಳುತ್ತಿರುವುದಕ್ಕೆ ಕಾರಣವೇನು..? ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಆದರೆ ಕಾಂಗ್ರೆಸ್‌ ನಾಯಕರು ದಿಗಿಲು ಬೀಳುತ್ತಿರುವುದಕ್ಕೂ ಒಂದು ಕಾರಣವಿದೆ.

ಸಾಕಷ್ಟು ಪ್ರಕರಣಗಳಲ್ಲಿ ಮೊದಲಿಗೆ ಬಂಧನ ಮಾಡಲಾಗುತ್ತದೆ. ನಂತರ ತನಿಖೆ ನಡೆಯುವ ತನಕ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುತ್ತದೆ. ವರ್ಷಾನುಕಾಲ ಜೈಲಿನಲ್ಲಿ ಇದ್ದುಕೊಂಡು ಕಾನೂನು ಹೋರಾಟ ಮಾಡಬೇಕಾಗುತ್ತದೆ. ಜಾಮೀನು ಸಿಕ್ಕರೆ ಸಿಗುತ್ತದೆ, ಇಲ್ಲದಿದ್ದರೆ ಇಲ್ಲ. ಅಷ್ಟರಲ್ಲಿ ಹೊರಗಡೆ ಚುನಾವಣೆಗಳು ನಡೆದಿರುತ್ತವೆ. ತನ್ನ ಕ್ಷೇತ್ರದಲ್ಲಿ ಬೇರೊಬ್ಬ ವ್ಯಕ್ತಿ ಸಾಮ್ರಾಜ್ಯ ಸ್ಥಾಪನೆ ಮಾಡಿಕೊಂಡಿರುತ್ತಾನೆ. ಇಷ್ಟೆಲ್ಲಾ ಆಗುವ ಸಮಯಕ್ಕೆ ಸಾರ್ವಜನಿಕರು ಇಲ್ಲಿ ನಡೆದಿದ್ದ ದುರ್ಘಟನೆ ಬಗ್ಗೆ ಮರೆತಿರುತ್ತಾರೆ. ಸಾಕಷ್ಟು ಹೋರಾಟದ ಬಳಿಕ ಜೈಲಿನಿಂದ ವಾಪಸ್‌ ಬಂದರೂ ಕಳೆದುಕೊಂಡಿದ್ದನ್ನು ಗಳಿಸಲು ಸಾಧ್ಯವಿಲ್ಲ. ಸಾಕಷ್ಟು ಅವಮಾನ, ನಷ್ಟ ಎಲ್ಲವನ್ನೂ ಸಹಿಸಬೇಕಾಗುತ್ತದೆ. ಅಂತಿಮವಾಗಿ ನ್ಯಾಯಾಲಯ ನಿರಪರಾಧಿ ಎಂದು ತೀರ್ಪು ಕೊಟ್ಟರೂ ಕಳೆದುಕೊಂಡ ಮಾನ ವಾಪಸ್ ‌ಬರುವುದೇ..? ತಪ್ಪನ್ನೇ ಮಾಡದೆ ಜೈಲು ಶಿಕ್ಷೆ ಅನುಭವಿಸುವಂತೆ ಮಾಡಿದ್ದ ಪೊಲೀಸ್‌, ಅಪರಾಧ ಮಾಡಿದ್ದಾನೆ ಎಂದು ಪರಿಗಣಿಸಿ ಆತನಿಗೆ ಏನಾದರೂ ಶಿಕ್ಷೆ ನೀಡುತ್ತಾರೆಯೇ..? ಇಲ್ಲ. ಅದೇ ಕಾರಣಕ್ಕೆ ಪೊಲೀಸ್ ‌ಇಲಾಖೆ ಮೇಲೆ ಯಾರಿಗೂ ನಂಬಿಕೆ ಎನ್ನುವುದು ಇಲ್ಲ. ಅವರು ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಾರೆ. ಸರ್ಕಾರದಲ್ಲಿ ಇರುವ ನಾಯಕರು ಏನು ಹೇಳುತ್ತಾರೋ ಅದನ್ನೇ ಕೇಳುತ್ತಾರೆ. ಆ ರಾಜಕಾರಣಿಗಳು ಎದುರಾಳೀಯನ್ನು ಮುಗಿಸಲು ಇಂತಹ ಘಟನೆಗಳನ್ನು ಬಳಸಿಕೊಳ್ತಾರೆ. ಇದೇ ಭಯ ಕಾಂಗ್ರೆಸ್‌ನನ್ನು ಕಾಡುತ್ತಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಬಿಬಿಎಂಪಿ ಪಾಲಿಕೆ ಚುನಾವಣೆ ನಡೆಯಲಿದ್ದು, ಅದರ ಮೇಲೆ ಗಾಢ ಪರಿಣಾಮ ಬೀರುವ ಸಾಧ್ಯತೆ ಇದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com